ನಿಗೂಢ ಕ್ಷುದ್ರಗ್ರಹಗಳ ಲೋಕದಲ್ಲಿ...
ನಿಮಗೆ ನೆನಪಿರಬಹುದು, ನಮ್ಮ ಶಾಲಾದಿನಗಳಲ್ಲಿ ಗ್ರಹಗಳ ಬಗ್ಗೆ ಪಾಠವನ್ನು ಮಾಡುವಾಗ ಅಧ್ಯಾಪಕರು ಕ್ಷುದ್ರಗ್ರಹಗಳ ಬಗ್ಗೆ ವಿವರಣೆ ನೀಡಿದ್ದು ಇತ್ಯಾದಿ. ಅಂದಿನ ಪಾಠ, ನಂತರ ಪರೀಕ್ಷೆಗಳ ಬಳಿಕ ನಾವು ಕ್ಷುದ್ರಗ್ರಹಗಳನ್ನು ಮರೆತೇ ಬಿಟ್ಟಿರುತ್ತೇವೆ. ನಂತರದ ದಿನಗಳಲ್ಲಿ ಎಲ್ಲಾದರೂ ಪತ್ರಿಕೆಗಳಲ್ಲಿ ಅಥವಾ ದೂರದರ್ಶನದಲ್ಲಿ ‘ಭೂಮಿಯ ಸಮೀಪಕ್ಕೆ ಬರುತ್ತಿರುವ ಕ್ಷುದ್ರಗ್ರಹ' ಎಂಬ ಸುದ್ದಿಕೇಳಿದಾಗ ಮತ್ತೆ ನೆನಪಾಗುತ್ತದೆ.
ನಮ್ಮ ಸೌರವ್ಯೂಹದಲ್ಲಿ ಇರುವ ಎಂಟು ಗ್ರಹಗಳ (ಮೊದಲು ೯ ಗ್ರಹಗಳು) ಪೈಕಿ ಮಂಗಳ ಹಾಗೂ ಗುರು ಗ್ರಹಗಳ ನಡುವೆ ಕಂಡು ಬರುವ ಮಿಲಿಯಗಟ್ಟಲೆ ಆಕಾಶಕಾಯಗಳನ್ನು ಕ್ಷುದ್ರಗ್ರಹ (Asteroid) ಗಳೆಂದು ಕರೆಯುತ್ತಾರೆ. ಇವುಗಳು ತಮ್ಮದೇ ಆದ ದಪ್ಪ ಪಟ್ಟೆಯಾಕಾರದ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುತ್ತವೆ. ಇವುಗಳಲ್ಲಿ ಕೆಲವು ಗಾತ್ರದಲ್ಲಿ ನೂರಾರು ಕಿ.ಮೀ ಗಳಿಂದ ಒಂದು ಕಿ.ಮೀ.ವರೆಗಿನ ಕ್ಷುದ್ರಗ್ರಹಗಳು ಇವೆ. ಹಲವಾರು ಬಾರಿ ಇವುಗಳು ಕಾರಣಾಂತರಗಳಿಂದ ತಮ್ಮ ಕಕ್ಷೆಯನ್ನು ಬಿಟ್ಟು ಭೂಮಿಯ ಗುರುತ್ವಾಕರ್ಷಣ ಶಕ್ತಿಗೆ ಸಿಲುಕಿ, ಭೂಮಿಯತ್ತ ಬರುವುದು ಇದೆ. ಬಹಳಷ್ಟು ಕ್ಷುದ್ರಗ್ರಹಗಳು ಭೂಮಿಯತ್ತ ಬರುವಾಗ ವಾತಾವರಣದ ಘರ್ಷಣೆಗೆ ಸಿಲುಕಿ ಉರಿದು ಮಾರ್ಗ ಮಧ್ಯದಲ್ಲೇ ಬೂದಿಯಾಗಿ, ಆವಿಯಾಗಿ ಬಿಡುತ್ತವೆ. ಆದರೆ ಕೆಲವೊಂದು ದೊಡ್ಡ ಗಾತ್ರದ ಕ್ಷುದ್ರಗ್ರಹಗಳು ಮಾತ್ರ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇರುತ್ತದೆ. ಕೆಲವು ಬಾರಿ ಅತೀ ಸಮೀಪದಿಂದ ಹಾದು ಹೋದ ಘಟನೆಗಳೂ ನಡೆದಿವೆ.
