ನಾಲಗೆಯ ಮಹತ್ವ

ನಾಲಗೆಯ ಮಹತ್ವ

ಬರಹ


ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಗೆ, ಹಾಡಿದ್ದು ದಾಸರು. ಅನುಭವಿಸುವವರು ಸಾಮಾನ್ಯರು. ಕೇಶಿರಾಜ ತನ್ನ  ಶಬ್ದ ಮಣಿದರ್ಪಣದಲ್ಲಿ- ತನು ವಾದ್ಯಂ, ನಾಲಗೆ ವಾದನ ದಂಡಂ, ಕರ್ತೃವಾತ್ಮನ್ .. .. ಎಂದು ಲಾಕ್ಷಣಿಸಿದ್ದಾನೆ. ದೇಹವೆಂಬ ವಾದ್ಯದಿಂದ ನಾದವನ್ನು ಚಿಮ್ಮಿಸುವ ಸಾಧನವೇ ನಾಲಗೆ. ದೇಹದೊಳಗಿನ ಆತ್ಮನ ಇಚ್ಛೆಯಂತೆ ನಾಲಗೆ ಕೆಲಸ ಮಾಡುತ್ತದೆ ಎಂದು ಇಅದ್ನು ಅನ್ವಯ ಮಾಡಬಹುದು. ವ್ಯಕ್ತಿತ್ವದ ಅಭಿವ್ಯಕ್ತಿಗೆ ಸಾಧನವಾಗಿದ್ದರೂ ನಾಲಗೆ ಮನುಷ್ಯನಿಗೆ ಹಿತ, ಅಹಿತ ಎರಡನ್ನೂ ಕೊಡಬಲ್ಲ ಸಾಧನವೂ ಆಗಿದೆ. ವೈದ್ಯರು ನಾಲಗೆಯನ್ನು ಪರೀಕ್ಷಿಸಿ ದೈಹಿಕ ಕಾಯಿಲೆಗಳನ್ನು ಪತ್ತೆಹಚ್ಚಬಲ್ಲರಾದರೆ, ಆ ಮನುಷ್ಯನ ನಾಲಗೆಯಿಂದ ಹೊರಡುವ ಮಾತುಗಳು ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವ ಸಾಧನವಾಗಿಯೂ ಬಳಕೆಯಾಗುವುದನ್ನು ನಾವೆಲ್ಲರೂ ಬಲ್ಲೆವು.


ವ್ಯಕ್ತಿಯೊಬ್ಬನಲ್ಲಿರುವ ಸಂಸ್ಕೃತಿ, ವಿಚಾರ,ವಿವೇಕಗಳನ್ನು, ವಿಕಾರ, ವಿಷಾದಗಳನ್ನೂ ಆ ವ್ಯಕ್ತಿಗೆ ಅರಿವಿಲ್ಲದಂತೆ ಜಗಜ್ಜಾಹೀರು ಮಾಡುವುದು ಅವನದೇ ನಾಲಗೆ. ನಾಲಗೆ ಕುಲವನ್ನು ಹೇಳುತ್ತದೆ ಎಂದವನು ಪಂಪ ಚಿತ್ರಿಸಿದ ದ್ರೋಣಾಚಾರ್ಯ. ಕುಲವೆಂದರೆ ಸಂಸ್ಕಾರ ಎಂದೇ ಭಾವಿಸಬೇಕು. ತನ್ನ ವ್ಯಕ್ತಿತ್ವದ ಬಂಡವಾಳ ಬಹಿರಂಗವಾಗಬಾರದೆಂದರೆ ವೇಷ ತೊಟ್ಟವನು ನಾಲಗೆಯನ್ನು ಬಿಚ್ಚಲೇಬಾರದು. ವಿದ್ವಾಂಸರಿರುವ ಸಭೆಯಲ್ಲಿ ಮೌನವೇ ಪಂಡಿತರಲ್ಲದವರ ಆಭರನ ಎನ್ನುತ್ತದೆ ಒಂದು ಸುಭಾಷಿತ.
ನಾಲಗೆ ಬಾಯಿಗೆ ಬಿದ್ದ ಆಹಾರವನ್ನು ತಿರುವಿ ಹಾಕಿ ಆಹಾರದ ಸವಿಯ ಸುಖದ ಸಂವೇದನೆಯನ್ನು ಮಿದುಳಿಗೆ ಮುಟ್ಟಿಸುತ್ತದೆ. ತನ್ನ ರಸಾಸ್ವಾದನೆಯ ಪ್ರವೃತ್ತಿಯಿಂದಲೇ ನಾಲಗೆಗೆ ಜಿಹ್ವಾಚಾಪಲ್ಯ ಎಂಬ ಅಭಿದಾನ ಬಂದಿದೆ. ರುಚಿ ರುಚಿಯಾದುದನ್ನು ಪದೇ ಪದೇ  ಸ್ವಾದಿಸುವುದು ಜಿಹ್ವಾಚಾಪಲ್ಯಕ್ಕೆ ತುತ್ತಾದವರ ಸಂಗತಿ. ಊಟ,ತಿಂಡಿ,ಪಾನೀಯಗಳನ್ನು ರುಚಿರುಚಿಯಾಗಿ ಸದಾ ಸವಿಯಲು ತವಕಿಸುವ ನಾಲಗೆಯ ಚಪಲದಿಂದಲೇ ಅನೇಕ ಕಾಹಿಲೆ ಕಸಾಲೆಗಳು ನಮಗಂಟಿಕೊಳ್ಳುತ್ತವೆ.


