ನಾಲ್ವರು ಪ್ರಯಾಣಿಕರು

ನಾಲ್ವರು ಪ್ರಯಾಣಿಕರು

ಇನ್ನೊಬ್ಬರಲ್ಲಿ ನಾವು ಕಾಣುವುದು ನಮ್ಮನ್ನೇ ಎಂಬ ಮಾತಿದೆ. ಎದುರಿಗಿರುವವರು ಒಂದು ರೀತಿಯಲ್ಲಿ ಕನ್ನಡಿ ಇದ್ದಂತೆ. ಅವರ ವರ್ತನೆಯನ್ನು ನಮ್ಮ ಮನಸ್ಸಿನ ವರ್ತನೆ ಎಂದೇ ಹೆಚ್ಚಿನವರು ತಿಳಿಯುವುದು. ನಮ್ಮ ಮನಸ್ಸಿನಲ್ಲಿ ಉತ್ತಮ ಆಲೋಚನೆಗಳಿದ್ದರೆ, ಅದನ್ನೇ ಎದುರಿನವರಲ್ಲೂ ಕಾಣುತ್ತೇವೆ. ನಮ್ಮ ಮನಸ್ಸಿನಲ್ಲಿ ಕಲ್ಮಶಗಳು ತುಂಬಿದ್ದರೆ, ಎದುರಿನವರ ಹಾವ, ಭಾವ, ವರ್ತನೆ ಎಲ್ಲವೂ ನಮಗೆ ಕೊಳಕಾಗಿ ಕಾಣಬಹುದು! ಆದ್ದರಿಂದಲೇ, ಪ್ರಾಜ್ಞರು ಹೇಳಿದ್ದಾರೆ - ಸದಾ ಕಾಲ ನಮ್ಮನ್ನು ನಾವು ಪರಿಶುದ್ಧವಾಗಿಟ್ಟುಕೊಳ್ಳಬೇಕು. ಅದು ಬಾಹ್ಯವೂ ಹೌದು, ಆಂತರಿಕವಾಗಿಯೂ ಹೌದು. ಇದನ್ನು ತಿಳಿಹೇಳುವ ಒಂದು ಪುಟ್ಟ ಕಥೆ ಇದೆ.

ಅಲ್ಲೊಂದು ನಿರ್ಜನ ಪ್ರದೇಶ. ಎರಡು ರಾಜ್ಯಗಳ ಗಡಿ ಪ್ರದೇಶ. ಅಲ್ಲೊಂದು ಆಲದ ಮರವಿತ್ತು. ಆ ಮರದ ನೆರಳಿನಲ್ಲಿ ಓರ್ವ ಹಿರಿಯ ವ್ಯಕ್ತಿ ಕುಳಿತಿದ್ದರು. ಆ ವ್ಯಕ್ತಿಯು ಕುಳಿತ ಶೈಲಿಯು ಹೇಗಿತ್ತೆಂದರೆ, ಕಾಲು ನೀಡಿಕೊಂಡು ಗಡ್ಡ ಬಿಟ್ಟುಕೊಂಡು ಆಕಾಶ ನೋಡುತ್ತಾ ವಿಶ್ರಾಂತಿ ತೆಗೆದುಕೊಳ್ಳುವಂತೆ ಇತ್ತು. ದೂರದಿಂದ ನೋಡಿದರೆ, ಮರದ ಬೊಡ್ಡೆಗೆ ಒರಗಿ, ತೂಕಡಿಸುವಂತೆ ಕಾಣುತ್ತಿತ್ತು.

