ನಾವು ಎಲ್ಲೋ ಕಳೆದು ಹೋಗಿದ್ದೇವೆ...!
ಎರಡು ಆಘಾತಕಾರಿ ಸುದ್ದಿಗಳು ರಾಜಸ್ಥಾನ ಮತ್ತು ಗುಜರಾತಿನಿಂದ ವರದಿಯಾಗಿವೆ. ಒಂದು... ಕ್ರಿಸ್ತ ಪೂರ್ವದಲ್ಲಿ ಕುಡಿಯುವ ನೀರಿನ ಮಡಿಕೆ ಮುಟ್ಟಿದ ಕಾರಣ 9 ವರ್ಷದ ಅಸ್ಪೃಶ್ಯ ಮಗುವಿನ ಹತ್ಯೆ ಎಂಬುದು ಸಹಜವಾಗಿತ್ತು. ಆದರೆ.... 2022 ಆಗಸ್ಟ್ ತಿಂಗಳಿನಲ್ಲಿ ನಮ್ಮೆಲ್ಲರ ಕಣ್ಣ ಮುಂದೆ ಸಹ ಇಂತಹ ಮತ್ತೊಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಅನೇಕ ಕೊಲೆಗಳು ಅನೇಕ ಕಾರಣಗಳಿಗಾಗಿ ನಡೆಯುತ್ತಲೇ ಇರುತ್ತದೆ. ಅದು ಒಂದು ಸುದ್ದಿಯಲ್ಲ. ಆದರೆ ಹುಟ್ಟಿನ ಕಾರಣದಿಂದಾಗಿ ಯಾವುದೇ ಆಧಾರ ಇಲ್ಲದೇ ಮೇಲು ಕೀಳು ಎಂದು ಕೃತಕವಾಗಿ ಸೃಷ್ಟಿಸಿ ಒಂದು ಸಮುದಾಯವನ್ನು ಮುಟ್ಟಿಸಿಕೊಳ್ಳಬಾರದು ಎಂದು ನಂಬಿಸಿ ಕೊನೆಗೆ ಕೊಲೆ ಎಂಬುದು ಒಂದು ಬಹುದೊಡ್ಡ ಅಪರಾಧ ಎಂದು ಗೊತ್ತಿದ್ದರೂ ದಲಿತ ಬಾಲಕಿ ಕುಡಿಯುವ ನೀರಿನ ಮಡಿಕೆ ಮುಟ್ಟಿದ ಕಾರಣ ವಿದ್ಯಾವಂತ ವ್ಯಕ್ತಿಯೊಬ್ಬ ಆ ಮಗುವನ್ನು ಕೊಲ್ಲುವುದು ಮನುಷ್ಯ ಕ್ರೌರ್ಯದ ಪರಮಾವಧಿ.
ನಿಜಕ್ಕೂ ಇಡೀ ದೇಶ ಒಕ್ಕೊರಲಿನಿಂದ ಇದನ್ನು ಖಂಡಿಸಬೇಕಿತ್ತು ಮತ್ತು ಇದರ ಬಗ್ಗೆ ಒಂದು ಜಾಗೃತಿಯ ಜನಾಂದೋಲನ ನಡೆಯಬೇಕಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇದು ಅತ್ಯಂತ ಅಗತ್ಯ ಕ್ರಮವಾಗಬೇಕಿತ್ತು. ಬಹುಶಃ ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣದಲ್ಲಿ ಆದಂತ ಪ್ರತಿಭಟನೆ ಆಗಬೇಕಿತ್ತು. ಮಾಧ್ಯಮಗಳು, ಎಲ್ಲಾ ಧಾರ್ಮಿಕ ಮುಖಂಡರು, ಪ್ರಗತಿಪರರು, ಸಾಹಿತಿಗಳು, ಹೋರಾಟಗಾರರು ಇದನ್ನು ಗಂಭೀರವಾಗಿ ಪರಿಗಣಿಸಿ ಏನಾದರೂ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ನಿರೀಕ್ಷಿತ ಸ್ಪಂದನೆ ದೊರೆಯುತ್ತಿಲ್ಲ. ಯಾರಿಗೂ ಇದು ಮುಖ್ಯ ಅನಿಸುತ್ತಿಲ್ಲ. ಎಲ್ಲರೂ ಹಣ ಆಸ್ತಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಕೆಲವರು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ನಾವು ಎಲ್ಲೋ ಕಳೆದು ಹೋಗಿದ್ದೇವೆ.
ಹಾಗೆಯೇ ಇನ್ನೊಂದು...
