ನಾಲ್ಕು ಮಕ್ಕಳು ಮಾರಾಟಕ್ಕಿದ್ದಾರೆ, ವಿಚಾರಿಸಿ !

ನಾಲ್ಕು ಮಕ್ಕಳು ಮಾರಾಟಕ್ಕಿದ್ದಾರೆ, ವಿಚಾರಿಸಿ !

ಒಂದು ಮನೆಯ ಮುಂದೆ “4 Children For Sale, Inquire within” ಎಂಬ ದೊಡ್ಡ ಫಲಕ, ಅದರ ಬದಿಯ ಮೆಟ್ಟಿಲುಗಳ ಮೇಲೆ ಕುಳಿತ ನಾಲ್ಕು ಅಮಾಯಕ ಮಕ್ಕಳು ಮತ್ತು ನಾಚಿಕೆ (!?) ಯಿಂದ ಮುಖಮುಚ್ಚಿಕೊಂಡಿರುವ ಮಕ್ಕಳ ಗರ್ಭಿಣಿ ಅಮ್ಮನ ಕಪ್ಪು ಬಿಳುಪು ಚಿತ್ರವನ್ನು ಜಾಲತಾಣವೊಂದರಲ್ಲಿ ಕಂಡೆ. ಈಗಿನ ಕಾಲದಲ್ಲಿ ಮಕ್ಕಳನ್ನು ಹುಟ್ಟಿಸುವುದು, ಮಾರುವುದು, ಮಾನವ ಕಳ್ಳ ಸಾಗಣೆ ಮೂಲಕ ಮಕ್ಕಳನ್ನು ಸಾಗಿಸುವುದು, ಕಾನೂನು ಬಾಹಿರವಾಗಿ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವುದು, ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಈ ಫೋಟೋದ ಹಿಂದಿನ ಕಥೆಯನ್ನು ಹುಡುಕಲು ಹೋದಾಗ ಅದು ತೆಗೆದದ್ದು ಚಿಕಾಗೋದಲ್ಲಿ ೧೯೪೮ರಲ್ಲಿ. 

ತನ್ನ ಕರುಳ ಕುಡಿಗಳನ್ನು ಮಾರಲು ಹೊರಟ ತಾಯಿಗೆ ಅದೆಂತಹ ಸಮಸ್ಯೆಯಿರಬಹುದು? ನಾಲ್ಕು ಪುಟ್ಟ ಮಕ್ಕಳ ಜೊತೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನೂ ಮಾರಲು ಹೊರಟಾಕೆಯ ಮನಸ್ಥಿತಿ ಹೇಗಿರಬಹುದು? ಬನ್ನಿ, ಒಂದೊಂದಾಗಿಯೇ ತಿಳಿದುಕೊಳ್ಳುವ.