ಆ ದಾರಿಯಲ್ಲಿ ಬರುತ್ತಿದ್ದ ಒಬ್ಬ ಪ್ರಯಾಣಿಕ ಈ ಗಡ್ಡದಾರಿ ವ್ಯಕ್ತಿಯನ್ನು ನೋಡಿ ಮನಸ್ಸಿನಲ್ಲಿಯೇ ಯೋಚಿಸಿದ “ಓಹೋ, ನಿನ್ನ ಹೊರನೋಟ ನನ್ನನ್ನು ಮೋಸ ಮಾಡಲು ಸಾಧ್ಯವೇ ಇಲ್ಲ. ನಾನು ನಿನ್ನ ರೀತಿಯೇ ಕಳ್ಳ ವೇಷ ಧರಿಸಿ ಪಟ್ಟಣದಲ್ಲಿ ಮಾಲನ್ನು ಕದಿಯುತ್ತಿದ್ದೆ. ತಪಾಸಣಾ ಕೇಂದ್ರದಲ್ಲಿ ಮೂವರು ಸೈನಿಕರಿಗೆ ನನ್ನ ಗುರುತು ಹಿಡಿಯಲು ಆಗಲಿಲ್ಲ. ಕೊನೆಯ ಸೈನಿಕ ಮಾತ್ರ ನನ್ನ ಕಳ್ಳತನ ಕಂಡು ಹಿಡಿದು, ಚೆನ್ನಾಗಿ ನಾಲ್ಕು ಬಿಗಿದು ಕಳುಹಿಸಿದ. ಇರಲಿ, ನೀನೂ ಪಟ್ಟಣಕ್ಕೆ ಹೋಗಿ, ಕೈಚಳಕ ತೋರು, ನಿನ್ನ ಅದೃಷ್ಟ ಪ್ರಯತ್ನಿಸು. ನಾನಂತೂ ನಿನ್ನ ತಂಟೆಗೆ ಬರುವುದಿಲ್ಲ.”

ಸ್ವಲ್ಪ ಸಮಯದ ನಂತರ ಓರ್ವ ಕುದುರೆ ಸವಾರ ಬಂದ. ಮರದಡಿ ಅರ್ಧ ಕಣ್ಣು ಮುಚ್ಚಿಕೊಂಡು ಮಲಗಿದ್ದ ಈ ಗಡ್ಡಧಾರಿಯನ್ನು ನೋಡಿ ನೋಡಿ ‘ನನ್ನ ರೀತಿಯೇ ಇವನೂ ಸಹ ಯಾವುದೋ ರಾಜ್ಯದ ಗೂಢಾಚಾರಿ ಇರಬೇಕು. ನಾನು ಈಗ ಇನ್ನೊಂದು ರಾಜ್ಯಕ್ಕೆ ಸೈನಿಕರ ಕಣ್ತಪ್ಪಿಸಿ ಹೋಗುತ್ತಿದ್ದೇನೆ. ಇವನು ಸೂಕ್ತ ಸಂದರ್ಭಕ್ಕಾಗಿ ಈ ಗಡಿಯಲ್ಲಿ ಕುಳಿತು ಕಾಯುತ್ತಿದ್ದಾನೆ. ನನಗೆ ಹೆಚ್ಚು ಸಮಯವಿಲ್ಲ. ಮೊದಲು ನನ್ನ ಕೆಲಸ ಆರಂಭಿಸುತ್ತೇನೆ ‘ ಎಂದುಕೊಂಡು ಕುದುರೆ ಓಡಿಸಿಕೊಂಡು ಹೊರಟು ಹೋದ.

ಒಂದೆರಡು ಗಂಟೆ ಕಳೆದ ನಂತರ ಇನ್ನೊಬ್ಬ ವ್ಯಕ್ತಿ ತೂರಾಡುತ್ತ ಬಂದ. ಮರದ ಕೆಳಗೆ ಮಲಗಿದ್ದ ಈ ಗಡ್ಡಧಾರಿಯನ್ನು ನೋಡಿ ದೊಡ್ಡ ದನಿಯಲ್ಲಿ ‘ಓಹೋ ಓಹೋ, ನನ್ನ ಗೆಳೆಯ ಇಲ್ಲಿ ಆರಾಮವಾಗಿ ಕುಳಿತಿದ್ದಾನೆ! ಮದ್ಯ ಸೇವಿಸಿದ್ದು ಜಾಸ್ತಿಯಾಗಿರಬೇಕು. ಅದಕ್ಕೇ ಮರದಡಿ ಗಡ್ಡ ನೀವಿಕೊಳ್ಳುತ್ತಾ, ತನ್ನದೇ ಲೋಕದಲ್ಲಿದ್ದಾನೆ. ನಾನು ಸ್ವನಿಯಂತ್ರಣದಿಂದ ಮದ್ಯ ಸೇವಿಸಿದ್ದೇನೆ. ಆದ್ದರಿಂದ ನಡೆದುಕೊಂಡು ಹೋಗಬಲ್ಲೆ. ನಿನಗೆ ನಡೆಯೋಕೆ ಆಗೋದಿಲ್ಲ ಅನ್ಸುತ್ತೆ. ನಿಧಾನವಾಗಿ ಬಾ ಗೆಳೆಯ' ಎಂದು ಹೇಳಿ ತೂರಾಡುತ್ತಾ ಗಡಿ ದಾಟಿ ಪಕ್ಕದ ರಾಜ್ಯ ಪ್ರವೇಶಿಸಿದ.

