ನಿಂದಿಸಿದ್ದು ರಾಮನಿಗೆ; ಕಾಡಿಗೆ ಹೋದದ್ದು ಸೀತೆ!

ನಿಂದಿಸಿದ್ದು ರಾಮನಿಗೆ; ಕಾಡಿಗೆ ಹೋದದ್ದು ಸೀತೆ!

ಕಳೆದ ವಾರಾಂತ್ಯದಲ್ಲಿ ಪಿಹೆಚ್.ಡಿ. ಅಧ್ಯಯನದ ಅರ್ಧವಾರ್ಷಿಕ ವರದಿಯೊಂದನ್ನು ಓದುವ ಅವಕಾಶ ದೊರೆಯಿತು. ಅದರಲ್ಲಿ ಪ್ರಸ್ತಾಪವಾಗಿದ್ದ ‘ಸೆಕೆಂಡ್ ಸೆಕ್ಸ್’ ಮತ್ತು ‘ಮ್ಯಾನ್ ಮೇಡ್ ಲಾಂಗ್ವೇಜಸ್’ ಎಂಬ ಎರಡು ಪದಗುಚ್ಛಗಳು ಗಮನ ಸೆಳೆದವು. ನಂತರ ಅಂತರ್ಜಾಲದಲ್ಲಿ ಹುಡುಕಾಟ ಆರಂಭವಾಯಿತು. ಸಿಮೋನ್-ಡೆ-ಬ್ಯೂವೊಇರ್ (Simone De Beauvoir 1908-1986) (ಆ ವರದಿಯಲ್ಲಿ ಸಿಮೋನ್ ದಿ ಬುವಾ ಎಂದು ಲಿಪ್ಯಂತರಿಸಲಾಗಿತ್ತು) ಎಂಬ ಫ್ರೆಂಚ್ ಎಕ್ಸಿಸ್ಟೆನ್ಷಿಯಲಿಸ್ಟ್ ಪ್ರತಿಪಾದಿಸಿದ ವಿಚಾರಗಳಿವು. ಸ್ತ್ರೀವಾದಿ ಚಿಂತನೆಯಲ್ಲಿ, ಸಾಮಾಜಿಕ ಚಿಂತನೆಯಲ್ಲಿ ಈಕೆಯದ್ದು ಅತ್ಯಂತ ಪ್ರಮುಖ ಹೆಸರು.

ಹೌದು. ಮಹಿಳಾ ಅಸಮಾನತೆ, ಶೋಷಣೆ ಇವುಗಳ ಬಗ್ಗೆ ಬರೆಯುವಾಗ, ಮಾತನಾಡುವಾಗ ಅಥವಾ ಯೋಚನೆಯಲ್ಲಿ ಮತ್ತು ಪ್ರಸ್ತುತಿಯಲ್ಲಿ ಭಾಷೆಯೇ ಒಂದು ತೊಡಕಾಗಿ ಕಾಡುತ್ತದೆ. ಉದಾಹರಣೆಗೆ ನೋಡಿ. ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂದು ಪ್ರಶಂಸೆಗೆ ಒಳಗಾಗಿರುವ ಗಾದೆಗಳಿಂದ ಗಾದೆಯೊಂದನ್ನು ತೆಗೆದುಕೊಳ್ಳೋಣ. ‘ಆಳುವವನಿಗೆ ಏಳುಜನ ಹೆಂಡಿರು’ ಎಂಬ ಗಾದೆಯಿದೆ. ಇದನ್ನು ನಮ್ಮ ಹಳ್ಳಿಯ ಕಡೆ ಅತ್ಯಂತ ಸಹಜವಾಗಿಯೋ ಎಂಬಂತೆ ಬಳಸುತ್ತಾರೆ. ಆದರೆ ಇದೇ ಗಾದೆಯನ್ನು ಸ್ವಲ್ಪ ಮಾರ್ಪಾಟು ಮಾಡಿ, ‘ರಸಿಕಳಾದವಳಿಗೆ ಆರುಜನ ಗಂಡರು’ ಎಂದು ನೋಡಿ! ಭೀಕರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಇಂತಹ ಗಾದೆಗಳ ಸಾಲಿನಲ್ಲಿ ಸೇರಿಸಬಹುದಾದ ಕೆಲವೆಂದರೆ, ‘ಗಂಡಸು ಕೂತು ಕೆಟ್ಟ; ಹೆಂಗಸು ತಿರುಗಿ ಕೆಟ್ಟಳು’ ಎಂಬುದು. ಇಲ್ಲಿ ಗಾದೆಯ ಉದ್ದೇಶ ಒಳ್ಳೆಯದೇ ಇದೆ. ಸೋಮಾರಿಯಾಗಿ ಕುಳಿತುಕೊಳ್ಳಬಾರದು ದುಡಿಯಬೇಕು ಎಂಬುದು ಅದರ ಆಶಯ. ಆದರೆ ಅದನ್ನು ಮನದಟ್ಟು ಮಾಡಿಸಲು ಬಳಸಿರುವ ಪದಪುಂಜ ‘ಹೆಂಗಸು ತಿರುಗಿ ಕೆಟ್ಟಳು’ ಎಂಬುದು ಮಾತ್ರ ಹೆಂಗಸು ಸ್ವತಂತ್ರವಾಗಿ ತಿರುಗಾಡುವುದು ಎಂದರೇನು? ಎನ್ನುವ ಪುರುಷ ಅಹಂಕಾರದ ಅಭಿವ್ಯಕ್ತಿ.

ಬಹುಶಃ ಇಂಥ ಗಾದೆಗಳ ಜನಕರು ಗಂಡಸರೇ ಆಗಿರುತ್ತಾರೆ.ಅಥವಾ ಹೆಂಗಸರಾಗಿದ್ದರೆ ಪುರುಷ ಮನಸ್ಥಿತಿಯನ್ನು ಉಳ್ಳವರಾಗಿರುತ್ತಾರೆ. ನಾವು ಬಳಸುವ ಭಾಷೆ, ನುಡಿಗಟ್ಟುಗಳು, ಅಭಿವ್ಯಕ್ತಿಯ ಸ್ವರೂಪ ಎಲ್ಲವೂ ಪುರುಷ ಮನಸ್ಥಿತಿಯಿಂದಲೇ ರೂಪಗೊಂಡಿವೆ. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ಕೆಲವೊಂದರ ಹಿನ್ನೆಲೆಯಲ್ಲಿ ಸಿಮೋನ್ ಅವರ ‘ಮ್ಯಾನ್ ಮೇಡ್ ಲಾಂಗ್ವೇಜಸ್’ ಎಂಬ ಥಿಯರಿಯನ್ನು ಮನದಟ್ಟು ಮಾಡಿಕೊಳ್ಳಬಹುದು.

ನೋಡಿ, ಹೆಂಗಸರ ಅಳುವಿಗೂ ಎರಡನೆಯ ಸ್ಥಾನವೆ! ಗಂಡಸರು ಏನಾದರು ಅತ್ತರೆ, (ಅಳುವ ಮನಸ್ಥಿತಿಯನ್ನು ಪ್ರದರ್ಶಿಸಿದರೂ ಸಾಕು) ‘ಹೆಂಗಸು ಅತ್ತ ಹಾಗೆ ಅಳುತ್ತಿಯಲ್ಲ, ನೀನು ಗಂಡಸಲ್ಲವೆ?’ ಎಂಬ ವಾಗ್ಬಾಣ ಚಿಮ್ಮುತ್ತದೆ. ಗಂಡಸಾಗಲಿ ಹೆಂಗಸಾಗಲಿ ಅತ್ತಾಗ ಉದುರುವುದು ನೀರೆ. ಆದರೂ ಈ ತಾರತಮ್ಯ.