ಗುಜರಾತಿನಲ್ಲಿ 2002 ರಲ್ಲಿ ನಡೆದ ಬಿಲ್ಕಶ್ ಬಾನು ಅತ್ಯಾಚಾರದ ಶಿಕ್ಷಿತ ಅಪರಾಧಿಗಳು ಬಿಡುಗಡೆಯಾದಾಗ ಕೆಲವು ಸಂಘ ಸಂಸ್ಥೆಗಳು ಅವರನ್ನು ಸ್ವಾಗತಿಸಿ ಸನ್ಮಾನಿಸಿದ್ದು ಸಹ ಧಾರ್ಮಿಕ ಮತ್ತು ಮಾನವೀಯ ಮೌಲ್ಯಗಳನ್ನೇ ಬುಡಮೇಲು ಮಾಡುವಂತಿದೆ. ನನ್ನ ಸ್ಪಷ್ಟ ಅಭಿಪ್ರಾಯದಲ್ಲಿ 20 ವರ್ಷಗಳಷ್ಟು ದೀರ್ಘಕಾಲ ಶಿಕ್ಷೆ ಅನುಭವಿಸಿದ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಿ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವುದು ಮಾನವೀಯತೆಯ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ ಆ ಅಪರಾಧಿಗಳನ್ನು ಸಾರ್ವಜನಿಕವಾಗಿ ಸನ್ಮಾನಿಸುವುದು ಅತ್ಯಂತ ಅಮಾನವೀಯ. ಏಕೆಂದರೆ ಅದು ಆ ಅಪರಾಧ ಮತ್ತು ಅಪರಾಧಿಗಳನ್ನು ಸಮರ್ಥಿಸಿದಂತೆ ಆಗುತ್ತದೆ ಮತ್ತು ಅದಕ್ಕೆ ಪ್ರೇರೇಪಣೆಯೂ ಆಗಬಹುದು.
ನನಗಿನ್ನೂ ನೆನಪಿದೆ. 2002 ಆ ದಿನ ನಡೆದ ಆ ಘೋರ ದುರಂತ. ಅದನ್ನು ನೆನಪಿಸಿಕೊಳ್ಳಲು ಭಯವಾಗುತ್ತದೆ. ಅಷ್ಟೊಂದು ಅಮಾನುಷ ಘಟನೆಯದು. ಹಿಂಸೆ ತನ್ನ ಉತ್ಕರ್ಷ ಸ್ಥಿತಿ ತಲುಪುವುದು ಕೋಮು ಗಲಭೆಗಳ ಸಮಯದಲ್ಲಿ. ಈ ರೀತಿಯ ಹಲವಾರು ಘಟನೆಗಳು ಭಾರತ ಪಾಕಿಸ್ತಾನದ ವಿಭಜನೆಯ ಸಮಯದಲ್ಲಿಯೂ ನಡೆದಿದೆ. ಮನುಷ್ಯ ಈ ರೀತಿಯ ವಿಷಯಗಳಲ್ಲಿ ಉತ್ತುಂಗ ತಲುಪುವುದು ಸಮಾಜ ಅದನ್ನು ಬೆಂಬಲಿಸಿದಾಗ.
ಜೈಲಿನಿಂದ ಬಿಡುಗಡೆ ಹೊಂದಿದವರಿಗೆ ಅದ್ದೂರಿ ಸ್ವಾಗತ ನಮ್ಮ ಸಮಾಜದ ಅಧಃಪತನದ ಸ್ಪಷ್ಟ ಸೂಚನೆ. ಏನೇ ಆಗಲಿ ಅಪರಾಧಿಗಳ ಪುನರ್ ವಸತಿ ಉತ್ತಮ ನಡೆ. ಆದರೆ ಅವರಿಗೆ ಸನ್ಮಾನ ಅತ್ಯಂತ ಹೇಯ. ಈ ಘಟನೆಗಳು ಸಮಕಾಲೀನ ಸಮಾಜದ ಕಪ್ಪು ಚುಕ್ಕೆಗಳ ಸಂಖ್ಯೆಯನ್ನು ಹೆಚ್ಚಿಸಿ ಕಪ್ಪು ಕಲೆಗಳೇ ಎದ್ದು ಕಾಣುವಂತೆ ಮಾಡುತ್ತದೆ. ಈ ಬಗ್ಗೆ ಜಾಗೃತರಾಗುವ ಸಮಯ ಬಂದಿದೆ. ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಎಲ್ಲರ ಆತ್ಮವಿಮರ್ಶೆಗೆ - ವಿವೇಚನೆಗೆ ಈ ವಿಷಯ ಒಪ್ಪಿಸುತ್ತಾ....
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