ನಾವು ನಗುವ ಹಾಗೆ.

ನಾವು ನಗುವ ಹಾಗೆ.

ಬರಹ

ದೇಶ ಹೇಗಿದೆ ನೋಡಿ
ನಾವು ಕಟ್ಟಿದ ಹಾಗೆ
ಬದುಕು ಸಾಗಿದೆ ಬನ್ನಿ
ನಾವು ನಗುವ ಹಾಗೆ.
 
ಎಲ್ಲರೂ ಮತ ಹಾಕುವುದೇ ಒಂದಾಗಿ ನಗಲಿಕ್ಕಾಗಿ
ಅಳುತ ಕುಳಿತರೆ ಒಬ್ಬರೇ ಯಾರೂ ಜತೆಗಿಲ್ಲ ಬಿಡಿ.
 
ನಗುವಿನಲ್ಲೂ ನೂರಾರು ಬಗೆ
ಮಗುವಿನ ಮುಗ್ದ ನಗೆ
ಮಹಾಮಹಿಮರ ಸ್ನಿಗ್ಧ ನಗೆ
ಭಗವದ್ಗೀತೆಯ ಬೋಧಕ ಶ್ರೀ ಕೃಷ್ಣನ ಮನಮೋಹಕ ನಗೆ
ವಿಶ್ವ ಸುಂದರಿಯರ ಸೋಗಿನ ಸೊಬಗು ಬಿನ್ನಾಣ ವೈಭವದ ನಗೆ
ರಾಜಕಾರಣಿಯರ ದೇಶಾವರಿ ನಗೆ ಭ್ರಷ್ಟರ,ದುಷ್ಟರ ವಿಕಟ ನಗೆ
ಸಿ.ಬಿ.ಐ ಗೆ ಸೆರೆ ಸಿಕ್ಕವರು ಹೊಮ್ಮಿಸುವ ಹುಸಿ ನಗೆ,
ಮಹಾತ್ಮರಾಗಿ ಹುತಾತ್ಮರಾದ ಗಾಂಧೀಜಿಯ ಬೊಚ್ಚುಬಾಯಿ ನಗೆ
ಬಿಚ್ಚು ಮನಸಿನ ನೇರ ನಡೆಗಳವರ ಹೃತ್ಪೂರ್ವಕ ನಗೆ.
 
ಬಡವರ ಬವಣೆಗೆ ದೀನರ ಮೊರೆಗೆ ಕರುಣಾಳು ದೈನ್ಯವೆತ್ತ ನಗೆ
ಹಾಸ್ಯದ ನಗೆ,ಪ್ರಾಯ ಹೆಚ್ಚಿಸೊ ನಗೆ
ಜೀವ ತುಂಬುವ ನಗೆ ಯಾರಿಗೆ ಬೇಕಿಲ್ಲ
ಎಲ್ಲ ಬಲವಂತದ ನಗೆ,ಕೃತಕ-ಕುಹಕ ನಗೆ ಯಾರಿಗೆ ತಿಳಿದಿಲ್ಲ!

ದೇಶ ಹೇಗಿದೆ ನೋಡಿ
ನಾವು ಬೆಳೆಸಿದ ಹಾಗೆ
ದುಡಿಮೆ ದಕ್ಕಿದೆ ಬನ್ನಿ ನಮ್ಮ ನಿಯತ್ತಿನ ಹಾಗೇ.
ಜನ ಹೇಳುತ್ತಾರೆ ಕೇಳಿ;ಕೆಲವೊಮ್ಮೆ ಎಲ್ಲ ಮನಸ್ಸಿನ ಹಾಗೇ
ದಿನ ಬೆಳಗುತ್ತದೆ ನೋಡಿ ನಾವು ಚಿಂತಿಸುವ ಹಾಗೇ.
 
ಜನ ಬದಲಾಗುತ್ತಲೇ ಇರುತ್ತಾರೆ ಬಿಡಿ
ವ್ಯೆಥೆ ಮರೆತು ಮತ್ತೆ ನಗುವ ಹಾಗೇ...

-ರೈಟರ್ ಶಿವರಾಂ 

(“ಅಪರಂಜಿ”ನಗೆ ಮಾಸ ಪತ್ರಿಕೆಯಲ್ಲಿ ಪ್ರಕಟಿತ ಮತ್ತು ನನ್ನ “ಮಾರ್ದನಿ” ಕವನ ಸಂಕಲನದಿಂದ  ಆಯ್ದ ಕವನ)
-ರೈಟರ್ ಶಿವರಾಂ