ನಾವೆಲ್ಲರೂ ಒಂದೇ ಅಲ್ಲವೇ?

ನಾವೆಲ್ಲರೂ ಒಂದೇ ಅಲ್ಲವೇ?

ಮಗುವು ಪ್ರಶ್ನೆ ಕೇಳಲು ನಾವು ಸಹಕರಿಸುವುದು ಮಗುವಿನ ವ್ಯಕ್ತಿತ್ವ ವಿಕಸನದ ಒಂದು ಮಾರ್ಗ ಎಂದೇ ಹೇಳಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನೊಂದು ಅನುಭವವನ್ನು ಹಂಚಿಕೊಳ್ಳ ಬಯಸುತ್ತೇನೆ.

ಶಾಲೆಯ ಆರಂಭದಲ್ಲಿ, ಪಾಠ ಹೇಳಿಕೊಡುವುದಿರಲಿ, ಪುಸ್ತಕ ಮುಟ್ಟುವುದೇ ಕಷ್ಟ. ಏಕೆಂದರೆ ತರಗತಿಯಲ್ಲಿ ಮಕ್ಕಳ ಅಳುವೆ ವಿಧ ವಿಧದ ವಾದ್ಯಗಳಂತಿರುತ್ತದೆ. ಹೀಗಿರುವಾಗ, ಒಮ್ಮೆ ತರಗತಿಯಲ್ಲಿ ಅಂದು ತಾನೆ ಬಂದ ಮಗುವನ್ನು, ಇಲ್ಲಸಲ್ಲದ ಸುಳ್ಳುಗಳನ್ನೆಲ್ಲಾ ಹೇಳಿ ಸುಮ್ಮನಿರಿಸುವ ಸಾಧನೆ ಮಾಡಿದ್ದೆ. ಅಷ್ಟರಲ್ಲೇ ಒಂದು ಮಗು ಬಂದು ನನ್ನನ್ನು ಪ್ರಶ್ನಿಸಲಾರಂಭಿಸಿತು. "ನೀವು ಅವಳನ್ನ ಮಾತ್ರ ಯಾಕೆ ಮಿಸ್ ತುಂಬಾ ಮುದ್ದು ಮಾಡ್ತಾ ಇದ್ದೀರಾ? ನಮ್ಮನ್ನು ಹಾಗೆ ಮಾಡಿ. ನೀವು ಹೀಗೆ ಭೇದ ಭಾವ ಮಾಡುವುದು ತಪ್ಪು ಅಲ್ವಾ. ಇದು ತುಂಬಾ ಮೋಸ ಅಪ್ಪ" ಎಂದು ತನ್ನ ತೊದಲು ನುಡಿಗಳಲ್ಲೇ ಹೇಳಲಾರಂಬಿಸಿತು. ಆಗ ನಾನು ಹೇಳಿದೆ ಇಲ್ಲ ಪುಟ್ಟ, ಅವಳದು ಇದು ಮೊದಲನೇ ದಿನ ಅಲ್ಲವೇ ಹಾಗಾಗಿ ಸ್ವಲ್ಪ ಜಾಸ್ತಿ ಮುದ್ದು ಮಾಡುತ್ತಿದ್ದೇನೆ ಅಷ್ಟೇ. ಮೊನ್ನೆ ಇಲ್ಲ ನಿನ್ನನ್ನು ಹೀಗೆ ಮುದ್ದು ಮಾಡಿದ್ದೆ ಅಲ್ವಾ ? ಎಂದು ಕೇಳಿದಾಗ. ಇಲ್ಲಪ್ಪ ಆದ್ರೂ ನೀವು ತುಂಬಾ ಮೋಸ ಮಾಡ್ತಿದ್ದೀರಾ ನಮಗೂ ಹಾಗೆ ಮಾಡಿ. ಎಂದು ಅಧಿಕಾರದ ಧ್ವನಿಯಲ್ಲಿ ಕೇಳಿತು. ನಂತರ ನಾನು ಒಳಗೊಳಗೆ ನಕ್ಕು, ಆಯ್ತು ಮಗು ನೀನು ಬಾ ನಿನ್ನನ್ನು ಮುದ್ ಮಾಡ್ತೀನಿ. ಎಂದು ಹತ್ತಿರ ಕರೆದಾಗ ಅದರ ಸಂತೋಷಕ್ಕೆ ಪಾರವೇ ಇರಲಿಲ್ಲ. ನಂತರ ಅವಳ ಮಾತಿನ ವರಸೆಯೇ ಬದಲಾಯಿತು. "ಈಗ ನೀವು ಒಳ್ಳೆ ಮಿಸ್ಸು, ನೀವು ಎಲ್ಲರಿಗೂ ಹೀಗೆ ಮಾಡಬೇಕು. ಈಗ ನೀವು ಗುಡ್ ಮಿಸ್. ಎಂದೆಲ್ಲ ಹೇಳಿ, ತನ್ನ ಕಾರ್ಯವನ್ನು ಸಾಧಿಸಿ ಬಿಟ್ಟಿತು. 

ಮಕ್ಕಳಲ್ಲಿ ಪ್ರಶ್ನೆ ಮಾಡುವ ಗುಣ ಇರಬೇಕು, ಆಗ ಮಾತ್ರ ಅವರು ಹೆಚ್ಚು ಕಲಿಯಲು ಸಾಧ್ಯ. ಮೂರು ವರ್ಷದ ಮಗುವಿನ ಪ್ರಶ್ನೆ ಮಾಡುವ ಧೈರ್ಯಕ್ಕೆ ಮೆಚ್ಚಲೇಬೇಕು. ಪಾಠ ಹೇಳಿಕೊಡುವುದರ ಜೊತೆ ಜೊತೆಯಲಿ, ಇಂತಹ ಬೆಳವಣಿಗೆಗಳಿಗೆ ನೀರೆರೆಯುವುದು ಸಹ ನಮ್ಮ ಕರ್ತವ್ಯವಾಗಿರುತ್ತದೆ. 

-ರಮ್ಯಾ ಆರ್ ಭಟ್, ಕುಂದಾಪುರ.

ಚಿತ್ರ ಕೃಪೆ: ಇಂಟರ್ನೆಟ್ ತಾಣ