ನಿಜ ಸಂತ ಸಾರಿದ ಸಂದೇಶ
ವಿಶ್ವಶ್ರೇಷ್ಟ ಜ್ಞಾನಿಗಳ ಸಾಲಿಗೆ ನಿಲ್ಲುವಂಥ ಸಿದ್ದೇಶ್ವರ ಶ್ರೀಗಳ ಅಗಲಿಕೆ ಇಡೀ ನಾಡನ್ನು ದುಃಖದ ಕಡಲಲ್ಲಿ ಮುಳುಗಿಸಿದೆ. ಶ್ರೀಗಳ ಅಗಲಿಕೆ ಕೇವಲ ಇಹಲೋಕ ತ್ಯಜಿಸಿದ ವಿಚಾರವಾಗುಳಿಯದೆ, ಸಂತ ಅಥವಾ ಸ್ವಾಮೀಜಿಗಳು ತಮ್ಮ ಜೀವನದ ಅಂತ್ಯದಲ್ಲಿ ಈ ಭೌತಿಕ ಜಗತ್ತಿಗೆ ಜೀವಿತದ ಎಂಥ ಉದಾತ್ತ ಆದರ್ಶಗಳನ್ನು ಬಿಟ್ಟು ತೆರಳಬೇಕು ಎಂಬುದನ್ನೂ ದರ್ಶಿಸುವಂತೆ ಮಾಡಿದೆ. ಶ್ರೀಗಳ ಅಂತಿಮ ದರ್ಶನಕ್ಕೆ ಸಾಕ್ಷಿಯಾದ ಲಕ್ಷಾಂತರ ಜನಸ್ತೋಮ ನೋಡಿದಾಗ ಅವರು ಈ ಭೂಮಿ ಮೇಲೆ ಬಿಟ್ಟು ಹೋದ ಏಕೈಕ ಆಸ್ತಿಯ ದಿಗ್ದರ್ಶನವೂ ಈ ಸಮಾಜಕ್ಕೆ ವೇದ್ಯವಾಗಿದೆ.
ನಾಡಿನ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮ ಪರಂಪರೆಯಲ್ಲಿ ಮಠ-ಮಾನ್ಯಗಳ ಪಾತ್ರ ಹಿರಿದು. ಬಹುಪಾಲು ಜಾತಿ -ಸಮುದಾಯಗಳ ಮಾರ್ಗದರ್ಶನದಲ್ಲಿ ಮಠ-ಮಾನ್ಯಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಸಮುದಾಯಗಳನ್ನು ಧಾರ್ಮಿಕವಾಗಿ ಅಲ್ಲದೆ ಶೈಕ್ಷಣಿಕವಾಗಿ, ರಾಜಕೀಯವಾಗಿ ಸದೃಢಗೊಳಿಸುವಲ್ಲಿಯೂ ಧಾರ್ಮಿಕ ಮುಖಂಡರ ಸಹಭಾಗಿತ್ವ ಉಲ್ಲೇಖನೀಯ. ಇವೆಲ್ಲವೂ ಒಂದು ಜಾತಿ, ಧರ್ಮದ ಚೌಕಟ್ಟಿನಲ್ಲೇ ನಡೆಯುವಂಥ ಪ್ರಕ್ರಿಯೆಗಳು ಎನ್ನುವುದೂ ಇಲ್ಲಿ ಗಮನಾರ್ಹವೇ.
ಆದರೆ, ಸಿದ್ದೇಶ್ವರ ಶ್ರೀಗಳು ಈ ಎಲ್ಲಾ ಸಿದ್ಧಸೂತ್ರಗಳ ಆಚೆಗೆ ತಮ್ಮ ವ್ಯಕ್ತಿತ್ವದ ಪ್ರಭೆ ವಿಸ್ತರಿಸಿದಂಥ ಸಾಧಕ ಶ್ರೇಷ್ಠರು. ಈ ಕಾರಣದಿಂದಲೇ ಅವರಿಗೆ ನಿರ್ದಿಷ್ಟ ಧರ್ಮ., ಜಾತಿಗಳ ಗೆರೆಗಳಿಲ್ಲದೆ ಇಡೀ ಸಮಾಜದ ಪ್ರೀತಿ ಅವರತ್ತ ಧಾರೆಯಾಗಿ ಹರಿಯುತ್ತಿದೆ. ಅಲ್ಲದೆ, ಜೀವಿತದುದ್ದಕ್ಕೂ ಅವರು ಮೈಗೂಡಿ ಕೊಂಡ ಸರಳತೆ, ಆದರ್ಶ ವ್ಯಕ್ತಿತ್ವಗಳು ಸಮಾಜದಲ್ಲಿ ಹಲವು ಸಂದೇಶಗಳನ್ನು ನೆಲೆಯೂರುವಂತೆ ಮಾಡಿದೆ.