ತಂದು ಹಾಕುವವನು ಗಂಡಸು; ತಿಂದು ಹಾಕುವವರು ಹೆಂಡ್ತಿ ಮಕ್ಕಳು! ಇಲ್ಲಿ ಹೆಂಗಸನ್ನು ಕೈಲಾಗದವಳನ್ನಾಗಿ ಕೂರಿಸಿಬಿಟ್ಟಿದ್ದಾರೆ. ಪ್ರಪಂಚವನ್ನೇ ಅರಿಯದ ಮಕ್ಕಳಿಗೂ ಅಸ್ತಿತ್ವವಿಲ್ಲ. ಪಾಶ್ಚಿಮಾತ್ಯರಲ್ಲೂ ಗಂಡಸರಿಗೆ ‘ಬ್ರೆಡ್ ವಿನ್ನರ್’ ಎಂಬ ವಿಶೇಷಣವಿದೆಯಂತೆ! ಆದರೆ ಶ್ರಮಿಕ ವರ್ಗದಲ್ಲಿ ಇದು ಸ್ವಲ್ಪ ತಿರುವು ಮರುವಾಗಿದೆ. ಎಷ್ಟೋ ಕುಟುಂಬಗಳಲ್ಲಿ ಹೆಂಗಸರು ದುಡಿಯದಿದ್ದರೆ ಒಲೆಯೇ ಉರಿಯುವುದಿಲ್ಲ. ಆದರೂ ಆಕೆ ಎರಡನೆಯವಳೆ.

ಇಬ್ಬರು ಗಂಡಸರು ನಡುವಿನ ಜಗಳದಲ್ಲಿ, ಅತ್ಯಂತ ಸಹಜವಾಗಿ ಬಳಸುವ ಒಂದು ನುಡಿಗಟ್ಟೆಂದರೆ ‘ನಾನೇನು ಬಳೆ ತೊಟ್ಟಿಲ್ಲ’ ಎಂಬುದು. ಅಂದರೆ ಕೈಲಾಗದವನಲ್ಲ ಎಂದರ್ಥ. ಇಂತಹ ಮಾತುಗಳನ್ನು ಆಡುವವರು ಹೆಂಗಸರ ಬಗ್ಗೆ ಗೌರವ ಇಲ್ಲದವರೇನಲ್ಲ. ಹೆಂಗಸರ ಬಗ್ಗೆ ಅತ್ಯಂತ ಗೌರವ ಇಟ್ಟುಕೊಂಡಿರುವವರು ಕೂಡಾ ಮಾತಿನ ನಡುವೆ ಸಹಜವಾಗಿ ಇದನ್ನು ಬಳಸುತ್ತಾರೆ. ಅಷ್ಟೇ ಏಕೆ ಹೆಂಗಸರೂ ಕೂಡಾ ಇದೇ ಅರ್ಥ ಬರುವ ಮಾತುಗಳನ್ನು (ನನ್ನ ಗಂಡ ಏನು ಬಳೆ ತೊಟ್ಟಿಲ್ಲ) ಬಳಸುತ್ತಾರೆ. ಒಬ್ಬ ತನ್ನ ವಿರೋಧಿಗೆ ಅವಮಾನ ಮಾಡಬೇಕೆಂದರೆ, ಸೀರೆ ಬಳೆಗಳನ್ನು ಕಳುಹಿಸುತ್ತಾನೆ. ಸೀರೆ ಬಳೆ ಪದಗಳನ್ನೇ ಬಳಸಿ ಹೀಯಾಳಿಸುತ್ತಾನೆ. ಗಂಡಸು ತೊಡುವ ಬಳೆಗೆ ಏನನ್ನಬೇಕು? ಒಮ್ಮೆ ಜಾತ್ರೆಯಲ್ಲಿ ಸಿಗುವ ಸ್ಟೀಲ್ ಕೋಟೆಡ್ ಬಳೆಯನ್ನು ಕೊಂಡು ತೊಟ್ಟಿದ್ದಕ್ಕೆ ನಮ್ಮ ಮೇಷ್ಟ್ರು ‘ರೌಡಿಬಳೆ’ ಬೇಕಾ ನಿಮಗೆ ಎಂದು ಅದನ್ನು ತೊಟ್ಟಿದ್ದವರಿಗೆಲ್ಲಾ ಬಾರಿಸಿದ್ದರು.

ಇನ್ನು ‘ಅಬಲೆ’ ಎಂಬ ಪದವಂತೂ ಹೆಣ್ಣನ್ನು ಗೌರಪೂರ್ವಕವಾಗಿ ದೂರ ಇಡುವವರ ಸೃಷ್ಟಿ! ಹಾಗೇ ‘ಗರತಿ’ ‘ಪತಿವೃತೆ’ ಈ ಪದಗಳೂ ಸಹ. ಪುರುಷನ ಅಹಂಕಾರವನ್ನು ಗೌರವಿಸುತ್ತಾ ಬದುಕಿದರೆ ‘ಗರತಿ’; ಇಲ್ಲದಿದ್ದರೆ ‘ಸೂಳೆ’! ಅಷ್ಟರ ಮಟ್ಟಿಗೆ, ಭಾಷೆಯ ಅವಿಭಾಜ್ಯ ಅಂಗವೇ ಎಂಬಂತೆ ಸ್ತ್ರೀಯರನ್ನು ಎರಡನೆಯ ದರ್ಜೆಯರನ್ನಾಗಿಸುವ ನುಡಿಗಟ್ಟುಗಳು ಬೆಸೆದುಕೊಂಡಿವೆ. ಹೆಂಗಸರು ಬಳಸುವ ವಸ್ತುಗಳಿಗೇ ಹೀನಾರ್ಥ ಆರೋಪವಾಗುವಂತಹ ಸನ್ನಿವೇಶ ನಿರ್ಮಾಣ ಈ ಜಗತ್ತಿನ ಒಂದು ಬಹುದೊಡ್ಡ ಅಚ್ಚರಿ!

ಬೈಗುಳಗಳನ್ನು ನೋಡಿ: ಮುಂಡೆಮಗ, ಬೋಳಿಮಗ, ಬೊಡ್ಡಿಮಗ…. ಹೀಗೆ ಸ್ತ್ರೀಯನ್ನು ಕೀಳಾಗಿ ಕಾಣುವ ಪದಪುಂಜಗಳಿಗೆ ಆಧ್ಯತೆ ಕೊಟ್ಟಿವೆ. ಇವಕ್ಕೆ ವಿರುದ್ಧಾರ್ಥ ನಿಡುವ ಪುಲ್ಲಿಂಗವಾಚಿ ಪದಗಳೇ ನಮ್ಮ ಭಾಷೆಗಳಲ್ಲಿ ಇಲ್ಲ. (ಬಹುಶಃ ಪ್ರಪಂಚ ಯಾವ ಭಾಷೆಯಲ್ಲೂ ಇಲ್ಲ) ‘ಸೂಳೆ’ ಎಂಬ ಪದಕ್ಕೆ ಸಂವಾದಿಯಾಗಿ ಗಂಡಸಿಗೆ ಅನ್ವಯಿಸುವಂತೆ, ಅಷ್ಟೊಂದು ತೀವ್ರತರವಾದ ಹೀನಾರ್ಥವನ್ನು ಸ್ಫುರಿಸುವ ಪದವಿದೆಯೆ? ಸಾಮಾನ್ಯವಾಗಿ ಬಯ್ಗುಳಗಳಲ್ಲಿ ಯಾರಿಗೆ ಯಾರೇ ಬಯ್ದರೂ ಅಂದರೆ ಗಂಡಸು ಹೆಂಗಸಿಗೆ, ಹೆಂಗಸು ಗಂಡಸಿಗೆ, ಗಂಡಸು ಗಂಡಸಿಗೆ, ಹೆಂಗಸು ಹೆಂಗಸಿಗೆ ಬಯ್ದರೂ ಮಾತಿನ ಬಾಣ ಚುಚ್ಚುವುದು ಮಾತ್ರ ಹೆಂಗಸಿಗೆ! ನಿಂದಿಸಿದ್ದು ರಾಮನಿಗೆ. ಆದರೆ ಕಾಡಿಗೆ ಹೋಗಿದ್ದು ಸೀತೆ!

