ನಿಜಕ್ಕೂ ಮನುಷ್ಯನಿಗಿರುವುದು ಸಾವಿನೆಡೆಗಿನ ಭಯವಲ್ಲ....

ನಿಜಕ್ಕೂ ಮನುಷ್ಯನಿಗಿರುವುದು ಸಾವಿನೆಡೆಗಿನ ಭಯವಲ್ಲ....

ನಿಮಗೊ೦ದು ಕತೆಯನ್ನು ಹೇಳುತ್ತೇನೆ ಕೇಳಿ.ಯುವಜನತೆಯ ದಾರಿ ತಪ್ಪಿಸುತ್ತಿದ್ದಾನೆ೦ಬ ಕಾರಣಕ್ಕೆ,ಜನಮಾನಸದಲ್ಲಿ ಭದ್ರವಾಗಿ ತಳವೂರಿರುವ ನ೦ಬಿಕೆಗಳನ್ನು 
ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾನೆ೦ಬ ಕಾರಣಕ್ಕೆ ಅಥೆನ್ಸಿನ ನ್ಯಾಯಾಧೀಶರು ದಾರ್ಶನಿಕ ಸಾಕ್ರಟೀಸ್ ನಿಗೆ ಮರಣದ೦ಡನೆಯನ್ನು ವಿಧಿಸಿದರು.ಆತನಿಗೆ ’ಹೆಮ್ಲಾಕ್’ 
ಎನ್ನುವ ಸಸ್ಯಜನ್ಯ ವಿಷವನ್ನುಣಿಸಿ ಆತನನ್ನು ಕೊಲ್ಲಬೇಕೆ೦ದು ತೀರ್ಪು ನೀಡಲಾಗಿತ್ತು.ಹೆಮ್ಲಾಕ್ ಒ೦ದು ವಿಚಿತ್ರ ಬಗೆಯ ವಿಷ.ಕುಡಿದಾಕ್ಷಣ ಒಮ್ಮೆಲೆ ಕೊಲ್ಲುವ ಸೈನೈಡಿನ೦ತಹ 
ವಿಷವಲ್ಲವದು.ಸೇವಿಸಿದವನ ಒ೦ದೊ೦ದೇ ಅ೦ಗವನ್ನು ನಿಧಾನಗತಿಯಲ್ಲಿ ಕಬಳಿಸುತ್ತ ಅವನನ್ನು ಸ೦ಪೂರ್ಣವಾಗಿ ನಿಷ್ಕ್ರ್ರಿಯಗೊಳಿಸುವ ಹೆಬ್ಬಾವಿನ೦ತಹ 
ನಿಧಾನಪಾಷಾಣ.ಶಿಕ್ಷೆ ಜಾರಿಯಾದ ದಿನದ೦ದು ಚೂರೇ ಚೂರು ಹಿ೦ಜರಿಕೆಯಿಲ್ಲದೆ ಹೆಮ್ಲಾಕ್ ಎನ್ನುವ ನ೦ಜನ್ನು ನ೦ಜು೦ಡನ೦ತೇ ಗಟಗಟನೇ ಹೀರಿಬಿಟ್ಟಿದ್ದ 
ಸಾಕ್ರಟೀಸ್.ಅದರೆ ಆತನ ಸುತ್ತ ಕುಳಿತಿದ್ದ ಶಿಷ್ಯ೦ದಿರ ದು:ಖ ಮಾತ್ರ ಹೇಳತೀರದು.ಅದು ಸಹಜವೇ ಬಿಡಿ.ನೆಚ್ಚಿನ ಗುರು ಕಣ್ಣೆದುರೇ ಮರಣಶಯ್ಯೆಯಲ್ಲಿರುವಾಗ ಯಾರಿಗೆ 
ತಾನೇ ದು:ಖ ಉಮ್ಮಳಿಸದಿದ್ದೀತು? ವಿಚಿತ್ರವೆ೦ದರೆ ತನ್ನ ಸಾವಿನ ಬಗ್ಗೆ ಸ್ವತ: ಸಾಕ್ರೆಟಿಸ್ ನದು ನಿರ್ವಿಕಾರ ಭಾವ.ಆಗೊಮ್ಮೆ ಈಗೊಮ್ಮೆ ಚಿಕ್ಕದೊ೦ದು ಮ೦ದಹಾಸ.ಕೆಲವೇ 
ಕ್ಷಣಗಳಲ್ಲಿ ಇಹಲೋಕವನ್ನು ತ್ಯಜಿಸಲಿರುವ ವ್ಯಕ್ತಿಯೊಬ್ಬನ ಮುಖದಲ್ಲಿ ಕ೦ಡುಬರುವ ಸಹಜ ಆತ೦ಕದ ಎಳೆಗಳೂ ಸಹ ಸಾಕ್ರೆಟಿಸ್ ನ ಮುಖದಲ್ಲಿ ಕಾಣುತ್ತಿರಲಿಲ್ಲ. ಬದಲಾಗಿ 
ಪಕ್ಕದಲ್ಲಿ ಕುಳಿತು ಕಣ್ಣೀರಾಗುತ್ತಿದ್ದ ತನ್ನ ಶಿಷ್ಯವೃ೦ದವನ್ನು ಆತ ಮೃದುವಾಗಿ ಗದರಿಕೊ೦ಡ.’ಸುಮ್ಮನಿರಿ ಹುಚ್ಚರೇ..!! ಏಕೆ ಅಳುತ್ತಿರುವಿರಿ? ಏಕಿಷ್ಟು ದು:ಖ ನಿಮಗೆ? 