೧೯೦೮ರ ಜೂನ್ ೩೦ರಂದು ಸೈಬೀರಿಯಾದ ತುಂಗುಸ್ಕಾದಲ್ಲಿ ಒಂದು ಕ್ಷುದ್ರಗ್ರಹ ಅಪ್ಪಳಿಸಿ ಅಪಾರವಾದ ಹಾನಿಯುಂಟು ಮಾಡಿತ್ತು. ಇಂತಹ ಅನಾಹುತಗಳು ಮುಂದಕ್ಕೆ ನಡೆದರೆ ಅದರಿಂದ ಪಾರಾಗುವ ಮತ್ತು ಕ್ಷುದ್ರಗ್ರಹಗಳ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತೀ ವರ್ಷ ಜೂನ್ ೩೦ರಂದು ವಿಶ್ವ ಕ್ಷುದ್ರಗ್ರಹಗಳ ದಿನ (World Asteroid Day) ಎಂದು ಆಚರಿಸಲಾಗುತ್ತಿದೆ. ಕ್ಷುದ್ರಗ್ರಹಗಳಿಗೇ ಒಂದು ದಿನವಿದೆಯಾ ಎಂದು ಅಚ್ಚರಿ ಪಡಬೇಡಿ. ಇದು ನಿಜಕ್ಕೂ ಸತ್ಯ.
ಈ ದಿನದ ಮೂಲಕ ಕ್ಷುದ್ರಗ್ರಹಗಳ ಆಕಾರ, ಚಲನೆಯ ಬಗ್ಗೆ ಇನ್ನಷ್ಟು ಸವಿಸ್ತಾರವಾಗಿ ತಿಳಿಯಲು ಅನುಕೂಲವಾಗುತ್ತದೆ. ೨೦೧೬ರಲ್ಲಿ ಈ ಬಗ್ಗೆ ಗಮನಹರಿಸಿ ವಿಶ್ವಸಂಸ್ಥೆಯು ಜೂನ್ ೩೦ನ್ನು ಕ್ಷುದ್ರಗ್ರಹಗಳ ದಿನವನ್ನಾಗಿ ಆಚರಿಸಲು ಒಪ್ಪಿಗೆ ನೀಡಿತು. ಆ ಬಳಿಕ ಈ ದಿನದಂದು ಪ್ರತೀ ವರ್ಷ ಕ್ಷುದ್ರಗ್ರಹಗಳ ಬಗ್ಗೆ ಅಧ್ಯಯನ, ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಪ್ರಪಂಚದ ಎಲ್ಲಾ ದೇಶಗಳಲ್ಲಿ ಈ ದಿನದಂದು ಕ್ಷುದ್ರಗ್ರಹಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ, ವಸ್ತು ಪ್ರದರ್ಶನಗಳ ಮೂಲಕ ಸಾಮಾನ್ಯ ಜನರಲ್ಲಿ ಈ ಬಗ್ಗೆ ಅರಿವನ್ನು ಮೂಡಿಸಲಾಗುತ್ತಿದೆ.
ಹಲವಾರು ಸಂದರ್ಭಗಳಲ್ಲಿ ಕ್ಷುದ್ರಗ್ರಹಗಳು ಭೂಮಿಗೆ ಅತೀ ಸಮೀಪದಿಂದ ಹಾದು ಹೋಗುತ್ತವೆ. ಈ ಬೆಳವಣಿಗೆಯ ಮೇಲೆ ಸಹಜವಾಗಿ ಖಗೋಳ ವಿಜ್ಞಾನಿಗಳು ದೃಷ್ಟಿಯನ್ನು ನೆಟ್ಟಿರುತ್ತಾರೆ. ಈ ಆಕಾಶಕಾಯಗಳ ಅಧ್ಯಯನವು ಈಗ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಈ ತುಂಡು ತುಂಡಾದ ಆಕಾಶಕಾಯಗಳ ಬಗ್ಗೆ ಕುತೂಹಲಗಳು ಹಲವಾರು ವರ್ಷಗಳಿಂದ ಇನ್ನಷ್ಟು ಕಾವು ಪಡೆದುಕೊಳ್ಳುತ್ತಲೇ ಇದೆ. ಹೊಸ ಅನ್ವೇಷಣೆ ಮತ್ತು ಅಧ್ಯಯನಗಳು ನಡೆಯುತ್ತಲೇ ಇವೆ.
