ನಾವು ಬಿಟ್ಟರೂ ನಮ್ಮನ್ನು ಬಿಡದು ತಂತ್ರಜ್ಞಾನ

ನಾವು ಬಿಟ್ಟರೂ ನಮ್ಮನ್ನು ಬಿಡದು ತಂತ್ರಜ್ಞಾನ

ಮಂಗಳೂರಿನ ಬಳಿ ಅದೊಂದು ಸಣ್ಣ ಊರು. ಅಲ್ಲಿಯ ಹಿರಿಯ ವೈದ್ಯರೊಬ್ಬರು ರೈತರೂ ಹೌದು. ಅವರು ತಮ್ಮ ತೋಟ, ಗದ್ದೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಹಲವು ವರ್ಷಗಳಿಂದ ಅವರಿಗೆ ನಗರದ ಜೀವನದೊಂದಿಗೆ ಸಂಪರ್ಕವೂ ಹೆಚ್ಚಿಲ್ಲ. ಹೀಗಿದ್ದೂ ತಂತ್ರಜ್ಞಾನ ಜಗತ್ತಿನ ಆಗುಹೋಗುಗಳ ಕುರಿತು, ಹೊಸ ಆವಿಷ್ಕಾರಗಳ ಕುರಿತು ಸದಾ ಓದುತ್ತಿರುತ್ತಾರೆ. ಒಮ್ಮೆ ಅವರನ್ನು ಭೇಟಿಯಾದಾಗ ತಂತ್ರಜ್ಞಾನ ಕುರಿತು ಅವರು ಕೇಳಿದ ಪ್ರಶ್ನೆಯೊಂದಕ್ಕೆ ನನಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಸ್ವತಃ ತಂತ್ರಜ್ಞನಾದ ನಾನು ಆ ವಿಷಯದ ಬಗ್ಗೆ ಓದಿಕೊಂಡಿರಲಿಲ್ಲ. ಅಷ್ಟು ಗಾಢವಾದ ಓದು ಅವರದ್ದು; 
ಅಮೇರಿಕದ ಗೆಳೆಯ ಕ್ಯಾರಿಗೆ ಈಗ ಎಪ್ಪತ್ತರ ವಯಸ್ಸು. ಆದರೂ ಹೊಸ ತಂತ್ರಜ್ಞಾನವೆಂದರೆ ಸಣ್ಣ ಮಕ್ಕಳಿಗಿರುವಷ್ಟು ಕುತೂಹಲ ಅವರಿಗೆ. ಲ್ಯಾಪ್ಟಾಪು ಹಿಡಿದು ಕೂತರೆ ನನಗಿಂತ ಚುರುಕಾಗಿ ಕೆಲಸ ಮಾಡುತ್ತಾರೆ. ಪ್ರವಾಸ ಹೊರಟರೆ ಒಂದು ಬ್ಯಾಗಿನ ತುಂಬ ಗ್ಯಾಜೆಟ್ಟುಗಳು. ಈ ರೀತಿಯ ಮತ್ತಷ್ಟು ನಿದರ್ಶನಗಳು ನಮಗೆ ಸಿಗಬಹುದು. ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ವಯಸ್ಸಿನ ಮಿತಿಯಿಲ್ಲ. ಆದರೆ ತಂತ್ರಜ್ಞಾನ ಬಳಕೆಯ ಕುರಿತು ವಯಸ್ಸಿನಲ್ಲಿ ನಮಗಿಂತ ಹಿರಿಯರಾದವರೊಂದಿಗೆ ಮಾತನಾಡುವಾಗ  ಸಾಮಾನ್ಯವಾಗಿ “ನಮಗೆ ವಯಸ್ಸಾಯಿತು - ನಿಮ್ಮಂತೆ ಗ್ಯಾಜೆಟ್ಟುಗಳನ್ನು ಬಳಸಲು ನಮಗೆ ಆಗದು” ಎಂದೇ ಕೇಳಿಬರುವುದು. ಹೌದಲ್ಲ, ಅವರಿಗೆ ಅದೆಲ್ಲ ತಲೆಗೆ ಹೋಗುವುದಿಲ್ಲ ಎಂದುಕೊಂಡು ನಾವುಗಳೂ ಬಹುಶಃ ಸುಮ್ಮನಾದೇವು. ಆದರೆ ವಯಸ್ಸಿಗೂ ಇದಕ್ಕೂ ಸಂಬಂಧವಿಲ್ಲ. ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು, ಹೊಸತನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ವಯಸ್ಸು ಅಡ್ಡ ಬರಬೇಕಿಲ್ಲ. ಕಲಿಯಲು ಆಸಕ್ತಿ ಇರಬೇಕು, ಅಳವಡಿಸಿಕೊಳ್ಳಲು ಮನಸ್ಸಿರಬೇಕು. ತಂತ್ರಜ್ಞಾನದ ಬಗ್ಗೆ ಉತ್ಸಾಹವಿಲ್ಲದಿದ್ದರೆ ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟ. 