ನಾಲಗೆಯ ಮುಖ್ಯ ಕೆಲಸವೆಂದರೆ ಮನಸ್ಸಿಗೆ ಬಂದ ಭಾವನೆಗಳನ್ನು ಮಾತಿನ ಮೂಲಕ ಅಭಿವ್ಯಕ್ತಿಸಿ, ಸಂಪರ್ಕ ಕಲ್ಪಿಸುವುದು. ಹೇಳಬೇಕಾದುದನ್ನು ಹೇಳಿ ತಿಳಿಯಪಡಿಸಬೇಕಾದ ಪರಮ ಕರ್ತವ್ಯ ನಾಲಗೆಯದು. ಮೂರ್ಖನ ಹೃದಯ ಆತನ ನಾಲಗೆಯಲ್ಲಿ, ಪ್ರಾಜ್ಞನ ನಾಲಗೆ ಅವನ ಹೃದಯದಲ್ಲಿ ಎಂಬ ಲೋಕೋಕ್ತಿ ಸಮಂಜಸವಾಗಿ ನಾಲಗೆಯ ಮಹತ್ವವನ್ನು ಚಿತ್ರಿಸುತ್ತದೆ. ಮೂರ್ಖನಾದವನು ಆಲೋಚಿಸದೇ ಮನಸ್ಸಿಗೆ ಅನ್ನಿಸಿದ್ದನ್ನೆಲ್ಲ ನಾಲಗೆಯ ಮೂಲಕ ಬಡಬಡಿಸಿದರೆ, ಬುದ್ಧಿವಂತನಾದವನು ಯಾವುದನ್ನು ಮಾತುಗಳಲ್ಲಿ ವ್ಯಕ್ತಪಡಿಸಬೇಕೋ ಅದನ್ನು ಮಾತ್ರ ಮಾತನಾಡುತ್ತನೆ. ಮೂರ್ಖ ಅರಿವಿಲ್ಲದೇ ಆಡಿದ ಮಾತಿನ ಪರಿಣಾಮವನ್ನು ಅನುಭವಿಸಿದರೆ ಪ್ರಾಜ್ಞನಾದವನು ಸಂಸ್ಕರಿಸಿದ ಮಾತುಗಳನ್ನಾಡಿ ಜನರ ಪ್ರಶಂಸೆಯನ್ನು ಪಡೆಯುತ್ತಾನೆ. ಒಂದು ವೈದಿಕ ಸೂಕ್ತಿ ಹೇಳುವ ಹಾಗೆ ಪ್ರಾಜ್ಞನಾದವನು ಜರಡಿಯಿಂದ ಹಿಟ್ಟನ್ನು ಸೋಸುವಂತೆ ಬುದ್ಧಿಯಿಂದ ಮಾತುಗಳನ್ನು ಶೋಧಿಸಿ ಆಡುವುದರಿಂದ ಯಾವತ್ತೂ ಪ್ರಶಂಸೆಗೆ ಒಳಗಾಗುತ್ತಾನೆ. ಪ್ರಶಂಸೆಯ ಮಾತುಗಳು ಸ್ನೇಹ ವರ್ಧಿಸುವಂತೆ ಮಾಡುತ್ತವೆ. ಶ್ರೇಯಸ್ಸು ಅಂತಹವರನ್ನು ಒಲಿದು ಬರುತ್ತದೆ. ಆದರೆ ಇಷ್ಟೊಂದು ಹಿತ ಭಾಷಿಗಳು, ಮೃದು ಭಾಷಿಗಳು ವಿರಳರು ಎನ್ನುವುದೂ ಸತ್ಯಸ್ಯ ಸತ್ಯ.


