ನಾಲ್ದೆಸೆಗಳಿಂದ ದೆಹಲಿಗೆ ರೈತಸಾಗರ

ನಾಲ್ದೆಸೆಗಳಿಂದ ದೆಹಲಿಗೆ ರೈತಸಾಗರ

ಹರಿಯಾಣದ ಸೋನೆಪತಿನ ಮೊಯ್ ಗ್ರಾಮದಲ್ಲೊಂದು ವೇದಿಕೆ ಸಜ್ಜುಗೊಳ್ಳುತ್ತಿತ್ತು ೨೨ ನವಂಬರ್ ೨೦೧೬ರಂದು– ಅಖಿಲ ಭಾರತ ಕಿಸಾನ್ ಸಭಾ ಸಂಘಟಿಸಿದ ಕಿಸಾನ್ ಸಂಘರ್ಷ ಜಾಥಾದ ಸ್ವಾಗತಕ್ಕಾಗಿ. ಅಲ್ಲಿ ಸಭೆ ಮುಗಿಸಿದ ನಂತರ ದೆಹಲಿಗೆ ಜಾಥಾದ ಮುನ್ನಡೆ. ದೆಹಲಿಯಲ್ಲಿ ಕೇರಳ, ತಮಿಳುನಾಡು ಮತ್ತು ಕೊಲ್ಕತ್ತಾದಿಂದ ಆಗಮಿಸುವ ಬೇರೆ ಮೂರು ಜಾಥಾಗಳೊಂದಿಗೆ ಸೇರಿಕೊಂಡು, ೨೪ ನವಂಬರ್ ೨೦೧೬ರಂದು ಸಂಸತ್ ಚಲೋ ಕಾರ್ಯಕ್ರಮ. 
ಅಂದು ಸೋನೆಪತಿನ ಸರಕಾರಿ ಶಾಲೆಯ ಮೈದಾನಕ್ಕೆ ಬಿಳಿ ಧೋತಿ, ಕುರ್ತಾ ಮತ್ತು ತಲೆಗೆ ಟರ್ಬನ್ ಸುತ್ತಿಕೊಂಡ ರೈತರು ಒಬ್ಬೊಬ್ಬರಾಗಿ ಬರುತ್ತಿದ್ದರು. ಅಲ್ಲಿಗೆ ಬೇಗನೇ ಬಂದು ಕುಳಿತಿದ್ದರು ೭೫ ವರುಷ ವಯಸ್ಸಿನ ಹಿರಿಯ ರೈತ ರಾಮ್ ಪ್ರಸಾದ್. ಅವರು ಮೊಯ್ ಗ್ರಾಮದ ಪ್ರಧಾನ ರಾಮ್ ನಿವಾಸ ರಾಣಾರೊಡನೆ ಕೇಳಿದ ಪ್ರಶ್ನೆ: “ನಾವು ಈಗಿನ ಕಷ್ಟದ ಪರಿಸ್ಥಿತಿಯಿಂದ ಬಚಾವಾಗೋದು ಹೇಗಂತ ಕೇಳಲು ಬಂದಿದ್ದೇನೆ. ಕಳೆದ ವರುಷ, ಸೋನೆಪತಿನಲ್ಲೇ ೧೨ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಭಯಾನಕ ಪರಿಸ್ಥಿತಿ ಮುಗಿಯೋದು ಯಾವಾಗ?”
