ನಿಜಜೀವನದಲ್ಲಿ ಹಾಸ್ಯ: ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆ

ನಿಜಜೀವನದಲ್ಲಿ ಹಾಸ್ಯ: ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆ

ಬರಹ

ಹಾಸ್ಯವನ್ನು ಎಲ್ಲೋ ಹುಡುಕಿಕೊಂಡು ಹೋಗುವುದಕ್ಕಿಂತ, ದೈನಂದಿನ ಆಗುಹೋಗುಗಳನ್ನೇ ಸ್ವಲ್ಪ ಎಚ್ಚರದಿಂದ ಗಮನಿಸುತ್ತಿದ್ದರೆ ಅದರಲ್ಲಿ ಸಿಗುವಷ್ಟು ತಿಳಿಯಾದ, ತಾಜಾ ಹಾಸ್ಯ ಇನ್ನೆಲ್ಲೂ ಸಿಗೋದಿಲ್ಲ ಅಂತ ನನ್ನ ಅಜ್ಜ ಮತ್ತು ಅಪ್ಪ ಪದೇ ಪದೇ ಹೇಳುತ್ತಿದ್ದರು. ಹಾಗೆ ನಿಜಜೀವನದಲ್ಲಿ ಕಂಡ ಒಂದೆರಡು ಹಾಸ್ಯ ಸನ್ನಿವೇಶಗಳು ಇಲ್ಲಿವೆ.

ನಮ್ಮಜ್ಜ ಹೈಸ್ಕೂಲು ಉಪಾಧ್ಯಾಯರಾಗಿದ್ದಾಗ ನಡೆದ ಘಟನೆಯಂತೆ ಇದು.
ಕನ್ನಡ ಪರೀಕ್ಷೆ. ಪ್ರಶ್ನೆಪತ್ರಿಕೆಯಲ್ಲಿ ಒಂದು ಪ್ರಶ್ನೆ - "ಭೀಮ ದುರ್ಯೋಧನರ ಕಾಳಗವನ್ನು ನಿಮ್ಮದೇ ಆದ ವಾಕ್ಯಗಳಲ್ಲಿ, ಒಂದು ಪುಟಕ್ಕೆ ಮೀರದಂತೆ ವಿವರಿಸಿ". ಬಹುಶಃ ರನ್ನನ "ಗದಾಯುದ್ಧ"ವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಪ್ರಶ್ನೆ ಹಾಕಿರಬೇಕು ಅನ್ನಿಸುತ್ತೆ.
ಒಬ್ಬ ಭೂಪ ಉತ್ತರ ಬರೆದಿದ್ದು ಹೀಗೆ: "ಭೀಮ ತನ್ನ ಗದೆಯ ತುದಿಯಿಂದ ಮೊದಲು ದುರ್ಯೋಧನನ ಭುಜಕ್ಕೆ ತಿವಿದು, ನಂತರ ಗದೆಯನ್ನು ಸುತ್ತಿಸಿ ಸುತ್ತಿಸಿ ಹೊಡೆದು, ನಂತರ ದುರ್ಯೋಧನನ ಹೊಟ್ಟೆಗೆ ಬಲವಾಗಿ ಹೊಡೆದು, ಆಮೇಲೆ ದುರ್ಯೋಧನನ ತಲೆಯ ಮೇಲೆ ಅಪ್ಪಳಿಸಿ........" ಹೀಗೆ ಇಡಿಯ ಪುಟವನ್ನು ಬೇರೆ ಬೇರೆ ರೀತಿಯ "ತನ್ನದೇ ಆದ ತಿವಿತ, ಹೊಡೆತಗಳ ವಿವರಣೆಯಿಂದ" ತುಂಬಿಸಿ ಕೊನೆಯಲ್ಲಿ ".....ದುರ್ಯೋಧನನು ಪೂರ್ಣ ಸುಸ್ತಾಗಿ ಇನ್ನೇನು ಕೆಳಗೆ ಬೀಳುವಷ್ಟರಲ್ಲಿ ಭೀಮನು ಅವನ ತೊಡೆಗೆ ಗದೆಯಿಂದ ಬಲವಾಗಿ ಹೊಡೆದು ಅವನನ್ನು ಸೋಲಿಸಿದನು" ಅಂತ ಬರೆದಿದ್ದನಂತೆ! Smile

ಎರಡನೆಯದು ನಮ್ಮಪ್ಪ ಉತ್ತರಪತ್ರಿಕೆ ಪರಿಶೀಲಿಸುವಾಗ ಅವರಿಗೆ ಕಂಡುಬಂದದ್ದು (ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತಿದು).
ಪ್ರಶ್ನೆ ಏನಪ್ಪ ಅಂದ್ರೆ - "ಸಂಕೋಚ್ಯತೆ(compressibility) ಅಂದರೇನು? ಉದಾಹರಣೆ ಸಹಿತ ವಿವರಿಸಿ". ಭೌತಶಾಸ್ತ್ರದ ಪ್ರಶ್ನೆ.
ಒಬ್ಬ ಬರೆದಿದ್ದ ಉತ್ತರ ಹೀಗಿತ್ತಂತೆ (ಉತ್ಪ್ರೇಕ್ಷೆ ಅಲ್ಲವೇ ಅಲ್ಲ, ಲಿಟರಲಿ ಹೀಗೇ ಬರೆದಿದ್ದನಂತೆ): "ನೀವು ಹೊಸದಾಗಿ ಒಂದು ಊರಿಗೆ ಹೋಗುತ್ತೀರ ಅಂತ ಇಟ್ಟುಕೊಳ್ಳಿ. ಕುಡಿಯುವ ನೀರು ಹಿಡಿಯಲು ನಲ್ಲಿಯೊಂದರ ಬಳಿ ಹೋಗಬೇಕಾಗುತ್ತದೆ ಅಂತ ಭಾವಿಸಿ. ನಲ್ಲಿಯ ಬಳಿ ಬಹುತೇಕ ಹೆಣ್ಣುಮಕ್ಕಳೇ ಇದ್ದಾರೆಂದುಕೊಂಡರೆ, ಆಗ ನಿಮಗೆ ಒಂದು ತರಹದ ಸಂಕೋಚ ಆಗುತ್ತಲ್ಲ, ಅದನ್ನೇ ಸಂಕೋಚ್ಯತೆ ಎನ್ನುತ್ತಾರೆ"!!! Smile