ನಾವೆಲ್ಲ ತಾಳ್ಮೆ ಕಳೆದುಕೊಳ್ಳುತ್ತಿದ್ದೇವೆಯೆ ?

ನಾವೆಲ್ಲ ತಾಳ್ಮೆ ಕಳೆದುಕೊಳ್ಳುತ್ತಿದ್ದೇವೆಯೆ ?

ಪ್ರಸಂಗ 1 : ನಮ್ಮ ಭಾಗದ ಒಂದು ಊರಿನಲ್ಲಿ ಕಾರ್ ನಲ್ಲಿ ಹೊರಟಿದ್ದೆ. ಇಬ್ಬರು ಬೈಕ್ ಚಾಲಕರು ಅಕ್ಷರಶ: ಮಧ್ಯ ರಸ್ತೆಯಲ್ಲಿಯೇ ಮಾತನಾಡುತ್ತಾ ಅಕ್ಕಪಕ್ಕ ಹೊರಟಿದ್ದರು. ಕಾರು ಮುಂದೆ ಹೋಗಲು ಜಾಗವೂ ಇರಲಿಲ್ಲವಾದ್ದರಿಂದ ಅವರನ್ನು ಎಚ್ಚರಿಸಲು ಹಾರ್ನ್ ಹಾಕಿದೆ. ಅದರಲ್ಲಿಯೇ ಒಬ್ಬ ತಿರುಗಿ ನೋಡಿ ಬಾಯಿಗೆ ಸಿಕ್ಕಂತೆ ಮಾತನಾಡಿ "ಪಕ್ಕಕ್ಕ ಜಾಗ ಐತಲ್ ಹೋಗ್" ಎಂದ. ಅಲ್ಲಿ ಜಾಗ ಇಲ್ಲವಲ್ಲ ಎಂದರೂ "ಹಾರ್ನ್ ಹಾಕಿದ್ದು ಯಾಕ? " ಎಂದು ನನ್ನನ್ನೇ ದಬಾಯಿಸಿದ. ಇಲ್ಲಿ ಆತ ತಾಳ್ಮೆ ಕಳೆದುಕೊಂಡದ್ದು ಯಾವ ಕಾರಣಕ್ಕೆ ಎನ್ನುವುದೇ ನನಗೆ ಅರ್ಥವಾಗಲಿಲ್ಲ.

ಪ್ರಸಂಗ 2 : ಟೋಲ್ ಒಂದರಲ್ಲಿ ಫಾಸ್ಟ್ ಟ್ಯಾಗ್ ನ ಹಣ ಮುಗಿದದ್ದು ಗೊತ್ತಾಗದೇ ಇದ್ದುದರಿಂದ ಹಣ ಕಟ್ಟುವುದು ಅನಿವಾರ್ಯವಾಗಿತ್ತು. ಹಣ ಕಟ್ಟಿ ರಸೀದಿ ಪಡೆಯುತ್ತಿದ್ದೆ. ಹಿಂದಿನ ಕಾರಿನ ಚಾಲಕ ಒಂದೇ ಸಮನೆ ಹಾರ್ನ್ ಹಾಕುತ್ತಿದ್ದ. ನಾನು ಹಣ ಕಟ್ಟೋದು, ರಸೀದಿ ಪಡೆಯೋದು ನೋಡಿಯೂ ಸಹ ಅವನಿಗೆ ತಾಳ್ಮೆ ಇರಲಿಲ್ಲ. ಇಲ್ಲಿ ಏನು ನಡೀತಿದೆ ಅಂತ ಗೊತ್ತಿದ್ದೂ ಒಂದೇ ಸಮನೆ ಹಾರ್ನ್ ಹಾಕ್ತಾ ಇದ್ದದ್ದು ಯಾಕೆ ಅಂತಾನೇ ಅರ್ಥವಾಗಲಿಲ್ಲ. 