ಅಲ್ಲಿಂದ ೧೫ ಕಿಮೀ ದೂರದ ಕಟ್ವಾಳ್ ಗ್ರಾಮದಲ್ಲಿ ಕಳೆದ ೨೧ ತಿಂಗಳುಗಳಲ್ಲಿ ಇದೇ ಪ್ರಶ್ನೆಯನ್ನು ನರೇಶ್ ಮತ್ತೆಮತ್ತೆ ಕೇಳುತ್ತಿದ್ದಾಳೆ – ಆಗ ಅಕಾಲಿಕ ಮಳೆಯಿಂದಾಗಿ ಹೊಲದ ಬೆಳೆಯೆಲ್ಲ ನಾಶವಾದ ಕಾರಣಕ್ಕಾಗಿ, ಅವಳ ಪತಿ ಬಲ್ವಾನ್ ಸಿಂಗ್ (೫೯) ಆತ್ಮಹತ್ಯೆ ಮಾಡಿಕೊಂಡಾಗಿನಿಂದ. ಬಲ್ವಾನ್ ಸಿಂಗ್ ನಾಲ್ಕು ಎಕ್ರೆ ಜಮೀನನ್ನು ಲೀಸಿಗೆ (ಗೇಣಿಗೆ) ಪಡೆಯಲಿಕ್ಕಾಗಿ ಸಾಲ ಮಾಡಿದ್ದರು. ತನ್ನ ಬಳಿ ಆ ಸಾಲ ತೀರಿಸಲು ಏನೂ ಇಲ್ಲ ಎನ್ನುತ್ತಾಳೆ ೪೮ ವರುಷದ ವಿಧವೆ. ಈಗ ಬಂಧುವೊಬ್ಬರ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ಅವಳ ವಾಸ. ಯಾಕೆಂದರೆ ಒಂದೇ ಕೋಣೆಯ ತನ್ನ ಮನೆಯ ಸೋರುತ್ತಿರುವ ಚಾವಣಿ ರಿಪೇರಿ ಮಾಡಿಸಲಿಕ್ಕೂ ಅವಳ ಬಳಿ ಹಣವಿಲ್ಲ. “ನನ್ನ ಆರು ಮಕ್ಕಳಿಗೆ ಈಗ ಊಟಕ್ಕೂ ಗತಿಯಿಲ್ಲ. ಹಾಗಿರುವಾಗ, ಮನೆ ರಿಪೇರಿ ಹೇಗೆ ಮಾಡಿಸಲಿ? ನನ್ನ ಗಂಡನ ಮರಣವನ್ನು ಆತ್ಮಹತ್ಯೆ ಎಂದು ತಹಸೀಲ್ದಾರ ಮತ್ತು ಪಟ್ವಾರಿ ಖಚಿತ ಪಡಿಸಿ, ಎಫ್ಐಆರ್ ದಾಖಲಿಸಿದ ನಂತರ ನನಗೆ ಪರಿಹಾರ ಕೊಡೋದಾಗಿ ಹೇಳಿದ್ದರು. ಈ ವರೆಗೆ ನನಗೆ ಯಾವುದೇ ಪರಿಹಾರ ಬಂದಿಲ್ಲ” ಎಂದು ಮರುಗುತ್ತಾಳೆ ನರೇಶ್.
ನರೇಶಳಿಗೆ ಈ ವರೆಗೆ ಆರ್ಥಿಕ ಪರಿಹಾರ ಕೊಟ್ಟಿರುವುದು ಅಖಿಲ ಭಾರತ ಕಿಸಾನ್ (ಅಭಾಕಿ) ಸಭಾ ಮಾತ್ರ (ರೂಪಾಯಿ ಒಂದು ಲಕ್ಷ). ಆದರೆ ಅವಳ ಗಂಡನ ಸಾಲ ರೂ. ೪ ಲಕ್ಷಕ್ಕಿಂತ ಜಾಸ್ತಿ ಇದೆ. ಪ್ರತಿ ತಿಂಗಳೂ ರೂ.೧,೪೦೦ ವಿಧವಾ ಪೆನ್ಷನ್ ಮತ್ತು ಇಬ್ಬರು ಗಂಡು ಮಕ್ಕಳಿಗೆ (೬ ಮತ್ತು ೧೪ ವರುಷದ) ತಲಾ ರೂ.೫೦೦ ಸಹಾಯಧನ ಅವಳಿಗೆ ಸಿಗಲೇ ಬೇಕು. ಆದರೆ, ಪತಿಯ ಸಾವಿನ ನಂತರ ೨೦ ತಿಂಗಳು ಅವಳಿಗೆ ಚಿಕ್ಕಾಸೂ ಸಿಗಲಿಲ್ಲ. ಅಂತೂ, ಈ ಸಹಾಯಧನದ ಮೊದಲ ಕಂತು ಕಳೆದ ತಿಂಗಳಷ್ಟೇ ಅವಳ ಕೈಸೇರಿದೆ. ಈ ವಿಷಯ ಮಾತನಾಡುತ್ತಾ ಹಿರಿಯ ಮಗಳು ಸೋನಿಯಾ (೨೦) ಕಣ್ಣೀರಾಗುತ್ತಾಳೆ. 