ಕುಡುಕನೂ ವ್ಯಭಿಚಾರಿಯೂ ಆಗಿದ್ದ ಗಂಡನ ಬಗ್ಗೆ ಊರಿನ ಮುಖ್ಯಸ್ಥರಿಗೆ ಹೆಣ್ಣುಮಗಳೊಬ್ಬಳು ದೂರು ಕೊಟ್ಟಳು. ನಿತ್ಯವೂ ದೈಹಿಕವಾಗಿ ಮಾನಸಿಕವಾಗಿ ನನಗೆ ಹಿಂಸೆ ನೀಡುತ್ತಾನೆ. ನನಗೆ ಗಂಡ ಬೇಡ ಎಂದಳು. ಪಂಚಾಯಿತಿ ಮಾಡಲು ಕುಳಿತಿದ್ದ ಶ್ಯಾನುಭೋಗ, ಗೌಡ ಮೊದಲಾದವರು ‘ನೋಡಮ್ಮಾ, ತಾಮ್ರದ ಬಿಂದಿಗೆ ಕೊಟ್ಟಿದ್ದೇವೆ. ಕರೆ ಕಟ್ಟಿಬಿಟ್ಟಿದೆ. ಅದನ್ನು ಹುಣಿಸೆ ಹಣ್ಣು ಹಾಕಿ ತಿಕ್ಕಿ ತೊಳೆದು ಫಳಫಳ ಹೊಳೆಯುವಂತೆ ಮಾಡಿಕೊಬೇಕಾದ್ದು ನಿನ್ನ ಕರ್ತವ್ಯ’ ಎಂದು ಉಪದೇಶ ನೀಡಿದರು. ಅದೇ, ಆಕೆ ದಾರಿ ತಪ್ಪಿ, ಗಂಡ ದೂರು ತಂದಿದ್ದರೆ ಅವರ ತೀರ್ಮಾನಕ್ಕೆ ಬಳಸುತ್ತಿದ್ದ ಭಾಷೆ ಯಾವುದು? ‘ನಾಯಿ ಮುಟ್ಟಿದ ಮಡಕೆ ನಾಯಿಗೆ ಕಟ್ಟಿ!’ ಎಂಬುದು.

ಯುದ್ಧದಲ್ಲಿ ಹೆಂಗಸು ಎದುರಾದರೆ, ಸ್ತ್ರೀಯರೊಂದಿಗೆ ನಾನು ಕಾದುವುದಿಲ್ಲ ಎಂದು ತಮ್ಮನ್ನು ತಾವು ಉದಾತ್ತಿರಿಸಕೊಂಡ ವೀರರೂ ಪುರಾಣೇತಿಹಾಸಗಳಲ್ಲಿ ಆಗಿಹೋಗಿದ್ದಾರೆ. ಸ್ತ್ರೀಯರ ಮೇಲೆ ಯುದ್ಧ ಮಾಡುವುದಿಲ್ಲ ಎನ್ನುವ (ಮ್ಯಾನ್ ಮೇಡ್!) ಉದಾತ್ತತೆಗಿಂದ ಸೋಲುವ ಭಯವೇ ಅವರನ್ನು ಹಿಮ್ಮೆಟ್ಟಿಸಿಲ್ಲ ಎನ್ನುವುದಕ್ಕೆ ಖಾತ್ರಿಏನಿದೆ?

ಹಲವಾರು ಹೆಣ್ಣುಗಳನ್ನು ನೋಡಿ ಒಬ್ಬರನ್ನು ಒಪ್ಪಿ ಮದುವೆಯಾಗುವುದು, ಅಥವಾ ಹೆಚ್ಹೆಚ್ಚು ಹೆಣ್ಣುಗಳನ್ನು ನೋಡಿ ನಿರಾಕರಿಸುವುದು ಗಂಡಸರಿಗೆ ನೀರು ಕುಡಿದಷ್ಟೇ ಸಹಜ. ಅದಕ್ಕೆ ಜನರ ಪುರುಷಮನಸ್ಥಿತಿ ಕೊಡುವ ಉತ್ತರದ ಒಂದು ಪರಿಭಾಷೆಯನ್ನು ಗಮನಿಸಿ: ‘ಅಯ್ಯೋ ಸಂತೆಗೆ ಹೋಗ್ತೀವಿ. ಒಂದೆ ಹಸ/ಎಮ್ಮೆ ನೋಡ್ತೀವಾ? ಹತ್ತಾರು ನೋಡ್ತೀವಿ, ನಮ್ಗೆ ಒಪ್ಪಿಗೆ ಆದ್ದ ತರ್ತೀವಿ!’ ಇಲ್ಲಿ ಯಾರನ್ನು ಮಾತೃದೇವತೆ ಎಂದು ಪೂಜಿಸುತ್ತೇವೆಯೊ ಅಂತಹ ಹೆಣ್ಣಿಗೂ, ಹಸು/ಎಮ್ಮೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ; ಎಲ್ಲಾ ಒಂದೆ! ದುರಂತವೆಂದರೆ, ಇಂತಹ ಮಾತುಗಳನ್ನು ಕೆಲವು ಹೆಂಗಸರ ಬಾಯಲ್ಲೂ ಕೇಳುವಂತಹದ್ದು. ಅದಕ್ಕಿಂತ ದೊಡ್ಡ ದುರಂತವೆಂದರೆ ಸಂಪ್ರದಾಯದ, ಗೌರವದ ಹೆಸರಿನಲ್ಲಿ ಹೆಣ್ಣನ್ನು ಅಂತಹ ಸ್ಥಿತಿಗೆ ತಳ್ಳಿರುವುದು! ಅವಳ ಯೋಚನಾ ಲಹರಿಗೇ ಲಗಾಮು ತೊಡಿಸಿ, ಅದನ್ನು ತನ್ನ ಕೈತಪ್ಪದಂತೆ ಪುರುಷ ಅಹಂಕಾರ ನಿರ್ವಹಿಸುತ್ತಿರುವುದು.

ಪುರುಷಪ್ರಧಾನ ನೆಲೆಯಲ್ಲಿ ಹೆಣ್ಣು ಒಂದು ಭೋಗವಸ್ತು ಮಾತ್ರ. ಹೆಣ್ಣನ್ನು ತನ್ನ ಭೋಗದ ವಸ್ತುವಾಗಿಸಿಕೊಂಡಿರುವ ಗಂಡು ಹೆಣ್ಣಿಗೆ ಯಾವುದೇ ಸ್ವಾತಂತ್ರ್ಯವನ್ನು ನೀಡಿರಲಿಲ್ಲ. ಇದಕ್ಕೆ ಬಾಲ್ಯವಿವಾಹ, ಬಹುಪತ್ನಿತ್ವ, ಸತಿಪದ್ಧತಿ, ದೇವದಾಸಿ ಪದ್ಧತಿಗಳಂಥ ಅನಿಷ್ಟ ಪದ್ಧತಿಗಳೇ ಸಾಕ್ಷಿಗಳಾಗಿವೆ (ಈಗ ಈ ಅನಿಷ್ಠ ಪದ್ಧತಿಗಳು ಈಗಿಲ್ಲದಿದ್ದರೂ, ಹೊಸ ಹೊಸ ಅವತಾರವನ್ನೆತ್ತಿ ಬರುತ್ತಿವೆ). ಅದಕ್ಕೇ, ಹೆಣ್ಣು, ಹೊನ್ನು ಮತ್ತು ಮಣ್ಣು ಎಂಬ ನುಡಿಗಟ್ಟೇ ಸೃಷ್ಟಿಯಾಗಿಬಿಟ್ಟಿದೆ. ಹೆಣ್ಣು ಹೊನ್ನು ಮಣ್ಣು ಇವುಗಳನ್ನು ಮಾಯೆ ಎಂದು ಹೇಳಿ ಹಿನಾರ್ಥ ಕಲ್ಪಿಸಲಾಯಿತು. ವಚನಕಾರರು ಅದನ್ನು ಅಲ್ಲಗಳೆದರು, ಅವಾವು ಮಾಯೆಯಲ್ಲ ಎಂದು ಸಾರಿ ಹೇಳಿದರು. ಆದರೆ ದುರಂತ ನೋಡಿ. ಈ ನುಡಿಗಟ್ಟನ್ನು ಬಳಸಿದ ವಚನವೊಂದನ್ನು ತಪ್ಪಾಗಿ ಅರ್ಥೈಸಿದ ಓದುಗರೊಬ್ಬರು, ‘ವಚನಕಾರರೂ ಸೇರಿದಂತೆ ಶರಣರಲ್ಲಿ ಸ್ತ್ರೀ ಪುರುಷ ಸಮಾನತೆಯ ಭಾವ ಇರಲಿಲ್ಲ’ ಎಂದು ತೀರ್ಪಿತ್ತಿದ್ದಾರೆ! (ನಿಜವಾಗಿಯೂ ಅದೊಂದು ಉದಾತ್ತ ವಚನ. ಹೆಣ್ಣು ಹೊನ್ನು ಮಣ್ಣು ಇವನ್ನು ಕೀಳಾಗಿ ಕಂಡು ಲಿಂಗವನ್ನು ಒಲಿಸಿಕೊಳ್ಳಬೇಕಿಲ್ಲ. ಏಕೆಂದರೆ ಹೆಣ್ಣು ಹೊನ್ನು ಮಣ್ಣು ಬೇರೆಯಲ್ಲ; ಲಿಂಗ ಬೇರೆ ಅಲ್ಲ).

ಪ್ರತಿಯೊಬ್ಬ ಯಶಸ್ವೀ ಗಂಡಸಿನ ಹಿಂದೆ ಹೆಣ್ಣೊಬ್ಬಳು ಇರುತ್ತಾಳೆ ಎನ್ನುವ ನಾವು ಆ ಹೆಣ್ಣು ಮುಂದಿರುತ್ತಾಳೆ ಎನ್ನುವುದಿಲ್ಲ! ಹಣ್ಣು ಯಾವಾಗಲೂ ಗಂಡಸಿನ ಹಿಂದೆಯೇ ಇರಬೇಕು ಎನ್ನುವ ಮನಸ್ಥಿತಿಯಲ್ಲವೆ ಇದು?

ಇಂತಹ ‘ಪುರುಷ ಪ್ರತಿಪಾದಿತ ಭಾಷೆ’ ಕೇವಲ ಜಾನಪದಕ್ಕೆ ಮಾತ್ರ ಸೀಮಿತವಲ್ಲ; ಧಾರ್ಮಿಕ ಗ್ರಂಥಗಳಲ್ಲಿಯೂ ಅದು ತುಂಬಿ ತುಳುಕುತ್ತಿದೆ. ಸ್ತ್ರೀಯರಿಗೆ ಮೋಕ್ಷವಿಲ್ಲ ಎಂದು ನಿತ್ಯನಾರಕಿಗಳ ವರ್ಗಕ್ಕೆ ಸೇರಿಸಿರುವುದು, ಆತ್ಮರೂಪದಲ್ಲಿಯಾದರೂ ಸರಿ ಸ್ತ್ರೀ ಮೋಕ್ಷಕ್ಕೆ ಅರ್ಹಳಲ್ಲ; ಆಕೆ ಪುರುಷನಾಗಿಯೇ ಜನಿಸಿ ಮೋಕ್ಷ ದಕ್ಕಿಸಿಕೊಳ್ಳಬೇಕು ಎಂಬಂತಹ ಪರಿಭಾಷೆ ಬೆಳೆದಿರುವುದನ್ನು, ಅದರ ಬಗ್ಗೆ, ಕಾಲದಿಂದಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದನ್ನು ನೀವು ಗಮನಿಸಿಯೇ ಇರುತ್ತೀರಿ.

ಭಾಷೆಯೊಂದರ ವ್ಯಾಕರಣದ ದುರಂತ ನೋಡಿ. ಲಿಂಗಗಳಲ್ಲಿ ಎರಡು ವಿಧ: ಒಂದು ಮಹತ್ ಲಿಂಗ ಇನ್ನೊಂದು ಅಮಹತ್ ಲಿಂಗ! ಪುರುಷ, ಪುರುಷನಿಗೆ ಸಂಬಂಧಿಸಿದ್ದೆಲ್ಲವೂ ಮಹತ್ ಲಿಂಗ. ಸ್ತ್ರೀಯರೂ ಸೇರಿದಂತೆ ಉಳಿದೆಲ್ಲವೂ ಅಮಹತ್ ಲಿಂಗ. (ನಮ್ಮ ಭಾಷೆಯಲ್ಲಿಯೇ ಮಕ್ಕಳು ನಪುಂಸಕಲಿಂಗ!). ಪುರುಷ ಮತ್ತು ಪ್ರಕೃತಿ ಎನ್ನುವಲ್ಲಿಯೂ ಸ್ತ್ರೀಯರಿಗೆ ಸ್ಥಾನವಿಲ್ಲ. ಪ್ರಕೃತಿ ಎಂದರೆ ಸ್ತ್ರೀ ಎಂದು ನಾವು ಅಂದುಕೊಳ್ಳಬೇಕು. ಪುರುಷಸೂಕ್ತವಿದೆ, ಪುರುಷಾರ್ಥಗಳಿವೆ, ಪುರುಷಪ್ರಯತ್ನವಿದೆ ಆದರೆ ಸ್ತ್ರೀಸೂಕ್ತವಾಗಲೀ ಸ್ತ್ರೀಪ್ರಯತ್ನವಾಗಲೀ ಸ್ತ್ರೀಯಾರ್ಥವಾಗಲೀ ಇಲ್ಲವೇ ಇಲ್ಲ!

ಕಾಳಿದಾಸನ ‘ಕುಮಾರಸಂಭವಂ’ ಕಾವ್ಯದಲ್ಲಿ ಸರಸ್ವತಿ ಶಿವನನ್ನು ಸ್ತುತಿಸುವುದು ದೇವಭಾಷೆಯಾದ ಸಂಸ್ಕೃತದಲ್ಲಿ; ಪಾರ್ವತಿಯನ್ನು ಸ್ತುತಿಸುವುದು ಜನಭಾಷೆಯಾದ ಪ್ರಾಕೃತದಲ್ಲಿ! ಪಾರ್ವತಿ ‘ಜಗಜ್ಜನನಿ’ ಆದರೇನಂತೆ? ಆಕೆ ಒಂದು ಹೆಣ್ಣು ಮಾತ್ರ! ಕವಿಗಳು, ಜ್ಞಾನಿಗಳು ಕೇವಲ ‘ಸರಸ್ವತೀಪುತ್ರ’ರಾಗಿದ್ದುದು ಪುರುಷ ಮನಸ್ಥಿತಿಗೆ ಇಷ್ಟವಾಗಲಿಲ್ಲ. ಅದಕ್ಕೆ ‘ಪುರುಷ ಸರಸ್ವತೀ’ ಎಂಬ ಪದಪುಂಜವನ್ನೇ ಸೃಷ್ಟಿಸಿ ವೈಭವೀಕರಿಸಲಾಯಿತು. ಆದರೆ, ಸಾಧನೆಯಲ್ಲಾಗಲೀ, ವೀರಾವೇಶದಲ್ಲಿಯಾಗಲೀ ಹೋರಾಡಿದ ‘ಸ್ತ್ರೀ’ಗೆ ಅನ್ವಯವಾಗುವಂತೆ ಒಂದು ಬಿರುದಾದರೂ ಬೇಡವೆ? ಕವಿ, ಅಭಿನವ ಸೃಷ್ಟಿಕರ್ತ! ಕವಿಯತ್ರಿ? ಆಕೆಯನ್ನು ಯಾರಾದರೂ ಅಭಿನವ ಸೃಷ್ಟಿಕರ್ತೆ ಎಂದು ಕರೆದಿದ್ದಾರೆಯೆ? ಲಕ್ಷ್ಮಿ ಪಾರ್ವತಿಯರು, ವಿಷ್ಣು ಶಿವನಿಗೆ ಹೆಂಡತಿಯರು ಮಾತ್ರ; ಮಗಳಲ್ಲ. ಆದರೆ ಸರಸ್ವತಿ ಬ್ರಹ್ಮನಿಗೆ ಹೆಂಡತಿಯೂ ಹೌದು ಮಗಳೂ ಹೌದು! ಸೃಷ್ಟಿಕರ್ತೆಗೆ ಒಂದು ಲಗಾಮು!

