ನಾಲ್ಕು ಝೆನ್ ಕಥೆಗಳು

ನಾಲ್ಕು ಝೆನ್ ಕಥೆಗಳು

ಒಂದು : ಓ, ಹೌದಾ!

ಒಬ್ಬರು ಝೆನ್‌ ಗುರು ಇದ್ದರು. ಅವರ ಆಶ್ರಮದಲ್ಲಿ ನೂರಾರು ಮಂದಿ ತರುಣ ತರುಣಿಯರು ಇದ್ದರು. ಒಮ್ಮೆ ಅದೇ ಗ್ರಾಮದ ಒಬ್ಬ ತರುಣಿ ಮದುವೆಯಾಗದೇ ಗರ್ಭಿಣಿಯಾದಳು. ಆಕೆ ಭಯದಿಂದ, ಈ ಗರ್ಭಕ್ಕೆ ಝೆನ್‌ ಗುರುವೇ ಕಾರಣ ಎಂದು ತಂದೆ ತಾಯಿಯರಿಗೆ ಹೇಳಿಬಿಟ್ಟಳು. ಅವರು ಗುರುಗಳ ಬಳಿಗೆ ಬಂದು, ʼʼಯಾಕೆ ಹೀಗೆ ಮಾಡಿದಿರಿ? ಈ ಮಗುವಿನ ಹೊಣೆ ನಿಮ್ಮದೇʼʼ ಎಂದೆಲ್ಲಾ ಕೂಗಾಡಿ ಹೋದರು.

ʼʼಓ, ಹೌದಾ!ʼʼ ಎಂದು ಗುರು ಸುಮ್ಮನಾದರು.

ಮಗು ಜನಿಸಿತು. ಮಗುವನ್ನು ಊರವರು ತಂದು ಗುರುವಿನ ಆಶ್ರಮದಲ್ಲಿ ಬಿಟ್ಟು ಹೋದರು. ಗುರು ಅದನ್ನು ಪ್ರೀತಿಯಿಂದ ಎತ್ತಿಕೊಂಡು ಸಾಕಿ ಲಾಲನೆ ಪೋಷಣೆ ಮಾಡಿದರು.

ಕೆಲವು ದಿನಗಳ ಬಳಿಕ ಮಗು ಗುರುವಿನದಲ್ಲ, ಅದೇ ಗ್ರಾಮದ ಒಬ್ಬ ವ್ಯಾಪಾರಿ ತರುಣನದು ಎಂಬ ಸತ್ಯವನ್ನು ತರುಣಿ ಬಿಚ್ಚಿಟ್ಟಳು. ಈಗ ಗಾಬರಿಯಾಗುವ ಸರದಿ ಆಕೆಯ ಅಪ್ಪ ಅಮ್ಮರದು. ಅವರು ಓಡೋಡಿ ಗುರುವಿನ ಬಳಿಗೆ ಬಂದರು. ʼʼಮಗು ನಿಮ್ಮದಲ್ಲವಂತೆ. ನಿಮಗೆ ತೊಂದರೆ ಕೊಟ್ಟದ್ದಕ್ಕಾಗಿ ಕ್ಷಮಿಸಿ.ʼʼ ಎಂದು ಹೇಳಿ ಮಗುವನ್ನು ಮರಳಿ ಕೊಂಡೊಯ್ದರು.

ʼʼಓ ಹೌದಾ!ʼʼ ಎಂದಷ್ಟೇ ಹೇಳಿ ಗುರು ಸುಮ್ಮನಾದರು.  

***

ಎರಡು: ಆಯುಷ್ಯ ಮುಗಿದಿತ್ತು

ಝೆನ್‌ ಗುರು ಇಕಿಯು ವಿದ್ಯಾರ್ಥಿಯಾಗಿದ್ದ ಕಾಲದ ಒಂದು ಕಥೆ.

ಇಕಿಯು ಒಬ್ಬ ಗುರುವಿನಲ್ಲಿ ಕಲಿಯುತ್ತಿದ್ದರು. ಆ ಗುರುವಿನ ಬಳಿ ಒಂದು ಬೆಲೆಬಾಳುವ ಟೀ ಕಪ್‌ ಇತ್ತು. ಅದೆಂದರೆ ಗುರುವಿಗೆ ಪ್ರಾಣ. ನಿತ್ಯ ಅದರಲ್ಲೇ ಚಹಾ ಸೇವಿಸುತ್ತಿದ್ದರು.