ಮೃದುವಾಗಿ ಮಾತನಾಡುವುದನ್ನು ಲಘುವಾಗಿ ಕಾಣಲಾಗುವ ಈ ಕಾಲದಲ್ಲಿ ನಾಲಗೆಯನ್ನು ಬಿರುನುಡಿUಳನ್ನು ಪ್ರಕಟಿಸುವ ಕೆಲಸಕ್ಕೇ ವಿನಿಯೋಗಿಸಲಾಗುತ್ತಿದೆ. ಗಟ್ಟಿಯಾಗಿ ಹೇಳದೇ, ಗದರಿ ಹೇಳದೇ ಕೆಲಸಗಳನ್ನು ನಿರ್ವಹಿಸುವುದು ಅಸಾಧ್ಯವಾದ ಈ ಕಾಲದಲ್ಲಿ ನಾಲಗೆಯ ಮೇಲಿನ ಹಿಡಿತ ಕಳೆದುಕೊಂಡವರೇ ಕಾಣುತ್ತಾರೆ. ಸಂಸ್ಕಾರಯುಕ್ತವಾದ ಮಾತು ಶ್ರೋತೃವನ್ನು ಹೇಗೆ ಗೆಲ್ಲುತ್ತದೆ ಎನ್ನುವುದಕ್ಕೆ ಶ್ರೀ ರಾಮಾಯಣದ ಹನುಮಂತ-ಶ್ರೀರಾಮರ ಪ್ರಥಮ ಭೇಟಿಯ ಸಂದರ್ಭವೇ ಸಾಕು.
ಕೆಲವರಿರುತ್ತಾರೆ. ಮಾತಲ್ಲಿ ಜೇನು ಸುರಿಸಿದಂತೆ ಕಂಡರೂ ಹೃದಯದಲ್ಲಿ ವಿಷದ ದಾಸ್ತಾನು ಇಟ್ಟುಕೊಂಡಿರುತ್ತಾರೆ. ಹಲವರಿಗೆ ಉರಿ ನಾಲಗೆ. ಎಲ್ಲಕ್ಕೂ ಅವರ ನಾಲಗೆ ವಿಷಕಾರುತ್ತಲೇ ಇರುತ್ತದೆ. ಬಾಯ್ತೆರೆದರೆ ಸಿಡಿಲು,ಗುಡುಗು,ಮಿಂಚುಗಳ ಧಾಳಿ. ಉರಿ ನಾಲಗೆಯವರಿಗೆ ಸದಾ ಕುಚೋದ್ಯ, ವ್ಯಂಗ್ಯ, ವಿಡಂಬನೆ,ಟೀಕೆ ಟಿಪ್ಪಣಿಗಳಲ್ಲೇ ಧ್ಯಾನ, ಆಸಕ್ತಿ. ಕೆಲವರ ನಾಲಗೆ ಸ್ವಪ್ರಶಂಸೆಯ ಮಾತುಗಳನ್ನು ಒಪ್ಪಿಸುತ್ತಿದ್ದರೆ ಹಲವರ ಮಾತು ಕಡ್ಡಿಯನ್ನು ಗುಡ್ಡವನ್ನಾಗಿಸಿ ಹೆದರಿಕೆ ಹುಟ್ಟಿಸುವಂತಹವು. ಒಟ್ಟಲ್ಲಿ ನಾಲಗೆ ನೀಚ ಬುದ್ಧಿಯ ಪ್ರದರ್ಶನ ತಾಣ. ಮನಸ್ಥಿತಿಯ ನಿಲ್ದಾಣ.