#ನಾಲ್ಕು ದಿನದ ಹಿಂದೆ

#ನಾಲ್ಕು ದಿನದ ಹಿಂದೆ

 
 
ಬೆಳಗ್ಗೆ 9 ಕ್ಕೆ ಒಂದೇ ಸಮನೆ ದೂರವಾಣಿ ಬಡಿದುಕೊಳ್ಳಲು ಶುರು ಮಾಡಿತು, ಸ್ಥಿರವಾಣಿಗೆ ಕರೆ ಮಾಡಿದವರು ಯಾರಪ್ಪ ಅಂದುಕೊಳ್ಳುತ್ತಲೇ ಉತ್ತರಿಸಿದೆ ______ ಆಸ್ಪತ್ರೆಯಿಂದ ಡ್ಯೂಟಿ ನರ್ಸ್ ಮಾತಾಡಿ -ಒಬ್ಬ ಪೇಶಂಟ್ಗೆ ಸೀರಿಯಸ್ ಆಗಿದೆ. ಆಗಲೋ ಈಗಲೋ ಎನ್ನುವ ಸ್ಥಿತಿಯಲ್ಲಿದ್ದಾರೆ, ನಿಮ್ಮ ಫೋನ್ ನಂಬರ್ ಕೊಟ್ಟರು, ತಕ್ಷಣ ಬನ್ನಿ, ಎಂದು ಫೋನಿಟ್ಟಳು. ಬೆಳಗ್ಗೆ ಗಂಡ ಮಕ್ಕಳು ಕಾಲೇಜಿಗೆ , ಕೆಲಸಕ್ಕೆಂತ ಹೋಗಿದ್ದಾರೆ, ಯಾರಿಗೇನಾಗಿದೆಯೋ, ಏನು ಕಥೆಯೋ ...ದಿಕ್ಕೇ ತೋಚದಂತಾಯಿತು. ವಿಚಿತ್ರ ಯೋಚನೆಗಳಲ್ಲಿ ಓಡುತ್ತಿದ್ದ ಮನಸ್ಸಿಗೆ ಕಡಿವಾಣ ಹಾಕಲು ಕಾಣದ ಭಗವಂತನಿಗೆ ಮೊರೆಯಿಡುತ್ತಾ ಹೆಚ್ಚು ಕಡಿಮೆ ಮೈ ಮೇಲಿನ ಪರಿವೆ ಇಲ್ಲದಂತೆ ನರ್ಸ್ ಕೊಟ್ಟ ವಿಳಾಸದ ಆಸ್ಪತ್ರೆಗೆ ಒಂದೂವರೆ ಗಂಟೆಯಲ್ಲಿ ತಲುಪಿದೆ. ಕರೆ ಮಾಡಿದ್ದ ನರ್ಸ್ ಹುಡುಕಿ ಪರಿಚಯ ಹೇಳಿಕೊಂಡೆ, ICU ಗೆ ಕರೆದೊಯ್ದ ಆಕೆ ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿಯ ಕಡೆ ಕೈ ತೋರಿದಳು. ಅಲ್ಲಿ ನೋಡಿದರೆ ನನ್ನ ಪರಿಚಯದ ಹುಡುಗ ಸುನಿಲ!!.....ಅವನು ನನ್ನ ಬರವನ್ನೇ ಕಾಯುತ್ತಿದ್ದಂತೆ ಕಷ್ಟಪಟ್ಟು ಏನೇನೋ ಹೇಳಿದ..... ಹೇಳಿದ ಮಾತುಗಳಲ್ಲಿ ಅರ್ಥವಾದದ್ದು ' ಅಕ್ಕಾ..ದಯವಿಟ್ಟು ಅವಳ ಕೈ ಬಿಡಬೇಡಿ, ನಿಮಗೆ ಗೊತ್ತು ಎಲ್ಲಾ ವಿಷಯ ... ಪ್ಲೀಸ್ ಪ್ಲೀಸ್ ಅಕ್ಕ' ನೋಡ ನೋಡುತ್ತಲೇ ಮಾತಾಡುವುದನ್ನು ನಿಲ್ಲಿಸಿಬಿಟ್ಟ !!... 'ಸುನಿಲ, ಸುನಿಲ....' ಅಂತ ಕರೀತಾನೆ ಇದ್ದೇನೆ, ಅವನು ಬಾರದ ಜಗತ್ತಿಗೆ ಆಗಲೇ ಹೋಗೇ ಬಿಟ್ಟಿದ್ದ... ಇಷ್ಟು ಹತ್ತಿರದಲ್ಲಿ ಯಾವತ್ತೂ ಸಾವನ್ನು ನೋಡಿದವಳಲ್ಲ ನಾನು, ದಿಗ್ಬ್ರಾಂತಳಾಗಿ ಇದೇನನ್ನೂ ಅರಗಿಸಿಕೊಳ್ಳಲಾಗದೆ ಅವನ ಮುಖವನ್ನೇ ನೋಡುತ್ತಾ ಕೂತುಬಿಟ್ಟೆ.... (ಈ ಘಟನೆ ನಡೆದು ಸುಮಾರು ದಿನಗಳಾದರೂ ಚೇತರಿಸಿಕೊಳ್ಳಲಾಗುತ್ತಿಲ್ಲ.) 