ನಾಶವಾದ ಅಥವಾ ಹಾನಿಯಾದ ಬೆಳೆಯಿಂದಾಗಿ ಸಾಲ ತೀರಿಸಲಾಗದ್ದು ಮಾತ್ರ ರೈತರ ಆತ್ಮಹತ್ಯೆ ಹೆಚ್ಚಾಗಲು ಕಾರಣವಲ್ಲ. ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳಲಿಕ್ಕಾಗಿ ಸರಕಾರದ ಯೋಜನೆಗಳು ಮತ್ತು ದೊಡ್ಡಕಂಪನಿಗಳ ಅತಿರೇಕಗಳು, ಆರ್ಥಿಕ ಸಂಸ್ಥೆಗಳಿಂದ ಸಿಗುವ ಸಾಲದಲ್ಲಿ ಕಡಿತ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗದಿರುವುದು – ಇವೆಲ್ಲ ರೈತರ ಹತಾಶೆಗೆ ಕಾರಣಗಳು. ಕೃಷಿಯನ್ನು ಕಡೆಗಣಿಸಿರುವ ಇಂತಹ ಧೋರಣೆಗಳ ವಿರುದ್ಧ ಹೋರಾಡಲಿಕ್ಕಾಗಿ ರೈತರನ್ನು ಸಂಘಟಿಸುತ್ತಿದೆ ಅಭಾಕಿ ಸಭಾ.
 
ಜಮ್ಮು ಮತ್ತು ಕಾಶ್ಮೀರದಿಂದ ೮ ನವಂಬರ್ ೨೦೧೬ರಂದು ಹೊರಟ ಈ ಜಾಥಾ ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನಗಳನ್ನು ಹಾದು ೨೨ ನವಂಬರ್ ೨೦೧೬ರಂದು ಹರಿಯಾಣ ಪ್ರವೇಶಿಸಿತು. ಹಾದಿಯುದ್ದಕ್ಕೂ ಅಲ್ಲಲ್ಲಿ ರೈತರ ಸಭೆಗಳ ಆಯೋಜನೆ. ಆ ಸಭೆಗಳಲ್ಲಿ, ಅಭಾಕಿ ಸಭಾದ ಅಧ್ಯಕ್ಷ ಅಮ್ರಾ ರಾಮರಿಂದ ರೈತರು ಒಗ್ಗಟ್ಟಾಗಿ ಒಕ್ಕೊರಲಿನಿಂದ ಸರಕಾರದ ಧೋರಣೆಗಳನ್ನು ಪ್ರತಿಭಟಿಸಬೇಕೆಂಬ ಕರೆ. ಜೊತೆಗೆ, ವಿವಿಧ ಬೆಳೆಗಳ ಉತ್ಪಾದನಾ ವೆಚ್ಚದ ಶೇಕಡಾ ೫೦ರಷ್ಟು ಅಧಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಬೇಕೆಂದು ಶಿಫಾರಸ್ ಮಾಡಿರುವ ಸ್ವಾಮಿನಾಥನ್ ಸಮಿತಿ ವರದಿಯನ್ನು ಜ್ಯಾರಿ ಮಾಡಬೇಕೆಂಬ ಆಗ್ರಹ.