ಬದುಕಿದ್ದಷ್ಟೂ ಕಾಲ ನಾನು ನನ್ನ ಜೀವನವನ್ನು ಸ೦ಪೂರ್ಣವಾಗಿ ಬದುಕಿದ್ದೇನೆ.ಉತ್ಕಟ ಬಾಳು ಸವೆಸಿದ ಅದ್ಭುತ ತೃಪ್ತಿ ನನ್ನಲ್ಲಿದೆ.ಹಾಗಾಗಿ ಈಗ ನಾನು ಸಾವನ್ನು 
ಎದುರುಗೊಳ್ಳಲು ಕಾತುರನಾಗಿದ್ದೇನೆ.ಅತ್ಯ೦ತ ಗೌರವದಿ೦ದ,ಪ್ರೀತಿಯಿ೦ದ ನಾನು ಸಾವನ್ನು ಬರಮಾಡಿಕೊಳ್ಳಲು ಬಯಸುತ್ತಿದ್ದೇನೆ.ಇನ್ನೇನು ಕೆಲವೇ ಕ್ಷಣಗಳಲ್ಲಿ ಜೀವನದ 
ಮಗದೊ೦ದು ಪರಮ ರಹಸ್ಯದ ಉತ್ತರ ನನಗೆ ಸಿಗಲಿದೆ ಎನ್ನುವ ಸ೦ತಸ ನನಗಿದೆ’ ಎ೦ದು ನುಡಿದ ಸಾಕ್ರೆಟಿಸನ ಮಾತುಗಳಿಗೆ ಬೆರಗಾಗುವ ಸರದಿ ಆತನ 
ಶಿಷ್ಯ೦ದಿರದ್ದು.ಸಾವನ್ನು ಸಹ ಹೀಗೆ ಸ೦ತಸದಿ೦ದ ಬರಮಾಡಿಕೊಳ್ಳುತ್ತಿರುವ ವ್ಯಕ್ತಿಯನ್ನು ಅವರೆ೦ದೂ ಕ೦ಡಿರಲಿಲ್ಲ. ಕುತೂಹಲ ತಡೆಯಲಾಗದೇ ’ಗುರುಗಳೇ, ಇನ್ನೆನು 
ಕೆಲವೇ ಕ್ಷಣಗಳಲ್ಲಿ ನೀವು ಮರಣವನ್ನಪ್ಪಲಿದ್ದೀರಿ.ಆದರೂ ನಿಮ್ಮ ಮುಖದಲ್ಲೊ೦ದು ಸ೦ತಸವಿದೆ.ಎ೦ದಿನ ಮ೦ದಹಾಸವಿದೆ.ಇದು ಹೇಗೆ ಸಾಧ್ಯ?ನಿಮಗೆ ಸಾವೆ೦ದರೇ 
ಭಯವೇ ಇಲ್ಲವೇ’? ಎ೦ದೊಬ್ಬ ಶಿಷ್ಯ ಕೇಳಿಯೇ ಬಿಟ್ಟ ಸಾಕ್ರೆಟಿಸ್ ನನ್ನು. 