<!--break-->ಸುನಿಲನಿಗೆ ಇನ್ನೂ 28 ವರ್ಷ. ಸಾಫ್ಟವೆರ್ ಇಂಜಿನಿಯರ್ ಕೆಲಸ, ಐದಂಕೆ ಸಂಬಳ, ಮುದ್ದಾದ ಮಡದಿ, ಒಂದೂವರೆ ತಿಂಗಳ ಪುಟ್ಟಕೂಸಿನ ಸುಂದರ ಸಂಸಾರ ಅವನದು. ಎರಡು ವರ್ಷದ ಹಿಂದೆಯಷ್ಟೇ ಎಲ್ಲರ ವಿರೋಧ ಕಟ್ಟಿಕೊಂಡು ಪ್ರೀತಿಸಿ ಮದುವೆಯಾಗಿದ್ದ. ಸಾಯಲು ನಿರ್ಧರಿಸಿದವರನ್ನು ನಾವೇ ಸಮಾಧಾನಪಡಿಸಿ ಮದುವೆ ಮಾಡಿಸಿದ್ದೆವು... ಅಂದಿನ ರಾತ್ರಿ 11. 45 ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದಾನೆ. ತಲೆನೋವು ಇದ್ದದ್ದರಿಂದ ಹೆಂಡತಿಗೆ ಕಾಫಿ ಮಾಡಲು ಹೇಳಿ ಕುರ್ಚಿಯ ಮೇಲೆ ಕೂತಿದ್ದಾನೆ ಅಷ್ಟೇ.., ತೀವ್ರ ಹೃದಯಾಘಾತವಾಗಿದೆ ... !! ಅಕ್ಕ ಪಕ್ಕದವರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಸೇರಿಸಿದ ಹೆಂಡತಿ ಅವನಿನ್ನು ಉಳಿಯಲಾರ ಎಂದು ಗೊತ್ತಾಗಿ ಆಘಾತ ತಡೆಯಲಾರದೆ ತೀವ್ರ ಖಿನ್ನತೆಗೆ ಒಳಗಾಗಿದ್ದಾಳೆ . ಸುಮಾರು ಗಂಟೆಗಳ ವೈದ್ಯರ ಪ್ರಯತ್ನ ಫಲ ಕೊಡದೆ ಸುನಿಲನ ಪ್ರಾಣ ಹೋಗಿದೆ. ತೀವ್ರ ಕೆಲಸದ ಒತ್ತಡದಿಂದ (Over stress) ಹೀಗಾಗಿರಬಹುದು ಎಂದರಂತೆ ವೈದ್ಯರು. ಅಪಘಾತವಾಗಿಯೋ, ಗುಣಪಡಿಸಲಾಗದ ಖಾಯಿಲೆಯಿಂದ ತೀರಿಕೊಂಡಿದ್ದರೂ ಇಷ್ಟು ನೋವಾಗುತ್ತಿರಲಿಲ್ಲ. ದಿನವೂ ವ್ಯಾಯಾಮ ಮಾಡುವ ಆರೋಗ್ಯವಂತ ಮನುಷ್ಯ ಈ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗಿ ತೀರಿಕೊಳ್ಳುತ್ತಾನೆಂದರೆ ಅದೇನು ವಿಧಿಯ ವೈಪರೀತ್ಯವೋ, ಕಾಲನ ಕ್ರೂರ ನೋಟವೋ... 
 
ಎಷ್ಟು ಅನಿಶ್ಚಿತ ಬದುಕಲ್ಲವೇ ನಮ್ಮದು....ನೆನ್ನೆ ಜೀವಂತ ಇದ್ದವರು ಇಂದಿಲ್ಲ!! ಪುಟ್ಟ ಕಂದನಿಂದ ಅವನ ಅಪ್ಪನನ್ನು, ಅರಳಬೇಕಾದ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಿತ್ತುಕೊಂಡಿತು ದುರ್ವಿಧಿ!!.. 
 
ಅಸಹಾಯಕತೆಯನ್ನೂ , ಧೀರ್ಘ ಮೌನವನ್ನೂ ಉಂಟು ಮಾಡುವ ಈ ಕ್ರೂರ ಸಾವನ್ನು ನಾನು ದ್ವೇಷಿಸುತ್ತೇನೆ....

PC : Google ಸಾಂದರ್ಭಿಕ ಚಿತ್ರ