ನಾವಿಕನ ಜಾಣ್ಮೆ

ನಾವಿಕನ ಜಾಣ್ಮೆ

“ಸಾಗರ ಸಾಹಸಿ” ಹಡಗಿನ ಕ್ಯಾಪ್ಟನ್ ಹಡಗಿನಲ್ಲಿ ಅತ್ತಿಂದಿತ್ತ ಅಡ್ಡಾಡುತ್ತಿದ್ದ. ಸಿಂಗಪೂರ ಮತ್ತು ಬೋರ್ನಿಯೋಕ್ಕೆ ಹಡಗು ಹೊರಡುವುದು ತಡವಾಗುತ್ತಿದೆ ಎಂಬುದು ಅವನ ಆತಂಕ. ಅದೇನಿದ್ದರೂ ಬಹಳ ಕಡಿಮೆ ವೇತನಕ್ಕೆ ನಾವಿಕರನ್ನು ನೇಮಿಸಿದ್ದರಿಂದ ಈ ಯಾನದಿಂದ ಬಹಳ ಲಾಭವಾಗಲಿದೆ ಎಂಬುದು ಅವನ ಲೆಕ್ಕಾಚಾರ.

ಹಡಗಿನ ಒಬ್ಬ ನಾವಿಕನ ಹೆಸರು ಬಾಲು. ಅವನು ಬರ್ಮಾದ ಗುಡ್ಡಗಾಡಿನವನು. ಅವನು ಹೋರಿಯಂತೆ ಬಲಿಷ್ಠನಾಗಿದ್ದ; ಆದರೆ ಪೆದ್ದನಂತೆ ಕಾಣುತ್ತಿದ್ದ. ಅವನು ಮಾತನಾಡುತ್ತಿದ್ದುದು ಕಡಿಮೆ. “ಹೂಂ, ಹಾಂ” ಎಂದು ಸದ್ದುಗಳನ್ನು ಮಾಡುತ್ತಿದ್ದುದೇ ಜಾಸ್ತಿ. ಇವನಿಗೆ ದಂಡ ಹಾಕುವುದು ಸುಲಭ ಎಂದುಕೊಂಡ ಕ್ಯಾಪ್ಟನ್.

ರಂಗೂನಿನಿಂದ ಹೊರಟ ಹಡಗು ಸಿಂಗಾಪುರ ತಲಪಿತು. ಯಾನದ ಉದ್ದಕ್ಕೂ ಇತರ ನಾವಿಕರು ಬಾಲುವಿಗೆ ಲೇವಡಿ ಮಾಡುತ್ತಿದ್ದರು. ಅವನು "ಹಾಂ, ಹೂಂ” ಎನ್ನುತ್ತಾ ಅವನ್ನೆಲ್ಲಾ ಸಹಿಸಿಕೊಂಡಿದ್ದ. ಸಿಂಗಾಪುರದಲ್ಲಿ ಹಡಗು ಲಂಗರು ಹಾಕಿದೊಡನೆ ಬಾಲು ಹಡಗಿನಿಂದ ಇಳಿದು ಭೋಜನಾಲಯಕ್ಕೆ ಹೋಗಿ ಹೊಟ್ಟೆತುಂಬ ಊಟ ಮಾಡಿದ. ಆಗ ಒಂದು ನಾಯಿಮರಿ ಅವನ ಹತ್ತಿರ ಬಂದು ಕುಂಯ್-ಕುಂಯ್ ಸದ್ದು ಮಾಡುತ್ತಾ ಆಹಾರ ಬೇಡಿತು. ಅದಕ್ಕೂ ಆಹಾರ ನೀಡಿದ ಬಾಲು. ಅವನು ಹಡಗಿಗೆ ಹಿಂತಿರುಗುವಾಗ ಅವನೊಂದಿಗೇ ಓಡಿಬಂದ ಅದು ಅವನ ಬೆನ್ನು ಬಿಡಲೇ ಇಲ್ಲ.

ಕೊನೆಗೆ ನಾಯಿಮರಿಯನ್ನು ಕಂಕುಳಿನಲ್ಲಿ ಎತ್ತಿಕೊಂಡು ಹಡಗನ್ನೇರಿದ ಬಾಲು. ಕ್ಯಾಪ್ಟನನ ಬಳಿ ಹೋಗಿ, ನಾಯಿಮರಿಯನ್ನು ತನ್ನೊಂದಿಗೆ ಇರಿಸಿಕೊಳ್ಳಲು ಕ್ಯಾಪ್ಟನನ ಅನುಮತಿ ಕೇಳಿದ. “ಪರವಾಗಿಲ್ಲ. ಹಡಗಿನಲ್ಲಿ ತಿಂದುಳಿದ ಆಹಾರ ತಿಂದುಕೊಂಡು ಇರಲಿ ನಿನ್ನ ನಾಯಿಮರಿ. ಅಡುಗೆಯವನೂ ಅದಕ್ಕೆ ಸ್ವಲ್ಪ ಆಹಾರ ಕೊಡ್ತಾನೆ” ಎಂದ ಕ್ಯಾಪ್ಟನ್.

