ನಾಲ್ಕನೇ ಎಕರೆ
‘ಮಿಥುನ’ ಕೃತಿಯ ಮೂಲ ಲೇಖಕರಾದ ಶ್ರೀರಮಣ ಅವರು ಬರೆದ ನೀಳ್ಗತೆಯೇ ನಾಲ್ಕನೇ ಎಕರೆ. ಲೇಖಕರು ತಮ್ಮ ಬೆನ್ನುಡಿಯಲ್ಲಿ ‘ಹೆಪ್ಪಿನ ಹನಿಯೂ, ನಿಂಬೆಯ ರಸವೂ…’ ಎಂದು ಬರೆಯುತ್ತಾ “ಇದು ಗ್ರಾಮೀಣ ಪ್ರದೇಶದಲ್ಲಿ ಸಾಗುವ ಕಥೆಯಾದ್ದರಿಂದ ರೈತಾಪಿ ಜನರ ಬೆವರುಪ್ಪಿನ ಆಡುಮಾತನ್ನೇ ಇಲ್ಲಿ ಬಳಸಿದ್ದೇನೆ. ಇದು ಮೂರು ಪದರುಗಳಾಗಿ ಬಿಚ್ಚಿಕೊಳ್ಳುವ ಕಥೆ. ಗ್ರಾಮ್ಯ ಜೀವನ, ನಗರೀಕರಣ. ಈ ಎರಡರ ನಡುವೆ ಸಿಲುಕಿ ನಲುಗುತ್ತಿರುವ ಹಳೆ ಮತ್ತು ಹೊಸ ತಲೆಮಾರುಗಳು ಈ ಕಥೆಯಲ್ಲಿ ಕಾಣಸಿಗುತ್ತವೆ. ಹಾಲೆಂಬ ಪದಾರ್ಥವು ಹೆಪ್ಪಿನ ಹನಿಯಿಂದ ಮೊಸರಾಗುವುದಕ್ಕೂ, ನಿಂಬೆಯ ರಸದಿಂದ ಒಡೆದುಹೋಗುವುದಕ್ಕೂ ಇರುವ ವ್ಯತ್ಯಾಸವೇ ಈಗಿನ ಹುಡುಗರಿಗೆ ಗೊತ್ತಿಲ್ಲ. ಹಾಗೆಂದೇ ಈ ಕಥೆ ಬರೆದಿದ್ದೇನೆ. ನಮ್ಮ ಹಳ್ಳಿ ಬಿಟ್ಟು ಐವತ್ತು ವರ್ಷ ದಾಟಿದರೂ, ಅಲ್ಲಿಗೆ ಹೋದಾಗಲೆಲ್ಲಾ ನಾನಿನ್ನೂ ಅಲ್ಲಿಯ ಬೆಳೆಕುಪ್ಪೆ, ದನದ ಕೊಟ್ಟಿಗೆ, ಹುಲ್ಲು ಬಣವೆ, ಎತ್ತಿನಗಾಡಿಗಳ ಸುತ್ತಲೇ ತಿರುಗುತ್ತಿರುತ್ತೇನೆ. ದನಕಾಯುವ ಹುಡುಗರ ಆಟೋಟಗಳು, ಅವರು ಹಾಯಾಗಿ ಅಲೆಯುತ್ತಾ ಹೆಣೆದು ಹಾಡುವ ಪೋಲಿ ಹಾಡುಗಳು ನನ್ನ ಮನದಲ್ಲಿ ಮಾಸದೆ ಈಗಲೂ ಹಸುರಾಗಿವೆ.” ಎಂದಿದ್ದಾರೆ.
ಈ ಕಥೆಯನ್ನು ತೆಲುಗು ಭಾಷೆಯಲ್ಲಿ ಬರೆದವರು ಶ್ರೀರಮಣ ಇವರು. ಸೀಮಾಂಧ್ರದ ತೆನಾಲಿಯವರಾದ ಇವರು ತೆಲುಗಿನ ‘ಆಂಧ್ರಜ್ಯೋತಿ' ಯ ‘ನವ್ಯ' ವಾರ ಪತ್ರಿಕೆಗೆ ಸಾಕಷ್ಟು ವರ್ಷಗಳ ಕಾಲ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಬರೆದ ಕೆಲವೇ ಕೆಲವು ಕಥೆಗಳಲ್ಲಿ ‘ಮಿಥುನಂ’ (ಕನ್ನಡದಲ್ಲಿ ಮಿಥುನ, ಅನುವಾದ: ವಸುಧೇಂದ್ರ) ತುಂಬಾ ಜನಪ್ರಿಯತೆಯನ್ನು ತಂದುಕೊಟ್ಟ ಕಥೆ.