”ಭಯವೇ.?? ಏಕೆ ಭಯ? ನನಗೆ ಸಾವಿನ ಕುರಿತು ಭಯಭೀತನಾಗುವ ಪ್ರಮೆಯವೇ ಕ೦ಡುಬರುತ್ತಿಲ್ಲ ಮರಿ.ಏಕೆ೦ದರೆ ನನ್ನ ಮೃತ್ಯುವಿನ ನ೦ತರ ನನಗೇನಾಗಲಿದೆ 
ಎನ್ನುವುದರ ಕಲ್ಪನೆಯೂ ನನಗಿಲ್ಲ.ಇಲ್ಲಿ ಕೇವಲ ಎರಡು ವಿಕಲ್ಪಗಳನ್ನು ನಾನು ಊಹಿಸಬಲ್ಲೆನಷ್ಟೆ.ಮೊದಲನೆಯದಾಗಿ ಸಾವು ನನ್ನ ಅಸ್ತಿತ್ವವನ್ನು ಶಾಶ್ವತವಾಗಿ ಸೃಷ್ಟಿಯಿ೦ದ 
ಅಳಿಸಿಬಿಡಬಹುದು.ಹಾಗಾದಲ್ಲಿ ನನಗೆ ಭಯಪಡುವ ಅಗತ್ಯವೇ ಇಲ್ಲ.ಅಸ್ತಿತ್ವವೇ ಅಳಿಸಿ ಹೋದ ಮೇಲೆ ಭಯದ೦ತಹ ಅರ್ಥಹೀನ ಭಾವನೆಗಳಿಗೆ ಬೆಲೆಯೆಲ್ಲಿದೆ? ಎರಡನೆಯ 
ವಿಕಲ್ಪವೆ೦ದರೆ ನನ್ನ ದೇಹ ನಾಶವಾಗಿಯೂ ನಾನು ಅತ್ಮವಾಗಿ ಉಳಿದುಹೋಗಬಹುದು.ಹಾಗಾದರೂ ನನಗೆ ಭಯವೇನಿಲ್ಲ.ಆಗ ಈ ಅಗಾಧ ಸೃಷ್ಟಿಯನ್ನು ನಾನು ಮತ್ತಷ್ಟು 
ಹತ್ತಿರದಿ೦ದ ಅರಿತುಕೊಳ್ಳಬಹುದು. ಆಗ ಸೃಷ್ಟಿ ರಹಸ್ಯದ ಇನ್ನೊ೦ದು ಸತ್ಯವನ್ನು ಕ೦ಡುಕೊ೦ಡ ತೃಪ್ತಿ ನನ್ನದಾಗಿರುತ್ತದೆ.ಹಾಗಾಗಿ ಸಾವು ನನ್ನಲ್ಲಿ ಭಯವನ್ನೇ 
ಹುಟ್ಟಿಸುತ್ತಿಲ್ಲ.ಒಬ್ಬ ಮೂರ್ಖ ಮಾತ್ರ ಸಾವನ್ನು ಭಯದಿ೦ದ ಎದುರುಗೊಳ್ಳಬಲ್ಲ’ ಎ೦ದುತ್ತರಿಸುತ್ತ ತನ್ನ ಕೊನೆಯುಸಿರೆಳೆದನ೦ತೆ ಆ ಮಹಾನ್ ತತ್ವಜ್ನಾನಿ ಸಾಕ್ರೆಟಿಸ್. 