ಅದು ಆಗಸ್ಟ್ ೫, ೧೯೪೮ರ ಒಂದು ದಿನ ‘ದಿ ವಿಡೆಟ್ಟೆ' (The Vidette) ಎನ್ನುವ ವಾರ್ತಾ ಪತ್ರಿಕೆಯಲ್ಲಿ ‘ನಾಲ್ಕು ಮಕ್ಕಳು ಮಾರಾಟಕ್ಕಿವೆ’ ಎಂಬ ಫೊಟೋ ಪ್ರಕಟವಾದಾಗ ಚಿಕಾಗೋ ನಗರದ ಜನರೆಲ್ಲಾ ಗಾಬರಿಗೆ ಒಳಗಾದರು. ಆ ಚಿತ್ರದಲ್ಲಿ ಕಂಡು ಬರುವ ನಾಲ್ಕು ಮಕ್ಕಳು ಪ್ರಪಂಚದ ಆಗುಹೋಗುಗಳ ಪರಿವೆಯೇ ಇಲ್ಲದೇ ಏನೋ ಗೊಂದಲದಲ್ಲಿರುವಂತೆ ಚಿತ್ರಕ್ಕೆ ಫೋಸು ಕೊಟ್ಟರೆ ಅವರ ಅಮ್ಮ ಮಾತ್ರ ತನ್ನ ಮುಖವನ್ನು ಛಾಯಾಗ್ರಾಹಕನಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದಳು. ಈ ಮಹಿಳೆಯ ಹೆಸರು ಲೂಸಿಲ್ ಚಾಲಿಫ್ಲಾಕ್ಸ್. ಈಕೆಯ ಗಂಡ ರೇ ಚಾಲಿಫ್ಲಾಕ್ಸ್ ಓರ್ವ ಲಾರಿ ಡ್ರೈವರ್. ಆತ ಗಣಿಗಳಲ್ಲಿ ಅದಿರನ್ನು ಸಾಗಿಸುವ ಲಾರಿಗಳ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಆತ ವಿಧಿಯ ಹೊಡೆತಕ್ಕೆ ಗಣಿಗಳು ಮುಚ್ಚಲ್ಪಟ್ಟಾಗ ಕೆಲಸವಿಲ್ಲದೇ ಮನೆಯಲ್ಲೇ ಕೂರುವಂತಾಗಿತ್ತು. ಬಾಡಿಗೆ ಕೊಡದ್ದಕ್ಕೆ ಮಾಲಿಕರಿಂದ ಮನೆಯಿಂದ ಹೊರ ಹಾಕುವ ಬೆದರಿಕೆ, ನಾಲ್ಕು ಮಂದಿ ಮಕ್ಕಳ ಹೊಟ್ಟೆ ಪಾಡು ಇವುಗಳನ್ನು ನೋಡಿ ಬೇಸತ್ತ ಲೂಸಿಲ್ ತನ್ನ ಮಕ್ಕಳನ್ನು ಹಾಗೂ ಹೊಟ್ಟೆಯಲ್ಲಿರುವ ಐದನೇ ಮಗುವನ್ನೂ ಯಾರಿಗಾದರೂ ಮಾರುವ ಯೋಚನೆಯಲ್ಲಿ ಈ ರೀತಿಯಾದ ಫಲಕವನ್ನು ಮನೆಯ ಮುಂದೆ ಹಾಕಿದ್ದಳು.  

ಚಿತ್ರದಲ್ಲಿ ಕಾಣುವ ಮಕ್ಕಳಲ್ಲಿ ಮೇಲಿನ ಮೆಟ್ಟಿಲಿನಲ್ಲಿ ಕುಳಿತ ಲಾನಾಳಿಗೆ ೬ ವರ್ಷ, ರೇ ಅನ್ನಾ ಮಿಲ್ಸ್ ಗೆ ೫ ವರ್ಷ ಮತ್ತು ಕೆಳ ಮೆಟ್ಟಿಲಿನಲ್ಲಿ ಕುಳಿತ ಮಿಲ್ಟನ್ ಗೆ ೪ ವರ್ಷ ಹಾಗೂ ಸೂ ಎಲೆನ್ ಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು. ಈ ಜಾಹೀರಾತು ಫಲಕದ ಬಗ್ಗೆ ತಿಳಿದುಕೊಂಡ ಕುಟುಂಬಸ್ಥರು ಮೊದಲಿಗೆ ಲೂಸಿಲ್ ತಮಾಷೆ ಮಾಡುತ್ತಿದ್ದಾಳೆ ಎಂದು ಅಂದುಕೊಂಡರಂತೆ. ನಂತರ ಆಕೆಯನ್ನು ಸಂಪರ್ಕಿಸಿದಾಗ ಮಕ್ಕಳನ್ನು ಮಾರುವ ಸಂಗತಿ ನಿಜವೆಂದು ಅವರ ಅರಿವಿಗೆ ಬಂತು. ಈ ಜಾಹೀರಾತು ಪ್ರಕಟಿಸಿದ ಎರಡು ವರ್ಷಗಳ ಒಳಗಾಗಿ ಲೂಸಿಲ್ ನ ಎಲ್ಲಾ ನಾಲ್ಕು ಮಕ್ಕಳು ಹಾಗೂ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವೂ (ಜನಿಸಿದ ಬಳಿಕ) ಬೇರೆ ಬೇರೆ ಕುಟುಂಬಗಳಿಗೆ ಮಾರಾಟವಾಗಿ ಹೋದವು.  

