ನಿಜಜೀವನದಲ್ಲಿ ಹಾಸ್ಯ: ನಿಮ್ಮನ್ನು ನೋಡ್ಕೊಳ್ಳೋಕೆ ನಾನಿಲ್ವೇನ್ರೋ!

ನಿಜಜೀವನದಲ್ಲಿ ಹಾಸ್ಯ: ನಿಮ್ಮನ್ನು ನೋಡ್ಕೊಳ್ಳೋಕೆ ನಾನಿಲ್ವೇನ್ರೋ!

ಬರಹ

(ನಿಜಜೀವನದಲ್ಲಿಯೇ ಹಾಸ್ಯವನ್ನು ಹುಡುಕಬಹುದಾದ ಬಗ್ಗೆ ಮತ್ತು ಆ ರೀತಿಯ ಎರಡು ಸ್ವಾರಸ್ಯಕರ ಸನ್ನಿವೇಶಗಳ ಬಗ್ಗೆ ಈ ಹಿಂದೆ ಮೊದಲ ಕಂತಿನಲ್ಲಿ ಬರೆದಿದ್ದೆ. ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆ. ಈ ಬರಹ ಆ ರೀತಿಯ ನಿಜಜೀವನದಲ್ಲಿನ ಹಾಸ್ಯಮಯ ಸನ್ನಿವೇಶಗಳ ಎರಡನೆಯ ಕಂತು.)

ನನ್ನ ಚಿಕ್ಕಪ್ಪ ಹೇಳುತ್ತಿದ್ದ ಅವರ ಜೀವನದಲ್ಲಿ ನಡೆದ ಒಂದೆರಡು ಹಾಸ್ಯ ಸನ್ನಿವೇಶಗಳು ಇಲ್ಲಿವೆ.

ನನ್ನ ಚಿಕ್ಕಜ್ಜ (ಈಗವರು ನಮ್ಮೊಡನಿಲ್ಲ) ವೃತ್ತಿಯಿಂದ ವೈದ್ಯರಾಗಿದ್ದರು. ಅವರು ನನ್ನ ಚಿಕ್ಕಪ್ಪಂದಿರಿಗೆಲ್ಲ ಬಹಳ ಆತ್ಮೀಯರಾಗಿದ್ದು, ಸಲುಗೆಯಿಂದ ನಡೆದುಕೊಳ್ಳುತಿದ್ದರಂತೆ. ಒಮ್ಮೆ ನನ್ನ ಚಿಕ್ಕಪ್ಪ ಮತ್ತಿಬ್ಬರು ಗೆಳೆಯರು ಚಿಕ್ಕಜ್ಜನವರ ಜೊತೆ ಹೋಟೆಲೊಂದಕ್ಕೆ ಹೋಗಿದ್ದಾಗ ನಡೆದ ಘಟನೆಯಿದು. ಆ ಹೋಟೆಲ್ಲಿನ ಶುಚಿತ್ವದ ಬಗ್ಗೆ ಯಾಕೋ ಚಿಕ್ಕಜ್ಜನಿಗೆ ಅಷ್ಟು ನಂಬಿಕೆ ಉಂಟಾಗಲಿಲ್ಲ ಅನ್ನಿಸುತ್ತೆ. ಮಾಣಿ ಏನು ಬೇಕೆಂದು ಕೇಳಿದಾಗ ಅವರು ಎದುರಲ್ಲೇ ಕುಳಿತ ನನ್ನ ಚಿಕ್ಕಪ್ಪ ಮತ್ತು ಗೆಳೆಯರನ್ನು ತೋರಿಸಿ, "ಇವರಿಗೆಲ್ಲ ಒಂದೊಂದು ಮಸಾಲೆದೋಸೆ ಕೊಡಪ್ಪಾ" ಅಂದರಂತೆ. ಆದರೆ ಅವರಿಗೆ ಮಾತ್ರ ಎನೂ ಹೇಳಲೇ ಇಲ್ಲ. ಇದ್ಯಾಕೋ ಸ್ವಲ್ಪ ವಿಚಿತ್ರ ಅಂತನ್ನಿಸಿ ಚಿಕ್ಕಪ್ಪ "ನಿಮಗೆ ಮಾತ್ರ ಯಾಕೆ ಬೇಡ?" ಅಂತ ಪ್ರಶ್ನೆ ಮಾಡಿದಾಗ ಅವರು "ಯಾಕೋ ಈ ಹೋಟೆಲಿನಲ್ಲಿ ತಿಂದರೆ ಹುಷಾರು ತಪ್ಪೋದು ಗ್ಯಾರಂಟಿ ಅಂತನ್ನಿಸುತ್ತಿದೆ ಕಣೋ, ಅದಕ್ಕೇ ಬೇಡ ಅಂದೆ" ಅಂದರಂತೆ! ಇದನ್ನು ಕೇಳಿ ಬೇಸ್ತು ಬೀಳುವ ಸರದಿ ನನ್ನ ಚಿಕ್ಕಪ್ಪ ಮತ್ತು ಸಂಗಡಿಗರದು.

