ನಾಲಗೆ ಗೆಲ್ಲಬಲ್ಲ ಪುಲಾಸಾನ್

ನಾಲಗೆ ಗೆಲ್ಲಬಲ್ಲ ಪುಲಾಸಾನ್

ಉಜಿರೆ ಎಸ್.ಡಿ.ಎಂ.ಕಾಲೇಜಿನ ಉಪ ಪ್ರಾಂಶುಪಾಲ ಕೇಶವ ಟಿ.ಎನ್.ಫೋನಿಸಿದ್ದರು -“ಗಿಡ ತುಂಬಾ ಪುಲಾಸಾನ್ ಹಣ್ಣಿದೆ. ತಕ್ಷಣ ಬಂದರೆ ನೋಡಲು ಸಿಗಬಹುದು.”     ಜುಲೈ ಮಧ್ಯಭಾಗ ಇರಬೇಕು, ಅಂಗಳ ಮುಂದಿರುವ ಪುಲಾಸಾನ್ ಗಿಡದಲ್ಲಿ ತೊನೆಯುವ ಹಣ್ಣುಗಳು. ಬಹುಶಃ ಒಂದೆರಡು ಕೊಯಿಲಿನಲ್ಲಿ ಪೂರ್ತಿ ಖಾಲಿಯಾಗುವ ಹಂತಕ್ಕೆ ತಲುಪಿತ್ತು. ಕಪ್ಪು ಮಿಶ್ರಿತ ಕಡು ನೇರಳೆ ವರ್ಣದ ಹಣ್ಣುಗಳ ನೋಟ ಸೆಳೆಯುವಂತಹುದಲ್ಲವಾದರೂ ಆಕರ್ಷಕ.  
    ಇದರದು ಮಲೇಶ್ಯಾ ಮೂಲ. ರಂಬುಟಾನ್ ಹಣ್ಣಿನ ಸಂಬಂಧಿ. ಹಣ್ಣಿನ ಹೊರಮೈ ದಪ್ಪ. ಮೇ-ಜುಲೈ ಹಣ್ಣು ಬಿಡುವ ಋತು. ರಂಬುಟಾನ್ ಹಣ್ಣಿಗಿಂತ ಸಿಹಿ. ಗುಳದ ಗಾತ್ರ ಸಣ್ಣ.  ಒಂದು ಹಣ್ಣು ಸುಮಾರು 40-60 ಗ್ರಾಮ್ ತೂಗುತ್ತದೆ. ಹೂ ಬಿಡುವ ಕಾಲದಲ್ಲಿ ಮಳೆ ಬಂದರೆ ಇಳುವರಿ ಕಡಿಮೆ.  ನೆಟ್ಟ ಐದರಿಂದ ಆರು ವರುಷದಲ್ಲಿ ಫಲ. ನಾಲ್ಕನೇ ತಿಂಗಳಲ್ಲಿ ನೀಡಿದ್ದೂ ಇದೆ. ಗಿಡ ಹೆಚ್ಚು ಎತ್ತರಕ್ಕೆ ಬೆಳೆಯದು. ಕೇರಳದಲ್ಲಿ ಇದನ್ನು ಫಿಲೋಸಾನ್ ಎನ್ನುತ್ತಾರೆ.
    ರಾನ್ನಿಯ ಅಬ್ರಹಾಂ ಥಾಮಸ್ – ಕೇರಳದ ಪತ್ತನಾಂತಿಟ್ಟ ಜಿಲ್ಲೆಯ ಕೃಷಿಕ. ಹಣ್ಣು ಪ್ರಿಯರು. 2009ರಲ್ಲಿ ಪುಲಾಸನ್ನಿನದೇ ತೋಟವನ್ನು ಎಬ್ಬಿಸಿದ್ದರು. ಮಾರುಕಟ್ಟೆಗೆ ತೀರಾ ಹೊಸ ಹಣ್ಣಾದುದರಿಂದ  ಗ್ರಾಹಕ ಸ್ವೀಕೃತಿ ನಿಧಾನ. ಥಾಮಸ್ ಸ್ಥಳೀಯ ಮಾರುಕಟ್ಟೆಯಲ್ಲಿ ಗೆದ್ದಿದ್ದಾರೆ. ಕೇರಳದಲ್ಲಿ ಪುಲಾಸಾನ್ ಕೃಷಿ ಹಬ್ಬುತ್ತಿದೆ. ರಂಬುಟಾನಿಗೆ ನೀಡಿದಷ್ಟೇ ಆದ್ಯತೆ ಪುಲಾಸಾನ್ ಹಣ್ಣಿನ ಕೃಷಿಗೂ ನೀಡುತ್ತಾರೆ.
    ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸ್ ಅವರಲ್ಲಿಗೆ ಭೇಟಿ ನೀಡಿದ್ದೆ. ಮೂರು ದಶಕಗಳ ಹಿಂದೆ ಮಲೇಶ್ಯಾದಿಂದ ರಂಬುಟಾನ್ ತಂದು ಅಭಿವೃದ್ಧಿಪಡಿಸಿದ್ದರು. ಇಂದು ಕನ್ನಾಡಿನಲ್ಲಿ ರಂಬುಟಾನ್ ಹಣ್ಣು ಬೆಳೆಯುವುದಿದ್ದರೆ ಅದರ ಹಿಂದೆ ಸೋನ್ಸರ ಸಾಹಸವಿದೆ. ಹತ್ತು ವರುಷಗಳ ಹಿಂದೆ ಪುಲಾಸಾನಿನ ಬೀಜ ಸಿಕ್ಕಿತ್ತು. ಅದನ್ನು ಆರೈಕೆ ಮಾಡಿ ಗಿಡ ಮಾಡಿದ್ದರು. ಕೇರಳದಲ್ಲಿ ಆಗಲೇ ಪುಲಾಸಾನ್ ಹೆಜ್ಜೆಯೂರಿತ್ತು.
    “ಜನರಿಗೆ ಹೊಸ ಹಣ್ಣುಗಳ ಪರಿಚಯವಿಲ್ಲ. ವಿದೇಶಕ್ಕೆ ಹೋಗಿ ಅಲ್ಲಿಂದ ಪುನಃ ಭಾರತಕ್ಕೆ ವಾಪಾಸಾಗ್ತಾರಲ್ಲಾ, ಅವರಿಗೆ ಹಣ್ಣುಗಳ ಮೋಹ ಇರುತ್ತದೆ. ಗಿಡ ಇದೆಯಾ ಅಂತ ಬೇಡಿಕೆ ಸಲ್ಲಿಸುತ್ತಾರೆ. ಯಾಕೆಂದರೆ ಅಲ್ಲಿ ಹಣ್ಣುಗಳ ಬಳಕೆ ಹೆಚ್ಚಿದೆ,” ಎನ್ನುತ್ತಾರೆ ಸೋನ್ಸ್. ಮಲೇಶ್ಯಾದ ಬಹುತೇಕ ಹಣ್ಣುಗಳು ಕರಾವಳಿಯಲ್ಲಿ ಗೆದ್ದಿವೆ. ಇಲ್ಲಿನ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೊರ ಪ್ರದೇಶದ ವಿದ್ಯಾರ್ಥಿಗಳು ಹಣ್ಣುಗಳ ಕೊಳ್ಳುಗರು.     
     “ರಂಬುಟಾನಿನ ಗುಳವು ಹುಳಿ ಮಿಶ್ರಿತ ಸಿಹಿ. ಎಷ್ಟು ತಿಂದರೂ ಬೇಕು. ಪುಲಾಸಾನ್ ಮಾತ್ರ ಐದಾರು ಹಣ್ಣು ತಿಂದಾಗ ಸಾಕು ಅನ್ನಿಸುತ್ತದೆ,” ಹಣ್ಣಿನ ಗುಣವನ್ನು ಬಣ್ಣಿಸುತ್ತಾರೆ ಪೂರ್ಣಿಮಾ ಬಿ. ಕೇಶವ್. ಇವರು ಉಪನ್ಯಾಸಕಿ. ಹಣ್ಣು ಪ್ರಿಯೆ. ತಮ್ಮ ಮನೆತೋಟದಲ್ಲಿ ನೆಟ್ಟು ನಾಲ್ಕನೇ ವರುಷಕ್ಕೆ ಹಣ್ಣು ಬಿಟ್ಟಿದೆ. ಕಳೆದ ವರುಷ ವಿರಳವಾಗಿ ಹಣ್ಣು ಬಿಟ್ಟಿತ್ತು. ಈ ವರುಷ ಯಥೇಷ್ಟ. ಆಪ್ತರಿಗೆ, ಸ್ನೇಹಿತರಿಗೆ, ನೆಂಟರಿಷ್ಟರಿಗೆ ಹಂಚಿದ್ದಾರೆ.
    ರಂಬುಟಾನಿಗಿಂತ ಗುಳದ ಪ್ರಮಾಣ ಪುಲಾಸಾನಿನಲ್ಲಿ ಹೆಚ್ಚು. ಹಣ್ಣಾದ ಬಳಿಕ ತಾಳಿಕೆ ಕಡಿಮೆ. ಎರಡರಿಂದ ಮೂರು ದಿವಸ ಮಾತ್ರ. ನಂತರ ಸಿಹಿ ರುಚಿಯು ಹೋಗಿ ಹುಳಿಯ ಅನುಭವವಾಗುತ್ತದೆ. ನವೆಂಬರದಲ್ಲಿ ಹೂ ಬಿಡುತ್ತದೆ. ಮೇ, ಜೂನ್, ಜುಲೈ ಹಣ್ಣಾಗುವ ಋತು. ಮಾರುಕಟ್ಟೆಯಲ್ಲಿ ರಂಬುಟಾನ್ ಯಥೇಷ್ಟವಾಗಿ ಸಿಗುತ್ತದೆ. ಪುಲಾಸಾನ್ ಅಪರೂಪ. ಬಹುಶಃ ಅದರ ನೋಟದಿಂದಾಗಿ ಮಾರುಕಟ್ಟೆ ಪ್ರವೇಶಿಸಲಿಲ್ಲವೋ ಏನೋ? ರುಚಿಯಲ್ಲಿ ರಂಬುಟಾನನ್ನು ಹಿಂದಿಕ್ಕಬಹುದು. ವರುಷಕ್ಕೆ ಒಂದೇ ಬೆಳೆ.
    ಕೇಶವರಲ್ಲಿರುವ ನಾಲ್ಕೈದು ಗಿಡಗಳು ಒಂದೆರಡು ವರುಷದಲ್ಲಿ ಫಲ ನೀಡಲು ಶುರು ಮಾಡುತ್ತವೆ. ಹೊಸ ಹಣ್ಣು ಒಂದನ್ನು ಪರಿಚಯಿಸುವ ಉಮೇದು ಇವರಿಗಿದೆ. ಕರಾವಳಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕೃಷಿಕರು ಪುಲಾಸಾನ್ ನೆಟ್ಟಿದ್ದಾರೆ. “ವಿದೇಶದಲ್ಲಿ ಹಣ್ಣುಗಳನ್ನು ತಿನ್ನುವ ಅಭ್ಯಾಸ ಹೆಚ್ಚು. ಡೈನಿಂಗ್ ಟೇಬಲ್ಲಿನಲ್ಲಿ ಹಣ್ಣುಗಳದ್ದೇ ರಾಶಿ. ಭಾರತದಲ್ಲಿ ಇಲ್ಲವೆಂದಲ್ಲ. ಇಲ್ಲಿ ಬೆಳೆಯುವ ಹಣ್ಣುಗಳ ಪ್ರಮಾಣ ನೋಡಿದರೆ ತಿನ್ನುವುದಕ್ಕಿಂತಲೂ ಮಾರಾಟ ಮಾಡುವುದು ಹೆಚ್ಚು ಇಷ್ಟ ಎಂದು ಕಾಣುತ್ತದೆ,” ಎನ್ನುತ್ತಾರೆ ಕೇಶವ್.
ಪುಲಾಸಾನ್ ಕನ್ನಾಡಿನಲ್ಲಿ ಹೆಜ್ಜೆಯೂರುತ್ತಿದೆ. ಕೆಲವು ನರ್ಸರಿಗಳಲ್ಲಿ ಗಿಡಗಳು ಲಭ್ಯ. ಮಾಲ್‍ಗಳಲ್ಲಿ ಇಂತಹ ಹಣ್ಣುಗಳನ್ನು ಕೊಳ್ಳುವ ಸೀಮಿತ ಗ್ರಾಹಕ ವರ್ಗವಿದೆ. ಇವರ ಜಾಡನ್ನು ಅಧ್ಯಯನ ಮಾಡಿದರೆ ಮಾರಾಟಾವಕಾಶವನ್ನು ಸೃಷ್ಟಿಸಬಹುದು. ಕಿಲೋಗೆ ನೂರರಿಂದ ನೂರೈವತ್ತು ರೂಪಾಯಿ ತೆತ್ತು ರಂಬುಟಾನ್ ಖರೀದಿಸುತ್ತಾರೆಂದರೆ, ಅದಕ್ಕಿಂತ ಹೆಚ್ಚು ಸಿಹಿ ಇರುವ ಪುಲಾಸಾನ್ ನಾಲಗೆಯನ್ನಂತೂ ಗೆಲ್ಲಬಹುದು. ಆದರೆ ರುಚಿ ಹಿಡಿಸುವ ಶ್ರಮವಿದೆ.

ಫೋಟೋ ೧ - ಗಿಡದಲ್ಲಿ ಪುಲಾಸಾನ್ ಹಣ್ಣುಗಳು
ಫೋಟೋ ೨ - ರಂಬುಟಾನ್- ಪುಲಾಸಾನ್ ಹೋಲಿಕೆ