ಈ ಬೇಡಿಕೆಯನ್ನು ಸರಕಾರ ಒಪ್ಪಿಕೊಳ್ಳಲೇ ಬೇಕೆಂಬುದು ೬೮ ವರುಷ ವಯಸ್ಸಿನ ಬೇಡ್ ಸಿಂಗರ ಅಭಿಪ್ರಾಯ. ೧೯ ಜನರ ಜಮೀನನ್ನು ಗೇಣಿಗೆ ಪಡೆದು ಹೈರಾಣಾಗಿರುವ ಅವರು ಕೇಳುವ ಪ್ರಶ್ನೆ: “ಎಕ್ರೆಗೆ ೪೦,೦೦೦ ರೂಪಾಯಿ ಗೇಣಿಗೆ ಆ ಜಮೀನು ತಗೊಂಡಿದ್ದೇನೆ. ಅಲ್ಲಿ ಬೆಳೆಸಿದ ಗೋಧಿ ಮಾರಿದ ನಂತರ ನನಗೆ ಸಿಗೋದು ಎಕ್ರೆಗೆ ಕೇವಲ ೨೦,೦೦೦ ರೂಪಾಯಿ. ಯಾಕೆಂದರೆ ಬೆಂಬಲ ಬೆಲೆ ಬಹಳ ಕಡಿಮೆ. ದಲ್ಲಾಳಿಗಳು ಕ್ವಿಂಟಾಲಿಗೆ ೧,೨೦೦ ರೂಪಾಯಿ ರೇಟಿಗೆ ಗೋಧಿ ಖರೀದಿಸಿ, ೩,೫೦೦ ರೂಪಾಯಿ ರೇಟಿಗೆ ಮಾರ್ತಾರೆ. ಹೀಗಿರುವಾಗ, ಈ ಬೇಸಾಯದಿಂದ ನನಗೆ ಲಾಭ ಬರೋದು ಹ್ಯಾಗೆ?”
೨೦೧೫ರ ಏಪ್ರಿಲ್ ನಲ್ಲಿ ಅಕಾಲಿಕ ಮಳೆ ಅಪ್ಪಳಿಸಿ, ಬೆಳೆದಿದ್ದ ಬೆಳೆಯೆಲ್ಲ ನಾಶವಾದಾಗ ರಿವಾರಾ ಗ್ರಾಮದ ೪೨ ವರುಷ ವಯಸ್ಸಿನ ರೈತ ಯುಧ್ ಬೀರ್ ಸಿಂಗ್ ಸಾವಿಗೆ ಶರಣಾದರು. ಅವರ ವಿಧವೆ ಪತ್ನಿ ಮೀನಾ (೩೫) ಮತ್ತು ಇಬ್ಬರು ಹೆಣ್ಣು ಮಕ್ಕಳು ಈಗ ಪ್ರತಿ ದಿನ ಮುಂಜಾನೆ ೩ ಗಂಟೆಗೆ ಏಳುತ್ತಾರೆ – ಎರಡು ಎಮ್ಮೆಗಳ ಹಾಲು ಕರೆದು ಡೈರಿ ಮಾಲೀಕನಿಗೆ ಒಯ್ದು ತಲಪಿಸಲಿಕ್ಕಾಗಿ. “ಹನ್ನೊಂದನೇ ಕ್ಲಾಸಿನಲ್ಲಿ ಓದುತ್ತಿರುವ ಇಬ್ಬರು ಹೆಣ್ಣುಮಕ್ಕಳ ಈ ವರುಷದ ಶಾಲೆ ಮುಗಿದ ಕೂಡಲೇ ಅವರ ಮದುವೆ ಮಾಡಿಬಿಡುತ್ತೇನೆ. ಅಪ್ಪನಿಲ್ಲದ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಹೋಗುವುದು ಸುರಕ್ಷಿತವಲ್ಲ” ಎನ್ನುತ್ತಾರೆ ಮೀನಾ ಆತಂಕದಿಂದ.