ಸನ್ಯಾಸಿ ಎಂದರೆ ಸರ್ವಸಂಗ ಪರಿತ್ಯಾಗಿ ಎನ್ನುವ ಮಾತುಂಟು. ಈ ನಿಟ್ಟಿನಲ್ಲಿ ಕಂಡಾಗ ಸಿದ್ದೇಶ್ವರರು ನಿಜ ಸಂತ. ಪ್ರಸ್ತುತ ದಿನಮಾನಗಳಲ್ಲಿ ಮಠಗಳಿಗೆ ಸರಕಾರದ., ರಾಜಕಾರಣಿಗಳ ದೇಣಿಗೆಯ ಪೋಷಣೆ ಗುಟ್ಟಾಗಿಯೇನೂ ಉಳಿದಿಲ್ಲ. ಜ್ಞಾನಯೋಗಾಶ್ರಮ ಕಟ್ಟಿದ್ದ ಸಿದ್ದೇಶ್ವರರು ಆಶ್ರಮದ ಆವರಣದೊಳಗೆ ಯಾವ ಆಮಿಷಗಳನ್ನು ಬಿಟ್ಟು ಕೊಂಡವರಲ್ಲ. ಅವರು ಧರಿಸುತ್ತಿದ್ದ ನಿಲುವಂಗಿಗೆ ಜೇಬು ಇರುತ್ತಿರಲಿಲ್ಲ. ಹಣ್ಣು-ಹಂಪಲು- ಹೂಮಾಲೆ ಮುಟ್ಟಿದವರಲ್ಲ, ಬ್ಯಾಂಕ್ ಖಾತೆಯನ್ನೂ ಹೊಂದಿದವರಲ್ಲ, ರಾಜಕಾರಣಿಯೊಬ್ಬರಿಂದ ಮೆಡಿಕಲ್ ಕಾಲೇಜು ತೆರೆಯುವ ಅವಕಾಶ ಬಾಗಿಲಿಗೆ ಬಂದಾಗಲೂ ಅದನ್ನು ಅಷ್ಟೇ ಸೌಜನ್ಯಯುತವಾಗಿ ತಿರಸ್ಕರಿಸಿದ್ದರು. ಪ್ರತಿಷ್ಠಿತ ಪದ್ಮಶ್ರೀ ಅರಸಿ ಬಂದಾಗಲೂ ಅದನ್ನು ನಿರಾಕರಿಸಿ ತಮ್ಮ ವ್ಯಕ್ತಿತ್ವದ ಸಂದೇಶದ ರವಾನಿಸಿದವರು.
ಮನಸ್ಸು ಮಾಡಿದ್ದರೆ ತಮಗಿರುವ ವರ್ಚಸ್ಸಿನಿಂದ ಶ್ರೀಗಳು ಶ್ರೀಮಂತ ಮಠವನ್ನೇ ಕಟ್ಟಬಹುದಿತ್ತು. ಆ ಹಾದಿಯ ಪಥಿಕ ತಾನಲ್ಲ ಎನ್ನುವ ಅಚಲ ನಂಬಿಕೆ ಅವರನ್ನು ಶ್ರೇಷ್ಠ ಎತ್ತರಕ್ಕೆ ಕೊಂಡೊಯ್ಯಿತು. ಮಠದ ಹಿಡಿತದಲ್ಲಿರುವ ಈ ಸಮಾಜದಲ್ಲಿ ಶ್ರೀಗಳ ಇವೆಲ್ಲ ಗುಣಗಳು ಪ್ರಸ್ತುತ ಜಗತ್ತಿಗೆ ಬಾರಿ ಅಚ್ಚರಿಯ ಸಂಗತಿಗಳೇ. ಜ್ಞಾನ ಒಂದೇ ಶಾಶ್ವತವೆಂಬ ನಂಬಿಕೆಯಿಂದ ಲಕ್ಷಾಂತರ ಮನಸ್ಸುಗಳನ್ನು ಬೆಸೆದಿರುವುದು ಅಸಾಮಾನ್ಯ ಹೆಜ್ಜೆ. ದಶಕಗಳಿಂದ ' ವಿಜಯ ಕರ್ನಾಟಕ' ದಲ್ಲಿ ಬೋಧಿವೃಕ್ಷದ ಅಂಕಣಕಾರರೂ ಆಗಿದ್ದ ಶ್ರೀ ಸಿದ್ದೇಶ್ವರರು ಅಸಂಖ್ಯ ಓದುಗರನ್ನೂ ತಲುಪಿದವರು ಎಂಬುದು ಇಲ್ಲಿ ಗಮನಾರ್ಹ. ಶ್ರೀಗಳ ವಿಚಾರಧಾರೆಗಳು ಈ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿ ಕೊಡುವಂತಾಗಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೪-೦೧-೨೦೨೩