ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ!

ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ!

ಬರಹ

(ನಗೆ ನಗಾರಿ ಭವಿಷ್ಯವಾಣಿ ಮಹಾನ್ವೇಷಣಾ ಬ್ಯೂರೋ)

ಮಾಧ್ಯಮದವರ ಬೇಜವಬ್ದಾರಿತನದ ಬಗ್ಗೆ ಪುಟಗಟ್ಟಲೆ ಕೊರೆದು ಸುಸ್ತಾಗಿರುವ ನಮಗೆ
ಇನ್ನಷ್ಟು ಭಾಷಣ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷವಾಗಿದೆ.  ಸುದ್ದಿಯೆಂಬುದು
ಕರ್ನಾಟಕದ ಕಗ್ಗತ್ತಲ ಮೂಲೆಯಲ್ಲಿ ಕಪ್ಪು ಕಂಬಳಿ ಹೊದ್ದು ಅಡಗಿ ಕುಳಿತಿದ್ದರೂ ಪತ್ತೆ
ಹಚ್ಚಿ, ಹಿಡಿದು ತಂದು, ಬಣ್ಣ ಬಳಿದು, ಪೋಷಾಕು ತೊಡಿಸಿ ವರದಿ ಮಾಡುವ, ಆಮೂಲಕ ಉತ್ತಮ
ಸಮಾಜ ಕಟ್ಟಲು ಶ್ರಮಿಸುವ ಚಾನಲ್ಲು, ನಿರಂತರವಾಗಿ ನೇರವಾದ ವರದಿಯನ್ನು ದಿಟ್ಟವಾಗಿ
ಪ್ರಕಟಿಸುವ ಛಲ ಹೊತ್ತ ಚಾನಲ್ಲುಗಳು, ನಂಬರ್ ಒನ್, ಟೂ, ಥ್ರೀ ಪತ್ರಿಕೆಗಳು ಈ ಬಗೆಯ
ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿರುವುದನ್ನು ಕಂಡು ನಾವು ಕೆಂಡಾ
ಮಂಡಲರಾಗಿದ್ದೇವೆ. ಸುದ್ದಿಯನ್ನು ವರದಿ ಮಾಡುವುದಷ್ಟೇ ಪತ್ರಕರ್ತನ ಕೆಲಸವಲ್ಲ, ಆ
ಸುದ್ದಿಯ ಬೆಳವಣಿಗೆ, ಅದರ ಪರಿಣಾಮಗಳನ್ನು ತಾಳ್ಮೆಯಿಂದ ಗಮನಿಸಿ ಓದುಗರಿಗೆ
ಮುಟ್ಟಿಸಬೇಕಾದ್ದು ಆತನ ಕರ್ತವ್ಯ. ಆದರೆ ಈ ಕರ್ತವ್ಯವನ್ನು ಮರೆತು ಮಾಧ್ಯಮಗಳು ಉತ್ತಮ
ಸಮಾಜ ಕಟ್ಟಲು ಹೊರಟಿವೆ.

ನಮ್ಮ ಪ್ರಭಾವಿ ಮುಖ್ಯಧಾರೆಯ ಮಾಧ್ಯಮಗಳು ಎಡವಿದ ಕಲ್ಲನ್ನೇ ಕರ್ತಾರನ ಕಮ್ಮಟ ಎಂದು
ಭಾವಿಸಿ ಕೆಲಸಕ್ಕೆ ತೊಡಗುವ ನಗೆ ನಗಾರಿ ಡಾಟ್ ಕಾಮ್ ಪತ್ರಿಕಾ ಧರ್ಮವನ್ನು ಎತ್ತಿ
ಹಿಡಿಯಲು ಮತ್ತೊಮ್ಮೆ ತನ್ನ ಸಮಸ್ತ ಶಕ್ತಿಯನ್ನೂ ವಿನಿಯೋಗಿಸಿದೆ.

ಚುನಾವಣೆಗಳ ಮುನ್ನ ಯಾರು ಎಷ್ಟು ಸೀಟು ಗೆಲ್ಲಬಹುದು, ಯಾರು ಕುರ್ಚಿಯೇರಬಹುದು
ಎಂದೆಲ್ಲಾ ರಾಜಕೀಯ ಪಂಡಿತರು ಹಾಗೂ ಟಿವಿ ನಿರೂಪಕರು ಹಗಲು ರಾತ್ರಿ ಗಂಟಲು
ಹರಿದುಕೊಳ್ಳುವುದು ಸಾಮಾನ್ಯ. ಏಕೆಂದರೆ ಅದು ಅವರ ವೃತ್ತಿ, ಹೊಟ್ಟೆ ಪಾಡು. ವೃತ್ತಿ
ಅಥವಾ ಹೊಟ್ಟೆ ಪಾಡು ನಿರ್ವಹಿಸಲು ಯಾವುದೇ ಪ್ರತಿಭೆ, ಅಧ್ಯಯನ, ಜವಾಬ್ದಾರಿ, ತಜ್ಞತೆ
ಇರಬೇಕು ಎಂದೇನು ಕಾನೂನು ಇಲ್ಲ. ಅವರು ಬಾಯಿಗೆ ಬಂದ, ತಲೆಗೆ ತೋಚಿದ ವಿಶ್ಲೇಷಣೆ
ಮಾಡಿದರೂ, ತಲೆ ಬುಡವಿಲ್ಲದ ಭವಿಷ್ಯವಾಣಿಯನ್ನು ಅರುಹಿದರೂ ಅದನ್ನು ಗಂಭೀರವಾಗಿ
ಪರಿಗಣಿಸಬೇಕು ಎಂದು ಬುದ್ಧಿವಂತ ವೀಕ್ಷಕರಿಗೆ ಅನ್ನಿಸುವುದಿಲ್ಲ.

ಆದರೆ ಹೊಟ್ಟೆ ಪಾಡಿನ ಹಂಗಿಲ್ಲದೆ, ವೃತ್ತಿಯನ್ನು ನಿರ್ವಹಿಸಬೇಕಾದ
ಅನಿವಾರ್ಯತೆಯಿಲ್ಲದೆ ಈ ಬಗೆಯ ಭವಿಷ್ಯವಾಣಿಯನ್ನು ಉದ್ಘೋಷಿಸುವ ಹವ್ಯಾಸಿ ತಜ್ಞರ
ಪ್ರಯತ್ನವನ್ನು ಮಾತ್ರ ಅಸಡ್ಡೆಯಿಂದ ಕಾಣಬಾರದು. ಅವರ ಕೊಡುಗೆಯನ್ನು ಭಾರಿ
ಗೌರವಾದರಗಳಿಂದ ನೆನೆಸಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ.

ಈ ಸಾಲಿನ ಲೋಕಸಭಾ ಚುನಾವಣೆಗಳ ಮುಂಚೆ ರಾಜಕೀಯ ಏರುಪೇರುಗಳ ಬಗ್ಗೆ ಅತ್ಯಂತ
ನಿಖರವಾಗಿ ಭವಿಷ್ಯ ನುಡಿದಿದ್ದ ಕೋಡಿ ಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿಯವರ
ಹೇಳಿಕೆಗಳನ್ನು ನೆನೆಸಿಕೊಳ್ಳೋಣ.

svami

 

ಯಡಿಯೂರಪ್ಪ ಅಧಿಕಾರಕ್ಕೆ ಕುತ್ತು: ಕೋಡಿಮಠ ಶ್ರೀ ಭವಿಷ್ಯ

ಹಾಸನ, ಸೋಮವಾರ, 11 ಮೇ 2009( 10:51 IST )

