ನಾವು ಶಾಲೆಗೆ ಹೋಗುವ

ನಾವು ಶಾಲೆಗೆ ಹೋಗುವ

ಬರಹ

ಬಾರೊ, ತಮ್ಮ
ನಾನು-ನೀನು ಶಾಲೆಗೋಗುವಾ
ಅಆಇಈ ಕಲಿತು
ನಾವು ಜಾಣರಾಗುವಾ

ನಾನು ನೀನು
ಎಲ್ಲರು ಸೇರಿ ಆಟವಾಡುವಾ
ಆಟದಲ್ಲೇ ಪಾಠವನ್ನು
ನಾವು ಕಲಿಯುವಾ

ಶಾಲೆಯಿಂದ ಬಂದು
ನಾವು ಹೊಲಕೆ ಹೋಗುವಾ
ಅಪ್ಪ-ಅವ್ವರ ಕೆಲಸದಲ್ಲಿ
ನಾವು ನೆರವು ಆಗುವಾ

ಹೊಲದ ದಾರಿಯಲ್ಲಿ
ಇಹವು ಕವಳಿಗಿಡಗಳು
ಗಿಡವ ಕೊಡವಿ
ಹಣ್ಣುಗಳನ್ನು ಆಯ್ದು ತಿನ್ನುವಾ

ಕಾರೆ ಹಣ್ಣು, ಬಾರೆ ಹಣ್ಣು
ತಿಂದು ಬಿಕ್ಕುವಾ
ನೀರಲಣ್ಣು ತಿಂದು ನಾವು
ನೀರು ಕುಡಿಯುವಾ

ಕಕ್ಕಿ ಹಣ್ಣು ಸಿಕ್ಕರೆ
ಗುಳುಮ್ಮನೆ ನುಂಗುವಾ
ಬುಕ್ಕಿ ಹಣ್ಣು ಸಿಕ್ಕಿದರೆ
ಗಬ-ಗಬ ತಿನ್ನುವಾ

ಹೊತ್ತು ಮುಳುಗೊ ಹೊತ್ತಿಗೇ
ಮನೆಗೆ ಹೋಗುವಾ
ದೀಪ ಮುಡಿಸಿ, ದೇವಿಗೆ ನಮಿಸಿ
ಪಾಠ ಓದುವಾ

ಕಲಿಯ ಬೇಕು ಕಲಿಸಬೇಕು
ನಾವು ವಿದ್ಯೆಯ
ವಿದ್ಯೆ-ಬುದ್ಧಿ ಪಡೆದು
ವಿನಯವಂತರಾಗುವಾ

ಬಾರೊ, ತಮ್ಮ
ನಾನು-ನೀನು ಶಾಲೆಗೋಗುವಾ
ಅಆಇಈ ಕಲಿತು
ನಾವು ಜಾಣರಾಗುವಾ

ಜಯಪ್ರಕಾಶ ನೇ ಶಿವಕವಿ.