 
ಈಗಿನ ದಿನಗಳಲ್ಲಿ ತಂತ್ರಜ್ಞಾನವಿಲ್ಲದ, ಗ್ಯಾಜೆಟ್ಟುಗಳಿಲ್ಲದ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ. ದಿನನಿತ್ಯ ಎದುರಾಗುವ ಎಷ್ಟೋ ಸಮಸ್ಯೆಗಳಿಗೆ ತಂತ್ರಜ್ಞಾನ ಪರಿಹಾರ ನೀಡಬಲ್ಲುದು. ಸ್ವತಃ ನನಗೆ ಎದುರಾಗುತ್ತಿದ್ದ ಒಂದು ಸಮಸ್ಯೆ - ಮುಖ್ಯವಾದದ್ದನ್ನು ಬರೆದಿಟ್ಟುಕೊಳ್ಳುವುದು. ಬಹಳ ವರ್ಷಗಳ ಹಿಂದೆ ನೆನಪಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳನ್ನು ನಾನು ಚೀಟಿಗಳಲ್ಲಿ ಬರೆದಿಡುತ್ತಿದ್ದೆ. ಅಥವ ಡೈರಿಯಲ್ಲಿ ಗೀಚಿ ಇಟ್ಟುಕೊಳ್ಳುತ್ತಿದ್ದೆ. ಚೀಟಿಗಳು ಕಳೆದು ಹೋದುವೆಂದರೆ ಅವುಗಳ ಜೊತೆಗೆ ನಾನು ನೆನಪಿಟ್ಟುಕೊಳ್ಳಬೇಕಿದ್ದ ಎಷ್ಟೋ ವಿಷಯಗಳೂ ಚೀಟಿಗಳೊಂದಿಗೇ ಮಾಯವಾಗುತ್ತಿದ್ದವು. ಇನ್ನು ಡೈರಿಯಲ್ಲಿ ಗೀಚಿಟ್ಟುಕೊಂಡಿದ್ದನ್ನು ಹುಡುಕಲು ಹರಸಾಹಸ ಮಾಡಬೇಕಿತ್ತು. ಈಗ ಮೊಬೈಲಿನಲ್ಲಿ ನೋಟ್ ಮಾಡಿಟ್ಟುಕೊಂಡರೆ ಅಥವ ಲ್ಯಾಪ್ಟಾಪಿನಲ್ಲೋ, ಐಪ್ಯಾಡಿನಲ್ಲೋ ಬರೆದಿಟ್ಟುಕೊಂಡರೆ ನಾನು ಬಳಸುವ ಎಲ್ಲ ಡಿವೈಸುಗಳಲ್ಲಿ ಕೆಲವೇ ನಿಮಿಷಗಳಲ್ಲಿ ಸಿಗುತ್ತದೆ. ಬರೆದಿಟ್ಟುಕೊಂಡದ್ದನ್ನು ತಲುಪಲು ಅಷ್ಟರ ಮಟ್ಟಿಗೆ ತಂತ್ರಜ್ಞಾನ ಸುಲಭವಾಗಿಸಿದೆ. “ಹಾಗಾದರೆ ನೀವು ಬರೆದಿಟ್ಟುಕೊಂಡದ್ದು ಬೇರೆಯವರ ಕೈ ಸೇರಿದರೆ ಏನು ಮಾಡುವುದು?” ಬೇರೆಯವರ ಕೈ ಸೇರದಂತೆ ಮೊಬೈಲಿಗೆ, ಐಪ್ಯಾಡಿಗೆ, ಲ್ಯಾಪ್ಟಾಪಿಗೆ ಪಾಸ್ವರ್ಡ್ ಹಾಕಿಟ್ಟುಕೊಳ್ಳಬೇಕು. “ಸರಿ, ಇದೆಲ್ಲ ಮಾಹಿತಿ ಕ್ಲೌಡ್ ಎಂಬ ತಂತ್ರಜ್ಞಾನದಲ್ಲಿ ಹೋಗಿ ಕುಳಿತಿರುತ್ತದೆ ಎಂದು ಕೇಳಿದ್ದೆವು. ಅಲ್ಲಿ ನಮ್ಮ ವೈಯಕ್ತಿಕ ಮಾಹಿತಿ ಹಾಕುವುದು ಸುರಕ್ಷಿತವೋ ಅಲ್ಲವೋ?” - ಕ್ಲೌಡ್ ಸ್ಟೋರೇಜಿನಲ್ಲಿ ಕುಳಿತಿರುವ ಮಾಹಿತಿಯನ್ನು ಅಲ್ಲಿಗೆ ಕಳುಹಿಸುವಾಗ ಹಾಗು ತಿರುಗಿ ನಿಮ್ಮ ಮೊಬೈಲಿನ ಪರದೆಯ ಮೇಲೋ ಅಥವ ಐಪ್ಯಾಡಿನ ಪರದೆಯ ಮೇಲೋ ತೋರಿಸಲು ವಾಪಸ್ ಪಡೆಯುತ್ತಿರುವಾಗ ಆಗುವ ಮಾಹಿತಿಯ ವರ್ಗಾವಣೆ ಗುಪ್ತ ಸಂದೇಶಗಳಂತೆ ಇಂಟರ್ನೆಟ್ ಮೂಲಕ ಹಾದು ಹೋಗುತ್ತದೆ. ವಾಟ್ಸಾಪ್ ಬಳಸುವವರು ಒಬ್ಬರಿಗೊಬ್ಬರು ಸಂದೇಶವನ್ನು ಕಳುಹಿಸುವಾಗ ಕೂಡ ಮಾಹಿತಿ ಸಂಚಲನ ಇದೇ ರೀತಿ ಇರುತ್ತದೆ. ನೀವು ಬಳಸುವ ಯಾವುದೇ ಆಪ್ ಅಥವ ಅಪ್ಲಿಕೇಶನ್ ಇರಬಹುದು - ಪಾಸ್ವರ್ಡ್ ಭದ್ರವಾಗಿರಬೇಕು. ಬೇರೆಲ್ಲೋ ಬಳಸಿದ ಪಾಸ್ವರ್ಡ್ ಇಲ್ಲಿ ಬಳಕೆಯಾಗಕೂಡದು. ಮತ್ತೊಂದು ವಿಷಯ - ಆಗಾಗ ನಿಮ್ಮನ್ನು ಬೇಸ್ತು ಬೀಳಿಸಿ ನಿಮ್ಮ ಪಾಸ್ವರ್ಡ್ ಕೊಳ್ಳೆ ಹೊಡೆಯಲು ಬರುವ ಫೋನ್ ಕಾಲ್, ಇ-ಮೇಯ್ಲುಗಳು, ಎಸ್ ಎಂ ಎಸ್ಸುಗಳ ಬಗ್ಗೆ ಎಚ್ಚರದಿಂದಿರಬೇಕು. ಇದನ್ನೆಲ್ಲ ಕೇಳಿದರೆ “ಅಬ್ಬಾ, ಇಷ್ಟೆಲ್ಲ ತಲೆನೋವು ಬೇಡವೇ ಬೇಡ. ಒಂದು ಪೇಪರ್ ಹಾಗು ಪೆನ್ನು ಹಿಡಿದು ಬರೆದಿಟ್ಟುಕೊಳ್ಳುತ್ತೇನೆ ಸಾಕು” ಎನಿಸಬಹುದು. ಹಾಗೆನಿಸುವುದು ಸಹಜ ಕೂಡ. ನಿತ್ಯಜೀವನದಲ್ಲಿ ತಂತ್ರಜ್ಞಾನ ಬಳಕೆಗೆ ಇದೊಂದು ಉದಾಹರಣೆ ಅಷ್ಟೆ. ಪೆನ್ನು ಪೇಪರ್ ಬಳಸಿ ನೋಟ್ ಮಾಡಿಟ್ಟುಕೊಳ್ಳುವುದು ಈಗಲೂ ಸುಲಭವೇ. ಆದರೆ ಡಿಜಿಟಲ್ ಆವೃತ್ತಿಯಲ್ಲಿ ಬರೆದಿಟ್ಟುಕೊಂಡರೆ ಸೌಕರ್ಯ ಹೆಚ್ಚು, ಬರೆದಿಟ್ಟುಕೊಂಡದ್ದನ್ನು ಹುಡುಕುವುದು ಸುಲಭ. ಹಾಗಿದ್ದ ಮಾತ್ರಕ್ಕೆ ಅದನ್ನು ಬಳಸಲೇಬೇಕೆಂದಿಲ್ಲ. ಆದರೆ ತಂತ್ರಜ್ಞಾನ ಬಳಸದೇ ಹೋದರೆ ಕಾಲಕ್ರಮೇಣ ನಾವು ಈ ಹೊಸತುಗಳಿಂದ, ಸೌಕರ್ಯಗಳಿಂದ ಸಾಕಷ್ಟು ದೂರ ಉಳಿದುಬಿಡುತ್ತೇವೆ. ಇದರ ಪರಿಣಾಮ ನಮ್ಮ ಮೇಲೆ ಬೇರೆ ಬೇರೆ ರೀತಿಯಲ್ಲಿ ಆಗಬಹುದು. 
