ನಿಘಂಟು ರೊಬೋಟ್

ನಿಘಂಟು ರೊಬೋಟ್

ನಿಘಂಟು ರೊಬೋಟ್

ನಿಮಗೆ ಇಂಗ್ಲೀಷ್ ಪದದ ಕನ್ನಡ ಸಮಾನಾರ್ಥಕ ಪದ ಬೇಕಿದೆಯೇ? ಅಥವಾ ಕನ್ನಡ ಪದದ ಸಮಾನಾರ್ಥಕ ಇಂಗ್ಲೀಷ್ ಪದ ಬೇಕಿದೆಯೇ? ಇದನ್ನು ಒದಗಿಸುವ ಜಾಬರ್ ನಿಘಂಟು ರೊಬೋಟ್ ಅಂತರ್ಜಾಲದಲ್ಲಿ ಲಭ್ಯವಿದೆ.ಈ ಸೇವೆಯನ್ನು ಪಡೆಯಲು ನೀವು ಗೂಗಲ್ ಅಥವಾ ಜಾಬರ್ ದಿಡೀರ್ ಸಂದೇಶ ಸೇವೆಯಲ್ಲಿ ಖಾತೆ ತೆರೆದುkn.dict.bot@jabber.org ನ್ನು ನಿಮ್ಮ ಮಿತ್ರನ ಪಟ್ಟಿಗೆ ಸೇರಿಸಬೇಕು.ಈ ವಿಳಾಸ ಆನ್‌ಲೈನ್ ಆಗಿದ್ದರೆ ಕನ್ನಡ ನಿಘಂಟು ಸೇವೆಯ ಬೋಟ್ ಆನ್‌ಲೈನ್ ಇದೆ ಎಂದರ್ಥ.ಇದಕ್ಕೆ ನಿಮಗೆ ಅರ್ಥ ಬೇಕಾದ ಪದವನ್ನು ಕಳುಹಿಸಿದರೆ,ಮರು ಸಂದೇಶದಲ್ಲಿ ಪದದ ಅರ್ಥ ಬರುತ್ತದೆ.ಪದದ ಅರ್ಥ ಲಭ್ಯವಿಲ್ಲವಾದರೆ,ಅದನ್ನು ನೀವು ಸೇರಿಸುವ ಆಯ್ಕೆ ಒದಗಿಸುತ್ತದೆ.ನಿಮ್ಮ ಅರ್ಥವನ್ನು ನಿಘಂಟಿಗೆ ಸೇರಿಸುವುದೋ ಬೇಡವೋ ಎನ್ನುವುದನ್ನು ನಿರ್ವಾಹಕರು ಆಗಿಂದಾಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ.ಈ ಸೇವೆಯು ಕನ್ನಡ ವಿಕ್ಷನರಿ ಸೇವೆಯನ್ನು ಬಳಸುತ್ತದೆ.ಈ ಹೊಸ ಸೇವೆಗಳನ್ನು ಲಭ್ಯವಾಗಿಸಿದವರು ಕಾರ್ಕಳದ ತಂತ್ರಜ್ಞ ವಾಸುದೇವ ಕಾಮತ್.
-----------------------------------------------
ತಲೆಯಲ್ಲಿ ಕ್ಯಾಮರಾ
ನ್ಯೂಯಾರ್ಕಿನ ಪ್ರೊಫೆಸರ್ ಒಬ್ಬರು ,ತಲೆಯ ಹಿಂಭಾಗ ಕ್ಯಾಮರಾವನ್ನು ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಿಕೊಂಡಿದ್ದಾರೆ.ಇದರ ಮೂಲಕ ತೆಗೆದ ಚಿತ್ರಗಳನ್ನವರು ಅಂತರ್ಜಾಲ ತಾಣ ,www.3rdi.meನಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.ಕ್ಯಾಮರಾ ತೆಗೆದ ಚಿತ್ರಗಳನ್ನು,ಅವರ ಬಗಲಲ್ಲಿರುವ ಕಂಪ್ಯೂಟರ್ ಮೂಲಕ ಅಂತರ್ಜಾಲದ ತಾಣಕ್ಕೆ ತಲುಪಿಸಲಾಗುತ್ತಿದೆ.ಜತೆಗೇ,ಚಿತ್ರಗಳನ್ನು ನವ್ಯಚಿತ್ರಗಳ ಅರಬ್ ಮ್ಯೂಸಿಯಂನಲ್ಲೂ ಪ್ರದರ್ಶಿಸಲಾಗುತ್ತಿದೆ.