ಆ ನಾಲ್ಕು ಮಕ್ಕಳಲ್ಲಿ ರೇ ಅನ್ನಾ ಮಿಲ್ಸ್ ಮತ್ತು ಮಿಲ್ಟನ್ ಎಂಬ ಎರಡು ಮಕ್ಕಳನ್ನು ಜೋಟೆಮೆನ್ ಕುಟುಂಬದವರು ಆಗಸ್ಟ್ ೨೭, ೧೯೫೦ರಲ್ಲಿ ಖರೀದಿಸಿದರು, ಅವರು ಆ ಮಕ್ಕಳ ಹೆಸರನ್ನು ಬೇವರ್ಲಿ ಹಾಗೂ ಕೆನೆತ್ ಎಂದು ಬದಲಾಯಿಸಿದರು. ಈ ಮಕ್ಕಳ ಹೊಸ ಮನೆಯ ಪರಿಸ್ಥಿತಿ ಹುಟ್ಟಿಸಿದ ಅಮ್ಮನ ಮನೆಯ ಪರಿಸ್ಥಿತಿಗಿಂತ ಬಹಳವೇನೂ ಚೆನ್ನಾಗಿರಲಿಲ್ಲ. ಖರೀದಿಸಿದವರು ಈ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳಲೇ ಇಲ್ಲ. ಹಲವಾರು ಸಲ ಈ ಮಕ್ಕಳನ್ನು ದನದ ಕೊಟ್ಟಿಗೆಯಲ್ಲಿ ಸರಪಳಿಯಿಂದ ಕಟ್ಟಿ ಹಾಕುತ್ತಿದ್ದರು. ಇವರನ್ನು ಖರೀದಿಸಿದ ಸಾಕು ತಂದೆ ಮಿಲ್ಟನ್ ಅನ್ನು ‘ಗುಲಾಮ' ಎಂದೇ ಕರೆಯುತ್ತಿದ್ದನು. ಬೆಳೆದು ದೊಡ್ಡವನಾಗುವ ತನಕ ಮಿಲ್ಟನ್ ಗೆ ಆತ ಏಕೆ ಈ ಹೆಸರಿನಿಂದ ಕರೆಯುತ್ತಿದ್ದಾನೆ ಎಂದು ತಿಳಿಯಲೇ ಇಲ್ಲ. ಮಕ್ಕಳ ಸ್ಥಿತಿ ಅಷ್ಟೊಂದು ಕಠೋರವಾಗಿತ್ತು.

ರೇ ಅನ್ನಾ  ಹಾಗೂ ಮಿಲ್ಟನ್ ಅನ್ನು ಖರೀದಿಸಿದವರು ಅವರನ್ನು ತಮ್ಮ ಮಕ್ಕಳೆಂದು ಕಾನೂನು ಬದ್ಧವಾಗಿ ದತ್ತಕಕ್ಕೆ ಪಡೆದುಕೊಳ್ಳಲಿಲ್ಲ. ಆದರೆ ಅಂದು ಇವರ ಅಮ್ಮನ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಕೊನೆಯ ತಮ್ಮ ಡೇವಿಡ್ ನನ್ನು ಮಾತ್ರ ಹ್ಯಾರಿ ಮತ್ತು ಲ್ಯುಯೆಲ್ಲಾ ಮೆಕ್ ಡೇನಿಯಲ್ ದಂಪತಿಗಳು ಕಾನೂನು ಬದ್ಧವಾಗಿ ದತ್ತಕ್ಕೆ ತೆಗೆದುಕೊಂಡಿದ್ದರು. ಇವರ ಕುಟುಂಬವು ಮಿಲ್ಟನ್ ವಾಸಿಸುತ್ತಿದ್ದ ಮನೆಯಿಂದ ಕೆಲವೇ ಮೈಲುಗಳ ಅಂತರದಲ್ಲಿತ್ತು. ಡೇವಿಡ್ ನ ಹೊಸ ಪೋಷಕರು ಕಟ್ಟುನಿಟ್ಟಾಗಿದ್ದರೂ ಅವರು ಆತನನ್ನು ಬಹಳಷ್ಟು ಪ್ರೀತಿ ಮಾಡುತ್ತಿದ್ದರು. ಅವರು ಆತನಲ್ಲಿ ಮತ್ತು ತಮ್ಮ ಸ್ವಂತ ಮಕ್ಕಳಲ್ಲಿ ಯಾವುದೇ ಭೇಧ ಭಾವ ಮಾಡುತ್ತಿರಲಿಲ್ಲ. 