ಕನ್ನಡಕ್ಕೆ ಅನುವಾದ ಮಾಡಿದ ಲೇಖಕರಾದ ಅಜಯ್ ವರ್ಮಾ ಅಲ್ಲೂರಿ ಇವರು ಈ ಕಥೆಯ ಬಗ್ಗೆ ಹೀಗೆ ಹೇಳುತ್ತಾರೆ “ತೆಲುಗಿನ ‘ನಾಲುಗೋ ಎಕರಂ’ ಕಥೆಯು ಕನ್ನಡದಲ್ಲಿ ‘ನಾಲ್ಕನೇ ಎಕರೆ' ಎಂದಾಗಿದೆ. ಇದು ತುಂಬಾ ಸರಳವಾಗಿ ಸಾಗುವ ಎರಡು ಕುಟುಂಬಗಳ ಕಥೆ. ಕಾಲ ಓಡುತ್ತಾ ಹೋದಂತೆಲ್ಲಾ ಆಧುನಿಕತೆಯ ಭರಾಟೆಯಲ್ಲಿ ನೆಲದ ನಂಟನ್ನು ಅತಿ ಸುಲಭವಾಗಿ ಕಳೆದುಕೊಳ್ಳುವವರು ಕೆಲವರಾದರೆ, ಅತ್ತ ಹಳೆಯ ಸಂಪ್ರದಾಯಗಳನ್ನು ಬಿಡಲಾಗದೆ, ಇತ್ತ ಆಧುನಿಕತೆಗೆ ಪೂರ್ತಿಯಾಗಿ ತೆರೆದುಕೊಳ್ಳಲಾಗದೆ ಈ ಎರಡರ ನಡುವೆ ಒದ್ದಾಡುವವರು ಇನ್ನೂ ಕೆಲವರು. ಇಂಥವರ ತಾಕಲಾಟವನ್ನು ಚಿತ್ರಿಸಲೆಂದೇ ಈ ಕಥೆಯನ್ನು ಬರೆದಿರುವುದಾಗಿ ಲೇಖಕರು ತಮ್ಮ ಮಾತಿನಲ್ಲಿ ಹೇಳಿದರೂ, ಕಥೆಯನ್ನು ಓದಿದ ಮೇಲೆ ಅದು ಅರ್ಧ ಸತ್ಯವೆನಿಸುತ್ತದೆ. ಏಕೆಂದರೆ ನಾವಿಂದು ಕಳೆದುಕೊಳ್ಳುತ್ತಿರುವುದು ನೆಲದ ನಂಟನ್ನಷ್ಟೇ ಅಲ್ಲ, ನೆಲದ ಭಾಷೆಯನ್ನೂ ಸಹ. ಅಂಥಾ ನೆಲದ ಭಾಷೆಯನ್ನು ಲೇಖಕರು ಇಲ್ಲಿನ ಸಂಭಾಷಣೆಗಳಲ್ಲಿ, ಸನ್ನಿವೇಶಗಳಲ್ಲಿ ಕಟ್ಟಿಕೊಡಲು ಅದೆಷ್ಟು ಪ್ರಯತ್ನಿಸಿದ್ದಾರೆ ಎಂಬುದು ಕಥೆಯ ಪ್ರತಿ ಸಾಲಲ್ಲೂ ಅರ್ಥವಾಗುತ್ತದೆ. ಜೊತೆಗೆ ಪಲ್ಲಟಗೊಳ್ಳುತ್ತಿರುವ ಗ್ರಾಮ್ಯ ಬದುಕಿನ ಬಗೆಗಿನ ತಾಕಲಾಟದ ಚಿತ್ರಣಕ್ಕಿಂತಲೂ, ಗ್ರಾಮೀಣ ಪರಿಸರದ ದಟ್ಟ ವಿವರಗಳು, ಮರೆಯಾಗುತ್ತಿರುವ ಸಂಪ್ರದಾಯಗಳು, ಹಳೆಯ ವಸ್ತುಗಳು, ನಗರವಾಸಿಗಳಿಗೆ ಗೊತ್ತೇಯಿರದ - ಹಳ್ಳಿಯಲ್ಲಿ ನಡೆವ ಸರ್ವೇಸಾಮಾನ್ಯ ಘಟನೆಗಳನ್ನು ಅತ್ಯಂತ ಸೊಗಸಾಗಿ ಪೋಣಿಸಿದ್ದಾರೆ. ಆ ವಿವರಗಳೇ ಇಲ್ಲಿ ಅಗ್ರಸ್ಥಾನ ಪಡೆದಿವೆ.