------------------------------------------
ಗೂಗಲ್ ಕ್ರೋಮ್:ಹೊಸ ನೆಟ್‌ಬುಕ್?
ಗೂಗಲ್ ತನ್ನ ಕ್ರೋಮ್ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಡಿಸೆಂಬರ್ ಏಳರಂದು ಬಿಡುಗಡೆ ಮಾಡುವುದು ಬಹುತೇಕ ಖಚಿತವೆನಿಸಿದೆ.ಅಂದು ಕ್ರೋಂ‌ಗೆ ಸಂಬಂಧಿಸಿದ ಹಾಗೆ ಬಹುಮುಖ್ಯ ಬೆಳವಣಿಗೆಯನ್ನು ನಿರೀಕ್ಷಿಸಲು ಕಾದಿರುವಂತೆ ಪತ್ರಕರ್ತರಿಗೆ ಗೂಗಲ್ ಆಹ್ವಾನ ಈಗಾಗಲೇ ಪತ್ರಿಕಾಲಯಗಳನ್ನು ತಲುಪಿದೆ.ಆದರೆ ಈ ಪತ್ರಿಕಾಗೋಷ್ಠಿಯಲ್ಲಿ "ಮತ್ತಿನ್ನೇನೋ" ಪ್ರಕಟಣೆಯನ್ನು ನಿರೀಕ್ಷಿಸುವವರೂ ಇದ್ದಾರೆ.ಅಂತವರು ಅಂದು ಗೂಗಲ್ ನೆಟ್‌ಬುಕ್ ಅಂತಹ ಯಂತ್ರಾಂಶವನ್ನೂ ಗೂಗಲ್ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಿದ್ದಾರೆ.
--------------------------------------------------
ಒರಾಕಲ್‍ನಿಂದ ಸೂಪರ್ ಕಂಪ್ಯೂಟರ್
ಸನ್ ಸ್ಪಾರ್ಕ್ ಯಂತ್ರಾಂಶ ಬಳಸಿ ಒರಾಕಲ್ ಕಂಪೆನಿಯು ಸೂಪರ್ ಕಂಪ್ಯೂಟರ್ ಅನ್ನು ಅಭಿವೃದ್ಧಿ ಪಡಿಸಿದೆ.ಹಲವು ಸರ್ವರ್‌ಗಳನ್ನು ಬಳಸಿ,ಅವುಗಳನ್ನು ಏಕಕಾಲದಲ್ಲಿ ಬಳಸುವ ಮೂಲಕ ಸೂಪರ್ ಕಂಪ್ಯೂಟರನ್ನು ಅಭಿವೃದ್ಧಿ ಪಡಿಸಿರುವುದು ಒರಾಕಲ್ ವೈಶಿಷ್ಟ್ಯವಾಗಿದೆ.ಈ ರೀತಿ ಲಭ್ಯ ಸರ್ವರ್‌ಗಳನ್ನು ಕಲೆ ಹಾಕಿ,ಸರ್ವರ್‌ಗಳ ಗುಂಪಿನಿಂದ ಶಕ್ತಿಶಾಲಿ ಗಣಕವನ್ನು ಅಭಿವೃದ್ಧಿ ಪಡಿಸುವ ಪ್ರಕ್ರಿಯೆಗೆ ಕ್ಲಸ್ಟರ್ ಕಂಪ್ಯೂಟಿಂಗ್ ಎನ್ನುವುದಿದೆ.ಇಲ್ಲಿ ಸನ್ ಮೈಕ್ರೋಸಿಸ್ಟಮ್‌ನ ಸ್ಪಾರ್ಕ್ ಸರ್ವರ್ ಯಂತ್ರಾಂಶಗಳ ಬಳಕೆ ಆಗಿದೆ.ಒರಾಕಲ್ ಕಂಪೆನಿಯು ಕ್ಲಸ್ಟರ್ ಕಂಪ್ಯೂಟಿಂಗ್ ಸಾಧಿಸುವ ತಂತ್ರಾಂಶವನ್ನು ಮಾತ್ರವಲ್ಲದೆ,ಕಂಪ್ಯೂಟರುಗಳನ್ನು ಬೆಸೆಯಲು ಅಗತ್ಯವಾದ ಸ್ವಿಚಿಂಗ್ ಫ್ಯಾಬ್ರಿಕ್ ಅನ್ನೂ ಬಳಸಿಕೊಂಡಿದೆ.