ಮನೆಯಲ್ಲಿನ ಕಿರಿಕಿರಿಯಿಂದ ಬೇಸತ್ತು ತನ್ನ ಹದಿನೇಳನೆಯ ವಯಸ್ಸಿನಲ್ಲಿ ಮನೆಯನ್ನು ತ್ಯಜಿಸಿದ ರೇ ಅನ್ನಾಳ ಅದೃಷ್ಟ ಇನ್ನಷ್ಟು ಕೆಟ್ಟಿತ್ತು. ಆಕೆಯನ್ನು ಅಪಹರಿಸಿದ ಕೆಲ ಮಂದಿ ಅವಳನ್ನು ಅತ್ಯಾಚಾರ ಮಾಡಿಬಿಟ್ಟರು. ಈ ಕಾರಣದಿಂದ ಅನ್ನಾ ಗರ್ಭವತಿಯಾದಳು. ಆಕೆಯನ್ನು ಗರ್ಭವತಿ ಮಹಿಳೆಯರಿಗಾಗಿ ಇದ್ದ ಅನಾಥಾಶ್ರಮಕ್ಕೆ ಕಳುಹಿಸಲಾಯಿತು. ಅಲ್ಲಿ ಆಕೆ ತನ್ನ ಮಗುವಿಗೆ ಜನ್ಮ ನೀಡಿದಳು. ಆ ಮಗುವನ್ನು ಯಾರೋ ದತ್ತು ತೆಗೆದುಕೊಂಡು ಹೋದರು. ಅವರು ಯಾರು? ತನ್ನ ಮಗು ಎಲ್ಲಿ ಬೆಳೆಯುತ್ತಿದೆ? ಹೇಗಿದೆ? ಎಂಬ ಯಾವ ವಿಷಯವೂ ಅನ್ನಾಳಿಗೆ ನಂತರದ ದಿನಗಳಲ್ಲಿ ತಿಳಿಯಲೇ ಇಲ್ಲ. 

ಇತ್ತ, ತನ್ನ ಸಾಕು ತಂದೆಯ ಹೊಡೆತಗಳು ಮತ್ತು ಶಿಕ್ಷೆಗಳಿಂದ ಬೇಸತ್ತ ಮಿಲ್ಟನ್ ಕ್ರಮೇಣ ಮಾನಸಿಕ ರೋಗಿಯಾದ. ಆತ ಮನೆಯಿಂದ ಹೊರ ಬಂದು ಸಾಕಷ್ಟು ಅಪರಾಧಿ ಕೃತ್ಯಗಳನ್ನು ಮಾಡಲು ತೊಡಗಿದ. ಹಲವಾರು ಬಾರಿ ಆತನನ್ನು ಬಂಧಿಸಿ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಲಾಯಿತು. ಈತನ ಪರಿಸ್ಥಿತಿಯನ್ನು ಕಂಡ ನ್ಯಾಯಾಧೀಶರು ಅವನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸುವಂತೆ ತೀರ್ಪು ನೀಡಿದರು. ಹೀಗೆ ಹಲವಾರು ಸಲ ಮಿಲ್ಟನ್ ಮಾನಸಿಕ ಆಸ್ಪತ್ರೆಯ ಸಹವಾಸ ಮಾಡಿ ಗುಣಮುಖನಾಗಿ ಹೊರಬರುತ್ತಿದ್ದ. 