"ನಿಮಗೇನೋ ಹುಷಾರು ತಪ್ಪುತ್ತೆ ಅಂತ ಆರ್ಡರ್ ಮಾಡಲಿಲ್ಲ ಸರಿ. ಆದರೆ ನಮಗೆ ಮಾತ್ರ ಮಸಾಲೆದೋಸೆ ಹೇಳಿದ್ದು ಯಾಕೆ? ನಾಳೆ ನಮಗೆ ಹೊಟ್ಟೆಕೆಟ್ಟರೇನು ಗತಿ" ಅಂತ ಚಿಕ್ಕಪ್ಪ ಕೇಳಿದ್ದಕ್ಕೆ ಚಿಕ್ಕಜ್ಜ ತಣ್ಣಗೆ, "ಅಲ್ವೋ, ನಿಮಗೆ ಆರೋಗ್ಯ ಕೆಟ್ಟರೆ ನಾನು ಡಾಕ್ಟರ್ ಇಲ್ಲವೇ ಇಲ್ಲಿ? ನಿಮಗ್ಯಾಕೆ ಚಿಂತೆ? ಅದೇ ನನಗೆ ಹೊಟ್ಟೆ ಕೆಟ್ಟರೆ ನನಗ್ಯಾರಿದ್ದಾರೆ? ಅದಕ್ಕೇ ನಿಮಗೆ ಮಸಾಲೆದೋಸೆ ಹೇಳಿದೆ. ಆರಾಮಾಗಿ ತಿನ್ನಿ" ಎನ್ನಬೇಕೆ?

    ******  ******  ******

ಇನ್ನೊಮ್ಮೆ ಚಿಕ್ಕಪ್ಪನಿಗೆ ಆರೋಗ್ಯ ಸರಿಯಿಲ್ಲದ ಸಂದರ್ಭ. ಆಗವರು ಬೆಂಗಳೂರಿನಲ್ಲಿದ್ದರು. ಅಲ್ಲಿನ ವೈದ್ಯರೊಬ್ಬರಿಗೆ ಸುಮಾರು ೭-೮ ದಿನಗಳಿಂದ ತೋರಿಸಿದರೂ ಗುಣವಾಗಿರಲಿಲ್ಲ. ಮೇಲಾಗಿ ವಿಪರೀತ ಆಯಾಸ ಬೇರೆ. ಆಗ ನನ್ನ ಚಿಕ್ಕಜ್ಜ ಮಂಡ್ಯದಲ್ಲಿದ್ದರಂತೆ. ಸರಿ, ಅಲ್ಲಿಗೇ ಹೋಗಿ ಅವರಿಗೆ ತೋರಿಸಿ ಒಂದೆರಡು ದಿನಗಳಿದ್ದು ಬರೋಣ ಅಂತ ಚಿಕ್ಕಪ್ಪ ಮಂಡ್ಯಕ್ಕೆ ಹೋದರಂತೆ. ಸುಸ್ತಾಗಿ, ಬಸವಳಿದು ಚಿಕ್ಕಜ್ಜನ ಮನೆ ಸೇರಿದಾಗ ಮಧ್ಯಾಹ್ನ ಊಟದ ಹೊತ್ತು. ಚಿಕ್ಕಜ್ಜ ಊಟ ಮಾಡುತ್ತಿದ್ದರು. ಚಿಕ್ಕಪ್ಪನ ಕಳಾಹೀನ ಮುಖವನ್ನು ನೋಡಿ "ಇದೇನೋ ಹೀಗಾಗಿದ್ದೀಯಾ? ಸಣಕಲು ಕಡ್ಡಿ ತರಹ ಆಗಿದ್ದೀಯಾ, ಏನಾಯಿತು?" ಅಂತ ವಿಚಾರಿಸಿದರು. ಚಿಕ್ಕಪ್ಪ ಎಲ್ಲ ವಿವರ ಒಪ್ಪಿಸಿದಾಗ, "ಓಹೋ, ಹೀಗೋ ಸಮಾಚಾರ; ಎಲ್ಲಿ ನಿನ್ನ ಬೆಂಗಳೂರಿನ ಡಾಕ್ಟ್ರು ಏನು ಔಷಧಿ ಕೊಟ್ಟಿದ್ದಾರೆ ನೋಡೋಣ, ಚೀಟಿ ಕೊಡು" ಅಂದರು ಚಿಕ್ಕಜ್ಜ.