ನಾವು ಕ್ಷುದ್ರಗ್ರಹಗಳು ಯಾವ ವಸ್ತುವಿನಿಂದ ರಚನೆಯಾಗಿದೆ ಎಂಬ ಬಗ್ಗೆ ಗಮನಿಸುವ. ಅವುಗಳಲ್ಲಿ ಇರುವ ಮೂಲ ವಸ್ತುಗಳು ಏನಿರಬಹುದು ಎಂಬ ಬಗೆ ಇನ್ನೂ ಸರಿಯಾದ ಮಾಹಿತಿಗಳು ಲಭ್ಯವಿಲ್ಲ. ಲೋಹಗಳೇ, ನೀರು ಅಥವಾ ಮಂಜುಗಡ್ಡೆಗಳೇ ಅಥವಾ ಇನ್ನಿತರ ವಸ್ತುಗಳಿಂದ ಇವುಗಳ ರಚನೆಯಾಗಿದೆಯೇ ಎಂಬುವುದನ್ನು ತಿಳಿಯಲು ಹಲವಾರು ವರ್ಷಗಳಿಂದ ವಿಜ್ಞಾನಿಗಳು ಅಧ್ಯಯನ ನಡೆಸುತ್ತಾ ಬಂದಿದ್ದಾರೆ. ಅಮೇರಿಕಾ, ಚೀನಾ, ಜಪಾನ್ ಮುಂತಾದ ದೇಶಗಳು ಗಗನ ನೌಕೆಗಳ ಮೂಲಕ ಇವುಗಳ ಮಾದರಿಗಳನ್ನು ಸಂಗ್ರಹಿಸುವ ಕೆಲಸಕ್ಕೆ ಕೈಹಾಕಿದವು. ಈ ಕ್ಷುದ್ರಗ್ರಹದ ಮೇಲಿನ ವಾತಾವರಣ, ನೀರಿನ ಲಭ್ಯತೆ, ಮಾನವ ಬದುಕುವ ಸಾಧ್ಯತೆ ಇತ್ಯಾದಿಗಳ ಬಗ್ಗೆ ಅನ್ವೇಷಣೆಗಳು ನಡೆಯುತ್ತಲೇ ಇವೆ. ಭೂಮಿಯತ್ತ ವೇಗವಾಗಿ ಬರುವ ದೊಡ್ದ ದೊಡ್ಡ ಕ್ಷುದ್ರಗ್ರಹಗಳ ಪಥವನ್ನು ಬದಲಾಯಿಸಲು ಸಾಧ್ಯವೇ? ಎನ್ನುವ ಬಗ್ಗೆಯೂ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ.