ಯಾನ ಮುಗಿಸಿ, ರಂಗೂನಿಗೆ ಹಿಂತಿರುಗಿತು ಹಡಗು. ಎಲ್ಲ ನಾವಿಕರೂ ತಮ್ಮ ವೇತನ ಪಡೆಯಲಿಕ್ಕಾಗಿ ಸಾಲಾಗಿ ನಿಂತರು. ತನ್ನ ವೇತನ ಪಡೆಯಲು ಬಾಲು ಬಂದಾಗ, ಕ್ಯಾಪ್ಟನ್ ತಲೆಯಾಡಿಸಿ ಹೇಳಿದ, "ನಿನಗೇನೂ ಹಣ ಕೊಡಲಿಕ್ಕಿಲ್ಲ. ನಿನ್ನ ವೇತನ ಎಂಟು ನೂರು ರೂಪಾಯಿ. ಆದರೆ ನಿನ್ನ ನಾಯಿಮರಿಗೆ ಹಡಗಿನಲ್ಲಿ ಕೊಟ್ಟ ಆಹಾರಕ್ಕೆ ಅದಕ್ಕಿಂತ ಜಾಸ್ತಿ ಖರ್ಚಾಗಿದೆ.”

ಕ್ಯಾಪ್ಟನನ್ನು ಒಮ್ಮೆ ದಿಟ್ಟಿಸಿ ನೋಡಿದ ಬಾಲು, ತನ್ನ ನಾಯಿಮರಿಯೊಂದಿಗೆ ಹಡಗಿನಿಂದ ಇಳಿದು ಹೋದ. ಎರಡುವಾರಗಳ ನಂತರ ಆ ಹಡಗು ಪುನಃ ಯಾನ ಹೊರಟಾಗ ಬಾಲು ಪುನಃ ನಾವಿಕನಾಗಿ ಬಂದು ಸೇರಿಕೊಂಡ. ಎಂತಹ ಪೆದ್ದ ಇವನು ಎಂದುಕೊಂಡ ಕ್ಯಾಪ್ಟನ್.

ಈ ಬಾರಿ ಬಾಲು ಯಾವಾಗಲೂ ತನ್ನ ಸೊಂಟಕ್ಕೆ ಒಂದು ಸಣ್ಣ ಖಡ್ಗವನ್ನು ಕಟ್ಟಿಕೊಂಡಿರುತ್ತಿದ್ದ. ಅದ್ಯಾಕೆಂದು ಯಾರಾದರೂ ಕೇಳಿದರೆ, “ಇದು ಹಣ ಕೊಡುವ ಮ್ಯಾಜಿಕ್ ಖಡ್ಗ” ಎನ್ನುತ್ತಿದ್ದ. ಇದನ್ನು ಕೇಳಿದ ಇತರ ನಾವಿಕರು ಅವನಿಗೆ ಗೇಲಿ ಮಾಡುತ್ತಿದ್ದರು. ಆದರೆ, ಬಾಲು ತನ್ನ ಲಾಕರಿನಲ್ಲಿ ಅಂತಹದೇ ಇನ್ನೊಂದು ಖಡ್ಗವನ್ನು ಬಚ್ಚಿಟ್ಟಿದ್ದಾನೆ ಎಂಬುದು ಅವರು ಯಾರಿಗೂ ಗೊತ್ತಿರಲಿಲ್ಲ.

ಒಂದು ವಾರದ ನಂತರ ಸಂಜೆಯ ಹೊತ್ತಿನಲ್ಲಿ ಹಡಗಿನ ಬದಿಯಲ್ಲಿ ನಿಂತು ಬಾಲು ತನ್ನ ಖಡ್ಗವನ್ನು ಹರಿತ ಮಾಡುತ್ತಿದ್ದ. ಅಚಾನಕ್ ಅದು ಅವನ ಕೈತಪ್ಪಿ ಸಮುದ್ರಕ್ಕೆ ಬಿತ್ತು. “ಅಯ್ಯೋ, ಖಡ್ಗ ನೀರಿಗೆ ಬಿತ್ತಲ್ಲಾ! ಪರವಾಗಿಲ್ಲ, ನಾಳೆ ಬೆಳಗ್ಗೆ ನಾನು ಸಮುದ್ರಕ್ಕೆ ಹಾರಿ ಅದನ್ನು ವಾಪಾಸು ತರುತ್ತೇನೆ” ಎಂದ ಬಾಲು.  