ಒಂದು ದಿನ ಇಕಿಯು ಅದನ್ನು ತೊಳೆಯುತ್ತಿದ್ದಾಗ, ಅದು ಕೈ ಜಾರಿ ಬಿದ್ದು ಒಡೆದುಹೋಯಿತು. ಇಕಿಯುಗೆ ದಿಗಿಲಾಯಿತು. ಈ ಸಂದರ್ಭವನ್ನು ಹೇಗೆ ನಿಭಾಯಿಸುವುದು ಎಂದು ಯೋಚಿಸಿದರು. ಕಪ್‌ ಚೂರುಗಳನ್ನು ಅಡಗಿಸಿಟ್ಟುಕೊಂಡು ಗುರುವಿನ ಬಳಿಗೆ ಹೋದರು.

ʼʼಜನರು ಯಾಕೆ ಸಾಯುತ್ತಾರೆ?ʼʼ ಎಂದು ಗುರುವಿನ ಬಳಿ ಕೇಳಿದರು.

ʼʼಹುಟ್ಟಿನಂತೆಯೇ ಸಾವು ಸಹಜ ಕ್ರಿಯೆ, ಎಲ್ಲರೂ ಸಾಯುವರು, ಸಾಯಬೇಕು. ಎಲ್ಲರಿಗೂ, ಎಲ್ಲದಕ್ಕೂ ಒಂದು ಆಯುಷ್ಯವಿದೆʼʼ ಎಂದು ಗುರು ಉತ್ತರಿಸಿದರು.

ʼʼಗುರುಗಳೇ ಹಾಗಿದ್ದರೆ ಈ ಟೀ ಕಪ್‌ಗೆ ಆಯುಷ್ಯ ಮುಗಿದಿತ್ತು ಎಂದು ಕಾಣುತ್ತದೆʼʼ ಎಂದು ಇಕಿಯು ಕಪ್‌ ಚೂರುಗಳನ್ನು ಮುಂದೊಡ್ಡಿದರು.

ಗುರು ದಂಗಾದರು, ನಂತರ ಸಾವರಿಸಿಕೊಂಡು ಮುಗುಳ್ನಕ್ಕರು.

***

ಮೂರು: ಇರಬಹುದು!

ಒಬ್ಬ ರೈತನಿದ್ದ. ಅವನಿಗೆ ಒಬ್ಬ ಮಗ. ಬಹುಕಾಲದಿಂದ ಅವನ ಬಳಿ ದುಡಿಯುತ್ತಿದ್ದ ಒಂದು ಕುದುರೆ.

ಒಂದು ದಿನ ಅವನ ಕುದುರೆ ಕಾಡಿಗೆ ಓಡಿಹೋಯಿತು. ಗ್ರಾಮಸ್ಥರು ರೈತನ ಬಳಿಗೆ ಬಂದು ʼʼಛೆ, ನಿನ್ನದು ದುರದೃಷ್ಟʼʼ ಎಂದರು. ʼʼಇರಬಹುದುʼʼ ಎಂದು ರೈತ ಸುಮ್ಮನಾದ.

ಮರುದಿನ ಕುದುರೆ ಕಾಡಿನಿಂದ ಮರಳಿತು. ಜತೆಗೆ ಇನ್ನಿತರ ಮೂರು ಕುದುರೆಗಳನ್ನೂ ಕರೆದುಕೊಂಡು ಬಂದಿತ್ತು.

ʼʼಓ, ನಿನ್ನದು ಅದೃಷ್ಟʼʼ ಎಂದರು ಊರವರು. ರೈತ ಮತ್ತೆ ʼʼಇರಬಹುದುʼʼ ಎಂದ.

