ನಿಂತು ಹೋಗುವವರು ಸತ್ತವರು ಮಾತ್ರ’ ಎನ್ನುವ ದಿಟ್ಟೆಯ ಕುರಿತು…..

ನಿಂತು ಹೋಗುವವರು ಸತ್ತವರು ಮಾತ್ರ’ ಎನ್ನುವ ದಿಟ್ಟೆಯ ಕುರಿತು…..

“ಬಾಳಿನಲ್ಲೊಂದು ಹೋರಾಟವಿರದಿದ್ದರೆ ಪ್ರಗತಿಯೂ ಇಲ್ಲ. ಸ್ವಾತಂತ್ರ್ಯದ ಪ್ರತಿಪಾದಕರಂತೆ ವರ್ತಿಸುವ ಆದರೆ ಬದುಕಿನ ಸಂಘರ್ಷವನ್ನು ಹಳಿಯುವ ಅನೇಕ ಜನರನ್ನು ನಾನು ಕಂಡಿದ್ದೇನೆ. ನೆಲವನ್ನು ಉಳದೆ, ಬಿತ್ತದೆ ಬೆಳೆಯನ್ನು ಬಯಸುವ ಮನಸ್ಥಿತಿಯ ಇಂಥಹ ಜನ ಗುಡುಗು ಸಿಡಿಲುಗಳಿಲ್ಲದ ಮಳೆಯನ್ನು ಬಯಸುವವರು. ಇವರಿಗೆ ಸಾಗರದ ಸಂಪತ್ತು ಬೇಕು, ಅದರೊಳಗಿನ ಉಪ್ಪುನೀರು, ಅಲೆಗಳ ಅಬ್ಬರ ಬೇಕಿಲ್ಲ. ಬದುಕಿನ ಸಂಘರ್ಷವೆನ್ನುವುದು ನೈತಿಕವಾಗಿರಬಹುದು, ದೈಹಿಕವಾಗಿರಬಹುದು ಅಥವಾ ಇವೆರಡರ ಮಿಶ್ರಣವೂ ಆಗಿರಬಹುದು. ಆದರೆ ಬದುಕಿನ ಅಭಿವೃದ್ಧಿಗೆ ಸಂಘರ್ಷವಂತೂ ಬೇಕೇ ಬೇಕು” ಎಂದು ಭಾವುಕವಾಗಿ ನುಡಿಯುತ್ತಾನೆ ಆಫ್ರೋ ಅಮೇರಿಕನ್ ಸಮಾಜ ಸುಧಾರಕ ಮತ್ತು ಲೇಖಕ ಫ್ರೆಡ್ರಿಕ್ ಡಗ್ಲಾಸ್. ಪ್ರತಿಯೊಬ್ಬ ಸಾಧಕನ ಬದುಕಿನಲ್ಲೂ ನಮ್ಮ ಕಣ್ಣಿಗೆ ಬೀಳದ ಅಗೋಚರವಾದ ಹೋರಾಟವೊಂದಿರುತ್ತದೆ. ಸಾಧನೆಯ ಶಿಖರದ ಶೃಂಗದಲ್ಲಿ ನಿಂತ ಸಾಧಕನ ಚಿತ್ರ ನಮ್ಮೆದುರಿಗೆ ಕಾಣುತ್ತದೆ. ಆದರೆ ಅಂಥದ್ದೊಂದು ಶಿಖರದ ತುತ್ತ ತುದಿಗೆರಲು ಆತ ಪಟ್ಟ ಶ್ರಮ ನಮ್ಮೆದುರಿಗಿರುವುದಿಲ್ಲ. ಪ್ರತಿಯೊಬ್ಬರೂ ಸಹ ತಮ್ಮ ಬದುಕಿನಲ್ಲಿ ಏಟು ತಿಂದವರೇ, ಆದರೆ ಬಿದ್ದ ಏಟಿನಿಂದ ವಿಚಲಿತರಾಗದೇ ಮುನ್ನುಗ್ಗುವವರು ಮಾತ್ರ ಸಾಧಕರಾಗಲು ಸಾಧ್ಯ. ಹಾಗೆ ಬದುಕಿನ ಪ್ರತಿಕ್ಷಣವೂ ಪೆಟ್ಟುತಿನ್ನುತ್ತಲೇ ಬಂದಿದ್ದರೂ, ಸಾಧನೆಯ ಶಿಖರವನ್ನೇರಿ ನಿಂತ ಪೆಟ್ರಿಶಿಯಾ ನಾರಾಯಣ ಎನ್ನುವ ದಿಟ್ಟ ತಮಿಳರ ಹೆಣ್ಣುಮಗಳ ಕತೆಯನ್ನು ಇಂದು ನಿಮಗೆ ಹೇಳಲು ಹೊರಟಿದ್ದೇನೆ.