ನನ್ನ ಪಿಹೆಚ್.ಡಿ. ವೈವಾದ ಸಂದರ್ಭದಲ್ಲಿ, ಜ್ಞಾನಕ್ಕೆ ದೈವತ್ವನನ್ನು ಆರೋಪಿಸುವಾಗ ‘ಸ್ತ್ರೀ’ರೂಪವೇ ಏಕಾಯಿತು? ಪುರುಷವಾಚಕ ಏಕಾಗಲಿಲ್ಲ? ಎಂಬ ವಿಷಯ ಚರ್ಚೆಗೆ ಬಂದಿತ್ತು. ಆ ವಿಷಯದಲ್ಲಿ ಪುರುಷ ಸೋಲುತ್ತಾನೆಯೆ? ಸರಸ್ವತ, ಸಾರಸ್ವತ ಎಂಬ ಪುರುಷದೇವತೆಯನ್ನು ಸೃಷ್ಟಿಸಿಯೇ ಬಿಟ್ಟಿದೆ!

ಹೀಗೆ, ಭಾಷೆಯಲ್ಲಿ, ಭಾವನೆಯಲ್ಲಿ, ಗ್ರಹಿಕೆಯಲ್ಲಿ, ಅಭಿವ್ಯಕ್ತಿಯಲ್ಲಿ ಎರಡನೆಯ ದರ್ಜೆಯವಳನ್ನಾಗಿಯೇ ಸ್ತ್ರೀಯನ್ನು ನೋಡುವ ಮನಸ್ಥಿತಿಯನ್ನೇ ಸಿಮೋನ್ ಗುರುತಿಸುತ್ತಾ ಹೋಗುತ್ತಾರೆ. ಸಿಮೋನ್-ಡೆ-ಬ್ಯೂವೊಇರ್ ಈ ಹಿನ್ನೆಲೆಯಲ್ಲಿಯೇ ಸೆಕೆಂಡ್ ಸೆಕ್ಸ್ ಎಂಬ ಪದಪುಂಜವನ್ನು ತನ್ನ ವಾದ ಸಮರ್ಥನೆಗೆ ಬಳಸಿಕೊಳ್ಳುತ್ತಾಳೆ. ಸ್ತ್ರೀ ಎರಡನೆಯವಳು! ಅಮಹತ್ ಲಿಂಗ! ಭಾಷೆ? ನಮಗೆ ಯಾವುದು ಮಾತೃಭಾಷೆ (Mother Tongue) ಆಗಿದೆಯೋ ಅದು ಸಿಮೋನ್ ಕಣ್ಣಿಗೆ, ಜಗತ್ತಿನ ಎಲ್ಲಾ ಭಾಷೆಗಳಿಗೂ ಅನ್ವಯಿಸುವಂತೆ ‘ಮ್ಯಾನ್ ಮೇಡ್ ಲಾಂಗ್ವೇಜ್’ ಆಗಿ ಕಾಣುತ್ತದೆ. ಕೊನೆಗೆ ಆಕೆ Women is not born, but made! ಎಂಬ ತೀರ್ಮಾನಕ್ಕೆ ಬರುತ್ತಾಳೆ!

ಯಾವ ಭಾಷೆಗೆ ಮಾತೃತ್ವವನ್ನು ಕಲ್ಪಿಸುತ್ತೇವೆಯೊ ಅದೇ ಭಾಷೆಯನ್ನು ಅವಳ ವಿಷಯದಲ್ಲಿ ಕೃಪಣವನ್ನಾಗಿಸಿದ್ದೇವೆ. ಅವಳ ಶೋಷಣೆಗೂ ಬಳಸಿಕೊಂಡಿದ್ದೇವೆ!

