ನಿಗೂಢ ನಾಣ್ಯ

ನಿಗೂಢ ನಾಣ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ವಿಠಲ್ ಶೆಣೈ
ಪ್ರಕಾಶಕರು
ಮೈಲ್ಯಾಂಗ್ ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ.೨೦೦.೦೦, ಮುದ್ರಣ: ೨೦೨೦

ಬಿಟ್ ಕಾಯಿನ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ ಈಗೀಗ ಬಹಳಷ್ಟು ಮಾತುಗಳು ಕೇಳಿ ಬರುತ್ತಿವೆ. ಬಿಟ್ ಕಾಯಿನ್ಸ್ ಬಗ್ಗೆ ಜನ ಸಾಮಾನ್ಯರಿಗೆ ಏನೇನೂ ತಿಳಿದಿಲ್ಲ. ಸುಮ್ಮನೇ ವಿವರಗಳನ್ನು ಕೊಡುತ್ತಾ ಹೋದರೆ ಅರ್ಥವೂ ಆಗಲಾರದು. ಅದಕ್ಕಾಗಿಯೇ ವಿಠಲ್ ಶೆಣೈ ಅವರು ಕಾದಂಬರಿ ರೂಪದಲ್ಲಿ ‘ನಿಗೂಢ ನಾಣ್ಯ' ಎಂಬ ಪುಸ್ತಕವನ್ನು ಬರೆದು ಓದುಗ ಪ್ರಭುವಿನ ಮಡಿಲಿಗೆ ಹಾಕಿದ್ದಾರೆ. ‘ನಿಗೂಢ ನಾಣ್ಯ' ಬಹಳ ಹಿಂದೆಯೇ ‘ಮೈಲ್ಯಾಂಗ್ ಬುಕ್ಸ್’ ಎಂಬ ಇ-ಬುಕ್ಸ್ ಮತ್ತು ಆಡಿಯೋ ಬುಕ್ಸ್ ಮಾರುವ ಸಂಸ್ಥೆಯ ಮೂಲಕ ಪ್ರಕಟವಾಗಿತ್ತು. ಬಹಳಷ್ಟು ಜನಪ್ರಿಯವೂ ಆಗಿತ್ತು. ತಂತ್ರಜ್ಞಾನದ ಅರಿವು ಇದ್ದವರು ಮಾತ್ರವೇ ಇ ಪುಸ್ತಕವನ್ನು ಓದಲು ಇಷ್ಟ ಪಡುತ್ತಾರೆ, ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯ ಮೇಲೆ ಪುಸ್ತಕವನ್ನು ಓದುವುದು ತ್ರಾಸದಾಯಕ ಎಂದು ಕೆಲವರಿಗೆ ಅನಿಸಿದ್ದಿದೆ. ಅದನ್ನು ಗಮನದಲ್ಲಿರಿಸಿಕೊಂಡೇ ಮೈಲ್ಯಾಂಗ್ ಬುಕ್ಸ್ ನ ಮುಖ್ಯಸ್ಥರಾದ ಪವಮಾನ್ ಅಥಣಿಯವರು ಮುದ್ರಿತ ಪುಸ್ತಕವನ್ನು ಓದುಗರ ಕೈಗಿಡುವ ಮನಸ್ಸು ಮಾಡಿದ್ದಾರೆ. ಪುಸ್ತಕವನ್ನು ಕನ್ನಡದ ಓದುಗರಿಗೆ ಅಪರೂಪವಾದ ಹಗುರ ಸ್ಟೋರಾ ಕ್ರೀಮೀ ಪೇಪರ್ ಮೇಲೆ ಮುದ್ರಿಸಿದ್ದಾರೆ. ಬಹುತೇಕ ಆಂಗ್ಲ ಪುಸ್ತಕಗಳು ಇವೇ ಪೇಪರ್ ಮೇಲೆ ಮುದ್ರಿತವಾಗುತ್ತವೆ. ಪುಸ್ತಕದ ತೂಕವೂ ಕಮ್ಮಿಯಾಗುತ್ತದೆ. 

