ನಾವು ತಿಳಿಯಲೇ ಬೇಕಾದ ದೊರೆ : ಚಕ್ರವರ್ತಿ ಲಲಿತಾದಿತ್ಯ
ನಾವು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನಮ್ಮ ಪಠ್ಯ ಪುಸ್ತಕಗಳಲ್ಲಿ ಓದಿದ್ದು ನಮ್ಮ ಭಾರತ ದೇಶದ ಮೇಲೆ ಆಕ್ರಮಣ ಮಾಡಿ, ಕೊಳ್ಳೆ ಹೊಡೆದು, ನಮ್ಮ ಪುರಾತನ ದೇವಾಲಯಗಳನ್ನು ಭಗ್ನಗೊಳಿಸಿ, ತಮ್ಮ ಮತವನ್ನು ಬಲವಂತವಾಗಿ ನಮ್ಮ ಮೇಲೆ ಹೇರಿ, ಹಿಂದೂ ರಾಷ್ಟ್ರವಾಗಿದ್ದ ನಮ್ಮ ದೇಶವನ್ನು ಛಿದ್ರ ಛಿದ್ರವನ್ನಾಗಿಸಿದ ಮೊಗಲರು, ಖಿಲ್ಜಿಗಳು, ತುಘಲಕ್, ಬ್ರಿಟೀಷರು ಇವರ ಬಗ್ಗೆಯೇ. ಇವರು ಮೂಲತಃ ನಮ್ಮ ದೇಶದವರಲ್ಲ. ನಮ್ಮ ದೇಶದ ಸಂಪತ್ತನ್ನು ಕದಿಯಲು ಬಂದ ಖದೀಮರು. ನಮ್ಮಲ್ಲಿ ಆ ಸಮಯದಲ್ಲಿದ್ದ ಆಳುತ್ತಿದ್ದ ರಾಜರುಗಳ ಒಳ ಜಗಳಗಳ ಲಾಭವನ್ನು ಪಡೆದುಕೊಂಡ ಇವರುಗಳು ನಮ್ಮ ದೇಶವನ್ನು ಲೂಟಿ ಮಾಡಿದರು. ಈ ವಿಷಯವನ್ನು ನಮ್ಮ ಅಂದಿನ ಪಠ್ಯ ಪುಸ್ತಕ ತಯಾರು ಮಾಡುತ್ತಿದ್ದ ಸಮಿತಿಯವರು ಮರೆಮಾಚಿ ಆ ಲೂಟಿಕೋರ ದೊರೆಗಳನ್ನೆಲ್ಲಾ ಗ್ರೇಟ್, ಮಹಾನ್ ಎಂದೆಲ್ಲಾ ಹೇಳಲಾಗಿದೆ.
ಐತಿಹಾಸಿಕ ಸತ್ಯ ಒಂದಲ್ಲಾ ಒಂದು ದಿನ ಹೊರಗೆ ಬರಲೇ ಬೇಕು. ನಾವು ಬಾಲ್ಯದಲ್ಲಿ ಕಲಿತದ್ದು ಕೇವಲ ಮೊಘಲ್ ದೊರೆಗಳ ಬಗ್ಗೆಯೇ, ಈಗಲೂ ನಿದ್ರೆಯಿಂದ ಎಬ್ಬಿಸಿ ಮೊಘಲ್ ದೊರೆಗಳ ಪಟ್ಟಿಯನ್ನು ಹೇಳಿ ಎಂದರೆ ಪಟ ಪಟನೇ ಬಾಬರ್, ಹುಮಾಯೂನ್, ಅಕ್ಬರ್, ಜಹಾಂಗೀರ್, ಔರಂಗಜೇಬ್... ಎಂದೆಲ್ಲಾ ಹೇಳತೊಡಗುತ್ತೇವೆ. ನಮಗೆ ಮಹಮ್ಮದ್ ಬಿನ್ ತುಘಲಕ್ ಗೊತ್ತಿದ್ದಷ್ಟು ಸಾಮ್ರಾಟ್ ಸ್ಕಂದಗುಪ್ತ ಗೊತ್ತಿಲ್ಲ, ಅಕ್ಬರ್ ದಿ ಗ್ರೇಟ್ (?!) ನ ಬಗ್ಗೆ ತಿಳಿದುಕೊಂಡಷ್ಟು ಚೋಳ ಸಾಮ್ರಾಜ್ಯದ ಪ್ರಸಿದ್ಧ ದೊರೆ ರಾಜ ರಾಜ ಚೋಳನ ಬಗ್ಗೆ ಗೊತ್ತಿಲ್ಲ. ಈ ವರ್ಷ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯನ್ನು ಕರ್ನಾಟಕ ಸರಕಾರ ನೇಮಿಸಿದ ನಂತರ ಈ ಹುಳುಕುಗಳು ಒಂದೊಂದಾಗಿ ಹೊರ ಬರುತ್ತಿವೆ.