ಅಲ್ಲೇ ಹಾದು ಹೋಗುತ್ತಿದ್ದ ಕ್ಯಾಪ್ಟನ್ ಹೇಳಿದ, “ಎಂತಹ ಪೆದ್ದ ನೀನು! ನಾಳೆ ಬೆಳಗ್ಗೆ ಹಡಗು ಹಲವಾರು ಮೈಲು ಮುಂದೆ ಹೋಗಿರುತ್ತದೆ.” ಕ್ಯಾಪ್ಟನನ್ನು ದಿಟ್ಟಿಸಿ ನೋಡಿದ ಬಾಲು ಸವಾಲೆಸೆದ, “ಒಂದು ಸಾವಿರ ರೂಪಾಯಿಗೆ ನಿಮ್ಮ ಹತ್ತಿರ ಪಂಥ ಕಟ್ಟುತ್ತೇನೆ. ನಾನು ನಾಳೆ ಮುಂಜಾನೆ ಸಮುದ್ರಕ್ಕೆ ಹಾರಿ ನನ್ನ ಖಡ್ಗ ವಾಪಾಸು ತರುತ್ತೇನೆ."

ಸುಲಭವಾಗಿ ಒಂದು ಸಾವಿರ ರೂಪಾಯಿ ಸಿಗುತ್ತದೆಂದು ಕ್ಯಾಪ್ಟನಿಗೆ ಖುಷಿಯಾಯಿತು. “ನಿನ್ನ ಪಂಥ ಒಪ್ಪಿದೆ. ನಾಳೆ ಮುಂಜಾನೆ ಎಲ್ಲರೂ ಇಲ್ಲಿಗೆ ಬನ್ನಿ. ನಾನು ಸಾವಿರ ರೂಪಾಯಿ ಪಡೆಯೋದನ್ನು ನೋಡಿ” ಎಂದು ಘೋಷಿಸಿದ ಕ್ಯಾಪ್ಟನ್.

ಮರುದಿನ ಬೆಳಗ್ಗೆ ಹಡಗಿನ ಡೆಕ್ಕಿಗೆ ಬಂದ ಬಾಲು; ಇನ್ನೊಂದು ಖಡ್ಗವನ್ನು ತನ್ನ ಉಡುಪಿನೊಳಗೆ ಅಡಗಿಸಿಕೊಂಡಿದ್ದ. ನೇರವಾಗಿ ಅಂಚಿಗೆ ಬಂದು, ಸಮುದ್ರಕ್ಕೆ ಹಾರಿದ. ಮೂರು ನಿಮಿಷಗಳಲ್ಲಿ ನೀರಿನ ಮೇಲೆ ಬಾಲುವಿನ ತಲೆ ಕಾಣಿಸಿತು. ಅವನ ಬಾಯಿಯಲ್ಲಿ ಖಡ್ಗವಿತ್ತು!

ಹಗ್ಗದ ಏಣಿಯನ್ನೇರಿ ಬಾಲು ಹಡಗಿನ ಡೆಕ್ಕಿಗೆ ಮರಳಿದ. ಅವನು ಹಿಡಿದಿದ್ದ ಖಡ್ಗವನ್ನು ನೋಡಿದ ಎಲ್ಲರೂ “ಇದು ಅದೇ ಖಡ್ಗ. ಬಾಲು ಪಂಥದಲ್ಲಿ ಸಾವಿರ ರೂಪಾಯಿ ಗೆದ್ದ” ಎಂದರು.

ಹಡಗಿನ ಕ್ಯಾಪ್ಟನ್ ದಂಗು ಬಡಿದು ಹೋಗಿದ್ದ. ತನಗೆ ಬಾಲು ಮೋಸ ಮಾಡಿದ್ದಾನೆಂದು ಅವನಿಗೆ ಗೊತ್ತಿತ್ತು. ಆದರೆ ಹೇಗೆ? ತನ್ನ ಜೇಬಿಗೆ ಕೈಹಾಕಿ ಸಾವಿರ ರೂಪಾಯಿ ಹೊರ ತೆಗೆದ ಕ್ಯಾಪ್ಟನ್ ಅದನ್ನು ಬಾಲುವಿನತ್ತ ಎಸೆದ. “ಸೇರಿಗೆ ಸವ್ವಾ ಸೇರು” ಎಂಬ ಭಾವದಲ್ಲಿ ಬಾಲು ಅದನ್ನು ತೆಗೆದುಕೊಂಡ.