ಲೇಖಕರಾದ ವಿಠಲ್ ಶೆಣೈ ಅವರು ತಮ್ಮ ‘ನನ್ನುಡಿ’ಯಲ್ಲಿ ಈ ಕಾದಂಬರಿಯ ಬಗ್ಗೆ ಹೀಗೆ ಬರೆಯುತ್ತಾರೆ' ಕಂಪ್ಯೂಟರ್ ಜಗತ್ತಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ಹೊಸ ಹೊಸ ತಂತ್ರಜ್ಞಾನಗಳಲ್ಲಿ ನನ್ನ ಗಮನ ಹೆಚ್ಚು ಸೆಳೆದದ್ದು ಬ್ಲಾಕ್ ಚೈನ್ ಮತ್ತು ಬಿಟ್ ಕಾಯಿನ್. ಎಲ್ಲರಂತೆ ನಾನೂ ಕೂಡಾ ಬಿಟ್ ಕಾಯಿನ್ ಒಂದು ಕಳ್ಳರ, ದರೋಡೆಕೋರರ ಹಾಗೂ ಅಪರಾಧಗಳಲ್ಲಿ ತೊಡಗುವವರ ದುಡ್ಡು ಎಂದು ಭಾವಿಸಿದ್ದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಈ ತಂತ್ರಜ್ಞಾನ ಏನು? ಇದು ಏಕೆ ಬೇಕು? ಇದರಿಂದ ಸಿಗುವ ನಿಜವಾದ ಪ್ರಯೋಜನ ಏನು? ಇದು ಹೇಗೆ ಕೆಲಸ ಮಾಡುತ್ತದೆ? ಇವೆಲ್ಲಾ ಪ್ರಶ್ನೆಗಳ ಉತ್ತರ ಹುಡುಕಲು ಹೋದಾಗ ನನಗೆ ದೊಡ್ಡ ಜ್ಞಾನದ ಮಹಾಪೂರವೇ ಸಿಕ್ಕಂತಾಯಿತು. ಸ್ವಾಭಾವಿಕವಾಗಿ ನಾನು ಈ ತಂತ್ರಜ್ಞಾನದತ್ತ ಆಕರ್ಷಿತನಾದೆ. ಆಗಲೇ ಇದನ್ನು ಕನ್ನಡದಲ್ಲಿ ಪುಸ್ತಕ ರೂಪದಲ್ಲಿ ಬರೆಯುವ ಬಯಕೆಯಾಯಿತು.’

ವಿಠಲ್ ಶೆಣೈಯವರು ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪೆನಿಗಳಲ್ಲಿ ಕಳೆದ ಎರಡು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಮೂರು ಪುಸ್ತಕಗಳು ಪ್ರಕಟವಾಗಿವೆ. ಈ ಕಾದಂಬರಿ ಓದುವವರಿಗೆ ಒಂದು ನಿಗೂಢ ರಹಸ್ಯವನ್ನು ಭೇದಿಸುವ ಕಥಾ ಹಂದರ ಹೊಂದಿರುವ ಪತ್ತೇದಾರಿ ಕಾದಂಬರಿ ಓದಿದಂತೆ ಅನಿಸುತ್ತದೆ. ಏಕೆಂದರೆ ಪ್ರತೀ ಪುಟವೂ ರೋಚಕವಾದ ಮಾಹಿತಿಯನ್ನು ಹೊಂದಿದೆ. ಈ ಮಾಹಿತಿಯು ಕಥೆಯಂತೆ ಹೇಳುತ್ತಾ ಹೋಗುವುದರಿಂದ ಓದುಗರಾದ ನಮಗೂ ಮನಸ್ಸಿಗೆ ನಾಟುತ್ತದೆ, ಅರ್ಥವಾಗುತ್ತದೆ. 