Comments

Submitted by Narayana Sun, 08/25/2013 - 09:34

.....ಸಿಮೋನ್-ಡೆ-ಬ್ಯೂವೊಇರ್ (Simone De Beauvoir 1908-1986) (ಆ ವರದಿಯಲ್ಲಿ ಸಿಮೋನ್ ದಿ ಬುವಾ ಎಂದು ಲಿಪ್ಯಂತರಿಸಲಾಗಿತ್ತು) ..... ಸಿಮೋನ್ ದಿ ಬುವಾ ಎನ್ನುವುದು ಸರಿ. ಫ್ರೆಂಚ್ ಭಾಷೆಯಲ್ಲಿ ಬರೆಯುವುದಕ್ಕೂ , ಉಚ್ಚರಿಸುವುದಕ್ಕೂ ವ್ಯತ್ಯಾಸವಿದೆ. (ಉದಾ: Gautier ಗೊತಿಯೇ Rendezvous – ರಾಂದಿವೂ...) ಈ ಲೇಖನದ ಪ್ರತಿಯೊಂದು ವಾದವನ್ನು ಪ್ರತಿವಾದದಿಂದ ಎದುರಿಸಬಹುದು ಅಂತ ಅನ್ನಿಸುತ್ತದೆ. ಕೆಲವು ಉದಾಹರಣೆಗಳು ಕೆಳಗಿವೆ ..... ‘ರಸಿಕಳಾದವಳಿಗೆ ಆರುಜನ ಗಂಡರು’ ಎಂದು ನೋಡಿ! ಭೀಕರ ಪರಿಣಾಮವನ್ನು ಎದುರಿಸಬೇಕಾಗುತ್ತದೆ..... ಹೌದೇ? ನಮ್ಮ ಸಮಾಜ ಐದು ಗಂಡಂದಿರನ್ನು ಸಂಭಾಳಿಸಿದ ದ್ರೌಪದಿಯನ್ನು ಪಂಚಕನ್ಯೆಯರ ಸ್ಥಾನದಲ್ಲಿಟ್ಟು ಗೌರವಿಸಿದೆಯಲ್ಲ ! ...ಗಂಡಸರು ಏನಾದರು ಅತ್ತರೆ, (ಅಳುವ ಮನಸ್ಥಿತಿಯನ್ನು ಪ್ರದರ್ಶಿಸಿದರೂ ಸಾಕು) ‘ಹೆಂಗಸು ಅತ್ತ ಹಾಗೆ ಅಳುತ್ತಿಯಲ್ಲ, ನೀನು ಗಂಡಸಲ್ಲವೆ?’ ಎಂಬ ವಾಗ್ಬಾಣ ಚಿಮ್ಮುತ್ತದೆ. .. ಇದನ್ನು ಹೀಗೆ ನೋಡಿ. ದುಃಖವಾದಾಗ ಅಳುವ ಸ್ವಾತಂತ್ರ್ಯ ಹೆಣ್ಣಿಗಿದೆ. ಅದೇ ಸ್ವಾತಂತ್ರ್ಯ ಗಂಡಿಗಿಲ್ಲ. ಅತ್ತರೆ ‘ಹೆಂಗಸು ಅತ್ತ ಹಾಗೆ ಅಳುತ್ತಿಯಲ್ಲ’ ಎಂಬ ಮೂದಲಿಕೆ. ( ಈಚೆಗೆ ಯಡಿಯೂರಪ್ಪನವರು ಸಾರ್ವಜನಿಕವಾಗಿ ಕಣ್ಣೀರು ಹಾಕಿ , ಗಂಡಸರೂ ಅಳಬಹುದು , ಪರವಾಗಿಲ್ಲ ಎಂದು ಸಾಧಿಸಿದ್ದಾರೆ!) .....ನಿಂದಿಸಿದ್ದು ರಾಮನಿಗೆ. ಆದರೆ ಕಾಡಿಗೆ ಹೋಗಿದ್ದು ಸೀತೆ!... ಮಂಥರೆ ಕೈಕೇಯಿಗೆ ಚಾಡಿ ಹೇಳದಿದ್ದರೆ, ಕೈಕೇಯಿ ದಶರಥನೊಂದಿಗೆ ಹಟ ಹಿಡಿಯದಿದ್ದರೆ ರಾಮ ಕಾಡಿಗೆ ಹೋಗುವ ಸಂದರ್ಭವೇ ಬರುತ್ತಿರಲಿಲ್ಲವಲ್ಲ ! ಹಾಗಾಗಿ ರಾಮ ಕಾಡಿಗೆ ಹೋಗಲಿಕ್ಕೆ ಹೆಂಗಸರೇ ಕಾರಣ ಎಂಬ ವಾದ ಹಾಕೋಣವೇ? ರಾಮಾಯಣ ಮಹಾಭಾರತ ದಂಥ ಮಹಾಗ್ರಂಥಗಳನ್ನು ನಮ್ಮ ವಾದಕ್ಕೆ ಸಮರ್ಥನೆಯಾಗಿ ಹೇಗೆ ಬೇಕಾದರೂ ಬಳಸಿಕೊಳ್ಳಬಹುದು! .....ಪ್ರತಿಯೊಬ್ಬ ಯಶಸ್ವೀ ಗಂಡಸಿನ ಹಿಂದೆ ಹೆಣ್ಣೊಬ್ಬಳು ಇರುತ್ತಾಳೆ ಎನ್ನುವ ನಾವು ಆ ಹೆಣ್ಣು ಮುಂದಿರುತ್ತಾಳೆ ಎನ್ನುವುದಿಲ್ಲ! ಹಣ್ಣು ಯಾವಾಗಲೂ ಗಂಡಸಿನ ಹಿಂದೆಯೇ ಇರಬೇಕು ಎನ್ನುವ ಮನಸ್ಥಿತಿಯಲ್ಲವೆ ಇದು?..... ಖಂಡಿತ ಅಲ್ಲ. ಇದರ ಅರ್ಥ ಗಂಡಿನ ಯಶಸ್ಸಿಗೆ ಬರಿಯ ಗಂಡಷ್ಟೇ ಕಾರಣನಲ್ಲ. ಅದರ ಹಿಂದೆ ಬೆಂಬಲಕ್ಕೆ ನಿಂತ ಹೆಣ್ಣೂ ಕಾರಣ. ಇದು ನಿಜವಾಗಿಯೂ ಸ್ತ್ರೀ ಪರವಾದ ಹೇಳಿಕೆ. .....ಲಿಂಗಗಳಲ್ಲಿ ಎರಡು ವಿಧ: ಒಂದು ಮಹತ್ ಲಿಂಗ ಇನ್ನೊಂದು ಅಮಹತ್ ಲಿಂಗ! ಪುರುಷ, ಪುರುಷನಿಗೆ ಸಂಬಂಧಿಸಿದ್ದೆಲ್ಲವೂ ಮಹತ್ ಲಿಂಗ. ಸ್ತ್ರೀಯರೂ ಸೇರಿದಂತೆ ಉಳಿದೆಲ್ಲವೂ ಅಮಹತ್ ಲಿಂಗ. (ನಮ್ಮ ಭಾಷೆಯಲ್ಲಿಯೇ ಮಕ್ಕಳು ನಪುಂಸಕಲಿಂಗ!). .... ನಾವು ಕನ್ನಡದಲ್ಲಿ ಕಲಿತದ್ದು ಬರಿ ಸ್ತ್ರೀ ಲಿಂಗ , ಪುಲ್ಲಿಂಗ ಮತ್ತು ನಪುಂಸಕಲಿಂಗ ಮಾತ್ರಾ – ಇವುಗಳಲ್ಲಿ ತಾರತಮ್ಯ ಇಲ್ಲ.. ಈ ಮಹತ್ ಮತ್ತು ಅಮಹತ್ ಲಿಂಗ ನನಗೆ ಗೊತ್ತಿಲ್ಲ. ದಯವಿಟ್ಟು ಬೆಳಕು ಚೆಲ್ಲಿ. ....... ಆ ವಿಷಯದಲ್ಲಿ ಪುರುಷ ಸೋಲುತ್ತಾನೆಯೆ? ಸರಸ್ವತ, ಸಾರಸ್ವತ ಎಂಬ ಪುರುಷದೇವತೆಯನ್ನು ಸೃಷ್ಟಿಸಿಯೇ ಬಿಟ್ಟಿದೆ!..... ಹೌದೇ ? ಈ ಸರಸ್ವತ, ಸಾರಸ್ವತ ಅಂದರೆ ಯಾವ ದೇವರು? ಸಾರಸ್ವತ ಎನ್ನುವುದು ಸರಸ್ವತಿಯ ವಿಶೇಷಣ ರೂಪವಲ್ಲವೇ ? .....ಹೀಗೆ, ಭಾಷೆಯಲ್ಲಿ, ಭಾವನೆಯಲ್ಲಿ, ಗ್ರಹಿಕೆಯಲ್ಲಿ, ಅಭಿವ್ಯಕ್ತಿಯಲ್ಲಿ ಎರಡನೆಯ ದರ್ಜೆಯವಳನ್ನಾಗಿಯೇ ಸ್ತ್ರೀಯನ್ನು ನೋಡುವ ಮನಸ್ಥಿತಿಯನ್ನೇ ಸಿಮೋನ್ ಗುರುತಿಸುತ್ತಾ ಹೋಗುತ್ತಾರೆ. ಸಿಮೋನ್-ಡೆ-ಬ್ಯೂವೊಇರ್ ಈ ಹಿನ್ನೆಲೆಯಲ್ಲಿಯೇ ಸೆಕೆಂಡ್ ಸೆಕ್ಸ್ ಎಂಬ ಪದಪುಂಜವನ್ನು ತನ್ನ ವಾದ ಸಮರ್ಥನೆಗೆ ಬಳಸಿಕೊಳ್ಳುತ್ತಾಳೆ.!..... ಸಿಮೋನ್ ದಿ ಬುವಾ Feminist ಚಳುವಳಿಯ ಪ್ರತಿಪಾದಕರಲ್ಲಿ ಒಬ್ಬಳು. ಆ ಕಾಲದಲ್ಲಿ ಆಕೆ ಬರೆದದ್ದು ಸಕಾರಣವಾಗಿತ್ತು, ಅಷ್ಟೇ ಅಲ್ಲ, ಅದು ಸಮಾಜವನ್ನು ಬಡಿದೆಬ್ಬಿಸಿತು ಹಾಗೂ ಸ್ತ್ರೀಯರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಕ್ಕುಗಳಿಗಾಗಿ ಸ್ತ್ರೀವಾದಿ ಚಳುವಳಿಯನ್ನು ಹುಟ್ಟು ಹಾಕಿತು. ಇದೊಂದು ಐತಿಹಾಸಿಕ ಸತ್ಯ. ಆದರೆ ಅಂದಿನಿಂದ ಇಂದಿನವರೆಗೆ ಕಾವೇರಿ ನದಿಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ. ಸ್ತ್ರೀ ವಾದ ಬಹಳಷ್ಟನ್ನು ಸಾಧಿಸಿದೆ. ಅಂದು ಬಹುಷಃ ಸಮರ್ಥನೀಯವಾದ ’ಉಗ್ರ” ಸ್ತ್ರೀವಾದದಿಂದಾಗಿ, ಇಂದು ಅನೇಕ ಸ್ತ್ರೀವಾದಿಗಳೇ ತಮ್ಮನ್ನು Feminist ಎಂದು ಕರೆದುಕೊಳ್ಳಲು ಹಿಂಜರಿಯುತ್ತಾರೆ. ಒಟ್ಟಿನಲ್ಲಿ ಈ ಲೇಖನ ಒಂದು ವಿಷಯವನ್ನು ಮೊದಲು ಆರಿಸಿಕೊಂಡು ಅದರ ಸಮರ್ಥನೆಗೆ ಬೇಕಾದ ವಿಷಯಗಳನ್ನಷ್ಟೇ ಕಲೆಹಾಕಿರುವಂತಿದೆ. ಸ್ತ್ರೀ ಶೋಷಣೆಯ ವಾದ ಸಂಕೀರ್ಣವಾದದ್ದು. ಈ ರೀತಿಯ ಸರಳೀಕೃತ ಸಮರ್ಥನೆಯಿಂದ ಅದಕ್ಕೇನೂ ಪ್ರಯೋಜನವಾಗುವಂತೆ ನನಗೆ ಅನ್ನಿಸುವುದಿಲ್ಲ. ನಾರಾಯಣ
Submitted by Narayana Sun, 08/25/2013 - 09:37