-----------------------------------------------------
ಅನಪೇಕ್ಷಿತ ಮಿಂಚಂಚೆಯ ದೊರೆ
ನಿಮ್ಮ ಮಿಂಚಂಚೆಗೆ ಬರುವ ಬಹುತೇಕ ಅನಪೇಕ್ಷಿತ ಸಂದೇಶದ ಮೂಲ ರಶ್ಯನ್ ವ್ಯಕ್ತಿಯೋರ್ವ ಅಭಿವೃದ್ಧಿ ಪಡಿಸಿದ ಬೋಟ್ ತಂತ್ರಾಂಶ ಅಂದರೆ ನಂಬುವಿರಾ?ಜಗತ್ತಿನ ಮೂರನೇ ಒಂದು ಅಂಶ ಅನಪೇಕ್ಷಿತ ಮಿಂಚಂಚೆಯನ್ನು ಕಳುಹಿಸುವ ಸ್ವಯಂಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದಾತ,ರಶ್ಯದ ವಿಸ್ಕೋನ್ಸಿನ್ ಎನ್ನುವ ವ್ಯಕ್ತಿ ಎಂದು ಅಮೆರಿಕಾದ ಗೂಢಚರ್ಯ ವಿಭಾಗ ಆರೋಪಿಸಿದೆ.ಈತನ ವಿಚಾರಣೆ ಇದೀಗ ಅಮೆರಿಕಾದ ನ್ಯಾಯಾಲಯದಲ್ಲಿ ನಡೆದಿದೆ.
----------------------------------------------------
ಷಡಕ್ಷರಿಯವರ ಪುಸ್ತಕ "ಕ್ಷಣಹೊತ್ತು ಆಣಿಮುತ್ತು" ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ,ಷಡಕ್ಷರಿಯವರ ಪುಸ್ತಕ "ಕ್ಷಣಹೊತ್ತು ಆಣಿಮುತ್ತು" ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ಪ್ರೊಫೆಸರ್ ಬಂಟಕಲ್ಲು ರಾಧಾಕೃಷ್ಣ ಶರ್ಮಾ,ಜಸ್ಟೀಸ್ ಕೆ ಎಸ್ ಹೆಗ್ಡೆ ಸ್ಮಾರಕ ಮ್ಯಾನೇಜ್ಮೆಂಟ್ ಇನ್ಸ್‌ಸ್ಟಿಟ್ಯೂಟ್,ನಿಟ್ಟೆ.
*ಸಿಲ್ವರ್ ಲೈಟ್ ಅಂದರೇನು?
*ಈ ಅಂಕಣದ ಬರಹಗಳಿರುವ ಬ್ಲಾಗ್ ಯಾವುದು?
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS8 ನಮೂದಿಸಿ ).
(
ಕಳೆದ ವಾರದ ಸರಿಯುತ್ತರಗಳು:
*ರೂಬಿ ಆನ್ ರೈಲ್ ಎನ್ನುವುದು ಸುಲಭದಲ್ಲಿ ತಂತ್ರಾಂಶ ರಚಿಸಲು ಅನುವು ಮಾಡುವ ಚೌಕಟ್ಟು.ಇದರಲ್ಲಿ ರೂಬಿ ಕಂಪ್ಯೂಟರ್ ಭಾಷೆಯ ಬಳಕೆ ಆಗುತ್ತದೆ.