ಪುಸ್ತಕದ ಪ್ರಕಾಶಕರಾದ ಮೈಲ್ಯಾಂಗ್ ಬುಕ್ಸ್ ನ ಪವಮಾನ ಅಥಣಿಯವರು ತಮ್ಮ ‘ಪ್ರಕಾಶಕರ ಮಾತು' ಇದರಲ್ಲಿ ‘ಎಲ್ಲರಿಗೂ ಪ್ರಿಯವಾದ ಕಾಗದದ ನೋಟುಗಳನ್ನು ನಾವು ನಂಬಲೇ ಬೇಕೇ ಬೇಡವೇ ಎನ್ನುವ ಅನುಮಾನ ಶುರುವಾಗುತ್ತದೆ. ಈಗಿನ ಕಾಲದಲ್ಲಂತೂ ನಮ್ಮ ಎಲ್ಲ ಹಣವೂ ಬ್ಯಾಂಕುಗಳ ಕಂಪ್ಯೂಟರುಗಳಲ್ಲಿ ಸೊನ್ನೆ ಮತ್ತು ಒಂದುಗಳಾಗಿ (ಅಂದರೆ ಡಿಜಿಟಲ್ ರೂಪದಲ್ಲಿ) ಕುಳಿತಿದೆ. ಇಂಥ ಕಾಲಘಟ್ಟದಲ್ಲಿ ನಮಗೆ ಈಗ ಒಂದು ರೀತಿಯ ಹಣದ ಬಗ್ಗೆಯೂ ಅಲ್ಲಲ್ಲಿ ಸುದ್ದಿ ಕಿವಿಗೆ ಬೀಳುತ್ತಿದೆ. ಅದೇ ಬಿಟ್ ಕಾಯಿನ್. ವಾಸ್ತವದಲ್ಲಿ ಬಿಟ್ ಕಾಯಿನ್ ಎಂಬುದುದು ಒಂದು ಕ್ರಿಪ್ಟೋ ಕರೆನ್ಸಿಯಾಗಿದೆ. ಇದು ಪಟ್ಟಭದ್ರ ಹಣಕಾಸಿನ ವ್ಯವಸ್ಥೆಗೆ ಮತ್ತು ಸಂಸ್ಥೆಗಳಿಗೆ ಎಂಥ ಸವಾಲನ್ನು ಒಡ್ಡುತ್ತಿದೆ?’ ಎಂದು ಬರೆಯುತ್ತಾರೆ.

