ನಾಳೆಗೂ ಇರಲಿ ನೀರು

ನಾಳೆಗೂ ಇರಲಿ ನೀರು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಸೇತ್ ಎಂ.ಸಿಗೆಲ್, ಕನ್ನಡಕ್ಕೆ : ರಾಘವೇಂದ್ರ ಹೆಗಡೆ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೨೨೫.೦೦, ಮುದ್ರಣ ೨೦೨೨

ನೀರಿನ ಮೌಲ್ಯ ಗೊತ್ತಾಗುವುದು ಅದರ ಕೊರತೆಯಾದಾಗಲೇ. ಇದನ್ನು ಇಸ್ರೇಲ್ ದೇಶದವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಹೇಳಿ ಕೇಳಿ ಇಸ್ರೇಲ್ ದೇಶದ ಬಹುಪಾಲು ಭೂಮಿ ಮರಳುಗಾಡು. ಮಳೆಯಾಗುವುದು ಬಹಳ ಕಡಿಮೆ. ಆದರೂ ನೀರಾವರಿ ತಂತ್ರಜ್ಞಾನ, ಕೃಷಿಯಲ್ಲಿ ಅವರು ಬಹಳ ಮುಂದುವರಿದಿದ್ದಾರೆ. ಇಸ್ರೇಲ್ ಜನರ ನೀರಾವರಿ ತಂತ್ರಗಳ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿವೆ. ಅಂತಹದ್ದೇ ಒಂದು ಪುಸ್ತಕ 'ನಾಳೆಗೂ ಇರಲಿ ನೀರು' ಇದು ಜಲದಾಹದಿಂದ ತತ್ತರಿಸುತ್ತಿರುವ ಜಗತ್ತಿಗೆ ಇಸ್ರೇಲ್ ನ ಪರಿಹಾರ ಎಂದಿದ್ದಾರೆ ಲೇಖಕರು. 

ಹಲವಾರು ಬಾರಿ ಇಸ್ರೇಲ್ ಗೆ ಹೋಗಿ ಬಂದಿರುವ, ಇಸ್ರೇಲ್ ಬಗ್ಗೆ ಪುಸ್ತಕವನ್ನೂ ಬರೆದಿರುವ ಪತ್ರಕರ್ತ, ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರು ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. ಅವರ ಮಾತುಗಳಲ್ಲೇ ಪುಸ್ತಕದ ಬಗ್ಗೆ 'ಇದು ಎಂಥಾ ವಿಸ್ಮಯವೋ ಕಾಣೆ ! ಎನ್ನುತ್ತಾ ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ...