ಇದಾದ ಕೆಲವು ದಿನಗಳಿಗೆ, ರೈತನ ಮಗ ಕಾಡಿನಿಂದ ಬಂದ ಕುದುರೆಯನ್ನು ಪಳಗಿಸಲು ಹೋಗಿ ಅದನ್ನೇರಿ ಬಿದ್ದು ಕಾಲು ಮುರಿದುಕೊಂಡ. ಊರಿನವರು ಮತ್ತೆ ರೈತನನ್ನು ಕಂಡು “ಛೆ ಛೆ! ದುರದೃಷ್ಟʼʼ ಎಂದು ಲೊಚಗುಟ್ಟಿದರು. ರೈತ ʼʻಇರಬಹುದುʼʼ ಎಂದೇ ಹೇಳಿದ.

ಮರುದಿನ ಊರಿಗೆ ಸೈನಿಕರು ಬಂದರು. ಯುದ್ಧ ಸಮೀಪವಾಗಿತ್ತು. ಆರೋಗ್ಯವಂತ ಯುವಕರನ್ನೆಲ್ಲ ಬಲವಂತವಾಗಿ ಸೈನ್ಯಕ್ಕೆ ಒಯ್ಯಲಾಯಿತು. ರೈತನ ಮಗನ ಮುರಿದ ಕಾಲು ನೋಡಿ, ಅವನನ್ನು ಬಿಟ್ಟು ಹೋದರು.

ಈ ಸಲ ಊರವರು ರೈತನನ್ನು ನೋಡಿ ʻʻನಿನ್ನ ಅದೃಷ್ಟʼʼ ಎಂದರು. ಆಗಲೂ ರೈತ ಏನು ಹೇಳಿರಬಹುದು, ನೀವೇ ಹೇಳಿ.

***

ನಾಲ್ಕು: ಅದ್ಭುತ 

ಒಬ್ಬ ಸಂಗೀತಗಾರ ತನ್ನ ವಯೋಲಿನ್ ನಿಂದ ಅದ್ಭುತವಾಗಿ ಸಂಗೀತ ನುಡಿಸಿದ …..

ಆ ಪ್ರದರ್ಶನಕ್ಕೆ ಒಬ್ಬ ತತ್ವಜ್ಞಾನಿ, ಒಬ್ಬ ವ್ಯಾಪಾರಿ, ಒಬ್ಬ ರಾಜಕೀಯ ನಾಯಕ, ಒಬ್ಬ ಇಂಜಿನಿಯರ್, ಒಬ್ಬ ಉಪಾದ್ಯಾಯ ಮತ್ತು ಜೆನ್ ಗುರು ಹೋಗಿದ್ದರು.

ತತ್ವಜ್ಞಾನಿ : ಈತನ ಸಂಗೀತ ನನ್ನನ್ನು ಇಷ್ಟೇಕೆ ಕದಲಿಸಿದೆ….

ವ್ಯಾಪರಸ್ಠ :ಈತ ಈ ಸಾಧನೆಗಾಗಿ ಅದೆಷ್ಟು ಸಮಯ ಕಳೆದಿರಬಹುದು……

ರಾಜಕೀಯ ನಾಯಕ :ನನ್ನ ಸಭೆಯಲ್ಲಿ ಈತನ ಕಾರ್ಯಕ್ರಮ ಕೊಡಿಸಿದರೆ …..

ಇಂಜಿನಿಯರ್ : ಈತ ತನ್ನ ವಯಾಲಿನ್ ನಿಂದ ಈ ಅದ್ಬುತ ಶಬ್ದ ತರಂಗಗಳನ್ನು ಹೇಗೆ ಸೃಷ್ಟಿಸಿದ …..

ಉಪಾದ್ಯಾಯ :ಇಷ್ಟು ಚೆನ್ನಾಗಿ ವಯಲಿನ್ ನುಡಿಸುವುದನ್ನು ಈತನಿಗೆ ಯಾರು ಕಲಿಸಿಕೊಟ್ಟರೋ …..

ಜೆನ್ ಗುರು ಭಾವ ಪರವಶರಾಗಿ ಆನಂದಿಸಿ, ಆನಂದಬಾಷ್ಪದ ಜೊತೆ ಖುಶಿಯಾಗಿ ಅಭಿನಂದನೆ ಸಲ್ಲಿಸಲು ಚಪ್ಪಾಳೆ ತಟ್ಟಿದರು.

(ಮೂಲ: ಜೆನ್ ಕಥಲು)

ಚಿತ್ರ ಕೃಪೆ: ಅಂತರ್ಜಾಲ ತಾಣ