ನಿಜಕ್ಕೂ ಇದೊಂದು ಥ್ರಿಲ್ಲರ್ ರೂಪದ ಕಾದಂಬರಿಯೇ. ಕಾದಂಬರಿಯ ನಾಯಕ ವಿವೇಕ್ ತನ್ನದೇ ಆದ ‘ಪ್ಲಸ್ ಮನಿ' ಎಂಬ ಸಂಸ್ಥೆಯ ಮೂಲಕ ಬಿಟ್ ಕಾಯಿನ್ ಎಟಿಎಂ ಉದ್ಘಾಟನೆ ಮಾಡುವ ಮೂಲಕ ಕಥೆ ಪ್ರಾರಂಭವಾಗುತ್ತದೆ. ಬಿಟ್ ಕಾಯಿನ್ ಎಟಿಂ ಸ್ಥಾಪನೆ ಕಾನೂನಿಗೆ ವಿರುದ್ಧ ಎಂದು ವಿವೇಕ್ ಮೇಲೆ ಆಪಾದನೆ ಬಂದು ಅವನನ್ನು ವಿಚಾರಿಸಲು ಬರುವ ಆರ್ ಬಿ ಐ ಆಫೀಸರ್ ಪ್ರೇಮ್ ಗೆ ವಿವೇಕ್ ತನ್ನ ಸಂಸ್ಥೆಯ ಬಗ್ಗೆ ವಿವರವಾಗಿ ತಿಳಿಸುವ ಪ್ರಯತ್ನ ಮಾಡುತ್ತಾನೆ. ಪ್ರೇಮ್ ನ ಪ್ರೇಯಸಿ ಉಮಾ ಆದಾಯ ತೆರಿಗೆಯಲ್ಲಿ ಆಫೀಸರ್. ಅವಳಿಗೂ ಒಂದು ಕೇಸ್ ಸಂಬಂಧ ಈ ಬಿಟ್ ಕಾಯಿನ್ ಬಗ್ಗೆ ಮಾಹಿತಿ ಬೇಕಾಗಿರುತ್ತದೆ. ಇವರೆಲ್ಲರನ್ನು ತನ್ನ ಆಫೀಸ್ ಗೆ ಕರೆದು ಅವರಿಗೆ ಮಾಹಿತಿ ನೀಡುತ್ತಾನೆ ವಿವೇಕ್. ವಿವೇಕ್ ನೀಡುವ ವಿವರಣೆಗಳು ಪ್ರೇಮ್, ಉಮಾ ಅವರಿಗೆ ಸಮಾಧಾನ ತಂದವೇ? ಕಾನೂನಿನ ಕುಣಿಕೆಯಿಂದ ವಿವೇಕ್ ಬಚಾವಾದನೇ? ಪ್ರೇಮ್ - ಉಮಾ ಪ್ರೇಮ ಪ್ರಕರಣ ಏನು ಅಂತ್ಯ ಕಂಡಿತು? ಇವೆಲ್ಲವನ್ನೂ ತಿಳಿಯಬೇಕಾದರೆ ನೀವು ನಿಗೂಢ ನಾಣ್ಯ ಪುಸ್ತಕ ಓದಲೇ ಬೇಕು. 

ಬಿಟ್ ಕಾಯಿನ್ ಮಾಹಿತಿಯನ್ನು ನೀಡುವಾಗ ವಿವೇಕ್ ಉದಾಹರಣೆಯ ಮೂಲಕ, ಚಿತ್ರಗಳ ಮಾಧ್ಯಮಗಳಲ್ಲಿ ವಿವರಿಸುತ್ತಾನೆ. ಈ ವಿವರಗಳು ನಮಗೂ ಬಹಳ ಸರಳವಾಗಿ ಅರ್ಥವಾಗುವಂತೆ ಪುಸ್ತಕದಲ್ಲಿ ಪೂರಕ ಚಿತ್ರಗಳನ್ನು ನೀಡಿದ್ದಾರೆ. ಪುಸ್ತಕದ ಕೊನೆಯಲ್ಲಿ ಬಿಟ್ ಕಾಯಿನ್ ಬಗ್ಗೆ ಬಹಳಷ್ಟು ವಿವರಗಳನ್ನು ಪಾಯಿಂಟ್ ರೂಪದಲ್ಲಿ ನೀಡಿದ್ದಾರೆ. ಆಕರ್ಷಕ ಮುಖಪುಟ ಹೊಂದಿರುವ ಈ ಪುಸ್ತಕವನ್ನು ಲೇಖಕರಾದ ವಿಠಲ್ ಶೆಣೈ ತಮ್ಮ ಪರಿವಾರದ ಸದಸ್ಯರಾದ ಪತ್ನಿ ಮಕ್ಕಳು, ತಂದೆ ತಾಯಿ ಹಾಗೂ ಮೊದಲ ಆವೃತ್ತಿಯನ್ನು ಓದಿ ಪ್ರೋತ್ಸಾಹಿಸಿದ ಬಂಧು ಮಿತ್ರರಿಗೆ ಹಾಗೂ ಓದುಗರಿಗೆ ಅರ್ಪಿಸಿದ್ದಾರೆ. ಸುಮಾರು ೧೬೦ ಪುಟಗಳ ಈ ಕಾದಂಬರಿ ಈಗಿನ ತಂತ್ರಜ್ಞಾನವನ್ನು ತಿಳಿಸುವ ಉತ್ತಮ ಹೊತ್ತಗೆಯೆಂದರೆ ತಪ್ಪಾಗಲಾರದು.