*ಎಕ್ಸ್ಟ್ರೀಮ್ ಪ್ರೊಗ್ರಾಮಿಂಗ್ ಪದವನ್ನು ಕನ್ನಡದಲ್ಲಿ ತೀವ್ರಗತಿಯ ಕ್ರಮವಿಧಿ ಎಂದವರು,ಬಹುಮಾನ ಗೆದ್ದ ಕೃಷ್ಣಕಿಶೋರ,ಇಂಜಿನಿಯರಿಂಗ್ ವಿದ್ಯಾರ್ಥಿ,ಪುತ್ತೂರು ಅವರಿಗೆ ಅಭಿನಂದನೆಗಳು.)
---------------------------------------------------
ಏನಿದು ವಿಕಿಲೀಕ್ಸ್?
ವಿಕಿಲೀಕ್ಸ್ ಎನ್ನುವುದು ಲಾಭರಹಿತ ಸರಕಾರೇತರ ಸಂಸ್ಥೆ.ಇದು ಹಲವಾರು ಗುಪ್ತ ಸಂದೇಶಗಳನ್ನು ಬಯಲು ಮಾಡಿ ಸುದ್ದಿಯಲ್ಲಿರುವ ಜತೆಗೇ,ಹಲವು ಬಾರಿ ದಾಳಿಗೊಳಗಾಗಿ,ತನ್ನ ಅಂತರ್ಜಾಲ ತಾಣ ಬದಲಿಸಿದೆ.ಸದ್ಯ ಇದರ ತಾಣwww.wikileaks.ch.ದಾಳಿಗೊಳಗಾಗುವ ಮೊದಲು ವಿಕಿಲೀಕ್ಸ್ ತಾಣವು www.wikileaks.org ವಿಳಾಸದಲ್ಲಿತ್ತು.ಜುಲಿಯಾನ್ ಅಸಾಂಗೆ ಎನ್ನುವಾತ ಇದರ ಸ್ಥಾಪಕ.ತುರ್ತಾಗಿ ಹೊಸ ವಿಳಾಸಕ್ಕೆ ಬದಲಾಗ ಬೇಕಾದರೆ ಇರಲಿ ಎಂದು www.wikileaks.li ಎನ್ನುವ ವಿಳಾಸವನ್ನೂ ಕಾಯ್ದಿರಿಸಲು ಕ್ರಮ ಕೈಗೊಂಡು ಎಚ್ಚರಿಕೆ ವಹಿಸಲಾಗಿದೆ.ಈ ತಾಣವನ್ನು ಅಮೆಜಾನ್ ಕಂಪೆನಿಯು ನಿರ್ವಹಿಸುತ್ತಿತ್ತಾದರೂ,ವಿಕಿಲೀಕ್ಸ್ ಅಮೆರಿಕಾದ ಸರಕಾರದ ಗುಪ್ತ ಕೇಬಲ್ ಸಂದೇಶಗಳನ್ನು ಬಯಲು ಮಾಡಿ ಸುದ್ದಿ ಮಾಡಿದ ನಂತರ ಅಮೆಜಾನ್ ಕಂಪೆನಿಯು ಈ ತಾಣಕ್ಕೆ ಜಾಗ ಕೊಡುವುದನ್ನು ನಿಲ್ಲಿಸಿತು.ತಾಣವು ಬಯಲು ಮಾಡಿದ ಮಾಹಿತಿಯು,ಅದಕ್ಕೆ ಸೇರಿದ್ದಲ್ಲವಾದ ಕಾರಣ,ಅದು ನಿಯಮದ ಉಲ್ಲಂಘನೆಗೈದಿದೆ ಎಂದು ಅಮೆಜಾನ್ ವಿಕಿಲೀಕ್ಸನ್ನು ಆಕ್ಷೇಪಿಸಿದೆ.ಯಾರಾದರೂ ರಹಸ್ಯ ಬಯಲು ಮಾಡಲು ಬಯಸಿ,ನೀಡಿದ ಮಾಹಿತಿಗಳನ್ನು ಬಯಲು ಮಾಡಲು ವಿಕಿಲೀಕ್ಸ್ ತನ್ನ ತಾಣದಲ್ಲಿ ಅವಕಾಶ ನೀಡುತ್ತದೆ.ಇರಾಕ್ ಯುದ್ಧ,ಅಪ್ಘಾನ್ ಯುದ್ಧ,ಇರಾಕಿನ ಕೊಲೆಗಳು ಮತ್ತು ಅಮೆರಿಕಾದ ರಾಯಭಾರಿ ಕಚೇರಿಯ ಕೇಬಲ್ ಸಂದೇಶಗಳು ಇವೇ ಮುಂತಾದ ರಹಸ್ಯಗಳನ್ನು ಬಯಲು ಮಾಡಿ.ವಿಕಿಲೀಕ್ಸ್ ಸತತವಾಗಿ ಸುದ್ದಿಯಲ್ಲಿದೆ.