 
ಇತ್ತೀಚೆಗೆ ಸುದ್ದಿಯಲ್ಲಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ಮತ್ತು ನೀರವ್ ಮೋದಿಯ ಸನ್ನಿವೇಶ ತೆಗೆದುಕೊಳ್ಳಿ. ಹಣಕಾಸು ಸಂಸ್ಥೆಗಳ ನಡುವೆ ಸಂವಹನಕ್ಕೆ ಬೇಕಾದ ನೆಟ್ವರ್ಕ್ ಒದಗಿಸುವ ಸಂಸ್ಥೆಯ ಹೆಸರು ‘ಸ್ವಿಫ್ಟ್’ (SWIFT). ಸ್ವತಃ ಸ್ವಿಫ್ಟ್ ಯಾವುದೇ ಹಣಕಾಸಿನ ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಿಲ್ಲ. ಆದರೆ ಅಂತರರಾಷ್ಟ್ರೀಯ ಸಂಸ್ಥೆಗಳ ನಡುವೆ ಹಣ ಪಾವತಿಯ ಆದೇಶಗಳನ್ನು, ಬ್ಯಾಂಕಿಂಗ್ ವಹಿವಾಟುಗಳನ್ನು ಪರಸ್ಪರ ವಿನಿಮಯ ಮಾಡಲು ಬೇಕಿರುವ ತಂತ್ರಜ್ಞಾನವನ್ನು, ವ್ಯವಸ್ಥೆಯನ್ನು ಈ ಸಂಸ್ಥೆ ಒದಗಿಸಿದೆ.  ಭಾರತದ ಬಹುಪಾಲು ಖಾಸಗಿ ಬ್ಯಾಂಕುಗಳು ಸ್ವಿಫ್ಟ್ ವ್ಯವಸ್ಥೆಯನ್ನು ತಮ್ಮ ಬ್ಯಾಂಕಿಂಗ್ ತಂತ್ರಾಂಶಗಳಲ್ಲಿ ಅಳವಡಿಸಿಕೊಂಡಿವೆ. ಹೊಸ ತಂತ್ರಜ್ಞಾನ ಬಂದಾಗ ಅದನ್ನು ಅಳವಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದ ಸಾರ್ವಜನಿಕ ವಲಯದ ಬ್ಯಾಂಕುಗಳು “ಸ್ವಿಫ್ಟ್” ಬಳಸಿ ನಡೆಸಿದ ಸಂವಹನವನ್ನು ಈಗಲೂ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿವೆಯಂತೆ. ಪಂಜಾಬ್ ನ್ಯಾಶನಲ್ ಬ್ಯಾಂಕಿನಲ್ಲೂ ಅದನ್ನು ಹೀಗೆಯೇ ಪುಸ್ತಕದಲ್ಲಿ ಬರೆದಿಟ್ಟುಕೊಂಡದ್ದು. ತಂತ್ರಜ್ಞಾನ ಬಳಸಿದ್ದರೆ ಆ ಮಾಹಿತಿ ಬ್ಯಾಂಕಿನ ತಂತ್ರಾಂಶಕ್ಕೆ ತಂತಾನೆ ಸೇರ್ಪಡೆಯಾಗಿಬಿಡುತ್ತಿತ್ತು. ಹೀಗೆ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟುಗಳನ್ನು ಕಣ್ತಪ್ಪಿಸಿ ಮಾಡುವುದು ಸಾಧ್ಯವಾಗುತ್ತಿರಲಿಲ್ಲ.  