ಅಂತರಾಷ್ಟ್ರೀಯ ಖಗೋಳ ವಿಜ್ಞಾನಿಗಳ ಸಂಸ್ಥೆಯು (IAU) ವಿಶ್ವದಾದ್ಯಂತ ವಿಜ್ಞಾನಿಗಳ ತಂಡವನ್ನು ರಚನೆ ಮಾಡಿ ಈ ಕ್ಷುದ್ರಗ್ರಹಗಳ ಅನ್ವೇಷಣೆಯ ಹಾಗೂ ಸಂಶೋಧನೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ನಮ್ಮ ಭಾರತೀಯರಿಗೆ ಹೆಮ್ಮೆ ಪಡುವ ವಿಷಯವೆಂದರೆ ಇತ್ತೀಚೆಗೆ ನಡೆದ ಅನ್ವೇಷಣೆಯಲ್ಲಿ ಭಾರತೀಯ ವಿಜ್ಞಾನ ವಿದ್ಯಾರ್ಥಿಗಳು ಸುಮಾರು ೧೫ ಹೊಸ ಕ್ಷುದ್ರಗ್ರಹಗಳನ್ನು ಪತ್ತೆ ಹಚ್ಚಿದ್ದಾರೆ. ಭಾರತೀಯ ವಿಜ್ಞಾನಿಗಳ ತಂಡವೊಂದು, ಭೂಮಿಗೆ ಸಮೀಪದ ೪ ಕ್ಷುದ್ರಗ್ರಹಗಳನ್ನು ಪತ್ತೆ ಹಚ್ಚಿದೆ. ಅತ್ಯಂತ ಚಿಕ್ಕದಾದ ಅಂದರೆ ಕೇವಲ ೨ ಮೀ. ಗಾತ್ರದ ಕ್ಷುದ್ರಗ್ರಹವೊಂದನ್ನು ವಿಜ್ಞಾನಿಗಳ ಸಮೂಹ ಕಂಡು ಹಿಡಿದಿದೆ. ಈ ವಿಜ್ಞಾನಿಗಳ ತಂಡದಲ್ಲಿ ಭಾರತೀಯ ವಿಜ್ಞಾನಿಯೋರ್ವರು ಇರುವುದು ನಮಗೆ ಹೆಮ್ಮೆಯ ಸಂಗತಿಯೇ.
ಕ್ಷುದ್ರಗ್ರಹಗಳಿಂದಾಗಿಯೇ ಭೂಮಿಯ ಮೇಲೆ ಜೀವ ಸಂಕುಲದ ಉಗಮವಾಯಿತೇ ಎನ್ನುವ ಬಗ್ಗೆ ಹಾಗೂ ಯಾವುದೋ ಒಂದು ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಿದ ಕಾರಣದಿಂದಲೇ ದೈತ್ಯಜೀವಿಗಳಾದ ಡೈನೋಸಾರಸ್ ಗಳ ಅಂತ್ಯವಾಯಿತೇ? ಎನ್ನುವ ಬಗ್ಗೆ ಎಲ್ಲಾ ಪ್ರಯೋಗಗಳು ನಡೆಯುತಲಿವೆ. ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದಾಗ ವರ್ಷಾನುಗಟ್ಟಲೆ ಕವಿದ ಧೂಳಿನ ಅಂಧಕಾರದಿಂದಲೇ ಡೈನೋಸಾರಸ್ ಗಳ ನಿರ್ನಾಮವಾಯಿತು ಎಂಬ ಕುತೂಹಲಕಾರಿಯಾದ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ಕ್ಷುದ್ರಗ್ರಹಗಳ ಬಗೆಗಿನ ಸಂಶೋಧನೆಗಳಿಗೆ ಅಂತ್ಯವಿಲ್ಲ. ನಮಗೆ ಬರಿಯ ಕಣ್ಣಿಗೆ ಕಾಣಿಸದ ಆಕಾಶಕಾಯಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಕಮ್ಮಿ. ಆದರೂ ಖಗೋಳ ವಿಜ್ಞಾನ ಒಂದು ಕುತೂಹಲಕಾರಿಯಾದ ವಿಷಯ. ಪ್ರತೀ ದಿನ, ಪ್ರತೀ ಕ್ಷಣ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ. ನಾವೂ ಈ ಬಗ್ಗೆ ಸ್ವಲ್ಪ ಆಸಕ್ತಿ ವಹಿಸಿದರೆ ಹಲವಾರು ರೋಚಕ ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ. ನಮ್ಮ ಮಕ್ಕಳಿಗೂ ಇದರ ಬಗ್ಗೆ ಹೇಳಿದರೆ ಅವರು ಭವಿಷ್ಯದಲ್ಲಿ ಖಗೋಳ ವಿಜ್ಞಾನಿಯಾಗಿ ಹೊಸ ಆಕಾಶಕಾಯವೊಂದನ್ನು ಕಂಡು ಹಿಡಿದರೂ ಆಶ್ಚರ್ಯವಿಲ್ಲ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