ಪೆಟ್ರಿಶಿಯಾ ಥಾಮಸ್. ಸಾಧಾರಣ ರೂಪಿನ, ಕಂದು ವರ್ಣದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ತಮಿಳರ ಹುಡುಗಿ. ಆಕೆಯ ತಂದೆ ಥಾಮಸ್, ಅಂಚೆ ಕಚೇರಿಯಲ್ಲಿ ದುಡಿಯುತ್ತಿದ್ದರೇ ಆಕೆಯ ಅಮ್ಮ ದೂರವಾಣಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ತಮಿಳುನಾಡಿನ ಮೈಲಾಪೂರದಲ್ಲಿ ವಾಸಿಸುತ್ತಿದ್ದ ಪೆಟ್ರಿಶಿಯಾ ತನ್ನ ಕುಟುಂಬದ ಹಿರಿ ಮಗಳು. ಒಂದು ಸುಂದರ ಸಿನಿಮಾವೊಂದರ ಕತೆಯಂತೆಯೇ ಚಂದವಾಗಿತ್ತು ಪೆಟ್ರಿಶಿಯಾಳ ಬಾಲ್ಯ. ತನ್ನ ಇಬ್ಬರು ಕಿರಿಯ ಸಹೋದರಿಯರೊಂದಿಗೆ ಆಡುತ್ತ ನಲಿಯುತ್ತ ಕಾಲ ಕಳೆಯುತ್ತಿದ್ದ ಪೆಟ್ರಿಶಿಯಾ ಓದುತ್ತಿದ್ದದ್ದು ಚೆನ್ನೈನ ಕ್ವೀನ್ಸ್ ಮೇರಿ ಎನ್ನುವ ಕಾಲೇಜಿನಲ್ಲಿ. 1977ರ ಹೊತ್ತಿಗೆ ಹದಿನೇಳು ವರ್ಷದ ಪೆಟ್ರಿಶಿಯಾಳಿಗೆ ನಾರಾಯಣ ಎನ್ನುವ ಸ್ಪುರದ್ರೂಪಿ ಬ್ರಾಹ್ಮಣ ಹುಡುಗನ ಪರಿಚಯವಾದದ್ದು ಇದೇ ವಿದ್ಯಾಲಯದ ಆವರಣದಲ್ಲಿ. ಮೊದಲ ನೋಟದಲ್ಲೇ ಇಬ್ಬರಿಗೂ ಪ್ರೇಮಾಂಕುರವಾಗುತ್ತದೆ. ಒಂದು ವರ್ಷಗಳಷ್ಟು ಕಾಲ ಗುಪ್ತವಾಗಿ ಸುತ್ತಾಡಿಕೊಂಡಿದ್ದ ಪ್ರೇಮಿಗಳಿಗೆ ತಮ್ಮ ವಿವಾಹವೆನ್ನುವುದು ಸುಲಭಸಾಧ್ಯವಲ್ಲ ಎನ್ನುವುದು ತಿಳಿಯದ ವಿಷಯವೇನಲ್ಲ. ಏನೇ ಆದರೂ ಅಂತರ್ಧರ್ಮೀಯ ವಿವಾಹಕ್ಕೆ ತಮ್ಮಿಬ್ಬರ ಕುಟುಂಬಗಳು ಒಪ್ಪಲಾರವು ಎನ್ನುವುದನ್ನು ಅರಿತ ಯುವ ಪ್ರೇಮಿಗಳು, ಪ್ರಾಪ್ತ ವಯಸ್ಸು ತುಂಬುತ್ತಲೇ ಗುಪ್ತವಾಗಿ ರೆಜಿಸ್ಟರ್ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿ ಬಿಡುತ್ತಾರೆ. ತಮ್ಮ ಕಾಲೇಜಿನ ವಿದ್ಯಾಭಾಸ ಮುಗಿಸುತ್ತಿದ್ದಂತೆಯೇ ಪೋಷಕರೆದುರು ತಮ್ಮ ವಿವಾಹದ ವಿಚಾರವನ್ನು ಅರುಹಿಬಿಡುವ ತರ್ಕ ಅವರದ್ದು. ಆದರೆ ಪ್ರೇಮದ ಪರಿಮಳ ಸುಲಭಕ್ಕೆ ಅಡಗುವ ವಿಷಯವಲ್ಲವಲ್ಲ. ವಿವಾಹವಾದ ಮೂರೇ ತಿಂಗಳಿಗೆ ಪೆಟ್ರಿಶಿಯಾಳ ಪೋಷಕರಿಗೆ ತಮ್ಮ ಮುದ್ದಿನ ಮಗಳ ರಾದ್ಧಾಂತ ತಿಳಿದುಬಿಡುತ್ತದೆ. ಸುದ್ದಿ ಕೇಳಿದ ಆಕೆಯ ತಂದೆಗಂತೂ ಅಕ್ಷರಶಃ ಸಿಡಿಲು ಬಡಿದ ಅನುಭವ. ತಮ್ಮ ಕೋಪವನ್ನು ಕ್ಷಣಕಾಲ ನಿಯಂತ್ರಿಸಿಕೊಂಡ ಪೆಟ್ರಿಶಿಯಾಳ ತಂದೆ, ತನ್ನ ಸಮಾಧಾನಕ್ಕೆನ್ನುವಂತೆ ಪುರುಸೈವಕಂ ಪ್ರದೇಶದ ಚರ್ಚೊಂದರಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮತ್ತೊಮ್ಮೆ ಪೆಟ್ರಿಶಿಯಾ ಮತ್ತು ನಾರಾಯಣನ ಮದುವೆಯನ್ನು ನೆರವೇರಿಸುತ್ತಾರೆ. ಆದರೆ ಮದುವೆಯಾದ ಮರುಕ್ಷಣವೇ ಪೆಟ್ರಿಶಿಯಾಳನ್ನು ತಮ್ಮ ಬದುಕಿನಿಂದ ಹೊರತಳ್ಳಿಬಿಡುತ್ತಾರೆ.