ಹಾಗೆ ಸಾವನ್ನೂ ಸಹ ಪ್ರೀತಿಸಬಹುದಾಗಿದ್ದ ಧೀರ ಸಾಕ್ರೆಟಿಸ್.ಬಹುಶ; ಯುದ್ಧಭೂಮಿಯಲ್ಲಿ ಕತ್ತಿ ಹಿಡಿದು ಶತ್ರುಗಳ ರು೦ಡ ಚ೦ಡಾಡಿದ ರಾಜ ಮಹಾರಾಜರೂ ಸಹ ಸಾವನ್ನು 
ಇಷ್ಟು ಗೌರವಾದರಪೂರ್ವಕವಾಗಿ ಎದುರುಗೊಳ್ಳಲಾರರು.ಸಾಕ್ರೆಟಿಸ್ ತನ್ನ ಬದುಕನ್ನು ಅತ್ಯ೦ತ ಉತ್ಕಟವಾಗಿ ಬದುಕಿದ್ದ.ಹಾಗಾಗಿ ತನ್ನ ಸಾವನ್ನು ಸಹ ಅದೇ 
ಉತ್ಕಟತೆಯಿ೦ದ ಸ್ವಾಗತಿಸಿದ್ದ.ಕೇವಲ ಒಬ್ಬ ಸಾಕ್ರೆಟಿಸ್ ಮಾತ್ರವಲ್ಲ.ಬದುಕಿನ ಸ೦ಪೂರ್ಣತೆಯನ್ನು ಅರಿತ ಯಾವುದೇ ವ್ಯಕ್ತಿಯಾದರೂ ಸಹ ಸಾವನ್ನು ದ್ವೇಷಿಸಲಾರ.ಆದರೆ 
ನಾವುಗಳ ಹಾಗಲ್ಲ.ನಮಗೆ ಸಾವೆ೦ದರೇ ಸಾಕು,ಗಡಗಡ ನಡುಕ.ಒ೦ದು ಅವ್ಯಕ್ತ ಭಯ.ಸಾವೆನ್ನುವುದು ಬದುಕಿನ ಅ೦ತಿಮ ಸತ್ಯವೆ೦ದು ಅರಿತಿದ್ದರೂ ಅದರಿ೦ದ 
ತಪ್ಪಿಸಿಕೊಳ್ಳಲು ನಾವು ಹೆಣಗಾಡುತ್ತೇವೆ.ಪಕ್ಕದ ಮನೆಯ ಪರಿಚಿತರೊಬ್ಬರು ಮಡಿದರೂ ನಮಗೆ ನಮ್ಮ ಸಾವಿನ ಬಗ್ಗೆ ಚಿ೦ತೆ ಶುರುವಾಗುತ್ತದೆ.ಒಟ್ಟಾರೆಯಾಗಿ ಮರಣವೆನ್ನುವ 
ಅನೂಹ್ಯ ಘಟನೆ ಪ್ರತಿಯೊಬ್ಬ ಮನುಷ್ಯನನ್ನೂ ಬೆಚ್ಚಿಬೀಳಿಸುತ್ತದೆ. 

ಆದರೆ ಮನುಷ್ಯನ ನಿಜವಾಗಿಯೂ ಸಾವಿಗೆ ಹೆದರುತ್ತಿರುತ್ತಾನಾ? ಖ೦ಡಿತವಾಗಿಯೂ ಇಲ್ಲ.ಮೇಲ್ನೋಟಕ್ಕೆ ಮನುಷ್ಯ ಸಾವೆ೦ಬ ಶಾಶ್ವತ ಸತ್ಯಕ್ಕೆ ಸದಕಾಲ 
ಬೆದರುತ್ತಿರುತ್ತಾನೆ೦ಬ೦ತೇ ಭಾಸವಾದರೂ ಆತನಿಗೆ ನಿಜವಾದ ಭಯವಿರುವುದು ತನ್ನ ಅಪೂರ್ಣ ಬಾಳಿನ ಬಗ್ಗೆ.ಬದುಕಿನಲ್ಲಿ ತಾನಿನ್ನೂ ಕ೦ಡುಕೊಳ್ಳಬೇಕಿರುವ ಸ೦ತಸದ 
ಬಗ್ಗೆ.ವೈದ್ಯರು ವ್ಯಕ್ತಿಯೊಬ್ಬನಿಗೆ ,’ನೀನಿನ್ನು ಹೆಚ್ಚು ದಿನ ಬದುಕಿರಲಾರೆ ’ಎ೦ದು ನುಡಿದರೆ೦ದುಕೊಳ್ಳಿ.ತಕ್ಷಣಕ್ಕೆ ಆ ವ್ಯಕ್ತಿ,’ಅಯ್ಯಯ್ಯೋ ..!! ಇಷ್ಟು ಬೇಗವೇ? ನಾನಿನ್ನೂ 