 
ತಂತ್ರಜ್ಞಾನವನ್ನು ನಾವು ಬಿಟ್ಟರೂ ಅದು ನಮ್ಮ ಬೆನ್ನು ಬಿಡುವುದಿಲ್ಲ. ಸ್ಮಾರ್ಟ್ ಫೋನ್ ಒಲ್ಲೆ ಎನ್ನುತ್ತಿದ್ದ ಹಿರಿಯರು ಈಗ ವಾಟ್ಸಾಪಿನಲ್ಲಿ ಎಲ್ಲರಿಗಿಂತ ಹೆಚ್ಚಿನ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಫೇಸ್ಬುಕ್ ನಮಗಲ್ಲ ಎನ್ನುತ್ತಿದ್ದವರು ಪ್ರತಿ ನಿತ್ಯ ದೇವರಿಗೆ ಹೂ ತಪ್ಪಿಸಿದರೂ ಫೇಸ್ಬುಕ್ ತಿರುವಿಹಾಕುವುದನ್ನು ಮರೆಯುವುದಿಲ್ಲ. ಮಕ್ಕಳಿಗೆ ಹೊಸತುಗಳ ಬಗ್ಗೆ ಇರುವ ಸಹಜ ಕುತೂಹಲ ವಯಸ್ಸಾದವರಿಗೆ ಇಲ್ಲದಿದ್ದರೇನು, ಬೆನ್ನು ಬಿಡದ ಬೇತಾಳದಂತೆ ತಂತ್ರಜ್ಞಾನ ತಲೆಗೇರಿದಾಗ ಬಳಸಲು ಯಾವುದೇ ಅಡೆತಡೆಗಳು ಕಾಣವು. ಟಿ ವಿ ಒಲ್ಲೆಯೆಂದ ಅಜ್ಜಿಯಂದಿರು ಈಗ ಮಧ್ಯಾಹ್ನ ಆಯಿತೆಂದರೆ ರಿಮೋಟ್ ಹಿಡಿದು ಕೂತಿರುತ್ತಾರೆ. ರಿಮೋಟಿನಲ್ಲಿರುವ ಎಲ್ಲ ಬಟನ್ನುಗಳ ಬಗ್ಗೆ ಅವರು ತಿಳಿದುಕೊಳ್ಳುವ ಗೋಜಿಗೆ ಹೋಗದಿದ್ದರೂ ಟಿ ವಿ ಆನ್ ಮಾಡುವುದು ಹೇಗೆ? ಚ್ಯಾನಲ್ ಬದಲಾಯಿಸುವುದು ಹೇಗೆ ಎನ್ನುವುದನ್ನು ತಿಳಿದುಕೊಂಡಿರುತ್ತಾರೆ. ಅಜ್ಜಿ ಅಜ್ಜಂದಿರು ವಾಟ್ಸಾಪಿನಲ್ಲಿ ಮಕ್ಕಳ ಕ್ಷೇಮ ವಿಚಾರಿಸುತ್ತಾರೆ. ತಾವು ಹೋಗಿ ಬಂದ ತೀರ್ಥ ಯಾತ್ರೆಗಳ ಫೋಟೋಗಳನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲಿ ತೆಗೆದ ವೀಡಿಯೋಗಳನ್ನು ಫೇಸ್ಬುಕ್ಕಿನಲ್ಲಿ ನೇರ ಪ್ರಸಾರ ಮಾಡುತ್ತಾರೆ. ಅಥವ ಮನೆಯಲ್ಲೇ ಕುಳಿತು ದೂರದ ಊರಲ್ಲಿ ನಡೆದ ಪೂಜೆ ಪುನಸ್ಕಾರಗಳನ್ನು ನೋಡುತ್ತ “ಧನ್ಯರಾದೆವು” ಎನ್ನುತ್ತಾರೆ. ಅವರವರಿಗೆ ಉತ್ಸಾಹವಿರುವ ಅಯಾ ವಿಷಯಗಳು ಈಗ ತಂತ್ರಜ್ಞಾನದ ಮೂಲಕ ತಲುಪುತ್ತಿವೆ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಒಲ್ಲೆ ಎಂದವರನ್ನು ತಂತ್ರಜ್ಞಾನ ಅಳವಡಿಸಿಕೊಂಡುಬಿಟ್ಟಿದೆ.