ಇಲ್ಲಿ ಹಳೆಯ ಬೇಸಾಯ ಪದ್ಧತಿಗಳ ಅವಸಾನದ ಜೊತೆಜೊತೆಗೆ ದೇವಾಲಯಗಳ ಅವಸಾನವನ್ನೂ ಲೇಖಕರು ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೇನೋ ಎಂದು ಕೆಲವೆಡೆ ಅನಿಸುತ್ತದೆ. ‘ಪೆದಕಾಪು' ಪಾತ್ರವು ಬೇಸಾಯ ಪದ್ಧತಿಗಳ ಅವಸಾನಕ್ಕೆ ಸಾಕ್ಷಿಯಾದರೆ, ‘ಕೃಷ್ಣಸ್ವಾಮಿ'ಪಾತ್ರವು ದೇವಾಲಯಗಳ ಅವಸಾನಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಪ್ರಶಾಂತವಾಗಿದ್ದ ಗ್ರಾಮದೊಳಗೆ ನಗರೀಕರಣ, ಗೋಳೀಕರಣಗಳು ಏಕಾಏಕಿ ಲಗ್ಗೆಯಿಟ್ಟಾಗ, ಅದರ ಪರಿಣಾಮವಾಗಿಯೇ ಸುಶಿಕ್ಷಿತನಾದ ಕಥೆಯ ನಿರೂಪಕ ಮಾಧವಸ್ವಾಮಿ ತನ್ನದೇ ನೆಲಕ್ಕೆ ಮರಳಿದರೆ, ತನ್ನ ನೆಲವನ್ನು ಬಿಟ್ಟಿರಲಾರದೆ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಬಂದ ಸಾಂಬಶಿವರಾವು ತನ್ನ ನೆಲವನ್ನೇ ಕಳೆದುಕೊಳ್ಳುತ್ತಾನೆ. ನೀಳ್ಗತೆಯ ಮೊದಮೊದಲ ಪುಟಗಳಲ್ಲಿ ಕಾಣಸಿಗುವ ಹಾವು-ಹದ್ದುಗಳು, ನಗರೀಕರಣ ಹಾಗೂ ಗೋಳೀಕರಣದ ದುರಂತ ರೂಪಕಗಳಾಗಿ ಪೆದಕಾಪಿನ ಕಣ್ಣ ಬೆಳಕಿನ ಮೂಲಕ ಕೊನೆಯಲ್ಲಿ ಮತ್ತೊಮ್ಮೆ ಕಾಣಸಿಗುತ್ತವೆ.”
೧೧೨ ಪುಟಗಳ ಈ ಪುಟ್ಟ ಪುಸ್ತಕವನ್ನು ಒಂದೇ ಬಾರಿಗೆ ಓದಿ ಮುಗಿಸಬಹುದಾಗಿದೆ. ಈ ಪುಸ್ತಕವನ್ನು ‘ನೆಲದ ನಂಟು ಬಿಡದ ಎಲ್ಲ ನೇಗಿಲಯೋಗಿ’ಗಳಿಗೆ ಅರ್ಪಿಸಲಾಗಿದೆ. ಪುಸ್ತಕದಲ್ಲೆಲ್ಲಾ ಸೃಜನ್ ಅವರ ರೇಖಾಚಿತ್ರಗಳು ಬರಹದ ತೂಕವನ್ನು ಹೆಚ್ಚಿಸಿವೆ. ಪುಸ್ತಕಕ್ಕೆ ಶ್ವೇತಾ ಆಡುಕಳ ಅವರು ಮುಖಪುಟದ ವಿನ್ಯಾಸ ಮಾಡಿದ್ದಾರೆ.