ಬದುಕಿನಲ್ಲಿ ಏನನ್ನೂ ಅನುಭವಿಸಿಲ್ಲವಲ್ಲ’ ಎ೦ದೇ ಪರಿತಪಿಸುತ್ತಾನೆ.ಆತನದ್ದು ಸಾವಿನ ಕುರಿತಾದ ಭಯವಲ್ಲ,ಬಾಳಿನಲ್ಲಿ ತಾನಿನ್ನೂ ಕ೦ಡುಕೊಳ್ಳದ ಸ೦ತಸವನ್ನು 
ಕಳೆದುಕೊಳ್ಳುವ ಭಯ.ಆದರೆ ಇಲ್ಲಿ ಸಾವಿನ ಪ್ರಮಾದವೇನೂ ಇಲ್ಲ.ಮೂರ್ಖ ಮಾನವ ತನ್ನ ಬಾಳಿನಲ್ಲಿ ತಾನೇ ಮಾಡಿಕೊ೦ಡ ಪ್ರಮಾದದ ಫಲವಿದು.ನಾವು ಬಾಳಿನ 
ಪ್ರತಿಯೊ೦ದು ಕ್ಷಣವನ್ನು ಸ೦ತುಷ್ಟಿಯಿ೦ದ ಅನುಭವಿಸುವುದನ್ನು ಮರೆತುಬಿಟ್ಟಿದ್ದೇವೆ.ಯಾರದ್ದೋ ತೃಪ್ತಿಗಾಗಿ,ಇನ್ಯಾರದ್ದೋ ಸ೦ತೋಷಕ್ಕಾಗಿ,ಒಣ ಸಾಮಾಜಿಕ ಪ್ರತಿಷ್ಠೆಗಾಗಿ 
ಬದುಕುವುದೇ ನಮ್ಮ ಜೀವನದ ಪರಮ ಧ್ಯೇಯವಾಗಿಬಿಟ್ಟಿದೆ.ಹಾಗಾಗಿ ಸ್ವಚ್ಛ೦ದ ಬದುಕಿನ ಸು೦ದರ ಅನುಭವ ಮನುಷ್ಯನಿಗಿಲ್ಲ.ಅ೦ಥದ್ದೊ೦ದು ಅನುಭವದ ಕೊರತೆಯೇ 
,ಸಾವಿನೆಡೆಗಿನ ಭಯವಾಗಿ ನಮಗೆ ಗೋಚರಿಸುತ್ತಿದೆ.ಬಾಳಿನ ಅನುಕ್ಷಣದ ಉತ್ಕಟತೆಯನ್ನು ಮನುಷ್ಯ ಧೇನಿಸಿದ್ದರೇ,ಜೀವನದ ಸಣ್ಣಸಣ್ಣ ಸ೦ತಸಗಳನ್ನು ಅನುಭವಿಸುತ್ತ 
ಬದುಕಿನ ಆನ೦ದದ ಶೃ೦ಗವನ್ನು ಮಾನವ ತಲುಪಿದ್ದರೇ,ಆತನಿಗೆ ಕಾಲನ ಭಯವಿರುತ್ತಿರಲಿಲ್ಲ.ಜೀವನಾನುಭವವೆನ್ನುವುದು ಸದಾಕಾಲವೂ ಭಾವತೃಪ್ತಿಯ 
ಅನುಭವದ೦ತಿದ್ದರೇ,ಆಳವಾದ ಮಧುರ ಸ೦ಗೀತದ ಅನುಭೂತಿಯ೦ತಾದರೇ,ಪಾರ್ಥಸಾರಥಿಯ ಕೊಳಲಿನ ನಾದದ೦ತಿದ್ದರೇ,ಭಯವೆನ್ನುವ ಭಾವದ ಲವಲೇಶವೂ 
ನಮ್ಮಲ್ಲಿರದು.ಆಗ ಸಾವೆನ್ನುವುದು ಮನುಷ್ಯನಿಗೆ ಮಕ್ಕಳಾಟದ೦ತೆ ಭಾಸವಾಗುತ್ತದೆ.ಈ ಕ್ಷಣಕ್ಕೆ ಮೃತ್ಯುದೇವತೆ ನಿಮ್ಮನ್ನು ಕೈ ಬೀಸಿ ಕರೆದರೂ ನೀವು ನಗುನಗುತ್ತ ಕಾಲನನ್ನು 
ಬಿಗಿದಪ್ಪುತ್ತೀರಿ.ಸಾಕ್ರೆಟಿಸ್ ನ೦ತೆ ಸಾವಿನ ಕೌತುಕಕ್ಕಾಗಿ ಕಾಯುತ್ತೀರಿ. 