ನೀವು ಪ್ರೇಮಕತೆಗಳುಳ್ಳ ಸಿನಿಮಾಗಳನ್ನು ನೋಡಿರುತ್ತೀರಿ. ಪ್ರೇಮಿಗಳಾಗುವ ನಾಯಕ ನಾಯಕಿಯರು ತಮ್ಮ ಪ್ರೇಮಕ್ಕೆ ಅಡ್ಡಗಾಲಾಗುವ ಎಲ್ಲ ಎಡರುತೊಡರುಗಳನ್ನು ನಿವಾರಿಸಿಕೊಂಡು ತಾಳಿ ಕಟ್ಟುವ ಕ್ಷಣದಲ್ಲಿ ಮುಗಿಯುವ ಸಿನಿಮಾ ‘ಸುಖಾಂತ್ಯ’ವೆನಿಸಿಕೊಳ್ಳುತ್ತದೆ. ಆದರೆ ಬದುಕು ಹಾಗಲ್ಲ. ನಿಜ ಬದುಕಿನ ಪ್ರೇಮಿಗಳ ಬಾಳಿನ ಸುಖ ದುಖಗಳ ನಿರ್ಣಯವಾಗುವುದೇ ತಾಳಿ ಕಟ್ಟಿದ ಮರುಕ್ಷಣದಿಂದ. ಅನಿವಾರ್ಯವೆನ್ನುವಂತೆ ತನ್ನ ಹೆತ್ತವರ ಮನೆಯಿಂದ ಗಂಡನೊಂದಿಗೆ ಹೊರಬಂದ ಪೆಟ್ರಿಶಿಯಾ, ಬಾಡಿಗೆ ಮನೆಯೊಂದರಲ್ಲಿ ಪತಿಯೊಂದಿಗೆ ವಾಸಿಸತೊಡಗಿದಳು. ತಾನು ಹುಚ್ಚಿಯಂತೆ ಪ್ರೀತಿಸಿದ ನಾರಾಯಣ್ ಒಬ್ಬ ದುಡಿಮೆಯಿಲ್ಲದ, ಅಪ್ರಯೋಜಕ ಮತ್ತು ಮಹಾ ಕುಡುಕ ಎನ್ನುವುದು ಅರ್ಥವಾಗುವಷ್ಟರಲ್ಲಿ ಪೆಟ್ರಿಶಿಯಾ ಎರಡು ಮಕ್ಕಳ ತಾಯಿಯಾಗಿದ್ದಳು. ಅದೇನೇ ಹರಸಾಹಸಪಟ್ಟರೂ ತನ್ನ ಗಂಡನನ್ನು ಚಟಮುಕ್ತನಾಗಿಸುವಲ್ಲಿ ಆಕೆ ಯಶಸ್ವಿಯಾಗಲಿಲ್ಲ. ಪ್ರಯತ್ನದ ಫಲವೆನ್ನುವಂತೆ ದಿನವೂ ಗಂಡನಿಂದ ಏಟು ತಿನ್ನುವ ಕರ್ಮವೂ ಆಕೆಗೆ ಬಂದೊದಗಿತ್ತು. ಸರಿಯಾಗಿ ನೆತ್ತಿಯ ಮೇಲೊಂದು ಸೂರು, ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೇ ಕಂಗಾಲಾಗಿ ನಿಂತ ಪೆಟ್ರಿಶಿಯಾಳ ಕುಟುಂಬವನ್ನು ಪುನಃ ಪೋಷಿಸಿದ್ದು ಆಕೆಯ ತಂದೆ ಥಾಮಸ್. ಮಗಳ ಮೇಲಿನ ಸಿಟ್ಟು ಆರಿರಲಿಲ್ಲವಾದರೂ, ಮಗಳು ಮತ್ತು ಅಳಿಯನಿಗೆ ಆಶ್ರಯ ಕೊಟ್ಟ ಥಾಮಸ್, ಮಗಳೊಂದಿಗೆ ಹೆಚ್ಚು ಮಾತನಾಡದಂತೆ ಇದ್ದುಬಿಡುತ್ತಿದ್ದರು. ಹಗಲೆಲ್ಲ ಮನೆಯಲ್ಲಿ ಬೆಕ್ಕಿನಂತೆ ಮಲಗಿರುತ್ತಿದ್ದ ನಾರಾಯಣ, ರಾತ್ರಿಯ ತನ್ನ ಕುಡಿತಕ್ಕೆ ಹಣ ದೊರಕದ ಅಸಹನೆಯಿಂದ ಹೆಂಡತಿಯನ್ನು ದನಕ್ಕೆ ಬಡಿದಂತೆ ಬಡಿಯುತ್ತಿದ್ದ. ಅದೃಷ್ಟವಶಾತ ಪೆಟ್ರಿಶಿಯಾಳ ತಂದೆ ರಾತ್ರಿ ಪಾಳಿಗಳಲ್ಲಿ ದುಡಿಯುತ್ತಿದ್ದುದರಿಂದ ಅವರಿಗೆ ತಮ್ಮ ಅಳಿಯನ ಇಂಥದ್ದೊಂದು ಘೋರ ರೂಪದ ಪರಿಚಯವಿರಲಿಲ್ಲ. ಆದರೆ ಸ್ವಾಭಿಮಾನಿಯಾಗಿದ್ದ ಪೆಟ್ರಿಶಿಯಾಳಿಗೆ ತಾನು ತನ್ನ ಪೋಷಕರ ಮೇಲೆ ಭಾರವಾಗಿ ಬದುಕುವುದು ಇಷ್ಟವಿರಲಿಲ್ಲ. ಅಂಥದ್ದೊಂದು ಸಂದರ್ಭದಲ್ಲಿ ಆಕೆಯ ಎದುರಿಗಿದ್ದ ಆಯ್ಕೆಗಳು ಎರಡೇ. ಅನಿವಾರ್ಯವಾಗಿ ಪೋಷಕರಿಗೆ ಹೊರೆಯಾಗಿ ಬದುಕುವುದು ಅಥವಾ ಕಷ್ಟಗಳನ್ನು ಛಲದಿಂದ ಮೆಟ್ಟಿನಿಂತು ಬದುಕು ರೂಪಿಸಿಕೊಳ್ಳುವುದು. ಒಂದು ಅದ್ಬುತ ಕ್ಷಣವೊಂದರಲ್ಲಿ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳುವ ದಿಟ್ಟ ನಿರ್ಧಾರಕ್ಕೆ ಬರುತ್ತಾಳೆ ಪೆಟ್ರಿಶಿಯಾ.

ಪೆಟ್ರಿಶಿಯಾ ಅದ್ಭುತವಾಗಿ ಅಡುಗೆ ಮಾಡುತ್ತಿದ್ದಳು. ತನ್ನ ಬದುಕು ಕಟ್ಟಿಕೊಳ್ಳುವ ಕಾಯಕಕ್ಕೆ ತನ್ನ ಅಡುಗೆಯ ಕೌಶಲ್ಯವನ್ನೇ ಬಂಡವಾಳವಾಗಿಟ್ಟುಕೊಳ್ಳಲು ನಿಶ್ಚಯಿಸುವ ಪೆಟ್ರಿಶಿಯಾ, ತನ್ನ ತಾಯಿಯಿಂದ ಮುನ್ನೂರು ರೂಪಾಯಿಗಳಷ್ಟು ಸಾಲ ಪಡೆದುಕೊಳ್ಳುತ್ತಾಳೆ. ಪಡೆದ ಹಣದಿಂದ ರುಚಿಕಟ್ಟಾದ ಜಾಮು, ಉಪ್ಪಿನಕಾಯಿ, ರಸಾಯನಗಳಂತಹ ಪದಾರ್ಥಗಳನ್ನು ತಯಾರಿಸುವ ಪೆಟ್ರಿಶಿಯಾ ಅವುಗಳನ್ನು ತನ್ನ ತಾಯಿಯ ಕಚೇರಿಯಲ್ಲಿ ಮಾರುವಂತೆ ತಾಯಿಯನ್ನು ಕೇಳಿಕೊಳ್ಳುತ್ತಾಳೆ. ಅದಕ್ಕೊಪ್ಪುವ ಅವಳ ಅಮ್ಮ ಆಕೆ ತಯಾರಿಸಿದ ಅಷ್ಟೂ ಪದಾರ್ಥಗಳನ್ನು ತನ್ನ ಕಚೇರಿಗೆ ಒಯ್ಯುತ್ತಾಳೆ. ಮೊದಲ ದಿನವೇ ತಾನು ತಯಾರಿಸಿದ ಪೂರ್ತಿ ಪದಾರ್ಥಗಳು ಮಾರಾಟವಾಗಿ ಹೋಗುವುದು ಸ್ವತಃ ಪೆಟ್ರಿಶಿಯಾಳಲ್ಲೊಂದು ಆಶ್ಚರ್ಯ ಮೂಡಿಸುವುದರ ಜೊತೆಗೆ ಆಕೆಯಲ್ಲೊಂದು ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ. ಕೆಲಕಾಲ ಹಾಗೆ ಸಣ್ಣದ್ದೊಂದು ವ್ಯಾಪಾರದಿಂದ ಬದುಕನ್ನು ಸಾಗಿಸುವ ಪೆಟ್ರಿಶಿಯಾ ಅದೊಮ್ಮೆ ಮರೀನಾ ಬೀಚಿನಲ್ಲಿ ಚಹ ಮಾರುವ ಸಣ್ಣಸಣ್ಣ ಅಂಗಡಿಗಳನ್ನು ನೋಡುತ್ತಾಳೆ. ಅಂಗಡಿಗಳಲ್ಲಿ ನೆರೆಯುವ ಜನಜಂಗುಳಿ, ಅಲ್ಲಿನ ವ್ಯಾಪಾರದಿಂದಾಗಬಹುದಾದ ಲಾಭಗಳನ್ನೆಲ್ಲ ದೂರದಿಂದಲೇ ಕೂಲಕುಂಶವಾಗಿ ಗಮನಿಸುವ ಆಕೆ ತಾನೂ ಸಹ ಅಂಥದ್ದೊಂದು ಅಂಗಡಿಯನ್ನು ತೆರೆಯುವ ನಿರ್ಧಾರಕ್ಕೆ ಬರುತ್ತಾಳೆ. ಗೋವಾದ ಬೀಚುಗಳಲ್ಲಿ ಅಂಗಡಿ ತೆರೆಯುವುದು ಸುಲಭವೇನಲ್ಲ. ಸ್ಥಳೀಯ ಲೋಕೋಪಯೋಗಿ ಇಲಾಖೆಯ ಅನುಮತಿ ಅದಕ್ಕಿರಬೇಕು. ಸತತ ಒಂದು ವರ್ಷಗಳ ಕಾಲ ಕಚೇರಿಗೆ ಅಲೆದಾಡಿ ಅನುಮತಿಯನ್ನು ಸಂಪಾದಿಸುವ ಪೆಟ್ರಿಶಿಯಾ, 1982ರ ಹೊತ್ತಿಗೆ ಮರೀನಾ ಬೀಚಿನಲ್ಲಿ ಅಂಗಡಿಯೊಂದನ್ನು ತೆರೆಯುವಲ್ಲಿ ಸಫಲಳಾಗುತ್ತಾಳೆ. ಕಡಲ ತೀರದ ಉಳಿದ ಅಂಗಡಿಗಳಲ್ಲಿ ಕೇವಲ ಚಹ ಮತ್ತು ಸಿಗರೇಟುಗಳು ಮಾತ್ರ ದೊರೆಯುತ್ತವೆ ಎಂಬುದನ್ನು ಗಮನಿಸಿದ್ದ ಪೆಟ್ರಿಶಿಯಾ, ಕೊಂಚ ವಿಭಿನ್ನವಾಗಿ ಅಲೋಚಿಸಿ ಸಮೋಸ, ಬಜ್ಜಿ, ಜ್ಯೂಸುಗಳಂತಹ ಪಾನೀಯಗಳನ್ನೂ ಸಹ ತನ್ನ ಅಂಗಡಿಯಲ್ಲಿ ದೊರಕುವಂತೆ ಮಾಡುತ್ತಾಳೆ. ಹಾಗೆ ಆಕೆ ಅಂಗಡಿ ತೆಗೆದ ಪ್ರಥಮ ದಿನ ಆಕೆ ಮಾರಿದ್ದು ಒಂದೇ ಒಂದು ಕಪ್ಪು ಚಹ ಮತ್ತು ಅದರ ಬೆಲೆ ಕೇವಲ ಐವತ್ತು ಪೈಸೆಗಳು ಮಾತ್ರ..!!

