ನಾಲ್ಕನೇ ದಿನದ ನವರಾತ್ರಿ ಆರಾಧನೆ - ಕೂಷ್ಮಾಂಡಾ ದೇವಿ
*ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮ ಚಾರಿಣೀ|*
*ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್||*
*ಓಂ ದೇವಿ ಕೂಷ್ಮಾಂಡ್ಯೆ ನಮಃ*
ಶ್ರೀ ದುರ್ಗಾಮಾತೆಯ ನಾಲ್ಕನೆಯ ದಿನದ ರೂಪವೇ ‘ಕೂಷ್ಮಾಂಡಾ ದೇವಿ’. ಕೂಷ್ಮಾ ಎಂದರೆ ಕುಂಬಳಕಾಯಿ. ಇಲ್ಲಿ ದೇವಿಯ ಗಹಗಹಿಸುವಿಕೆ ನಗುವಿನಿಂದ ‘ಬ್ರಹ್ಮಾಂಡ’ ಸೃಷ್ಟಿಯಾಯಿತು .’ಅಂಡ’ ಎಂಬುದನ್ನು ಬ್ರಹ್ಮಾಂಡಕ್ಕೆ ಹೋಲಿಸಬಹುದು. ಈ ದೇವಿಗೆ ಕುಂಬಳಕಾಯಿ ಅತ್ಯಂತ ಪ್ರಿಯವಾದ್ದು. ಈಕೆ ಆದಿಶಕ್ತಿಯ ಸ್ವರೂಪ. ಮುಖ್ಯವಾಗಿ ಶಕ್ತಿದೇವತೆಗಳ ಆರಾಧನೆ. ಈಕೆ ಅಷ್ಟಭುಜೆ. ಕಮಂಡಲ, ಕಮಲ, ಬಿಲ್ಲು-ಬಾಣ, ವಿಶೇಷವಾಗಿ ಅಮೃತಕಲಶ, ಜಪಮಾಲೆ ಈಕೆಯ ಕೈಗಳಲ್ಲಿ ರಾರಾಜಿಸುತ್ತಿದೆ. ಸ್ವರ್ಣಮಯ ತನುಕಾಂತಿಯಲ್ಲಿ ಕೆಂಪು, ಕೇಸರಿ ಬಣ್ಣದ ವಸ್ತ್ರದಲ್ಲಿ ಶೋಭಿಸುತ್ತಿರುವಳು. ಮಹಾಮಾತೆಯ ಪ್ರಕಾಶದಿಂದ ಸಮಸ್ತ ಬ್ರಹ್ಮಾಂಡವೇ ಬೆಳಗುತ್ತಿರುವುದು. ಈಕೆ ಸಿಂಹವಾಹಿನಿಯಾಗಿ ಭಕ್ತರಿಗೆ ಸಿರಿಸಂಪತ್ತನ್ನು, ಸಿದ್ಧಿಯನ್ನು ಕರುಣಿಸುತ್ತಾಳೆ.
ತ್ರಿವಿಧತೆಗಳಾದ ಸೃಷ್ಟಿ, ಸ್ಥಿತಿ,ಲಯಗಳ ಅವಧಿಯಲ್ಲಿ ನಮ್ಮ ದೇಹದ ಅವಯವಗಳ ಉತ್ಪನ್ನ, ನಾಶ, ಪುನರಪಿ ಉತ್ಪನ್ನ ಇವುಗಳಿಂದ ಮುಕ್ತಿ ಹೊಂದಲು ಮಾತೆಯ ಕಾರುಣ್ಯ ಬೇಕು. ಅದನ್ನು ಶ್ರೀ ಮಾತೆಯನ್ನು ಭಜಿಸಿ, ಪೂಜಿಸಿ ಪಡೆಯಬಹುದು. ಕೂಷ್ಮಾಂಡಾ ದೇವಿಯ ಅನುಗ್ರಹ ನಮಗೆ ಸದಾ ಬೇಕು.
ಅಂಧಕಾರವೆಂಬ ಚಾಪೆಯನ್ನು ನಗುವೆಂಬ ಆಭರಣದಿಂದ ದೂರೀಕರಿಸುವವಳು ಈಕೆ. ನಮ್ಮ ಬದುಕಿನ ಕಷ್ಟಗಳ ನಿವಾರಣೆ, ಋಣಾತ್ಮಕ ಅಂಶಗಳ ನಾಶ ಮತ್ತು ಧನಾತ್ಮಕ ಬೀಜಗಳನ್ನು ಹೃದಯದಲ್ಲಿ ಬಿತ್ತಿ, ಗಟ್ಟಿಗೊಳಿಸುವ ಶಕ್ತಿ ಮಾತೆಯದ್ದಾಗಿದೆ. ಇಂದಿನ ಆರಾಧನೆಯಲ್ಲಿ ‘ಹೃದಯಚಕ್ರ’ ದಲ್ಲಿ ದೇವಿಯ ನೆಲೆ. ಪ್ರೀತಿ ವಾತ್ಸಲ್ಯಗಳ ಪ್ರತೀಕ. ಸಕಲ ವ್ಯಾಧಿಗಳಿಂದ ಮುಕ್ತಿ.
ನವರಾತ್ರಿಯ ಮೂರು ದಿನಗಳಲ್ಲಿ ತಮೋಗುಣಗಳನ್ನು ನಾಶಮಾಡುವ ಶ್ರೀ ದುರ್ಗೆಯ ಪೂಜೆ ಮಾಡುತ್ತೇವೆ. ಇನ್ನು ಮೂರು ದಿನಗಳಲ್ಲಿ ರಜೋಗುಣ ತತ್ವದ ಮಾತೆಯ ಆರಾಧನೆ ಮಾಡುತ್ತೇವೆ. ಸಾಧನೆ, ಸತ್ವಗುಣಗಳನ್ನು ತನುವಲ್ಲಿ ಹೆಚ್ಚಿಸುವುದು, ಕುಟುಂಬ ಕ್ಷೇಮ, ಸಮಾಜದಲ್ಲಿ ಉತ್ತಮ ಸ್ಥಾನಮಾನಗಳು, ನೆಮ್ಮದಿ ಮೂಡಿಸುವುದು, ಮಾನಸಿಕ ಆರೋಗ್ಯ ವೃದ್ಧಿಯನ್ನು ದೇವಿ ಆರಾಧನೆಯಿಂದ ಪಡೆಯೋಣ.
*ಯಾದೇವಿ ಸರ್ವ ಭೂತೇಷು ಮಾ* *ಕೂಷ್ಮಾಂಡಾ ರೂಪೇಣ ಸಂಸ್ಥಿತಾ|*
*ನಮಸ್ತಸ್ಯೈ ನಮಸ್ತಸೈ ನಮಸ್ತಸ್ಯೈ* *ನಮೋ ನಮಃ||*
-ರತ್ನಾ ಕೆ ಭಟ್ ತಲಂಜೇರಿ
(ಆಧಾರ: ಪುರಾಣ ಮಾಲಿಕಾ)
ಚಿತ್ರ ಕೃಪೆ: ಇಂಟರ್ನೆಟ್ ತಾಣ