ಪ್ರಸಂಗ 3 : ಫೇಸ್ ಬುಕ್ ನಲ್ಲಿಯೇ ಕೆಟ್ಟ ವ್ಯವಸ್ಥೆಯ ವಿರುದ್ಧ ಹೆಸರಾಂತ ಲೇಖಕರೊಬ್ಬರು ಬರೆದಿದ್ದರು. ಅದು ಅರ್ಥಪೂರ್ಣವೂ ಆಗಿತ್ತು. ಅದಕ್ಕೆ ಲೈಕ್ ಕೊಟ್ಟು, "ಉತ್ತಮವಾದ ಅರ್ಥಪೂರ್ಣ ಬರಹ" ಎಂದೂ ಕಾಮೆಂಟ್ ಮಾಡಿದೆ. ಅವರ ಸ್ನೇಹದ ಗುಂಪಿನಲ್ಲಿಯ ಹಾಗೂ ನನಗೂ ಸ್ನೇಹಿತರಾಗಿದ್ದವರೊಬ್ಬರು ಧೀಡಿರನೆ ನನ್ನ ಕಾಮೆಂಟ್ ಗೆ ಪ್ರತಿಕ್ರಿಯಿಸಿದರು. "ನೀವು ಇಲ್ಲಿ ಕಾಮೆಂಟ್ ಮಾಡಲು ಅರ್ಹರಲ್ಲ. ನೀವು ಈ ರೀತಿ ಒಂದೂ ಪೋಸ್ಟ್ ಮಾಡಿಲ್ಲ. ನಿಮ್ಮ ಬರಹಗಳನ್ನು ನಾನು ನೋಡಿದ್ದೇನೆ" ಎಂದು ಆಕ್ರೋಶದಿಂದೆಂಬಂತೆ ಬರೆದರು. ಇವರ್ಯಾಕೆ ಇಷ್ಟು ತಾಳ್ಮೆ ಕಳೆದುಕೊಂಡಿದ್ದಾರೆಂದು ಅರ್ಥವಾಗದೇ ನಾನು ಸಮಾಧಾನದಿಂದಲೇ ಉತ್ತರಿಸಿದೆ "ನನ್ನ ಕೆಲವೇ ಪೋಸ್ಟ್ ಗಳನ್ನು ನೋಡಿ ನನ್ನ ವ್ಯಕ್ತಿತ್ವವನ್ನು ಅಳೆಯಬೇಡಿ. ಅಷ್ಟಕ್ಕೂ ನೀವು ಹೀಗೇ ಬರೆದು ಪೋಸ್ಟ್ ಮಾಡಬೇಕೆಂಬುದೂ ಸಹ ದಬ್ಬಾಳಿಕೆಯಾಗುತ್ತದೆ" ಎಂದು ಬರೆದೆ. 

ಸಾಮಾಜಿಕ ಜಾಲತಾಣಗಳಲ್ಲಂತೂ ಇಂದು ತಾಳ್ಮೆ ಕಳೆದುಕೊಂಡವರ ಮನಸ್ಥಿತಿ ಮಿತಿಮೀರುತ್ತಿದೆ. ಯಾಕಿಷ್ಟು ಆಕ್ರೋಶ, ದ್ವೇಶ, ಸೇಡಿನ ಮನೋಭಾವನೆ ಗೊತ್ತಾಗುತ್ತಿಲ್ಲ. ಯಾವುದೇ ಸಮಸ್ಯೆಯನ್ನೂ ಮಾತನಾಡಿ, ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ಮನಸ್ಥಿತಿಯನ್ನೇ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತಿದೆ. ಯಾವುದೇ ಮಾತಿಗೂ ನೇರ ದಾಳಿಯಂಥ ಮಾನಸಿಕ ಕಾಯಿಲೆ ಹೆಚ್ಚಾಗುತ್ತಿದೆ. ತೀರಾ ಕೆಳಮಟ್ಟದ ಪದಪ್ರಯೋಗಗಳು, ರಾಜ್ಯ ಬಿಟ್ಟು ಓಡಿಸುವ, ದೇಶ ಬಿಟ್ಟು ಓಡಿಸುವಂಥ ಆಕ್ರೋಶದಿಂದ ಕೂಡಿದ ಬರಹಗಳನ್ನು ನೋಡುತ್ತಿದ್ದೇವೆ. 

