ನಾವು ಮೂರ್ಖರೇ ಅಥವಾ ಅವರು ಬುದ್ದಿವಂತರೇ ?

ನಾವು ಮೂರ್ಖರೇ ಅಥವಾ ಅವರು ಬುದ್ದಿವಂತರೇ ?

ಸ್ವಲ್ಪ ಖಾರವಾಗಿ ಯೋಚಿಸಿ ನೋಡಿ. ಎಂತಹ ಅನಾಗರಿಕ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬ ಅರಿವಾಗಬಹುದು. ಗೊತ್ತೇನ್ರೀ ನಿಮಗೆ ? ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ಬಾರಿ ರಾಜ್ಯದ ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗುತ್ತದೆ ಎಂದು. ಗೊತ್ತೇನ್ರೀ ನಿಮಗೆ?

ಈ ರಾಜ್ಯದಲ್ಲಿ, ಒಂದು ವರ್ಷದಲ್ಲಿ, ಯಾವ ಯಾವ ಪ್ರದೇಶದಲ್ಲಿ, ಜನ ಯಾವ ಯಾವ ಹಣ್ಣು ತರಕಾರಿ ಸೊಪ್ಪು ಬೇಳೆಕಾಳುಗಳು ಮುಂತಾದ ಆಹಾರ ಪದಾರ್ಥಗಳನ್ನು ಎಷ್ಟು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ ಅಂತ. ಗೊತ್ತೇನ್ರೀ ನಿಮಗೆ?

ಯಾವ ಯಾವ ಬೆಳೆ ಬೆಳೆಯಲು ಎಷ್ಟು ಹಣ ಬೇಕು, ಎಷ್ಟು ಮಾನವ ಸಂಪನ್ಮೂಲ ಬೇಕು, ಎಷ್ಟು ರಸಗೊಬ್ಬರ ಬೇಕು, ಎಷ್ಟು ಮುಂಜಾಗ್ರತೆಯ ಕ್ರಮ ಕೈಗೊಳ್ಳಬೇಕು ಎಂದು. ಗೊತ್ತೇನ್ರೀ ನಿಮಗೆ? ಫಸಲು ಬಂದ ಮೇಲೆ ಅದನ್ನು ಎಲ್ಲಿ ಮಾರಬೇಕು, ಹೇಗೆ ಮಾರಬೇಕು, ಯಾವ ಬೆಲೆಗೆ ಮಾರಬೇಕು, ಯಾವ ಸಾರಿಗೆ ಉಪಯೋಗಿಸಬೇಕು ಅಂತ. ಗೊತ್ತೇನ್ರೀ ನಿಮಗೆ?

ಫಸಲಿನಿಂದ ನಷ್ಟ ಉಂಟಾದರೆ ಅದರ ಪರಿಣಾಮ ಹೇಗೆ ಎದುರಿಸಬೇಕು/ ಲಾಭ ಬಂದರೆ ಅದು ಯಾವ ರೀತಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು. ಗೊತ್ತೇನ್ರೀ ನಿಮಗೆ? ಇಳುವರಿ ಹೆಚ್ಚಾಗಿ ಬೇಡಿಕೆ ಕಡಿಮೆಯಾದರೆ ಎಲ್ಲಿಗೆ ರಪ್ತು ಮಾಡಬೇಕು. ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆಯಾದರೆ ಹೇಗೆ ರೈತರು ಗ್ರಾಹಕರಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಬೇಕು ಅಂತ. ಖಂಡಿತ ಸರಿಯಾಗಿ ಗೊತ್ತಿಲ್ಲ. ಏನೋ ಒಂದು ಕಾಟಾಚಾರದ ಅವಾಸ್ತವಿಕ ಸರ್ಕಾರಿ ಅಂಕಿಅಂಶಗಳ ಲೆಕ್ಕ ಕೊಡುತ್ತಾರೆ. ಬೇಕಾದರೆ ಈ ಲೆಕ್ಕ ಕೇಳಿ, ಎಷ್ಟು ಖಚಿತವಾಗಿ ಹೇಳುತ್ತಾರೆ.

ರಾಜ್ಯದ ಪ್ರತಿ ಚುನಾವಣಾ ಕ್ಷೇತ್ರಗಳಲ್ಲಿ ಒಕ್ಕಲಿಗರು/ಕುರುಬರು/ದಲಿತರು/ಲಿಂಗಾಯತ - ವೀರಶೈವರು/ ಬ್ರಾಹ್ಮಣರು/ ಹಿಂದುಳಿದ ವರ್ಗದವರು/ ಮುಸ್ಲೀಮರು/ಕ್ರಿಶ್ಚಿಯನ್ ಮುಂತಾದ ಪ್ರತಿ ಜಾತಿ ಧರ್ಮದ ಮತದಾರರ ಸಂಖ್ಯೆಯನ್ನು ಛೇ..

ಕೋಟ್ಯಾಂತರ ಹಣ ಖರ್ಚು ಮಾಡಿ ಎಲ್ಲಾ ಪಕ್ಷಗಳು ಪ್ರತಿ ವಿಧಾನಸಭಾ/ಲೋಕಸಭಾ ಕ್ಷೇತ್ರದ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಸರ್ವೆ ಮಾಡಿಸುವುದೇನು, ಸಮೀಕ್ಷೆ/ಚುಟುಕು ಮತದಾನ ಮಾಡಿಸುವುದೇನು, ಅಭಿಪ್ರಾಯಗಳನ್ನು ಕೇಳುವುದೇನು? ಅದೇ ಹಣದಲ್ಲಿ ಆ ಕ್ಷೇತ್ರದ ಸಮಸ್ಯೆಗಳು ಮತ್ತು ಅದರ ನಿವಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಂದಾದರೂ ಸರ್ವೆ ಮಾಡಿಸಿದ್ದಾರಾ?

