ನಿಂಬೆಹಣ್ಣಿನ ಮೊಸರು ಗೊಜ್ಜು
ಚೆನ್ನಾಗಿ ಹಣ್ಣಾದ ಎರಡು ನಿಂಬೆಹಣ್ಣು, ಒಂದು ಬಟ್ಟಲು ಸಿಹಿಮೊಸರು, ಎರಡು-ಮೂರು ಹಸಿರು ಮೆಣಸಿನ ಕಾಯಿಗಳು, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಸಕ್ಕರೆ.
ಎರಡು ನಿಂಬೆ ಹಣ್ಣು ಬೇಯಿಸುವಷ್ಟು ನೀರನ್ನು ಕುಕ್ಕರಿಗೆ ಹಾಕಿ ಐದಾರು ಕೂಗು ( ಶಿಳ್ಳಿ ) ಬರಿಸಿ ಸ್ವಲ್ಪ ಸಮಯದ ನಂತರ ನಿಂಬೆಹಣ್ಣಿನಲ್ಲಿರುವ ಬೀಜಗಳನ್ನು ತೆಗೆದುಹಾಕಿ. ಒಂದು ಸ್ಟೀಲ್ ಬೌಲಿಗೆ ಹಾಕಿ ಚೆನ್ನಾಗಿ ಕಿವುಚಿ. ಈ ಮಿಶ್ರಣಕ್ಕೆ ಉಪ್ಪು, ಗಟ್ಟಿ ಸಿಹಿಮೊಸರು, ಸಕ್ಕರೆ, ಜಜ್ಜಿದ ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ಕೂಡಿಸಿ. ಸ್ವಲ್ಪ ಬೆಣ್ಣೆಗೆ ಉದ್ದಿನ ಬೇಳೆ, ಸಾಸಿವೆ ಹಾಕಿ ಚಟಪಟಿ ಕೂಗಿದ ನಂತರ ಒಗ್ಗರಣೆ ಕೊಟ್ಟರೆ ಮೊಸರುಗೊಜ್ಜು ಸಿದ್ಧ. ಮಾರುಕಟ್ಟೆಯಲ್ಲಿ ನಿಂಬೆಹಣ್ಣಿನ ಬೆಲೆ ಕಡಿಮೆಯಿದ್ದಾಗ ಅಥವಾ ಮನೆಯಲ್ಲಿಯೇ ಯಥೇಚ್ಛ ನಿಂಬೆಹಣ್ಣು ಬೆಳೆದಾಗ ಬಿಸಿನೀರನ್ನು ಒಂದು ಕುದಿಬರಿಸಿ ಉಪ್ಪಿನ ನೀರಿಗೆ ಹಾಕಿಟ್ಟರೆ ಬೇಕೆನಿಸಿದಾಗ ಇಂಥ ಮೊಸರುಗೊಜ್ಜು ಝಟ್ ಪಟ್ ಸಿದ್ಧ! ಮಳೆಗಾಲ ಅಥವಾ ಜಡ್ಡುಗಟ್ಟಿದ ಬಾಯಿಗೂ ರುಚಿ ರುಚಿ. ಒಮ್ಮೆ ಬಳಸಿದರೆ ಮತ್ತೊಮ್ಮೆ, ಮಗದೊಮ್ಮೆ ಬಿಡಲಾಗದಷ್ಟು ಕಾಡುವ- ಬಯಸುವ ಮೋಹಕಗೊಜ್ಜು!
-ಎಸ್. ರೋಹಿಣಿ ಶರ್ಮಾ, ಸಾಗರ