NRB

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ 15 ದಿನಗಳೊಳಗೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಕ್ಕೆ ಕುತ್ತು ಬರಲಿದೆ. ಒಂದು ವೇಳೆ
ತಕ್ಷಣಕ್ಕೆ ಅಪಾಯದಿಂದ ಪಾರಾದರೂ ಡಿಸೆಂಬರ್‌‌ನಲ್ಲಿ ಎದುರಾಗುವ ರಾಜಕೀಯ ಗಂಡಾಂತರದಿಂದ
ಯಡಿಯೂರಪ್ಪ ಪಾರಾಗಲು ಸಾಧ್ಯವೇ ಇಲ್ಲ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ
ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.
ಯಡಿಯೂರಪ್ಪ
ಮುಖ್ಯಮಂತ್ರಿ ಹುದ್ದೆ ಏರಿದ ದಿನದಿಂದಲೂ ರಾಜ್ಯದಲ್ಲಿ ಅವಘಡ, ಗಲಾಟೆ, ಸಾವುಗಳು
ನಿರಂತರವಾಗಿ ಸಂಭವಿಸುತ್ತಿವೆ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಘಳಿಗೆಯೇ ಸರಿಯಿಲ್ಲ.
ಗಂಡಾಂತರದಿಂದ ಅವರು ಪಾರಾಗಬೇಕಿದ್ದರೆ ಮುಖ್ಯಮಂತ್ರಿಯಾದ 45 ದಿನಗಳಲ್ಲಿ ರಾಜೀನಾಮೆ
ನೀಡಿ ಮತ್ತೆ ಅಧಿಕಾರ ಸ್ವೀಕರಿಸಬೇಕಿತ್ತು. ಆ ಕೆಲಸ ಮಾಡಿದ್ದರೆ 10 ವರ್ಷ ಅನಭಿಷಿಕ್ತ
ದೊರೆಯಂತಿರಬಹುದಿತ್ತು. ಈಗ ಯಾವ ಶಾಂತಿ ಮಾಡಿಸಿದರೂ ಗಂಡಾಂತರದಿಂದ ಪಾರಾಗಲು
ಸಾಧ್ಯವಾಗದು ಎಂದು ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯದಲ್ಲಿ
28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಆದರೆ,
ಕಾಂಗ್ರೆಸ್ ಮತ್ತು ಜೆಡಿಎಸ್ ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು
ಗೆದ್ದುಕೊಂಡು ಪ್ರಬಲವಾಗಲಿದೆ. ರಾಜ್ಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು
ಸಂಭವಿಸುವ ಸಾಧ್ಯತೆಯಿದೆ ಎಂದರು.

 

ಸ್ವಾಮೀಜಿಯವರ ಭವಿಷ್ಯವಾಣಿಯನ್ನು ವರದಿ ಮಾಡುವಲ್ಲಿ ಪತ್ರಿಕೆಗಳು
ತೋರಿದ ಶ್ರದ್ಧೆಯನ್ನು ಅವರ ಭವಿಷ್ಯವಾಣಿ ನಿಖರವೆಂದು ಸಾಬೀತಾದಾಗ ಅದನ್ನು ನೆನಯುವಲ್ಲಿ
ತೋರಲು ಮರೆತರು. ಅತ್ಯಂತ ನಿಖರವಾಗಿ ಫಲಿತಾಂಶವನ್ನು ನಿರೀಕ್ಷಿಸಿದ್ದಕ್ಕೆ
ಸ್ವಾಮೀಜಿಯವರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ತಮ್ಮ ತ್ರಿಕಾಲಜ್ಞಾನದ ಬಲದಿಂದ ಸ್ವಾಮೀಜಿಯವರು ಈ ಚುನಾವಣೆಯ ನಂತರ ದೇಶದ
ಪ್ರಧಾನಿಯಾಗುವುದು ಮಹಿಳೆಯೇ ಎಂದಿದ್ದರು. ತೃತೀಯ ರಂಗ ಉತ್ತಮ ಸಾಧನೆ ಮಾಡಲಿದೆ
ಎಂದಿದ್ದರು. ಪ್ರಧಾನಿ ಆಯ್ಕೆ ಸಮಯದಲ್ಲಿ ಆಗುವ ಗಲಾಟೆಯಿಂದ ಒಂದು ಬಣ ಪ್ರಮುಖ
ಪಕ್ಷದಿಂದ ಸಿಡಿದು ಹೋಗಲಿದೆ ಎಂದಿದ್ದರು. ತಮ್ಮ ಭವಿಷ್ಯವಾಣಿಯನ್ನು ಬೆಂಬಲಿಸುವುದಕ್ಕೆ
ಮುಂಬಯಿಯ ಮೇಲೆ ಆಕ್ರಮಣ ನಡೆಯುವುದನ್ನು ನಾವು ಮೊದಲೇ ನುಡಿದಿದ್ದೆವು ಎಂದು
ನೆನಪಿಸಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆದರೂ ಕಾಂಗ್ರೆಸ್ ಹಾಗೂ
ಜೆಡಿಎಸ್ ಸ್ಥಾನ ಹೆಚ್ಚಿಸಿಕೊಳ್ಳುತ್ತವೆ ಎಂದಿದ್ದರು. ಚುನಾವಣೆಯ ನಂತರ ಯಡಿಯೂರಪ್ಪನವರ
ಅಧಿಕಾರಕ್ಕೆ ಕುತ್ತು ಬರಲಿದೆ ಎಂದೂ ತಿಳಿಸಿದ್ದರು.   ಅಲ್ಲಿ ಇಲ್ಲಿ ಕೆಲವು
ಅಪಸವ್ಯಗಳನ್ನು ಹೊರತು ಪಡಿಸಿದರೆ ಸ್ವಾಮೀಜಿಯವರ ಭವಿಷ್ಯವಾಣಿ ಶೇ ನೂರರಷ್ಟು
ಸತ್ಯವಾಗಿದೆ. 