ಇಂದು ಯಾವುದೇ ವಿಷಯವನ್ನು ಕುರಿತೂ ಸ್ಪಷ್ಟವಾದ ಅಭಿಪ್ರಾಯ, ಅನಿಸಿಕೆಗಳನ್ನು ವ್ಯಕ್ತಪಡಿಸುವಂತಿಲ್ಲ. ಅಷ್ಟೊಂದು ಅಭಿವ್ಯಕ್ತಿ ಸ್ವಾತಂತ್ರವನ್ನು ಕಿತ್ತುಕೊಳ್ಳಲಾಗುತ್ತಿದೆ. ಜನರ ಮನೋಭಾವನೆ ಅಷ್ಟೊಂದು ಕೆರಳಿದೆ. ತಾಳ್ಮೆ ಕಳೆದುಹೋಗಿದೆ. ಯಾವುದೇ ಒಂದು ಬರಹಕ್ಕೆ ಇಲ್ಲ ಪಕ್ಷದ ಹಣೆಪಟ್ಟಿ ಅಂಟಿಸುವುದು, ಇಲ್ಲ ಜಾತಿ, ಧರ್ಮಗಳ ಹಣೆಪಟ್ಟಿ ಅಂಟಿಸುವುದು, ಇಲ್ಲವೇ ಯಾವುದೋ ಒಂದು ಪಂಥದ ಹಣೆಪಟ್ಟಿ ಅಂಟಿಸುವುದು. ಈ ಹಣೆಪಟ್ಟಿಗಳಿರದೆ ಇಲ್ಲಿ ಏನೊಂದನ್ನೂ ಬರೆಯಲು ಬಿಡುವುದಿಲ್ಲ. ಈ ರೀತಿ ಬರೆದಿದ್ದಾರೆಂದರೆ ಇವರು ಈ ಪಕ್ಷ, ಈ ಜಾತಿ, ಈ ಧರ್ಮ, ಇಂಥ ಪಂಥೀಯರು, ಒಂದು ಲೇಬಲ್ ಅಂಟಿಸಿಯೇಬಿಡುತ್ತಾರೆ. ಅಲ್ಲಿಂದ ವಾಗ್ದಾಳಿ ಆರಂಭ. ಏನಾಗ್ತಿದೆ ಇಲ್ಲಿ ? ಯಾಕಿಂಥ ಸ್ಥಿಮಿತತೆ ಕಳೆದುಕೊಂಡಂಥ ಮನಸ್ಥಿತಿ ? 

ವಾಕ್ ಸ್ವಾತಂತ್ರ್ಯವಂತೂ ಎಂದೋ ಪಾತಾಳ ಕಂಡಿದೆ. ವಾಕ್ ಸ್ವಾತಂತ್ರ್ಯವೆಂದರೆ ಯಾರಿಗೆ ಬೇಕಾದರೂ ಎಷ್ಟೇ ಕೆಳಮಟ್ಟಕ್ಕಾದರೂ ಬೈಯುವುದು ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ ಅಥವಾ ಯಾವುದ್ ಸರಿ ಯಾವುದು ತಪ್ಪು ಎಂದು ಹೇಳುವ ವಾಕ್ ಸ್ವಾತಂತ್ರ್ಯವನ್ನೂ ಕಸಿಯಲಾಗಿದೆ. ಎಲ್ಲರೂ ಒಂದು ರೀತಿಯ ಟ್ರಾನ್ಸ್ (ಅಮಲು) ಗೊಳಗಾಗಿದ್ದಾರೆ. ಇದರಲ್ಲಿ ಎಚ್ಚರದಿಂದ ಮಾತನಾಡುವವನನ್ನೂ ಹತ್ತಿಕ್ಕಲಾಗುತ್ತಿದೆ. ಇದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ. ಆರೋಗ್ಯಕರ ಸಮಾಜವೆಂದರೆ ಆರೋಗ್ಯಕರ ಚರ್ಚೆ, ಮಾತುಗಳು, ಬೆಳವಣಿಗೆಗೆ ಪೂರಕವಾದ ವಾತಾವರಣ. ಅದೆಲ್ಲ ಇಲ್ಲಿ ಎಂದೋ ಮುಗಿದುಹೋಗಿದೆ. 

-ಸಿದ್ಧರಾಮ ಕೂಡ್ಲಿಗಿ, ಬಳ್ಳಾರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