ಪಠ್ಯ ಪುಸ್ತಕದ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರು ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಕಾಶ್ಮೀರದ ರಾಜ ಚಕ್ರವರ್ತಿ ಲಲಿತಾದಿತ್ಯ ಹಾಗೂ ಅಸ್ಸಾಂನ ಅಹೋಮ್ ದೊರೆ ಲಚಿತ್ ಬೋರ್ಪುಕನ್ ಬಗ್ಗೆ ಉಲ್ಲೇಖ ಮಾಡಿದ್ದರು. ಇವರ ಹೆಸರುಗಳನ್ನು ನಾವು ಕೇಳಿಯೇ ಇಲ್ಲವೆಂದು ಅನಿಸಿತು, ಇವರ ಬಗ್ಗೆ ತಿಳಿಯಲೆಂದು ಪುಸ್ತಕಗಳು, ಪತ್ರಿಕೆಗಳನ್ನು ಹುಡುಕಾಡಿದಾಗ ಬಹಳಷ್ಟು ವಿವರಗಳು ದೊರೆತವು. ನಮ್ಮ ಜ್ಞಾನ ಎಷ್ಟೊಂದು ಸಂಕುಚಿತವಾಗಿದೆ ಎಂದು ಅನಿಸಿ ನಾಚಿಕೆಯಾಯಿತು. ಇತಿಹಾಸದ ಸತ್ಯ ಸಂಗತಿಗಳನ್ನು ಬಲ್ಲವರು ಮರೆ ಮಾಚುತ್ತಾ ಬಂದಿದ್ದಾರೆ. ಮೊಘಲರ ಕಾಲದ ದೌರ್ಜನ್ಯಗಳನ್ನು ಮರೆಮಾಚಿ ಕೇವಲ ಅವರನ್ನು ವೈಭವೀಕರಿಸಿದ್ದಾರೆ. ಇತಿಹಾಸ ಎಂದರೆ ಅಂದಿನ ಸತ್ಯ ಸಂಗತಿಗಳನ್ನು ಇಂದಿನ, ಮುಂದಿನ ಜನಾಂಗಕ್ಕೆ ವಸ್ತುನಿಷ್ಟವಾಗಿ ಹಂಚುತ್ತಾ ಹೋಗುವುದು. ಆದರೆ ನಾವು ನಮ್ಮ ಮೂಲ ಹಿಂದೂ ರಾಜರನ್ನು ಪಠ್ಯದಲ್ಲಿ ಓದುತ್ತಲೇ ಇಲ್ಲ. ಅವರ ಬಗ್ಗೆ ಪ್ರಸ್ತಾಪ ಇದ್ದರೂ ಒಂದೆರಡು ವಾಕ್ಯಗಳು ಅಥವಾ ಒಂದೆರಡು ಪ್ಯಾರಾಗಳು ಮಾತ್ರ.
