ನಾವೇ ಹುಲಿ ಜಾಗದಲ್ಲಿದ್ದೇವೆ

ಹುಲಿ, ನಮ್ಮ ವನ್ಯಜೀವಿಗಳ ಕಿರೀಟ ರತ್ನ. ಇದು ಕೇವಲ ಒಂದು ಕಾಡು ಪ್ರಾಣಿ ಅಲ್ಲ, ಇದು ಪರಿಸರದ ಸಮತೋಲನ ಕಾಪಾಡುವ ಪ್ರಮುಖ ಕೊಂಡಿ. ಭಾರತದಲ್ಲಿ ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಗಿದೆ. ಆದರೆ ಅಂತಹ ಪ್ರಾಮುಖ್ಯತೆ ಇರುವ ಹುಲಿಗಳನ್ನು ಚಾಮರಾಜನಗರ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ವಿಷ ಹಾಕಿ ಸಾಯಿಸಲಾಗಿದೆ. ಈ ಘಟನೆ ಇಡೀ ನಾಡೇ ತಲೆತಗ್ಗಿಸುವಂತೆ ಮಾಡಿದೆ. ಮಲೆ ಮಹದೇಶ್ವರರ ವಾಹನವೆಂದೇ ಪೂಜಿಸುವ ಹುಲಿಯನ್ನು ಬೆಟ್ಟದ ಸನ್ನಿಧಿಯಲ್ಲೇ ಹುಲಿಗಳಿಗೆ ವಿಷ ಹಾಕಿ ಸಾಯಿಸಿರುವುದು ಮನುಷ್ಯನ ಕ್ರೂರತೆಗೆ ಸಾಕ್ಷಿ. ತನ್ನ ಹಸುವನ್ನು ಸಾಯಿಸಿದ ಕೋಪದಲ್ಲಿ ತಂದೆ ಮತ್ತು ಮಗ ಇಬ್ಬರೂ ಸೇರಿ ಹುಲಿಗಳಿಗೆ ಹಸುವಿನ ಮಾಂಸದಲ್ಲೇ ವಿಷ ಹಾಕಿದ್ದಾರೆ ಎಂಬ ಆಘಾತಕಾರಿ ಮಾಹಿತಿ ತನಿಖೆಯ ವೇಳೆ ಹೊರಬಿದ್ದಿದೆ. ಈ ರೀತಿಯ ಕ್ರೂರತೆಯನ್ನು ಮೆರೆದವರನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೇಕಾದ ನಿಟ್ಟಿನಲ್ಲಿ ತನಿಖೆ ಆರಂಭವಾಗಿದೆ. ಆದರೆ, ಇಲ್ಲಿ ತನ್ನ ಹಸುವನ್ನೇ ಸಾಯಿಸಿದ ಮನುಷ್ಯ ಇಷ್ಟೊಂದು ಉಗ್ರನಾಗಬೇಕಾದರೆ, ಕಾಡು ಪ್ರಾಣಿಗಳ ಸ್ಥಾನವನ್ನೇ ಕಬಳಿಸಿ, ಮನೆ, ರಿಸಾರ್ಟ್ ಗಳನ್ನು ಕಟ್ಟಿಕೊಂಡಿರುವ ಮನುಷ್ಯನ ಮೇಲೆ ಆ ವ್ಯಾಘ್ರಗಳು ಎಷ್ಟು ಉಗ್ರವಾಗಬೇಕು ? ಎಂಬುದನ್ನು ಯೋಚಿಸ ಬೇಕಿದೆ. ಕಾಡುಪ್ರಾಣಿಗಳು ಯಾವುವೂ ನಮ್ಮ ವಾಸಸ್ಥಾನಗಳಿಗೆ ಬಂದು ನೆಲೆಸಿಲ್ಲ, ನಾವೇ ಅವುಗಳ ವಾಸಸ್ಥಾನವನ್ನು ಕಬಳಿಸಿಕೊಂಡಿದ್ದೇವೆ ಎಂಬ ಸಾಮಾನ್ಯ ಪ್ರಜ್ಞೆಯೂ ಮನುಷ್ಯನಿಗೆ ಇಲ್ಲವಾಯಿತೇ? ಇಡೀ ಮನುಕುಲದ ಅಸ್ತಿತ್ವವೇ ವನ್ಯಜೀವಿ ಪ್ರಾಣಿಗಳ ಸಂರಕ್ಷಣೆಯಲ್ಲಿದೆ ಎಂಬುದನ್ನು ಮನುಷ್ಯ ಅರಿಯದೇ ಹೋದರೆ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಕೊನೆ ಇಲ್ಲದಂತಾಗುತ್ತದೆ. ಸರಕಾರ ಕೂಡ ಕಾಡಂಚಿನಲ್ಲಿ ವಾಸಿಸುವ ಜನರಲ್ಲಿ ಅರಣ್ಯ ಹಾಗೂ ವನ್ಯ ಜೀವಿಗಳ ಸಂರಕ್ಷಣೆಯ ಕುರಿತು ಅರಿವಿನ ಜಾಗೃತಿಯ ಕಾರ್ಯಕ್ರಮ ಕೈಗೊಳ್ಳಬೇಕಿದೆ. ಪ್ರತಿಯೊಂದು ವನ್ಯಜೀವಿಯೂ ಮನುಷ್ಯ ಸಮಾಜದ ಸ್ನೇಹಜೀವಿ ಹಾಗೂ ದೇಶದ ಸಂಪತ್ತು ಎಂಬ ನಿಟ್ಟಿನಲ್ಲಿ ವ್ಯಾಪಕ ಪ್ರಚಾರಾಂದೋಲನ ಹಮ್ಮಿಕೊಳ್ಳಬೇಕಿದೆ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೮-೦೬-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