ನಾವು ಪ್ರತಿಭಟಿಸುವುದಿಲ್ಲ ಸ್ವಾಮಿ..
ಏನೇ ಬರಲಿ ಒಗ್ಗಟ್ಟಿರಲಿ ಎಂದವರಾರೂ
ಒಮ್ಮತದಿಂದಿಲ್ಲ ಇಲ್ಲಿ
ತಮ್ಮೊಳಗಿನ ಪ್ರತಿಷ್ಠೆಯ ಅಮಲು ಪರಾಕಾಷ್ಠೆಯನ್ನು
ತಲುಪಿ ತಾಂಡವವಾಡುವಾಗ.
ಗೃಹಿಣಿಯೊಬ್ಬಳ ತಾಳಿಯನು ಪರೀಕ್ಷೆಗಾಗಿ ತೆಗೆಸೋ
ವ್ಯವಸ್ಥೆಯಲಿ ನಾವು ಮೌನವಾಗಿದ್ದೇವೆ
ಅವಳು ನಮ್ಮ ಕುಲವೇ? ಜಾತಿಯೇ? ಧರ್ಮವೇ?
ಅವರವರು ನೋಡಿಕೊಳ್ಳಲಿ ಬಿಡಿ ನಮಗೇಕೆ
ಮುಟ್ಟಾದ ಮಹಿಳೆಯನು ಹೊರಗಿಟ್ಟ ಸಮಾಜ
ಸಮರ್ಥಿಸುವ ಮನುವಾದವನು ಉಳಿಸಿಕೊಂಡಿದೆ
ಜನಿವಾರ ಜಗಳದಲಿ ತಲ್ಲೀನರಾದ ಜನಮಂದೆ
ಹಿಜಾಬಿನ ಅಸ್ಮಿತೆಯ ಕತ್ತು ಹಿಸುಕಿದೆ..
ರಾಜಕೀಯ ಬೇಳೆಯನು ಬೇಯಿಸುತ್ತಿಲ್ಲ ಇಲ್ಲಿ
ನಮ್ಮನ್ನೇ ಕಾಲಕ್ಕೆ ತಕ್ಕಂತೆ ಬೇಯಿಸುತ್ತಿದೆ
ಬುದ್ಧಿವಂತರು ನಾವು ಪಕ್ಕದವ ಸಾಯಲು
ಕಡ್ಡಿ ಹಚ್ಚುತ್ತಿದ್ದೇವೆ, ನಾವೂ ಬೇಯುವುದರ ಜೊತೆಗೆ
ಒಡೆದು ಆಳುವ ನೀತಿಯೇ ಬ್ರಿಟಿಷರುಳಿಸಿದ ಬಳುವಳಿ
ಪ್ರತಿಭಟಿಸುವುದಿಲ್ಲ ಸ್ವಾಮಿ ನಾವು ನಡೆದರೆಷ್ಟೋ ಚಳುವಳಿ
ಪರಕೀಯ ಮನೋಭಾವ ಹೆಮ್ಮರವೇ ಆಗಿರಲು
ಬಾಗಿಸುವುದಾದರೂ ಹೇಗೆ ವರ್ಣಗಳು ಭಾಗಿಸಿರುವಾಗ..
ಇನ್ನೆಷ್ಟು ಪುಲ್ವಾಮ? ಮತ್ತೆಷ್ಟು ಪಹಾಲ್ಗಮ?
ಗುಜರಾತ ನರಮೇಧ, ಮುಂಬೈನ ದಾಳಿ
ಕೊಲೆಗಡುಕರೆಲ್ಲರಿಗೆ ಅಂತ್ಯವನು ಕೊಡುವವರೇ
ಜಾತಿ ಧರ್ಮವನು ಗುಣಿಸಿ ಭಾಗಿಸುವಾಗ
ನಾವು ಮೂಕ ಪ್ರೇಕ್ಷಕರಷ್ಟೇ ಸ್ವಾಮಿ.. ಪ್ರತಿಭಟಿಸುವುದಿಲ್ಲ..
-ಶಮೀರ್ ನಂದಿಬೆಟ್ಟ..(ಸನಂ..)
ಚಿತ್ರ ಕೃಪೆ: ಇಂಟರ್ನೆಟ್ ತಾಣ