ದೇವಭೂಮಿ ಎಂದೇ ಹೆಸರಾಗಿರುವ ಕಾಶ್ಮೀರದಲ್ಲಿ ಹಿಂದೂ ಪಂಡಿತರ ಮೇಲೆ ನಡೆದ ದೌರ್ಜನ್ಯವನ್ನು ‘ಕಾಶ್ಮೀರ್ ಫೈಲ್ಸ್' ಎಂಬ ಚಲನ ಚಿತ್ರ ತೋರಿಸಿದ ಬಳಿಕ ಹಲವಾರು ಸತ್ಯಗಳು ಹೊರಬಂದವು. ಭೂಮಿಯ ಮೇಲಿನ ಸ್ವರ್ಗವಾಗಿದ್ದ ಕಾಶ್ಮೀರವನ್ನು ಶತ ಶತಮಾನಗಳಿಂದ ಲೂಟಿಕೋರರು ಆಕ್ರಮಿಸುತ್ತಾ ಬಂದರು ಎಂಬ ವಿಷಯವನ್ನು ನಾವು ಇತಿಹಾಸದಿಂದ ತಿಳಿಯಬಹುದಾಗಿದೆ. ಚಕ್ರವರ್ತಿ ಲಲಿತಾದಿತ್ಯ ಮುಕ್ತಪೀಡ ಎಂಬಾತ ಕಾಶ್ಮೀರವನ್ನು ಆಳಿದ ಪ್ರಖ್ಯಾತ ದೊರೆ. ಅಖಂಡ ಭಾರತವನ್ನು ೩೭ ವರ್ಷಗಳ ತನಕ ಅದ್ಭುತವಾಗಿ, ಜನಾನುರಾಗಿಯಾಗಿ ಆಳಿದ ದೊರೆ ಈತ. ಈತನ ಬಗ್ಗೆ ೧೨ನೇ ಶತಮಾನದ ಖ್ಯಾತ ಕವಿ, ಇತಿಹಾಸಕಾರ ಕಲ್ಹಣ ತನ್ನ ‘ರಾಜತರಂಗಿಣಿ' ಕೃತಿಯಲ್ಲಿ ಇಡೀ ಭೂಮಂಡಲವನ್ನು ಗೆದ್ದ ದೊರೆ ಎಂದು ಉಲ್ಲೇಖಿಸಿದ್ದಾನೆ. ಕ್ರಿ.ಶ. ೭೨೪ ರಿಂದ ೭೬೧ರವರೆಗೆ ರಾಜ್ಯಭಾರ ನಡೆಸಿದ ಲಲಿತಾದಿತ್ಯನ ಸಮಯದಲ್ಲಿ ಕಾಶ್ಮೀರ ನಿಜಕ್ಕೂ ಭೂಲೋಕದ ಸ್ವರ್ಗವಾಗಿತ್ತು. ಆತ ದಕ್ಷಿಣದ ಕಾವೇರಿಯಿಂದ ಚೀನಾದವರೆಗೆ ಬಹುದೊಡ್ಡ ಭೂಭಾಗವನ್ನು ಆಳಿದ ಮಹಾರಾಜ. ಆದರೆ ನಮ್ಮ ಪಾಠ ಪುಸ್ತಕಗಳು ಈ ವಿಷಯವನ್ನು ತಿಳಿಸುವುದೇ ಇಲ್ಲ.
