ನಾಳೆ ಎಂಬುದು ಕತ್ತಲು
ನಾಳೆ ಕತ್ತಲು, ಕಾಣೆ
ಏನು ಅಲ್ಲಿದೆ ಎಂದು
ನಿನ್ನೆಯದು ಬೆತ್ತಲೆಯು
ಉಳಿದಿಲ್ಲ ಒಂದು
ಮಾಡಲೇತಕೆ ನೀನು
ಅದರ ಚಿಂತೆಯನು
ಅಂದಿನ ಕೆಲಸವನು
ಮಾಡಲು ಆಂದಂದು
ಕೀಲು ಕೊಟ್ಟರೆ ಕುಣಿವ
ಗೊಂಬಿಗಳು ನಾವಲ್ಲ
ನಮ್ಮೊಳಗೂ ತುಂಬಿಹವು
ನೂವುಗಳು, ನಲಿವುಗಳು
- 1-
ಯಾರಿಗೋ ಯಾತಕೋ
ಈ ಭೂಮಿ ಬ್ರಹ್ಮಾಂಡ
ಆರೂ ಅರಿದವರಿಲ್ಲ
ಅದರ ಪೂರ್ತಿ ಮರ್ಮ
ಪ್ರೀತಿ ಪ್ರೇಮದ ಜಾತ್ರೆ
ಮಾಡುವುದು ಬಲು ಸರಳ
ಎಲ್ಲವೂ, ಎಲ್ಲದೂ
ಉತ್ತುಂಗದಲಿ ಇರುವಾಗ
ಕಷ್ಟಗಳು ಕೂಡಿರಲು
ಕತ್ತಲೆಯು ತುಂಬಿರಲು
ಎದೆಯಗುಂದದೆ, ಬೆನ್ನು ತೋರದೆ
ನಡೆಯುವುದು ನಿಜ ಧರ್ಮ
- 2 -
ನೋವುಗಳು, ನಲಿವುಗಳು
ನಮ್ಮೆರಡು ಕಣ್ಣುಗಳು
ಬೇಕು ಈ ಎರಡು
ಬದುಕ ಬಿತ್ತಾರವನು ಅರಿಯಲು
ಅಂತರಂಗದ ಕದವ
ನಾವು ತೆರೆಯಲು ಬೇಕು
ಅನಂತ ವಿಶ್ವದಜೊತೆಗೆ
ಪ್ರೀತಿಯಿಂ ಬಾಳಲು
ತಪ್ಪುಗಳು ಸಹಜ
ತದ್ದಿ ನಡೆವುದು ಜಾಣ್ಮೆ
ಅರಿತೂ ಹಠಮಾಡುವುದು
ನಮ್ಮ ಬಾಳ್ವೆಯ ಕುಲ್ಮೆ
-3-
ದೇವ ಮಾನವರು ನಾವಲ್ಲ
ಎಲ್ಲವೂ ಎಣಿಸಿದಂತಿರಲು
ಮಿತಿಯುಳ್ಳ ನರರು
ಹೊಂದಾಣಿಕೆಯೆ ನಮ್ಮ ಕರುಳು
ನಿನ್ನೆಗಳ, ನಾಳೆಗಳ
ಅಡಕತ್ತರಿಗೆ ಸಿಗದುಳಿದು
ಬರುವ ದಿನಗಳಲಿ, ಧೈರ್ಯದಿಂ ಬಾಳು
ಧೈರ್ಯವೇ ನಿಜ, ನಿಜದಿ ಬಾಳು.
-4-
ಜಯಪ್ರಕಾಶ ನೇ ಶಿವಕವಿ.