ಹಾಗೊಂದು ಅನಿರೀಕ್ಷಿತ ಆಘಾತದಿಂದ ಭಯಂಕರ ನಿರಾಸೆಗೊಳಗಾಗಿ ಮನೆಗೆ ಬಂದವಳೇ ತಾಯಿಯ ಮಡಿಲಲ್ಲಿ ತಲೆಯಿಟ್ಟು ಭೋರೆಂದು ಅಳುತ್ತಾಳೆ ಪೆಟ್ರಿಶಿಯಾ. ಒಂದು ವರ್ಷಗಳಷ್ಟು ಕಾಲ ಅಲೆದಾಡಿ ಆರಂಭಿಸಿದ ವ್ಯಾಪಾರವೊಂದು ವಿಫಲವಾಯಿತೇನೋ ಎನ್ನುವ ಆತಂಕ ಆಕೆಯದ್ದು. ಆದರೆ ಆಕೆಯನ್ನು ಸಂತೈಸುವ ಆಕೆಯ ತಾಯಿ ‘ನಿನ್ನ ಅಳುವಿಗೆ ಅರ್ಥವೇ ಇಲ್ಲ ಪ್ಯಾಟಿ, ಮೊದಲ ದಿನವೇ ನೀನು ಕನಿಷ್ಟ ಒಂದು ಚಹವನ್ನಾದರೂ ಮಾರುವಲ್ಲಿ ಯಶಸ್ವಿಯಾಗಿರುವೆಯಲ್ಲ’ ಎನ್ನುತ್ತ ಹುರಿದುಂಬಿಸುತ್ತಾಳೆ. ಅಮ್ಮನ ಮಾತಿನಿಂದ ಕೊಂಚ ಸಮಾಧಾನ ತಂದುಕೊಂಡ ಪೆಟ್ರಿಶಿಯಾಳಿಗೆ ನಿಜಕ್ಕೂ ಸಂತಸವಾಗುವುದು ಮರುದಿನ ಆಕೆ ಸುಮಾರು ಏಳುನೂರು ರೂಪಾಯಿಗಳಷ್ಟು ವ್ಯಾಪಾರವನ್ನು ಕಂಡಾಗ. ಅದಮ್ಯ ಉತ್ಸಾಹದೊಂದಿಗೆ ಸತತ ಇಪ್ಪತ್ತೊಂದು ವರ್ಷಗಳ ಕಾಲ ಅದೇ ಕಾಯಕವನ್ನು ಮುಂದುವರೆಸುವ ಆಕೆಯ ಬದುಕಿನಲ್ಲಿ ಈ ನಡುವೆ ಮತ್ತೊಂದು ಮಹತ್ವದ ತಿರುವು ಕಾಣುತ್ತದೆ. ಆಕೆಯ ಕೆಲಸದಲ್ಲಿ ಶೃದ್ಧೆಯನ್ನು ಗಮನಿಸುವ ಕೊಳಗೇರಿ ವಿಮೋಚನಾ ಮಂಡಳಿಯ ಅಧ್ಯಕ್ಷ, ತನ್ನ ಕಚೇರಿಯಲ್ಲಿರುವ ಉಪಹಾರ ಮಂದಿರವನ್ನು ನಡೆಸುವಂತೆ ಕೇಳಿಕೊಳ್ಳುತ್ತಾನೆ. ಕ್ಷಣಮಾತ್ರವೂ ಆಲೋಚಿಸದೆ ಅಂಥದ್ದೊಂದು ಸುವರ್ಣಾವಕಾಶವನ್ನೊಪ್ಪಿಕೊಳ್ಳುವ ಪೆಟ್ರಿಶಿಯಾ ಅಲ್ಲಿಯೂ ಅದ್ಭುತ ಯಶಸ್ಸನ್ನು ಕಾಣುತ್ತಾಳೆ. ಬೆಳಗ್ಗಿನ ಐದು ಗಂಟೆಗಳಿಗೆಲ್ಲ ಎದ್ದು ರುಚಿಕಟ್ಟಾದ ಇಡ್ಲಿಗಳನ್ನು ತಯಾರಿಸಿ ಉಪಹಾರ ಮಂದಿರದಲ್ಲಿ ದುಡಿಯುತ್ತಿದ್ದ ಪೆಟ್ರಿಶಿಯಾ, ಸಂಜೆಯ ನಾಲ್ಕು ಗಂಟೆಯ ಸಮಯದಿಂದ ರಾತ್ರಿ ಹನ್ನೊಂದರವರೆಗೆ ಕಡಲ ಕಿನಾರೆಯ ಅಂಗಡಿಯಲ್ಲಿ ದುಡಿಯುತ್ತಿದ್ದಳು. ದಿನವೊಂದಕ್ಕೆ ಹದಿನೆಂಟು ಗಂಟೆಗಳ ಕಾಲ ದುಡಿದರೂ ತಿಂಗಳಿಗೆ ಇಪ್ಪತ್ತು ಸಾವಿರದಷ್ಟು ದುಡಿಯುತ್ತಿದ್ದ ಪೆಟ್ರಿಶಿಯಾಳ ಗಂಡ ನಾರಾಯಣ್ ಬದಲಾಗಲೇ ಇಲ್ಲ. ಆಕೆಗೆ ಅವನೊಂದು ಪರಿಹಾರವಿಲ್ಲದ ಸಮಸ್ಯೆಯಾಗಿಹೋಗಿದ್ದ. ಆದರೆ ಪ್ರತಿಯೊಂದು ಸಮಸ್ಯೆಯೂ ಹೊಸದೊಂದು ಅವಕಾಶದ ಬಾಗಿಲು ಎನ್ನುವುದೊಂದು ನಾಣ್ನುಡಿ. ಪೆಟ್ರಿಶಿಯಾಳ ಬಾಳಿನಲ್ಲಿಯೂ ಹಾಗೇ ಆಯಿತು. ಅದೊಂದು ದಿನ ಗಂಡನೊಡನೇ ಶರಂಪರ ಕಿತ್ತಾಡಿಕೊಂಡ ಪೆಟ್ರಿಶಿಯಾ, ಕೋಪದಿಂದ ಬಸ್ಸೊಂದನ್ನು ಏರಿ ತಿಳಿಯದ ನಿಲ್ದಾಣವೊಂದರಲ್ಲಿ ಇಳಿದುಕೊಂಡಳು. ಅಲ್ಲಿ ಆಕೆಯ ಕಣ್ಣಿಗೆ ಬಿದ್ದಿದ್ದೊಂದು ಸರಕಾರಿ ಕಚೇರಿ. ತಕ್ಷಣ ಜಾಗೃತಗೊಂಡ ಆಕೆಯಲ್ಲಿನ ವ್ಯಾಪಾರಿ ಮನೋಭಾವ ಅಲ್ಲೊಂದು ಅಡುಗೆಯ ಗುತ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಮುಂದೆ ನಡೆದದ್ದು ಇತಿಹಾಸ. ದಿನವೊಂದಕ್ಕೆ ಏಳೂನೂರು ಸಿಬ್ಬಂದಿಗಳ ಮೂರು ಹೊತ್ತಿನ ಊಟತಿಂಡಿಗಳ ವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಆಕೆಗೆ ವಾರವೊಂದಕ್ಕೆ ಸರಿಸುಮಾರು ಎಂಭತ್ತು ಸಾವಿರ ರೂಪಾಯಿಗಳನ್ನು ಆಕೆಗೆ ತಂದುಕೊಡುತ್ತದೆ. ಆಕೆಯ ಕಾರ್ಯ ಕ್ಷಮತೆ ಮತ್ತು ಅದ್ಭುತ ಯಶಸ್ಸನ್ನು ಗಮನಿಸಿದ ಸಂಗೀತಾ ರೆಸ್ಟೋರೆಂಟ್ ಎನ್ನುವ ಸರಣಿ ಹೊಟೆಲ್ಲುಗಳ ಮಾಲೀಕ, ತನ್ನ ವ್ಯವಹಾರದಲ್ಲಿ ಪಾಲುದಾರಳಾಗುವ ಪ್ರಸ್ತಾಪವನ್ನು ಆಕೆಯೆದುರಿಗಿಡುತ್ತಾನೆ. ಅದನ್ನು ನಯವಾಗಿ ತಿರಸ್ಕರಿಸುವ ಪೆಟ್ರಿಶಿಯಾ ತನ್ನದೇ ಆದ ಹೊಟೆಲ್ಲೊಂದನ್ನು ತೆರೆಯುವ ಬಗ್ಗೆ ಆಲೋಚಿಸುತ್ತಾಳೆ.

ಹೀಗೆ ಯಶಸ್ಸಿನ ಮೇಲೆ ಯಶಸ್ಸು ಪಡೆಯುತ್ತ ಓಡುತ್ತಿದ್ದ ಪೆಟ್ರಿಶಿಯಾಳ ಬದುಕಿನ ಮೇಲೆ ಬರಸಿಡಿಲಂತೆ ಬಂದಪ್ಪಳಿಸುವುದು ಅವಳ ಮಗಳ ಸಾವು. ತಿಂಗಳ ಹಿಂದಷ್ಟೇ ಮದುವೆಯಾದ ಮಗಳು ಮತ್ತು ಅಳಿಯ ರಸ್ತೆ ಅಪಘಾತವೊಂದರಲ್ಲಿ ಮಡಿದ ದುರ್ವಾರ್ತೆಯಿಂದ ಆಕೆ ಮೂಕಳಂತಾಗುತ್ತಾಳೆ. ಅದರಲ್ಲೂ ಅಪಘಾತದಲ್ಲಿ ಮಡಿದವರ ಶವವನ್ನು ಅಂಬುಲೆನ್ಸಿನ ಸಿಬ್ಬಂಧಿಗಳು ನಡೆಸಿಕೊಳ್ಳುವ ಪರಿಯನ್ನು ಕಂಡ ಆಕೆ ಅದ್ಯಾವ ಪರಿ ಖಿನ್ನತೆಗೊಳಗಾಗುತ್ತಾಳೆಂದರೇ, ತನ್ನೆಲ್ಲ ವ್ಯಾಪಾರ ವಹಿವಾಟುಗಳನ್ನು ಮರೆತು ಮನೆಯ ಮೂಲೆಯೊಂದನ್ನು ಸೇರಿಕೊಂಡು ಬಿಡುತ್ತಾಳೆ. ಅದೃಷ್ಟವಶಾತ್ ಆಕೆಯ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ ಆಕೆಯ ಮಗ ಆಕೆಯ ವಹಿವಾಟುಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾನೆ. ಮಗಳ ಹೆಸರಿನಲ್ಲೊಂದು ಉಚಿತ ಅಂಬುಲೆನ್ಸ್ ಸೇವೆಯನ್ನು ಆರಂಭಿಸುವ ಮೂಲಕ ಬದುಕಿನ ಭೀಕರ ನೋವನ್ನು ಮರೆತ ಪೆಟ್ರಿಶಿಯಾ 2006ರಲ್ಲಿ ತನ್ನ ಮಗಳು ಸಂದೀಪಾಳ ಜ್ನಾಪಕಾರ್ಥವಾಗಿ ‘ಸಂದೀಪಾ ರೆಸ್ಟೊರೆಂಟ್’ ಆರಂಭಿಸುತ್ತಾಳೆ. ಇಂದು ಚೆನ್ನೈ ಪಟ್ಟಣವೊಂದರಲ್ಲೇ ಹದಿನಾಲ್ಕು ಶಾಖೆಗಳನ್ನು ಹೊಂದಿರುವ ಸಂದೀಪಾ, ಸುಮಾರು ಇನ್ನೂರು ಸಿಬ್ಬಂದಿಗಳನ್ನೊಳಗೊಂಡಿದೆ. ಐವತ್ತು ಪೈಸೆಯ ಆದಾಯದಿಂದ ಆರಂಭಿಸಿದ್ದ ಪೆಟ್ರಿಶಿಯಾ ಇಂದು ದಿನವೊಂದಕ್ಕೆ ಐದು ಲಕ್ಷಗಳಷ್ಟು ಆದಾಯ ಗಳಿಸುತ್ತಾಳೆಂದರೆ ನೀವು ನಂಬಬೇಕು. ಸಣ್ಣದೊಂದು ಕೈಗಾಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾಕೆಯ ಬಳಿ ಇಂದು ಅನೇಕ ಐಶಾರಾಮಿ ಕಾರುಗಳಿವೆ ಎನ್ನುವುದೂ ಸತ್ಯ. ಈಕೆಯ ಪ್ರಶಂಸಾರ್ಹ ಸಾಧನೆಯನ್ನು ಮೆಚ್ಚಿದ ಭಾರತೀಯ ವಾಣಿಜೋದ್ಯಮಿಗಳ ಒಕ್ಕೂಟ 2010ರ ‘ಶ್ರೇಷ್ಠ ಮಹಿಳಾ ವಾಣಿಜೋದ್ಯಮಿ’ ಎನ್ನುವ ಪುರಸ್ಕಾರವನ್ನು ಪೆಟ್ರಿಶಿಯಾರನ್ನು ಗೌರವಿಸಿತು. “ಸಂಘರ್ಷ,ನೋವು ಮತ್ತು ಸೋಲುಗಳು ಬದುಕಿನ ಅನಿವಾರ್ಯ ಅಂಗಗಳು. ಆದರೆ ಸಾಧನೆಯತ್ತ ನಡೆಯುವ ಹಾದಿಗೆ ಅವುಗಳನ್ನು ಅಡ್ಡಿಯಾಗಿ ನಾವು ಪರಿಗಣಿಸದೇ ನಮ್ಮ ಬದುಕಿನ ಧ್ಯೇಯದತ್ತ ನಾವು ಚಲಿಸಬೇಕು. ಏಕೆಂದರೆ ಚಲಿಸುವುದನ್ನೇ ಬದುಕೆನ್ನುವುದು. ‘ನಿಂತು ಹೋಗುವವರು ಸತ್ತವರು ಮಾತ್ರ’ ಎನ್ನುವ ಪೆಟ್ರಿಶಿಯಾ ನಾರಾಯಣರ ಬದುಕು ಎಂಥವರಿಗಾದರೂ ಆದರ್ಶಪ್ರಾಯವಾಗಬಹುದಲ್ಲವೇ..?

Comments

Submitted by kavinagaraj Tue, 09/06/2016 - 11:48

ಸಾಧಕರೆಲ್ಲರೂ ಕಷ್ಟದಿಂದ ಮೇಲೆದ್ದು ಬಂದವರೇ! ಪೆಟ್ರೀಷಿಯಾ ಒಂದು ಉತ್ತಮ ಉದಾಹರಣೆ. ಉತ್ತಮ ವಿಚಾರ ಹಂಚಿಕೆಗಾಗಿ ವಂದನೆಗಳು, ಗುರುರಾಜ ಕೊಡ್ಕಣಿಯವರೇ.