" ನಾನು ಏಳು ಸಲ ಇಸ್ರೇಲ್ ಗೆ ಹೋಗಿ ಬಂದಿರುತ್ತೇನೆ. ಪ್ರತಿ ಭೇಟಿಯೂ ನನಗೆ ಅಗಾಧ ಅಚ್ಚರಿಯೇ. ಅದು ಒಂದು ದೇಶವಾಗಿ ಅಸ್ತಿತ್ವದಲ್ಲಿರುವುದೇ ಸೋಜಿಗ. ದೇಶದ ಸುತ್ತ ಹಾಗೂ ಒಳಗೆಲ್ಲ ಪರಮ ವೈರಿಗಳನ್ನು ಕಟ್ಟಿಕೊಂಡು ಸ್ವಾಭಿಮಾನದಿಂದ ತಲೆಯೆತ್ತಿ ನಿಂತಿದೆ. ಶೇ. ೬೦ರಷ್ಟು ಮರುಭೂಮಿ, ಶುಷ್ಕ ನೆಲ ಹೊಂದಿ ಇಡೀ ಜಗತ್ತಿಗೆ ಕೃಷಿ ಪಾಠ ಮಾಡುತ್ತದೆ. ನದಿ, ತೊರೆ, ಜಲಾಶಯ, ಕೆರೆ, ಜಲಪಾತ, ನೀರಿನ ಪಸೆಯೇ ಇಲ್ಲದ ದೇಶ. ಕೃಷಿಯಲ್ಲಿ ವಿಶ್ವಕ್ಕೇ ಅಗ್ರಗಣ್ಯ. ಬೆಂಗಳೂರಿನಲ್ಲಿ ಒಂದು ಗಂಟೆ ಬಿದ್ದಷ್ಟು ಮಳೆ, ಇಸ್ರೇಲ್ ನಲ್ಲಿ ಇಡೀ ವರ್ಷದಲ್ಲಿ ಬೀಳುವುದಿಲ್ಲ. ಕೃಷಿ ನೀರಾವರಿ ಹಾಗೂ ಕುಡಿಯುವ ನೀರಿನಲ್ಲಿ ಇಸ್ರೇಲ್ ತಂತ್ರಜ್ಞಾನ ಜಗತ್ತಿಗೇ ಮಾದರಿ. ಹನಿ ನೀರಿಗೆ ತತ್ವಾರವಾಗಿರುವ ದೇಶ, ಇಂದು ಕುಡಿಯುವ ನೀರನ್ನು ಪಕ್ಕದ ದೇಶಗಳಿಗೆ ರಫ್ತು ಮಾಡುತ್ತಿದೆ. ಸಾಕ್ಷಾತ್ ಭಗೀರಥನೇನಾದರೂ ಇಸ್ರೇಲಿನ 'ನೀರಿನ ಮಾದರಿ'ಯನ್ನು ನೋಡಿದ್ದರೆ ಮೂರ್ಛೆ ಬೀಳುತ್ತಿದ್ದನೇನೋ? ಜಗತ್ತೇ ಮೂಗಿನ ಮೇಲೆ ಬೆರಳಿಡುವಂಥ ಸಾಧನೆಯದು. ಅಂಥ ಪವಾಡವನ್ನು ಆ ದೇಶ ಸಾಧಿಸಿದ್ದಾದರೂ ಹೇಗೆ? ಮರುಭೂಮಿಯಲ್ಲಿ ನೀರಿನ ಮರುಪೂರಣವಾದುದಾದರೂ ಹೇಗೆ? ಇಡೀ ವಿಶ್ವವೇ ನೀರಿನ ಕೊರತೆ, ಜಲಸಮರ ಎದುರಿಸುತ್ತಿರುವ ಈ ಸಂಕಟಮಯ ಸಂದರ್ಭದಲ್ಲಿ ಸೇತ್ ಎಂ ಸಿಗೆಲ್ ಅವರ ‘Let There Be Water’ ಎಂಬ ಅತ್ಯಂತ ಮಹತ್ವಪೂರ್ಣ ಕೃತಿಯನ್ನು ಸನ್ಮಿತ್ರ ರಾಘವೇಂದ್ರ ಹೆಗಡೆ ಅವರು ಕನ್ನಡಕ್ಕೆ (ನಾಳೆಗೂ ಇರಲಿ ನೀರು) ಅನುವಾದಿಸಿ ಉಪಕರಿಸಿದ್ದಾರೆ. ಮನುಕುಲದ ಭವಿಷ್ಯ, ಜೀವಿ, ಜೀವಸೆಲೆಯಲ್ಲಿ ಪ್ರೀತಿ, ಆಸ್ಥೆಯಿರುವವರೆಲ್ಲ ಓದಲೇಬೇಕಾದ ಕೃತಿಯಿದು. ನೀರಿನ ಬಗ್ಗೆ ಮತ್ತಷ್ಟು ಜಾಗೃತಿ ಕಳಕಳಿ ಮೂಡಿಸುವ ಈ ಪುಸ್ತಕ, ನೀರಿನ ಕೊರತೆಗೆ ಒರತೆಯಾಗಿ ಸಾರ್ಥಕವೆನಿಸುತ್ತದೆ. ಒಟ್ಟಾರೆ ಇದೊಂದು ತಂಪನೆರೆಯುವ ಕೃತಿ. ಹೆಗಡೆ ಅವರು ಅಭಿನಂದನಾರ್ಹರು."