---------------------------------
ಟ್ವಿಟರ್ ಚಿಲಿಪಿಲಿ
*ರೌರವ ನರಕದಲ್ಲಿ ಉಪ್ಪಿಟ್ಟೇ ದಿನಕ್ಕೆ ಐದು ಬಾರಿ ತಿನ್ನಲು ಸಿಗುತ್ತದೆ.
*ಜಾಗಿಂಗ್ ಮಾಡಿದರೆ ದೇಹ ತೂಕ ಕಡಿಮೆಯಾಗುತ್ತದೆಯಾದರೆ,ರಿವರ್ಸ್ ಜಾಗಿಂಗ್ ಮಾಡಿದರೆ ದೇಹ ತೂಕ ಹೆಚ್ಚುತ್ತದೆಯೇ?
-------------------------------------------------
ನೆಟ್‌ಬುಕ್‌ ಯಾಕೆ ಹಿತ?
ನೆಟ್‌ಬುಕ್‌ಗಳ ಗಾತ್ರ ಲ್ಯಾಪ್‌ಟಾಪ್‌ಗಳಿಗೆ ಹೋಲಿಸಿದರೆ ಕಡಿಮೆ,ಸ್ಮಾರ್ಟ್‌ಪೋನ್‌ಗಳಿಗೆ ಹೋಲಿಸಿದರೆ ಹೆಚ್ಚು.ಹೆಚ್ಚು ಸಮಯ ಸಾಧನ ಬಳಸಲು ಈ ಗಾತ್ರ ಹೇಳಿ ಮಾಡಿಸಿದಂತಿದೆ.ಕಂಪ್ಯೂಟರುಗಳಿಗಾಗಿ ರೂಪಿತವಾದ ತಂತ್ರಾಂಶಗಳನ್ನು ಇದರಲ್ಲಿ ಬಳಸಬಹುದು.ಪ್ರಯಾಣದ ವೇಳೆ ಒಯ್ಯಲು ನೆಟ್‌ಬುಕ್‌ನ ಗಾತ್ರ ಹೇಳಿ ಮಾಡಿಸಿದಂತಿದೆ.ಇದರಲ್ಲಿ ಲಭ್ಯವಿರುವ ಹಾರ್ಡ್‌ಡಿಸ್ಕ್ ಸಾಕಷ್ಟು ಸ್ಮರಣಶಕ್ತಿ ಸಾಮರ್ಥ್ಯವನ್ನು ಒದಗಿಸುತ್ತದೆ.ಪತ್ರಿಕೆಗಳ ಪಠಣ,ವಿಡಿಯೋ ನೋಡಲೂ ನೆಟ್‌ಬುಕ್‌ಗಳು ಸ್ಮಾರ್ಟ್‌ಪೋನ್‌ಗಳಿಗಿಂತ ಅನುಕೂಲವಾಗಿವೆ.
*ಅಶೋಕ್‌ಕುಮಾರ್ ಎ