ಸ್ವಾಮೀಜಿಯವರ ಈ ಸಾಧನೆಗೆ, ದಿವ್ಯ ಶಕ್ತಿಗೆ ತಲೆಬಾಗಿರುವ ವೈಜ್ಞಾನಿಕ ಜಗತ್ತು
ಇವತ್ತು ಮಧ್ಯ ರಾತ್ರಿ ಹನ್ನೆರಡು ಗಂಟೆಯಿಂದಲೇ ತಮ್ಮೆಲ್ಲಾ ಕೆಲಸಗಳನ್ನು ನಿಲ್ಲಿಸಿ
ಸ್ವಾಮೀಜಿಯ ಪದತಲದಲ್ಲಿ ನೆಲೆಯೂರುವ ಯೋಜನೆ ಹಾಕಿಕೊಂಡಿದ್ದಾರೆ. ಭೂಕಂಪನ ಮುನ್ಸೂಚನೆ,
ಚಂಡಮಾರುತ, ಸುನಾಮಿಗಳ ಮುನ್ನೆಚ್ಚರಿಕೆ, ರೇಡಾರ್ ನಿರ್ವಹಣೆ, ಶೇರು ಮಾರುಕಟ್ಟೆಯ
ನಿರ್ವಹಣೆ ಮಾಡಬೇಕಾದ ತಜ್ಞರೆಲ್ಲ ತಮ್ಮ ಕೆಲಸಗಳನ್ನು ಸ್ವಾಮೀಜಿಯವರ ಕೈಗೆ ನೀಡಿ
ಕಾಲಿಗೆ ಬೀಳಲು ಏಕಸಮ್ಮತವಾಗಿ ನಿರ್ಧರಿಸಿದ್ದಾರೆ.

ಈ ನಡುವೆ  ಸಾಮ್ರಾಟರು ಸ್ವಾಮೀಜಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿ ತಮ್ಮ
ಅಭಿನಂದನೆಗಳನ್ನು ಸಲ್ಲಿಸಿ, ಈ ವರದಿ ಪ್ರಕಟಣೆಗಾಗಿ ಅಲ್ಪ ಮೊತ್ತದ ಚೆಕ್ ಒಂದನ್ನು
ಪಡೆದುಕೊಂಡು ಅದು ಕ್ಲಿಯರ್ ಆಗುವುದೋ ಇಲ್ಲ ಬೌನ್ಸ್ ಆಗುವುದೋ ಎಂದು ಭವಿಷ್ಯವಾಣಿಯನ್ನು
ಕೇಳಿಕೊಂಡು ಬಂದು ಕೂತಿದ್ದಾರೆ.