ಇಂತಹ ಆತಂಕಗಳೇ ಅಭಾಕಿ ಸಭಾದ ಜಾಥಾ ಸರಕಾರದ ಮುಂದಿಟ್ಟಿರುವ ೧೫ ಬೇಡಿಕೆಗಳಿಗೆ ಆಧಾರ. ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರ ಪುನರ್ವಸತಿಗಾಗಿ ರೂ.೧೦ ಲಕ್ಷ ಪರಿಹಾರ ನೀಡಬೇಕೆಂಬುದು ಅವರ ಒಂದು ಪ್ರಧಾನ ಬೇಡಿಕೆ. “ನಮ್ಮ ನಾಲ್ಕು ಜಾಥಾಗಳು ೨೨ ರಾಜ್ಯಗಳನ್ನು ಹಾದು ಬಂದಿವೆ. ಸಾವಿರಾರು ರೈತರು ಹಾಗೂ ಜನಸಾಮಾನ್ಯರು ಈ ಜಾಥಾಗಳನ್ನು ಬೆಂಬಲಿಸಿದ್ದಾರೆ. ಸುಮಾರು ನೂರು ಮೆರವಣಿಗೆಗಳನ್ನೂ ೧೫೦ ಸಭೆಗಳನ್ನೂ ನಡೆಸಿದ್ದೇವೆ. ಇದು ನಮ್ಮ ಕಾರ್ಯತಂತ್ರದ ಮೊದಲ ಹಂತ – ದೇಶದ ರೈತರ ಹತಾಶ ಪರಿಸ್ಥಿತಿ ಹಾಗೂ ಸಂಕಟಗಳ ಬಗ್ಗೆ ಜಾಗೃತಿ ಮೂಡಿಸಲಿಕ್ಕಾಗಿ. ಸರಕಾರವು ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದರೆ ಮುಂದಿನ ಹಂತದಲ್ಲಿ ನಮ್ಮ ಹೋರಾಟ ತೀವ್ರಗೊಳಿಸುತ್ತೇವೆ” ಎನ್ನುತ್ತಾರೆ ಹನ್ನನ್ ಮೊಲ್ಲಾ (೭೦), ಪ್ರಧಾನ ಕಾರ್ಯದರ್ಶಿ, ಅಭಾಕಿ ಸಭಾ.
ನವಂಬರ್ ೨೪ರಂದು, ದೇಶದ ನಾಲ್ದೆಸೆಗಳಿಂದ ಸಾಗಿ ಬಂದ ರೈತರ ಜಾಥಾಗಳು ಸಂಸತ್ತಿನ ಎದುರು ಒಟ್ಟಾಗಿ ಪ್ರತಿಭಟಿಸಲು ಅನುಮತಿ ನಿರಾಕರಿಸಲಾಯಿತು. ಹಾಗಾಗಿ, ಈ ಜಾಥಾಗಳು ಸಂಸತ್ ರಸ್ತೆಯಲ್ಲಿ ಮೇಳೈಸಿದವು. ೨೦,೦೦೦ ರೈತರು ಜಮಾಯಿಸಿದ್ದ ಆ ಪ್ರತಿಭಟನಾ ಸಭೆಯು ದೇಶದ ರೈತರ ಹತಾಶೆಯನ್ನು ಸಂಕಟವನ್ನು ಪ್ರತಿಧ್ವನಿಸಿತು. ಉಣ್ಣಲು ಆಹಾರ ಬೇಕಾದ ಎಲ್ಲರೂ ಅನ್ನದಾತರ ಈ ಪ್ರತಿಭಟನೆಗೆ ಸ್ಪಂದಿಸಬೇಕು, ಅಲ್ಲವೇ?