ಲಲಿತಾದಿತ್ಯನ ಸಾಮ್ರಾಜ್ಯ ಮೊಘಲರು ಆಳಿದ ಭೂಭಾಗಕ್ಕಿಂತ ವಿಸ್ತಾರವಾಗಿತ್ತು. ರಾಜರು ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧ ಮಾಡುವುದು ಸಾಮಾನ್ಯ ಸಂಗತಿ. ತನ್ನ ಆಡಳಿತಾವಧಿಯಲ್ಲಿ ಲಲಿತಾದಿತ್ಯನು ಅನೇಕ ರಾಜರನ್ನು ಸೋಲಿಸಿ, ಅವರ ರಾಜ್ಯಗಳನ್ನು ವಶಪಡಿಸಿಕೊಂಡರೂ, ಅಲ್ಲಿಯ ಸಂಸ್ಕೃತಿ, ಕಲೆ, ಪರಂಪರೆಗಳ ಮೇಲೆ ದಾಳಿ ಮಾಡಲಿಲ್ಲ. ಯಾರನ್ನೂ ಧರ್ಮ ತ್ಯಾಗ ಮಾಡುವಂತೆ ಬಲವಂತ ಮಾಡಲಿಲ್ಲ. ಸಂಪತ್ತನ್ನು ಕೊಳ್ಳೆ ಹೊಡೆಯಲಿಲ್ಲ. ಈತನದ್ದು ಕಾರ್ಕೋಟ ರಾಜವಂಶ. ಈ ರಾಜವಂಶವನ್ನು ಸ್ಥಾಪಿಸಿದ್ದು ರಾಜಾ ದುರ್ಲಭವರ್ಧನ. ಗೊಂದಾಡಿ ಎಂಬ ರಾಜ್ಯದ ಸೇನಾಧಿಕಾರಿಯಾಗಿದ್ದ ಈತನ ಸಾಮರ್ಥ್ಯವನ್ನು ಮೆಚ್ಚಿ ದೊರೆ ಬಾಲಾದಿತ್ಯ ತನ್ನ ಮಗಳಾದ ಅನಂಗಲೇಖ (ಆನಂಗಲೇಕ) ಳನ್ನು ಕೊಟ್ಟು ಮದುವೆ ಮಾಡಿಸಿದ್ದ. ಬಾಲಾದಿತ್ಯನಿಗೆ ಯಾವುದೇ ಪುತ್ರ ಸಂತಾನವಿರದ ಕಾರಣ ಆತನ ಸಾವಿನ ನಂತರ ಗೊಂದಾಡಿ ರಾಜ ವಂಶ ನಿರ್ವಂಶವಾದಾಗ ಅಳಿಯನಾದ ದುರ್ಲಭವರ್ಧನ ತನ್ನದೇ ಆದ ರಾಜವಂಶವನ್ನು ಕಟ್ಟಿದ. ಈತನಿಗೆ ಹುಟ್ಟಿದ ಮಗ ಪ್ರತಾಪಾದಿತ್ಯ. ಈತನಿಗೆ ಮೂವರು ಗಂಡು ಮಕ್ಕಳು. ವಜ್ರಾದಿತ್ಯ ಚಂದ್ರಪೀಡ, ಉದಯಾದಿತ್ಯ ತಾರಾಪೀಡ ಮತ್ತು ಲಲಿತಾದಿತ್ಯ ಮುಕ್ತಪೀಡ.
ರಾಷ್ಟ್ರಕೂಟ ಸಾಮ್ರಾಜ್ಯಕ್ಕೆ ಅಡಿಗಲ್ಲು ಹಾಕಿದ ದಂತಿದುರ್ಗ ಪಟ್ಟಕ್ಕೇರಲು ಲಲಿತಾದಿತ್ಯ ನೆರವಾಗಿರುವ ಬಗ್ಗೆ ಇತಿಹಾಸಗಳಲ್ಲಿ ಉಲ್ಲೇಖಗಳಿವೆ. ಚಾಲುಕ್ಯರ ಸಾಮಂತ ರಾಜನಾಗಿದ್ದ ಒಂದನೇ ಇಂದ್ರ ನಿಧನದ ಬಳಿಕ ಆತನ ಸಹೋದರ ಒಂದನೇ ಕೃಷ್ಣ ಸಿಂಹಾಸನವೇರಲು ಬಯಸಿದ್ದ. ಅದರೆ ಚಾಲುಕ್ಯ ರಾಜಕುಮಾರಿ, ಒಂದನೇ ಇಂದ್ರನ ಪತ್ನಿ ಭಾವಾಂಗನಳ ಕೋರಿಕೆಯಂತೆ ಲಲಿತಾದಿತ್ಯ ದಂತಿದುರ್ಗನಿಗೆ ಪಟ್ಟಾಭಿಷೇಕ ಮಾಡಲು ನೆರವು ನೀಡುತ್ತಾನೆ. ಲಲಿತಾದಿತ್ಯನ ಸಾಮ್ರಾಜ್ಯವು ಉತ್ತರ-ಪೂರ್ವದಲ್ಲಿ ಕನ್ಯಾಕುಬ್ಜ (ಈಗಿನ ಕನೌಜ್), ಕಳಿಂಗ (ಒರಿಸ್ಸಾ), ಬಂಗಾಳದವರೆಗೆ ವಿಸ್ತಾರವಾಗಿತ್ತು. ಇದನ್ನು ದಕ್ಷಿಣದಲ್ಲಿ ಕಾವೇರಿ ತೀರದವರೆಗೂ ವಿಸ್ತರಣೆ ಮಾಡಿಕೊಂಡಿದ್ದ. ಲಲಿತಾದಿತ್ಯನು ತನ್ನ ಸಾಮ್ರಾಜ್ಯವನ್ನು ಕ್ರಮೇಣ ಪಂಜಾಬ್, ಅಫ್ಘಾನಿಸ್ತಾನ, ದ್ವಾರಕಾ ಮುಂತಾದ ಪ್ರದೇಶಗಳನ್ನೂ ಗೆದ್ದು, ಭಾರತದ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿದ್ದ ಅರಬ್ಬರನ್ನೂ ಹೊಡೆದೋಡಿಸುತ್ತಾನೆ.