ಮುಂದುವರಿದಿದೆ.... ....... ಆ ವಿಷಯದಲ್ಲಿ ಪುರುಷ ಸೋಲುತ್ತಾನೆಯೆ? ಸರಸ್ವತ, ಸಾರಸ್ವತ ಎಂಬ ಪುರುಷದೇವತೆಯನ್ನು ಸೃಷ್ಟಿಸಿಯೇ ಬಿಟ್ಟಿದೆ!..... ಹೌದೇ ? ಈ ಸರಸ್ವತ, ಸಾರಸ್ವತ ಅಂದರೆ ಯಾವ ದೇವರು? ಸಾರಸ್ವತ ಎನ್ನುವುದು ಸರಸ್ವತಿಯ ವಿಶೇಷಣ ರೂಪವಲ್ಲವೇ ? .....ಹೀಗೆ, ಭಾಷೆಯಲ್ಲಿ, ಭಾವನೆಯಲ್ಲಿ, ಗ್ರಹಿಕೆಯಲ್ಲಿ, ಅಭಿವ್ಯಕ್ತಿಯಲ್ಲಿ ಎರಡನೆಯ ದರ್ಜೆಯವಳನ್ನಾಗಿಯೇ ಸ್ತ್ರೀಯನ್ನು ನೋಡುವ ಮನಸ್ಥಿತಿಯನ್ನೇ ಸಿಮೋನ್ ಗುರುತಿಸುತ್ತಾ ಹೋಗುತ್ತಾರೆ. ಸಿಮೋನ್-ಡೆ-ಬ್ಯೂವೊಇರ್ ಈ ಹಿನ್ನೆಲೆಯಲ್ಲಿಯೇ ಸೆಕೆಂಡ್ ಸೆಕ್ಸ್ ಎಂಬ ಪದಪುಂಜವನ್ನು ತನ್ನ ವಾದ ಸಮರ್ಥನೆಗೆ ಬಳಸಿಕೊಳ್ಳುತ್ತಾಳೆ.!..... ಸಿಮೋನ್ ದಿ ಬುವಾ Feminist ಚಳುವಳಿಯ ಪ್ರತಿಪಾದಕರಲ್ಲಿ ಒಬ್ಬಳು. ಆ ಕಾಲದಲ್ಲಿ ಆಕೆ ಬರೆದದ್ದು ಸಕಾರಣವಾಗಿತ್ತು, ಅಷ್ಟೇ ಅಲ್ಲ, ಅದು ಸಮಾಜವನ್ನು ಬಡಿದೆಬ್ಬಿಸಿತು ಹಾಗೂ ಸ್ತ್ರೀಯರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಕ್ಕುಗಳಿಗಾಗಿ ಸ್ತ್ರೀವಾದಿ ಚಳುವಳಿಯನ್ನು ಹುಟ್ಟು ಹಾಕಿತು. ಇದೊಂದು ಐತಿಹಾಸಿಕ ಸತ್ಯ. ಆದರೆ ಅಂದಿನಿಂದ ಇಂದಿನವರೆಗೆ ಕಾವೇರಿ ನದಿಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ. ಸ್ತ್ರೀ ವಾದ ಬಹಳಷ್ಟನ್ನು ಸಾಧಿಸಿದೆ. ಅಂದು ಬಹುಷಃ ಸಮರ್ಥನೀಯವಾದ ’ಉಗ್ರ” ಸ್ತ್ರೀವಾದದಿಂದಾಗಿ, ಇಂದು ಅನೇಕ ಸ್ತ್ರೀವಾದಿಗಳೇ ತಮ್ಮನ್ನು Feminist ಎಂದು ಕರೆದುಕೊಳ್ಳಲು ಹಿಂಜರಿಯುತ್ತಾರೆ. ಒಟ್ಟಿನಲ್ಲಿ ಈ ಲೇಖನ ಇದು ಒಂದು ವಿಷಯವನ್ನು ಮೊದಲು ಆರಿಸಿಕೊಂಡು ಅದರ ಸಮರ್ಥನೆಗೆ ಬೇಕಾದ ವಿಷಯಗಳನ್ನಷ್ಟೇ ಕಲೆಹಾಕಿರುವಂತಿದೆ. ಸ್ತ್ರೀ ಶೋಷಣೆಯ ವಾದ ಸಂಕೀರ್ಣವಾದದ್ದು. ಈ ರೀತಿಯ ಸರಳೀಕೃತ ಸಮರ್ಥನೆಯಿಂದ ಅದಕ್ಕೇನೂ ಪ್ರಯೋಜನವಾಗುವಂತೆ ನನಗೆ ಅನ್ನಿಸುವುದಿಲ್ಲ. ನಾರಾಯಣ

ನನ್ನ‌ ಮೇಲಿನ‌ ಎರಡು ಪ್ರತಿಕ್ರಿಯೆಗಳಲ್ಲಿ ಬರಹದಿಂದ‌ cut,paste ಮಾಡಿದ್ದಕ್ಕೋ ಏನೋ line break ಗಳು ಹೊರಟು ಹೋಗಿವೆ. ದಯವಿಟ್ಟು ಮನ್ನಿಸಿ! ನಾರಾಯಣ‌

ಸತ್ಯನಾರಾಯಣರ ಅನೇಕ ಮೌಲಿಕ ಲೇಖನಗಳಿಗೆ ತದ್ವಿರುದ್ಧವಾಗಿದೆ ಈ ಲೇಖನ. ಲೇಖನದ ಉದ್ದೇಶದ ಬಗೆಗೆ ಪ್ರಶ್ನಿಸುತ್ತಿಲ್ಲ. ಹಾಗಿದ್ದೂ ಸ್ತ್ರೀ ವಿರೋಧಿಯಾಗಿ ಚಿತ್ರಿಸುವುದು ಸರಿಕಾಣದು ಅದೂ ಈ ಕಾಲದಲ್ಲಿ.

ನಾರಾಯಣರು ಅನೇಕ ಉದಾಹರಣೆಯ ಮೂಲಕ ಸಮರ್ಥವಾಗಿ ಬರೆದಿರುವುದು ಚೆನ್ನಾಗಿದೆ. ಸಿಮೊನ್ ದಿ ಬುವಾ ಬಗ್ಗೆ ತಿಳಿಯಿತು ಧನ್ಯವಾದಗಳು

- ಅರವಿಂದ

Submitted by makara Sun, 08/25/2013 - 17:23

ಡಾ! ಸತ್ಯನಾರಾಯಣ ಅವರೆ, ಪಾರ್ಥಸಾರಥಿಗಳು ಹೇಳಿದಂತೆ ನೀವು ಹೇಳಿರುವ ಅಂಶಗಳನ್ನೆಲ್ಲಾ ಒಪ್ಪಲಾಗದಿದ್ದರೂ ಸಹ ನಿಮ್ಮ ಬರಹ ಚಿಂತನಾರ್ಹವಾಗಿದೆ ಎಂದು ಹೇಳಬಹುದು. ಕೌಂತೇಯ ಎಂದರೆ ಕುಂತಿಯ ಮಗನೆಂದೂ ಸೌಭದ್ರನೆಂದರೆ ಸುಭದ್ರೆಯ ಮಗನೆಂತಲೂ ಅರ್ಥವೇ ಹೊರತು ಇಲ್ಲಿ ಸ್ತ್ರೀಯರನ್ನು ಕೀಳಾಗಿಸಿ ಗಂಡಸಿನ ಹಿರಿಮೆಯನ್ನು ಮೇಲೇರಿಸಬೇಕಂತಲ್ಲ. ಇದು ಸಂಸ್ಕೃತದಲ್ಲಿರುವ ಒಂದು ಭಾಷಾ ಪ್ರಯೋಗವಷ್ಟೇ. ಅದೇ ರೀತಿ ಸಾರಸ್ವತರು ಎಂದರೆ ಸರಸ್ವತೀ ಪುತ್ರರೇ ಹೊರತು ಅದು ಪುರಷನ ಅಹಮಿಕೆಯನ್ನು ಎತ್ತಿಹಿಡಿಯಲಿಕ್ಕೆ ಬಳಸಿದ್ದಾಗಿಲ್ಲ. ಅದೇ ವಿಧವಾಗಿ ಪುರಷ ಸರಸ್ವತೀ ಎಂದರೆ ಪುರಷ ರೂಪದಲ್ಲಿರುವ ಸರಸ್ವತೀ ಎನ್ನುವ ಅರ್ಥವನ್ನು ಕೊಡುತ್ತದೆಯೇ ಹೊರತು ಇಲ್ಲೂ ಗಂಡಸಿನ ಅಹಮಿಕೆಯನ್ನು ಎತ್ತಿತೋರಿಸುವ ಆಲೋಚನೆಯಿಂದಲ್ಲ. ನಮ್ಮ ದೇಶದಲ್ಲಿ ಪುರಷರಿಗಿಂತ ಸ್ತ್ರೀಯರಿಗೇ ಹೆಚ್ಚು ಗೌರವವನ್ನು ಕೊಡಲಾಗಿದೆ ಎನ್ನುವುದನ್ನು ಮರೆಯಬೇಡಿ. ಯತ್ರ ನಾರ್ಯಾಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ ಎಂದು ಹೇಳಿದ ದೇಶ ನಮ್ಮದು. ವೇದಕಾಲದಲ್ಲಿ ಅನೇಕ ಸ್ತ್ರೀ ವಿದ್ವಾಂಸರು ಇದ್ದರು. ಅವರಿಗೆ ಪುರಷನಿಗೆ ಸಮಾನವಾದ ಸ್ಥಾನಮಾನ ಕೊಡದಿದ್ದರೆ ಅವರೆಲ್ಲಾ ಎಲ್ಲಿಂದ ಬರುತ್ತಿದ್ದರು. ನೀವು ಇಲ್ಲಿ ಪ್ರಸ್ತಾಪಿಸಿರುವ ವಿಷಯ ಇತರೇ ದೇಶಗಳಲ್ಲಿ ಮತ್ತು ಇಂದು ನಮ್ಮ ದೇಶದಲ್ಲಿ ಪ್ರಸ್ತುತವಿರಬಹುದು :( ಆದರೆ ಇದು ಖಂಡಿತಾ ನಮ್ಮ ಸಂಸ್ಕೃತಿಯಾಗಿರಲಿಲ್ಲ ಎನ್ನುವುದನ್ನು ಗಮನಿಸಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by Iynanda Prabhukumar Mon, 05/12/2014 - 16:31

In reply to by makara

ಶ್ರೀಧರರವರ ಕೌಂತೇಯ, ಸೌಭದ್ರ, ಸಾರಸ್ವತ, ಮುಂತಾದ ಪ್ರಯೋಗಗಳಲ್ಲಿ ಪುರುಷರ ಅಹಮಿಕೆಯನ್ನು ಎತ್ತಿ ಹಿಡಿಯುವದಕ್ಕೆ ಬಳಸಲಾಗಿಲ್ಲವೆಂದರೂ ಸ್ತ್ರೀಯರನ್ನು ಈ ಮೂಲಕ ಗೌರವಿಸಲಾಗಿದೆ ಎನ್ನಲಾಗದು. "ಯತ್ರ ನಾರ್ಯಾಸ್ತು..." ಎಂಬುವದೊಂದನ್ನೇ ಸಾಮಾನ್ಯವಾಗಿ ನಾವು ಸ್ತ್ರೀಯರನ್ನು ಗೌರವಿಸಲು ವೇದೇತ್ಯಾದಿ ಸಾಹಿತ್ಯಗಳಲ್ಲಿ ಹೇಳಿದ್ದಾರೆಂದು ನೋಡುತ್ತೇವಲ್ಲದೆ ಬೇರೆ ಯಾವ ಸೂಕ್ತಿಯೂ ಉದಾಹೃತವಾಗಿರುವದು ನಾನರಿತಿಲ್ಲ. ಮನುಧರ್ಮದಲ್ಲೇ ಸ್ತ್ರೀಯರನ್ನು ಎರಡನೇ ದರ್ಜೆಯಲ್ಲಿಟ್ಟಿರುವದು ಸರ್ವವಿದಿತ. ವೇದಕಾಲದಲ್ಲಿದ್ದ ವಿದ್ವಾಂಸೆಯರು ಇದ್ದರು; ನಿಜ. ಆದರೆ ಅವರ ಸಂಖ್ಯೆ ಪುರುಷರಿಗೆ ಹೋಲಿಸಿದರೆ ಅತ್ಯಲ್ಪವಲ್ಲವೇ?

ಪ್ರಸ್ತುತಃ ಡಾ ಸತ್ಯನಾರಾಯಣರವರ ಲೇಖನದ ತಲೆಬರೆಹ, "ನಿಂದಿಸಿದ್ದು ರಾಮನಿಗೆ, ಕಾಡಿಗೆ ಹೋದದ್ದು ಸೀತೆ" ಎನ್ನುವದು ರಾಮನನ್ನು ಅಗಸ ನಿಂದಿಸಿದಾಗ ಬಸುರಿ ಸೀತೆಯನ್ನು ಕಾಡಿಗೆ ಕಳುಹಿಸಿದ ಸಂದರ್ಭ ತಾನೇ? ಶ್ರೀ ನಾರಾಯಣರು ಬರೆದಂತೆ ರಾಮಾದಿಗಳ ವನವಾಸದ್ದಲ್ಲ.

ಸತ್ಯನಾರಾಯಣರ ಲೇಖನದಲ್ಲಿರುವ ವಿಷಯಗಳಲ್ಲಿ ಸುಮಾರು ೯೫%ರಷ್ಟನ್ನು ನಾನು ಒಪ್ಪುತ್ತೇನೆ. ನಮ್ಮ ದೇಶದಲ್ಲಿಯೂ ಸ್ತ್ರೀ ಬಳಕೆಯ ವಸ್ತು (commodity) ಆಗಿರುವದು ನಿಜ. ಪರೋಕ್ಷವಾಗಿಯಾದರೂ ಸ್ತ್ರೀಯರೂ ಇದನ್ನು ಒಪ್ಪಿಕೊಂಡಿರುವದೂ ಹೌದು.