ಕಲ್ಲಿನ ಮೂರ್ತಿಗಳ ದೇವಸ್ಥಾನಗಳು ಬಿಡಿ, ರಾಜ್ಯದ ಒಂದೇ ಒಂದು ಮಠ ಚರ್ಚು ಮಸೀದಿ ಈ ದುಷ್ಟ - ಭ್ರಷ್ಟ ರಾಜಕಾರಣಿಗಳಿಗೆ ನಮ್ಮಲ್ಲಿ ಪ್ರವೇಶವಿಲ್ಲ. ಕೇವಲ ಸಾಮಾನ್ಯ ಭಕ್ತರು ಮಾತ್ರ ಬರಲಿ. ಮತದಾನ ಆಯಾ ವ್ಯಕ್ತಿಗಳ ಸ್ವಾತಂತ್ರ್ಯ. ಅದನ್ನು ಯಾರಿಗೆ ಬೇಕಾದರೂ ಚಲಾಯಿಸಲಿ. ಸಂಕಷ್ಟದ ಜನರ ಸೇವೆ ಮಾತ್ರ ನಮ್ಮ ಉದ್ದೇಶ ಎಂದು ಬಹಿರಂಗವಾಗಿ ಹೇಳಲಿಲ್ಲ. ಒಂದೇ ಒಂದು ಮಾಧ್ಯಮ, ಕೃಷಿ, ಆಹಾರ ಕಲಬೆರಕೆ, ಪರಿಸರ ನಾಶ, ಹದಗೆಡುತ್ತಿರುವ ಜನರ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಮತ್ತು ಚರ್ಚೆ ನೀಡುತ್ತಿಲ್ಲ.

ಚುನಾವಣೆ ಎಂದರೆ ಯುದ್ಧ ಕುರುಕ್ಷೇತ್ರ ಮಹಾಭಾರತ ಅಖಾಡ ತಂತ್ರ ಕುತಂತ್ರ ಪ್ರತಿತಂತ್ರ, ಏನಾದರೂ ಮಾಡಿ ಜಯಶಾಲಿಯಾಗು ಎಂಬ ವಿಷಬೀಜವನ್ನು ಬಿತ್ತಿ ಜನರ ಮನಸ್ಸುಗಳನ್ನು ಹಾಳು ಮಾಡುತ್ತಿವೆ. ಕಲುಷಿತ ವಾತಾವರಣದಿಂದ, ತಾಪಮಾನದ ಏರಿಕೆಯಿಂದ ಅನೇಕ ಜನ ಕ್ಯಾನ್ಸರ್, ಆಸ್ತಮಾ, ಕಿಡ್ನಿ ವೈಫಲ್ಯ, ಶ್ವಾಸಕೋಶದ ತೊಂದರೆಯಿಂದ ನರಳುತ್ತಾ ಖಾಸಗಿ ಆಸ್ಪತ್ರೆಯ ದುಬಾರಿ ಖರ್ಚಿಗೆ ಬೆಚ್ಚಿಬಿದ್ದು ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯ ನರಕದಲ್ಲಿ ನರಳುತ್ತಿದ್ದಾರೆ.

ಇತ್ತ ಐಷಾರಾಮಿ ಹೋಟೆಲ್‌ಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ದಿನಗಟ್ಟಲೆ ಮೀಟಿಂಗ್ ಮಾಡುತ್ತಾ, ನಂತರ ಚುನಾವಣೆ ಗೆಲ್ಲಲು ಕೋಟ್ಯಾಂತರ ಹಣ ಖರ್ಚು ಮಾಡಿ ಸಮಾವೇಶಗಳನ್ನು ಮಾಡುತ್ತಾ ಮಜಾ ಮಾಡುತ್ತಿದ್ದಾರೆ. ಚುನಾವಣಾ ಗೆದ್ದ ತಕ್ಷಣ ರಾಜ್ಯವನ್ನು ಇವರಪ್ಪನ ಆಸ್ತಿ ಎಂಬಂತೆ ಅನುಭವಿಸುತ್ತಾರೆ. ಚುನಾವಣೆ ಗೆಲ್ಲಲು ಉಪಯೋಗಿಸುವ ಹಣ ಶ್ರಮದ ಭಾಗದಲ್ಲಿ ಸ್ವಲ್ಪ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದರೆ ನಮ್ಮ ಪರಿಸ್ಥಿತಿ ಎಲ್ಲೋ ಇರುತ್ತಿತ್ತು. ಛೆ... ಛೆ… ಎಂಥಾ ವ್ಯವಸ್ಥೆಯಲ್ಲಿ ನಾವಿದ್ದೇವೆ. ಇದನ್ನು ಒಪ್ಪಿಕೊಂಡು ಸುಮ್ಮನಿರೋಣವೇ ? ಅಥವಾ ಬದಲಾವಣೆಗೆ ಪ್ರಯತ್ನಿಸೋಣವೇ ? ಬದಲಾವಣೆ ಆಗುವುದಾದರೆ ಹೇಗೆ ಎಂಬುದನ್ನು ಯೋಚಿಸುತ್ತಾ....ನಿಮ್ಮೊಂದಿಗೆ....

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