ನಾ ಏನ ನೀಡಲಿ?
ಕವನ
ನಾ ಏನ ನೀಡಲಿ ದೇಶಕೆ ಅಮೃತ ಘಳಿಗೆಯಲಿ?
ಹಿಮದ ಮಣಿಗಳ ಶಿಖರಕೆ ನಾನೇನು ತೊಡಿಸಲಿ?
ಹಸಿರು ಹೊದ್ದ ಮಲೆಯಿದೆ, ನದಿಯ ನಾಟ್ಯವಿದೆ
ಹೊಸದೇನ ನೀಡಲಿ ನಾ ಅಮೃತ ಮಹೋತ್ಸವಕೆ?
ನನ್ನ ದೇಶ ಬಯಸುವುದೇ ಉಡುಗೊರೆಯ ಓಲೈಕೆ?
ಇರಲು ನಮ್ಮಲಿ ಸ್ನೇಹ,ಪ್ರೀತಿ,ವಿಶ್ವಾಸಗಳ ಕೊರತೆ
ದೂರ ಸರಿಯುತಿರಲು ಮನ ಒಡೆದ ಕನ್ನಡಿಯಂತೆ
ಸರ್ವರ ಶಾಂತಿಯ ತೋಟ ಕಲ್ಪನೆಯಾಯಿತೇನು?
ದೇಶಕೆ ನಾ ಉಡುಗೊರೆಯ ಹೇಗೆ ತೊಡಿಸಲಿ?
ಆರಿಲ್ಲವಿಂದು ಬಡವನೆದೆಯ ಹಸಿವ ಕೂಗು
ಕಾನನದ ಕೂಗಾಗಿ ಉಳಿದಿದೆ ರೈತನ ನೋವು
ಆಳುವವರ ಆರ್ಭಟಕೆ ಅಳುವೂ ಗೌಣವಾಗುತಿದೆ!!
ಎಲ್ಲಿಯ ಉಡುಗೊರೆ ಬೆವರಿಗೆ ಬೆಲೆ ದಕ್ಕದಾದಾಗ?
ದೇಶ ನುಡಿಯಿತು "ಬಿಡದಿರು ಆಶಾವಾದ"
ಒಂದಾಗಿಸುವ ಯುವ ಮನಗಳ ಜ್ಞಾನ ಬೆಳಕಲಿ
ಹುಡುಕುವ ದಾರಿಗಳ ಚಿಂತೆಗಳ ಸರಿಸಿ.
ಭವ್ಯ ಭಾರತದ ಕನಸಿಗೆ ಕೆಲಸವಿದೆ ನೂರು
ಬಡಿದೇಳು ಮೊಳಗಲಿ ಸಮತೆಯ ಕೂಗು
ಹಕ್ಕುಗಳು ದಕ್ಕಿದಾಗ ಬಾಡಿದ ಕಂಗಳಿಗೆ
ಭಾರತದ ಅಮೃತ ಮಹೋತ್ಸವಕದೇ ಕೊಡುಗೆ!
-ನಿರಂಜನ ಕೇಶವ ನಾಯಕ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