ಈ ಮಕ್ಕಳಿಗೆ ತಮ್ಮೊಂದಿಗೆ ಹುಟ್ಟಿದ ಇನ್ನೂ ಇಬ್ಬರು ಮಕ್ಕಳಾದ ಸೂ ಎಲೆನ್ ಹಾಗೂ ಲಾನಾ ಅವರು ಎಲ್ಲಿದ್ದಾರೆ ಎಂಬ ಸಂಗತಿ ಬಹಳಷ್ಟು ಸಮಯ ತಿಳಿದೇ ಇರಲಿಲ್ಲ. ಕ್ರಮೇಣ ಸಾಮಾಜಿಕ ಜಾಲತಾಣಗಳ ಮುಖಾಂತರ ಇವರ ಕಥೆ ಎಲ್ಲೆಡೆ ಹರಡಿ ಈ ಎಲ್ಲಾ ಮಕ್ಕಳು ಒಬ್ಬರೊಬ್ಬರ ಸಂಪರ್ಕಕ್ಕೆ ಬಂದರು. ಮಕ್ಕಳಲ್ಲಿ ಹಿರಿಯಳಾದ ಲಾನಾ ೧೯೯೮ರಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಮೃತಳಾದಳು. ಸೂ ಎಲೆನ್ ಈಗಲೂ ಚಿಕಾಗೋದ ಈಸ್ಟ್ ಎಂಡ್ ನಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಅವರ ಬಳಿ ತಮ್ಮ ಹುಟ್ಟು ಅಮ್ಮನ ಬಗ್ಗೆ ಕೇಳಿದಾಗ ಅವರು ಆಕ್ರೋಶ ಭರಿತ ನುಡಿಯಲ್ಲಿ “ಆಕೆ ನರಕಕ್ಕೆ ಹೋಗಬೇಕು" ಎಂದು ಹೇಳುತ್ತಾರೆ. ಇದರಿಂದಲೇ ಅರಿವಾಗುತ್ತದೆ ಅವರಿಗೆ ತಮ್ಮನ್ನು ಹುಟ್ಟಿಸಿ ನಂತರ ಮಾರಿದ ಅಮ್ಮನ ಮೇಲೆ ಎಷ್ಟೊಂದು ಕೋಪ ಇದೆ ಎಂದು. 

ಕೊನೆಯ ಮಗ ಡೇವಿಡ್ ಒಮ್ಮೆ ತನ್ನ ಹುಟ್ಟು ತಾಯಿಯನ್ನು ನೋಡಲು ಹೋಗಿದ್ದನಂತೆ. ಆಗ ಆಕೆ ಅವನ್ನು ನೋಡಿ “ನೀನು ನಿಮ್ಮ ಅಪ್ಪನಂತೆಯೇ ಕಾಣಿಸುತ್ತೀಯಾ” ಎಂದಳಂತೆ. ಆಕೆ ಎಂದೂ ಅವನ ಬಳಿ ತಾನು ಮಾಡಿದ ಕೃತ್ಯಕ್ಕೆ ಕ್ಷಮೆಯಾಚಿಸಲಿಲ್ಲ. ತಪ್ಪಾಯಿತು ಎಂದು ಗೋಗರೆಯಲಿಲ್ಲ. ಆಕೆ ಬಹಳ ಕಲ್ಲು ಹೃದಯಿಯಾದರೂ ನಾನು ಆಕೆಯ ಕೃತ್ಯಕ್ಕೆ ಯಾವುದೇ ರೀತಿಯ ಶಿಕ್ಷೆ ನೀಡಲು ಬಯಸುವುದಿಲ್ಲ. ದೇವರು ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ಡೇವಿಡ್ ಹೇಳುತ್ತಾನೆ. ಇನ್ನೊಬ್ಬ ಮಗ ಮಿಲ್ಟನ್ ಕೂಡಾ ತನ್ನನ್ನು ಹುಟ್ಟಿಸಿದ ತಾಯಿ ಒಂದು ದಿನವೂ ನನ್ನನ್ನು ಪ್ರೀತಿಸಲಿಲ್ಲ. ಆಕೆಗೆ ಅವಳ ಈ ಹೀನ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪ ಇರಲಿಲ್ಲ. ಎಂದು ನೊಂದು ಕೊಂಡಿದ್ದಾನೆ. 