ಲಲಿತಾದಿತ್ಯನಿಗೆ ಚೀನಾದ ರಾಜ ತಾಂಗ್ ಜೊತೆ ಮಧುರ ಸಂಬಂಧವಿದ್ದ ಕಾರಣ ಆತ ಅರಬ್ಬರನ್ನು ಮತ್ತು ಟಿಬೇಟಿಯನ್ನರನ್ನು ಸೋಲಿಸಲು ಆತನಿಗೆ ನೆರವಾಗುತ್ತಾನೆ. ಟಿಬೇಟಿಯನ್ನರ ಮೇಲಿನ ಲಲಿತಾದಿತ್ಯನ ವಿಜಯವನ್ನು ಕಾಶ್ಮೀರಿಗರು ಪ್ರತೀ ವರ್ಷ ಹಬ್ಬದ ರೀತಿ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದರೆಂದು ಇತಿಹಾಸಕಾರ ಆಲ್ಬೆರೂನಿ ತನ್ನ ಕೃತಿಯಲ್ಲಿ ತಿಳಿಸುತ್ತಾನೆ. ಲಲಿತಾದಿತ್ಯನು ಉಜ್ಬೆಕಿಸ್ತಾನ, ತಜಕಿಸ್ತಾನ, ದಕ್ಷಿಣ ಕಿರ್ಗಿಸ್ತಾನ, ಕಝಗಿಸ್ತಾನ, ತುರ್ಕರು ಮೊದಲಾದವರನ್ನು ದಂಡೆತ್ತಿ ಹೋಗಿ ಸೋಲಿಸುತ್ತಾನೆ. ತುರ್ಕಿಸ್ತಾನದ ದೊರೆ ಮೊಮಿನ್ ನನ್ನು ನಾಲ್ಕು ಬಾರಿ ಸೋಲಿಸಿ, ಬುದ್ಧಿಕಲಿಯದೇ ಇದ್ದಾಗ ಐದನೇ ಸಲ ಹತ್ಯೆ ಮಾಡುತ್ತಾನೆ. ಲಲಿತಾದಿತ್ಯ ತಾನು ಗೆದ್ದ ಯಾವುದೇ ಪ್ರದೇಶಗಳ ಜನ ಸಾಮಾನ್ಯರನ್ನು ಕಿರುಕುಳಕ್ಕೆ ಒಳಪಡಿಸಲಿಲ್ಲ. ಈತ ನಿಜಕ್ಕೂ ಅಂಖಂಡ ಭಾರತದ ಚರ್ಕವರ್ತಿಯೇ ಆಗಿದ್ದ. ಈ ಕಾರಣದಿಂದಲೇ ಈತನ ಸಾವಿನ ಸುಮಾರು ೬೦೦ ವರ್ಷಗಳ ತನಕ ಯಾವುದೇ ಮುಸ್ಲಿಂ ಆಕ್ರಮಣಕಾರರು ಭಾರತದತ್ತ ದಾಳಿ ಮಾಡಲಿಲ್ಲ.