ಚಿಕ್ಕಪ್ಪ ಕೊಟ್ಟ ಚೀಟಿ ಓದಲು ಪ್ರಾರಂಭಿಸಿದಂತೆಯೇ ಚಿಕ್ಕಜ್ಜನ ಮುಖಭಾವವೂ ಬದಲಾಯಿಸುತ್ತಾ ಹೋಯಿತಂತೆ. ಅರ್ಧಕ್ಕೇ ಅ ಚೀಟಿಯನ್ನು ಬದಿಗಿಟ್ಟು, "ಥೋ, ಇದೇನೋ ಮಾರಾಯಾ, ಏನೆಲ್ಲಾ ಬರೆದಿದ್ದಾನೆ ಆ ಪುಣ್ಯಾತ್ಮ! ಹತ್ತಾರು ತರಹದ ಮಾತ್ರೆಗಳು, ಅದರ ಜತೆ ಈ ಅಡುಗೆ ಬೇಡ, ಅದನ್ನು ಊಟ ಮಾಡಬೇಡ ಅಂತ ಪಥ್ಯ ಬೇರೆ. ಎಷ್ಟು ದಿನದಿಂದ ಇದನ್ನು ಫಾಲೋ ಮಾಡುತ್ತಿದ್ದೀಯೋ" ಅಂತ ಕೇಳಿದರು. ಸುಮಾರು ಒಂದು ವಾರದಿಂದ ಅಂತ ಚಿಕ್ಕಪ್ಪ ಅಂದಿದ್ದನ್ನು ಕೇಳಿ, "ಪುಣ್ಯ ಕಣೋ, ಸರಿಯಾದ ಸಮಯಕ್ಕೇ ಬಂದಿದ್ದೀಯಾ. ನಿನಗೆ ಬೇಕಾಗಿರೋದು ಔಷಧಿ ಅಲ್ಲ, ಪೊಗದಸ್ತಾದ ಊಟ" ಅಂತ ಹೇಳಿದ್ದೇ ಆಜ್ಜಿಯನ್ನು ಕರೆದು ಚಿಕ್ಕಪ್ಪನಿಗೆ ಒಳ್ಳೆಯ ಊಟ ಹಾಕಲು ಹೇಳಿದರಂತೆ. ಸ್ವಲ್ಪ ಅಳುಕುತ್ತಲೇ ಚಿಕ್ಕಪ್ಪ, "ಅಲ್ಲಾ, ಆ ಬೆಂಗಳೂರಿನ ಡಾಕ್ಟ್ರು ಕೊಟ್ಟ ಮಾತ್ರೆಗಳನ್ನು..." ಅಂತ ಕೇಳುತ್ತಿದ್ದಂತೆಯೇ ಚಿಕ್ಕಜ್ಜ "ಮೊದಲು ಎರಡು ದಿನ, ದಿನಕ್ಕೆ ಮೂರು ಹೊತ್ತು ಸರಿಯಾಗಿ ಊಟ ಮಾಡು. ಯಾವ ಪಥ್ಯವೂ ಬೇಡ. ಎಲ್ಲ ತಾನಾಗಿಯೇ ಸರಿಹೋಗುತ್ತೆ. ಆಮೇಲೆ ಉಳಿದ ಮಾತ್ರೆಗಳನ್ನು ಆ ಬೆಂಗಳೂರಿನ ಡಾಕ್ಟ್ರಿಗೇ ವಾಪಸು ಕೊಡು. ಬೇಕಿದ್ದರೆ ಅವರೇ ತಗೊಳ್ಲಿ" ಅಂದರಂತೆ!

ಅವರು ಹೇಳಿದಂತೆಯೇ ಮೂರನೇ ದಿನದ ವೇಳೆಗೆ ಚಿಕ್ಕಪ್ಪನ ಜ್ವರ, ಬಳಲಿಕೆ ಎಲ್ಲವೂ ಹೇಳಹೆಸರಿಲ್ಲದಂತೆ ಮಾಯವಾಗಬೇಕೆ?!