ಅತ್ಯಂತ ದುಃಖದ ಸಂಗತಿ ಎಂದರೆ ಈ ಐದು ಮಂದಿ ಮಕ್ಕಳನ್ನು ಮಾರಿದ ಲೂಸಿಲ್ ಚಾಲಿಫಾಕ್ಸ್ ಎಂಬ ಕ್ರೂರ ಹೆಂಗಸು ನಂತರ ಮತ್ತೊಂದು ಮದುವೆಯಾಗಿ ಮಕ್ಕಳನ್ನೂ ಹೊಂದಿದ್ದಳಂತೆ. ಪ್ರಪಂಚದಲ್ಲಿ ಕ್ರೂರಿ ಅಮ್ಮಂದಿರು ಇರುವುದಿಲ್ಲ ಎಂಬ ಒಂದು ನಂಬಿಕೆ. ಆದರೆ ಈ ನಂಬಿಕೆಯನ್ನು ಸುಳ್ಳು ಮಾಡುವ ಲೂಸಿಲ್ ಚಾಲಿಫಾಕ್ಸ್ ಎಂಬ ಹೆಂಗಸರಿಗೆ ಏನೆಂದು ಕರೆಯಬೇಕು? ಯಾವ ಶಿಕ್ಷೆ ನೀಡಬೇಕು? ತಾನು ಹೆತ್ತ ಹಸು ಗೂಸುಗಳಿಗೆ ಪ್ರಪಂಚ ಏನೆಂದು ತಿಳಿಯುವ ಮೊದಲೇ ಮಾರಿದ ಈ ಹೆಂಗಸು ಯಾವ ರೀತಿಯಲ್ಲಿ ಕ್ಷಮೆಗೆ ಅರ್ಹಳಾದಾಳು? ಒಟ್ಟಿಗೆ ಬಾಳಿ ಬದುಕಬೇಕಾಗಿದ್ದ ಐದು ಮಂದಿ ಮಕ್ಕಳು ಬೇರೆ ಬೇರೆ ಕಡೆ ಬೆಳೆಯಬೇಕಾದದ್ದು ದೌರ್ಭಾಗ್ಯವಲ್ಲವೇ? ವಿಧಿಯ ಲೀಲೆ ಹೀಗೂ ಇರುತ್ತದೆ.

ಚಿತ್ರ ವಿವರ: ೧. ಲೂಸಿಲ್ ಚಾಲಿಫಾಕ್ಸ್ ನ ಜಾಹೀರಾತು ಫಲಕ

೨. ಸೂ ಎಲೆನ್ ಮತ್ತು ರೇ ಅನ್ನಾ ಇವರು ಬಹಳ ವರ್ಷಗಳ ಬಳಿಕ ೨೦೧೩ರಲ್ಲಿ ಭೇಟಿಯಾದಾಗ ಮತ್ತು ರೇ ಅನ್ನಾ ಬಳಿ ಬಾಲ್ಯದ ನೆನಪಿಗಾಗಿ ಇರುವ ಆಕೆಯ ಫ್ರಾಕ್

೩. ರೇ ಅನ್ನಾ ಮತ್ತು ಮಿಲ್ಟನ್ ತಮ್ಮ ಸಾಕು ತಂದೆ-ತಾಯಿಯರ ಜೊತೆ 

(ಆಧಾರ)

ಚಿತ್ರ ಕೃಪೆ: ಲೈಬ್ರೆರಿ ಆಫ್ ಕಾಂಗ್ರೆಸ್/ ಬೆಟ್ಟಮೆನ್/ ಕಾರ್ಬಿಸ್