ಸಂಜೆಯ ಸಮಯದಲ್ಲಿ ಓರ್ವ ಯುವಕ ಮರದ ಬಳಿ ಬಂದ. ಗಡ್ಡದಾರಿ ವ್ಯಕ್ತಿಯು ಇನ್ನೂ ಮರದ ಕೆಳಗೆ ಕಾಲು ಚಾಚಿ ತೂಕಡಿಸುವಂತೆ ಕಾಣುತ್ತಿತ್ತು. ಆ ಯುವಕನು ಗಡ್ಡದಾರಿ ವ್ಯಕ್ತಿಯ ಬಳಿ ಬಂದು ಅವರನ್ನು ಹತ್ತಿರದಿಂದ ನೋಡಿ, ಲಗುಬಗೆಯಿಂದ ‘ಗುರುಗಳೇ ಶರಣು ಶರಣು. ತಾವು ಇಲ್ಲಿ ಏಕೆ ಕುಳಿತಿದ್ದೀರಿ? ಕುಶಲವೇ? ಆರೋಗ್ಯವಾಗಿದ್ದೀರಿ ತಾನೇ!’ ಎನ್ನುತ್ತಾ ಆ ವ್ಯಕ್ತಿಯ ಪಾದಕ್ಕೆ ನಮಸ್ಕರಿಸಿದ. 

ಗಡ್ದದಾರಿ ವ್ಯಕ್ತಿ ಕಣ್ಣು ತೆರೆದು ನೋಡಿ ನಸುನಕ್ಕರು. ಯುವಕನು ಮತ್ತೊಮ್ಮೆ ಅವರಿಗೆ ನಮಸ್ಕರಿಸಿ, ‘ತಾವು ದಯವಿಟ್ಟು ನಮ್ಮ ಮನೆಗೆ ಬಂದು ‘ಇದೊಂದು ದಿನ ನಮ್ಮ ಆತಿಥ್ಯ ಸ್ವೀಕರಿಸಬೇಕು ಹಾಗೂ ನಮ್ಮನ್ನು ಆಶೀರ್ವದಿಸಬೇಕು' ಎಂದು ಅವರನ್ನು ವಿನಂತಿಸಿದ.

‘ದೇವರ ಇಚ್ಛೆ ಇದ್ದರೆ ಹಾಗೇ ಆಗಲಿ' ಎನ್ನುತ್ತಾ ಆ ಸನ್ಯಾಸಿಯು ಆ ಯುವಕನ ಭುಜದ ಮೇಲೆ ಕೈಯಿಟ್ಟು ನಿಧಾನವಾಗಿ ಅವನ ಮನೆಗೆ ಹೊರಟರು. (ನಮ್ಮನ್ನು ನಾವೇನು ಅಂದುಕೊಳ್ಳುತ್ತೇವೋ, ಅದನ್ನೇ ಇತರರಲ್ಲಿ ನಾವು ಕಾಣುತ್ತೇವೆ ಎಂಬುದಕ್ಕೆ ಒಂದು ದೃಷ್ಟಾಂತ ಈ ಕಥೆ)

-ಶಶಾಂಕ್ ಮುದೂರಿ (ವಿಶ್ವವಾಣಿಯಿಂದ)

ಚಿತ್ರ ಕೃಪೆ: ಅಂತರ್ಜಾಲ ತಾಣ