ಲಲಿತಾದಿತ್ಯ ತನ್ನ ಆಳ್ವಿಕೆಯ ಸಮಯದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದ. ಆತ ಹಲವಾರು ದೇವಾಲಯಗಳನ್ನು ಕಟ್ಟಿಸಿದ. ಕಾಶ್ಮೀರದಲ್ಲಿ ಆತ ಕಟ್ಟಿಸಿದ ಮಾರ್ತಾಂಡ ಸೂರ್ಯ ದೇವಾಲಯದ ಅವಶೇಷಗಳು ಸಾವಿರಾರು ವರ್ಷಗಳ ನಂತರ ಈಗಲೂ ಕಾಣಸಿಗುತ್ತವೆ. ಇದು ಈಗಲೂ ನಮ್ಮ ಶ್ರೇಷ್ಟ ಸಂಸ್ಕೃತಿ, ಪರಂಪರೆಯ ಕೊಂಡಿಯಾಗಿ ಉಳಿದುಕೊಂಡಿದೆ. ಮಹಾ ಸೇನಾನಿಯೂ ಆಗಿದ್ದ ಲಲಿತಾದಿತ್ಯ ದೂರದೃಷ್ಟಿಯನ್ನು ಹೊಂದಿದ್ದ ಚಕ್ರವರ್ತಿಯಾಗಿದ್ದ. ಆದರೆ ಇತಿಹಾಸಕಾರರು ಅಲೆಕ್ಸಾಂಡರ್ ಚಕ್ರವರ್ತಿಗೆ ನೀಡಿದ ಪ್ರಾಶಸ್ತ್ಯವನ್ನು ಲಲಿತಾದಿತ್ಯನಿಗೆ ನೀಡಲಿಲ್ಲ. ಈ ಕಾರಣದಿಂದ ನಮ್ಮ ಪಠ್ಯದಲ್ಲೆಲ್ಲೂ ಈತನ ಉಲ್ಲೇಖವೇ ಕಂಡು ಬರುತ್ತಿಲ್ಲ. ಆದರೆ ಲಲಿತಾದಿತ್ಯನನ್ನು ‘ಭಾರತದ ಅಲೆಕ್ಸಾಂಡರ್' ಎಂದು ಕರೆಯಲು ಮಾತ್ರ ಇತಿಹಾಸಕಾರರು ಮರೆತಿಲ್ಲ. ಮಕ್ಕಳಿಗಾಗಿ ಕಾಮಿಕ್ಸ್ ಸರಣಿಯನ್ನು ಹೊರತರುತ್ತಿರುವ 'ಅಮರ ಚಿತ್ರಕಥಾ’ ಚಕ್ರವರ್ತಿ ಲಲಿತಾದಿತ್ಯ (The Legend of Lalithaditya) ಎಂಬ ಪುಸ್ತಕವನ್ನು ಪ್ರಕಟಿಸಿದೆ.