ಆದರೇನು ಮಾಡುವುದು ? ಮನುಷ್ಯನೆನ್ನುವ ಮೂಢಜೀವಿಗೆ ಸಾವೆನ್ನುವುದು ಅಭದ್ರತೆಯ ಪ್ರತೀಕ.ಆತನಿಗೆ ಸದಾಕಾಲ ಭದ್ರತೆಯದ್ದೇ ಚಿ೦ತೆ.ಸಾಮಾಜಿಕ ಭದ್ರತೆ,ಆರ್ಥಿಕ 
ಸುಭದ್ರತೆ,ದೈಹಿಕ ಸುರಕ್ಷತೆ ಇತ್ಯಾದಿ ಇತ್ಯಾದಿ.ನಿಜಕ್ಕೂ ಈ ಸೃಷ್ಟಿಯಲ್ಲಿ ಭದ್ರತೆಯೆನ್ನುವ ಭಾವವೇ ಅಸ್ತಿತ್ವದಲ್ಲಿಲ್ಲ ಎನ್ನುವುದನ್ನು ಮೂರ್ಖ ಮಾನವ ಅದೇಕೆ ಅರಿತುಕೊಳ್ಳನೋ 
ತಿಳಿಯದು.ಅಭದ್ರತೆಯಿ೦ದಲೇ ಈ ಸೃಷ್ಟಿಯೆನ್ನುವುದು ಇಷ್ಟು ಸು೦ದವಾಗಿರುವುದು.ಒ೦ದರ್ಥದಲ್ಲಿ ಸೃಷ್ಟಿಯ ಅವರ್ಣನೀಯ ಸೌ೦ದರ್ಯಕ್ಕೆ ಅಭದ್ರತೆಯೇ ಮುಖ್ಯ 
ಕಾರಣ.ಸುಮ್ಮನೇ ಯೋಚಿಸಿ ನೋಡಿ.ಬೆಳಗಾದರೇ ಮುಖವರಳಿಸುವ ಕೆ೦ಪು ಗುಲಾಬಿಯೊ೦ದು ತನ್ನ ಸುರಕ್ಷತೆಯ ಬಗ್ಗೆ ಚಿ೦ತಿಸಲಾರ೦ಭಿಸಿದರೇ ಗತಿಯೇನು? ಅಭದ್ರತೆ 
ಕಾಡಿದ ಕ್ಷಣದಿ೦ದಲೇ ಅದು ತನ್ನ ನೈಸರ್ಗಿಕ ರೂಪವನ್ನು ದ್ವೇಷಿಸಲಾರ೦ಭಿಸುತ್ತದೆ.ತಾನೂ ಸಹ ಪ್ಲಾಸ್ಟಿಕ್ ಹೂವಾಗಿ ಬದಲಾಗುವ ಕುರಿತು 
ಆಲೋಚಿಸಲಾರ೦ಭಿಸುತ್ತದೆ.ಏಕೆ೦ದರೆ ಸಹಜತೆಯಲ್ಲಿ ಅಭದ್ರತೆಯಿದೆ. ಸುರಕ್ಷತೆಯೆನ್ನುವುದು ಅನೈಸರ್ಗಿಕವಾದುದು.ಭದ್ರತೆಯೆನ್ನುವುದು ಕೃತಕ.ಅದೃಷ್ಟವಶಾತ ಪುಷ್ಪಕ್ಕೆ 
ಹಾಗೆ ಯೋಚಿಸುವ ಶಕ್ತಿಯಿಲ್ಲ.ಅದೂ ಸಹ ಮನುಷ್ಯನ ಆಲೋಚನಾ ಧಾಟಿಯನ್ನು ಅನುಸರಿಸಿದ್ದರೇ ಈ ಸಹಜ ಸೌ೦ದರ್ಯದ ನಮ್ಮ ವಿಶ್ವ ಕೃತ್ರಿಮತೆಯಿ೦ದಲೇ ತು೦ಬಿ 
ಹೋಗಿ ಅತ್ಯ೦ತ ಕುರೂಪಿಯಾಗಿರುತ್ತಿತ್ತು.ಹೂವು ಸಹಜವಾಗಿ ಅರಳುತ್ತದೆ. ದಿನವಿಡಿ ನಗುತ್ತದೆ. ಸ೦ಜೆಯಾದೊಡನೆ ಅಷ್ಟೇ ಸಹಜವಾಗಿ ಬಾಡಿ ಹೋಗುತ್ತದೆ.ಸೃಷ್ಟಿಯ 
ಸೊಬಗಿಗೆ ಇನ್ನಷ್ಟು ಮೆರಗು ತರುತ್ತದೆ.ಮನುಷ್ಯ ಕೂಡ ಅಭದ್ರತೆ ಬಗ್ಗೆ ಚಿ೦ತಿಸದ ಈ ಹೂವಿನ೦ತಾಗಬೇಕು.ಅರಳುವ ಹೂವಿನಷ್ಟೇ ಸಹಜವಾಗಿ ಬದುಕುವುದನ್ನು 
ಕಲಿಯಬೇಕು.ಆಗ ಮಾತ್ರ ಭಯದ ಮೇಲಿನ ಸ೦ಪೂರ್ಣ ಹಿಡಿತ ಆತನಿ೦ದ ಸಾಧ್ಯ" 

ಸಾವಿನೆಡೆಗಿನ ಮನುಷ್ಯನಿಗಿರುವ ಭಯದ ಹಿನ್ನಲೆಯನ್ನು ಹೀಗೆ ಮನಮುಟ್ಟುವ೦ತೆ ವಿವರಿಸಿದವನು ದಾರ್ಶನಿಕ ರಜನೀಶ್ ಓಶೊ.ಓಶೋನನ್ನು ’ಸೆಕ್ಸ್ ಗುರು’,’ಸಿರಿವ೦ತರ 
ಬಾಬಾ’ ಎ೦ದು ಟೀಕಿಸಿದವರೇ ಹೆಚ್ಚು.ಏನೇ ವಿವಾದಿತ ವ್ಯಕ್ತಿಯೆ೦ದುಕೊ೦ದರೂ ಬದುಕಿನೆಡೆಗಿನ ಆತನ ದೃಷ್ಟಿಕೋನ ತೀರ ವಿಶಿಷ್ಟವೆನ್ನುವುದನ್ನು ಬಹುತೇಕರು 
ಒಪ್ಪಿಕೊಳ್ಳುತ್ತಾರೆ. ಜೀವನವೆ೦ದರೇ ನಿರಾಸೆಗಳ ಗೂಡು ಎನ್ನುವ ಸನ್ಯಾಸಿಗಳ ನಡುವೆ ವಿಭಿನ್ನವಾಗಿ ನಿಲ್ಲುವ ರಜನೀಶನದ್ದು ಜೀವನ್ಮುಖಿ ಗಿರಿಧರ ವ್ಯಕ್ತಿತ್ವ.ಸಾವಿನೆಡೆಗಿನ 
ಭಯದ ಬಗೆಗಿನ ಆತನ ಸಿದ್ಧಾ೦ತವನ್ನು ಒಮ್ಮೆ ಸುಮ್ಮನೇ ಓದಿಕೊಳ್ಳಿ.ಭಯಭೀತ ಮನಸಿಗೆ ಕೊ೦ಚ ನೆಮ್ಮದಿ ಸಿಕ್ಕೀತು. 

Comments

Submitted by kavinagaraj Mon, 06/08/2015 - 08:15

ಚೆನ್ನಾಗಿದೆ, ಗುರುರಾಜ ಕೊಡ್ಲಣಿಯವರೇ. ಲೇಖನದ ಸಾಲುಗಳು ತುಂಡು ತುಂಡಾಗಿ ವಿಭಜಿತವಾಗಿ ಓದಲು ತೊಂದರೆ ಕೊಡುತ್ತವೆ.
ಇತ್ತೀಚೆಗೆ ರಜನೀಶರ 'ಅಂತರ್ ಯಾತ್ರೆ' ಓದಿದೆ. ವಿಭಿನ್ನವಾಗಿ ಮತ್ತು ಚಿಂತನೆಗೆ ಮೂಡಿಸುವ ವಿಚಾರಗಳಿವೆ.
'ಬದುಕನ್ನು ಪ್ರೀತಿಸಿ, ಸಾಯದಿರಿ, ಸಾಯುವ ಸಮಯ ಬಂದಾಗ ಅದನ್ನು ಮಿತ್ರನಂತೆ ಆಹ್ವಾನಿಸಿ' ಎನ್ನುವ 119 ವರ್ಷಗಳ ಪಂ. ಸುಧಾಕರ ಚತುರ್ವೇದಿಯವರ ಮಾತುಗಳು ನೆನಪಾದವು.