ಇನ್ನಾದರೂ ನಮ್ಮ ಮುಂದಿನ ಜನಾಂಗ ನಮ್ಮ ದೇಶದ ಮೂಲ ಪುರುಷರನ್ನು ಸ್ಮರಿಸಿಕೊಳ್ಳಬೇಕು. ಶಾಲಿವಾಹನ ಶಕ ವರ್ಷವನ್ನು ಆರಂಭಿಸಿದ ಶಾತವಾನಹನರ ದೊರೆಯಾದ ಗೌತಮಿ ಪುತ್ರ, ಕಳಿಂಗ ದೇಶವನ್ನಾಳಿದ ಮಹಾ ಮೇಘವಾಹನ ಚಕ್ರವರ್ತಿ ಖರವೇಲ, ಸಿಯಾಲ್ ಕೋಟ್ (ಈಗ ಪಾಕಿಸ್ತಾನದಲ್ಲಿದೆ) ನ ರಾಜನಾಗಿದ್ದ ಮಿಲಿಂದ, ನಾಲ್ಕನೇ ಶತಮಾನದಲ್ಲಿ ವಿದೇಶೀಯರ ಆಕ್ರಮಣದಿಂದ ಭಾರತವನ್ನು ಕಾಪಾಡಿದ ಗುಪ್ತ ಸಾಮ್ರಾಜ್ಯದ ಸಾಮ್ರಾಟ್ ಸ್ಕಂದಗುಪ್ತ, ಪ್ರಬಲ ನೌಕಾ ಪಡೆಯನ್ನು ಹೊಂದಿದ್ದ ಚೋಳರ ದೊರೆ ರಾಜ ರಾಜ ಚೋಳ, ಹರ್ಷವರ್ಧನನನ್ನು ಸೋಲಿಸಿದ ಇಮ್ಮಡಿ ಪುಲಕೇಶಿ, ಪಲ್ಲವ ದೊರೆ ನರಸಿಂಹ ವರ್ಮನ್, ರಾಷ್ಟ್ರಕೂಟ ಚಕ್ರವರ್ತಿ ಆರು ದಶಕಗಳ ಕಾಲ ರಾಜ್ಯಭಾರ ಮಾಡಿದ ಅಮೋಘವರ್ಷ ನೃಪತುಂಗ, ಡಚ್ಚರನ್ನು ೧೭೪೧ರಲ್ಲಿ ಸೋಲಿಸಿದ ತಿರುವನಂತಪುರದ ರಾಜ ದೊರೆ ಮಾರ್ತಾಂಡವರ್ಮ, ಪೋರ್ಚುಗೀಸರನ್ನು ಸೋಲಿಸಿ ಸುಮಾರು ನಾಲ್ಕು ದಶಕಗಳ ಕಾಲ ತುಳುನಾಡನ್ನು ಸಂರಕ್ಷಿಸಿದ ಉಲ್ಲಾಳದ ರಾಣಿ ಅಬ್ಬಕ್ಕ, ಶ್ರಾವಸ್ತಿಯ ಸುಹೇಲ್ ದೇವ್, ೧೬೭೧ರಲ್ಲಿ ಮೊಘಲ್ ಸೈನ್ಯವನ್ನೇ ಸೋಲಿಸಿ ಔರಂಗಜೇಬನಿಗೆ ನೀರು ಕುಡಿಸಿದ ಅಸ್ಸಾಂ ನ ಅಹೋಮ್ ದೊರೆ ಲಚಿತ್ ಬೋರ್ಪುಕನ್, ಪೇಶ್ವೆ ಬಾಲಾಜಿ ವಿಶ್ವನಾಥ್ ಹೀಗೆ ಹತ್ತು ಹಲವಾರು ವ್ಯಕ್ತಿಗಳು ನಮಗೆ ಇತಿಹಾಸದ ಪುಟಗಳಲ್ಲಿ ದೊರೆಯುತ್ತಾರೆ. ಆದರೆ ನಾವು ಇವರುಗಳ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿ ಕಲಿಯುವುದು ಬಹಳ ಅಲ್ಪ. ಇಲ್ಲಿರುವ ರಾಜರು ಬೇರೆ ಪ್ರದೇಶಗಳಿಂದ ದಂಡೆತ್ತಿ ಭಾರತಕ್ಕೆ ಬಂದವರಲ್ಲ. ಇಲ್ಲೇ ಇದ್ದು ಭಾರತವನ್ನು ಸಂರಕ್ಷಿಸಿದವರು. ಚಕ್ರವರ್ತಿ ಲಲಿತಾದಿತ್ಯ ಸೇರಿದಂತೆ ಇವರಂತಹ ಇನ್ನಷ್ಟು ರಾಜರ ಬಗ್ಗೆ ಮಾಹಿತಿಗಳು ಮಕ್ಕಳ ಪಠ್ಯದಲ್ಲಿ ಅಡಕವಾಗಲಿ. ಇನ್ನಾದರೂ ಇತಿಹಾಸದ ನೈಜ ಕಥೆಯನ್ನು ಮಕ್ಕಳು ಓದಲಿ ಎಂಬುದೇ ನಮ್ಮ ಆಸೆ.
(ಮಾಹಿತಿ ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