ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು

ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು

ಬರಹ


nitte


ವಿವರಗಳಿಗೆ ಕ್ಲಿಕ್ಕಿಸಿ

ಇ ಎಂ ಸಿ ಕಾರ್ಪೋರೇಷನ್ ಬಹುರಾಷ್ಟ್ರ್‍ಈಯ ಕಂಪೆನಿ.ಕಂಪ್ಯೂಟರ್ ದತ್ತಾಂಶ ಸಂಗ್ರಹ ತಂತ್ರಜ್ಞಾನ ಮತ್ತು ಪರಿಹಾರೋಪಾಯಗಳನ್ನು ಒದಗಿಸುವುದರಲ್ಲಿ ಕಂಪೆನಿಯದು ಎತ್ತಿದ ಕೈ. ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಜತೆ ಕಂಪೆನಿಯು ಶೈಕ್ಷಣಿಕ ಸಹಭಾಗಿತ್ವ ಹೊಂದಿದೆ. ನಿಟ್ಟೆಯಲ್ಲಿ ಡಿಸೆಂಬರ್ 3 ಮತ್ತು 4ರಂದು ಸ್ಟೋರೇಜ್ ತಂತ್ರಜ್ಞಾನ ಬಗ್ಗೆ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶ ಮತ್ತು ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.ಕಂಪ್ಯೂಟರ್ ಬಳಕೆದಾರರು ಹೆಚ್ಚುತ್ತಿರುವುದರಿಂದ ಮತ್ತು ನಮ್ಮ ಮಾಹಿತಿಗಳು,ಚಿತ್ರಗಳು,ವಿಡಿಯೋಗಳು,ಬ್ಲಾಗುಗಳು,ಪುಸ್ತಕಗಳು,ದಾಖಲೆಗಳು,ಕಡತಗಳು,ಹಾಡುಗಳ ಸಂಗ್ರಹ ಹೀಗೆ ಸರ್ವ ಮಾಹಿತಿಯೂ ಅಂತರ್ಜಾಲದಲ್ಲಿ ಸೇರಿಸಲ್ಪಡುತ್ತಿರುವುದರಿಂದ,ಪ್ರತಿಯೋರ್ವನೂ ತನ್ನ ಮಾಹಿತಿಯನ್ನು ಶೇಖರಿಸಲು ಸ್ಟೋರೇಜ್ ತಂತ್ರಜ್ಞಾನವನ್ನು ಅವಲಂಬಿಸುವುದು ಅನಿವಾರ್ಯ. ಅದರ ಜತೆಗೆ ಮಾಹಿತಿ ಮತ್ತು ದತ್ತಾಂಶಗಳು ನಾಶವಾಗದಂತೆ, ಅವುಗಳನ್ನು ಶೇಖರಿಸಿಡಲು ಅವುಗಳ ಬ್ಯಾಕಪ್ ಕೂಡಾ ಅಗತ್ಯವಾಗುತ್ತದೆ.ಬೇಕೆಂದಾಗ ಬೇಕಾದ ಮಾಹಿತಿಯನ್ನು ಪಡೆಯುವ ಸವಾಲೂ ಇದೆ. ಇವನ್ನು ನಿರ್ವಹಿಸಲು ಅತ್ಯಾಧುನಿಕ ತಾಂತ್ರಿಕತೆಯನ್ನು ಒದಗಿಸುವುದರಲ್ಲಿ ಸಿದ್ಧಹಸ್ತವಾದ ಇ ಎಂ ಸಿ ಕಾರ್ಪೋರೇಷನ್, ಸಮಾವೇಶದಲ್ಲಿ ತಜ್ಞರಿಂದ ಉಪನ್ಯಾಸಗಳನ್ನು ಮತ್ತು ವಿಚಾರಗೋಷ್ಠಿಗಳನ್ನು ಏರ್ಪಡಿಸಿದೆ. ಹೊಸ ತಂತ್ರಜ್ಞಾನಗಳು,ಸ್ಟೋರೇಜ್ ತಾಂತ್ರಿಕತೆಯಲ್ಲಿ ನವೀನ ಪರಿಕರಗಳು, ಅವಕಾಶಗಳ ಬಗ್ಗೆ ತಜ್ಞರು ವಿಚಾರಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.


ಕಂಪ್ಯೂಟರಿನಲ್ಲಿ ಯಂತ್ರಾಂಶಕ್ಕಿಂತ ತಂತ್ರಾಂಶವೇ ದುಬಾರಿ ಆಗಿರುವ ದಿನಗಳಿವು.ತಂತ್ರಾಂಶಕ್ಕೆ ಹಣತೆತ್ತ ನಂತರವೂ ಅದನ್ನು ತನ್ನ ಉಪಯೋಗಕ್ಕೆ ಸರಿಯಾಗುವ ರೀತಿಯಲ್ಲಿ ಬದಲಿಸಲು ಬಳಕೆದಾರನಿಗೆ ಅವಕಾಶ ಇರದು. ಕಾರಣ ತಂತ್ರಾಂಶದ ಕ್ರಮವಿಧಿಯ ಸಾಲುಗಳ ಬಗ್ಗೆ ಬಳಕೆದಾರನಿಗೆ ಮಾಹಿತಿ ಸಿಗದು.ಆದರೆ ಮುಕ್ತ ತಂತ್ರಾಂಶವನ್ನು ಬಳಸುವಾಗ, ಅದರ ಕ್ರಮವಿಧಿಯ ಸಾಲುಗಳು ಲಭ್ಯವಾಗುತ್ತದೆ. ಬೇಕೆಂದರೆ ಅದನ್ನು ಮಾರ್ಪಡಿಸಿ ಬಳಸುವ ಸ್ವಾತಂತ್ರ್ಯ ಬಳಕೆದಾರನಿಗಿದೆ. ಇಂತಹ ಮುಕ್ತ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ನಿಟ್ಟೆ ಇಂಜಿನಿಯರಿಂಗ್ ಕಾಲೇಜು ಬಹುರಾಷ್ಟ್ರೀಯ ಕಂಪೆನಿ ಹ್ಯುಲೆಟ್ ಪ್ಯಕರ್ಡ್(ಎಚ್ ಪಿ) ಕಂಪೆನಿಯ ಜತೆ ಸೇರಿ, ಮುಕ್ತ ತಂತ್ರಾಂಶ ಆಧಾರಿತ ಕಂಪ್ಯೂಟಿಂಗ್ ಬಗ್ಗೆ ಅಂತಾರಾಷ್ಟ್ರೀಯ ಸಮಾವೇಶವನ್ನು  ಆಯೋಜಿಸಿದೆ.ಇದು ನಿಟ್ಟೆಯಲ್ಲಿ ಡಿಸೆಂಬರ್ ಹನ್ನೆರಡು ಮತ್ತು ಹದಿಮೂರರಂದು ನಡೆಯಲಿದೆ.ಎಚ್ ಪಿ ಕಂಪೆನಿ, ಸಿಡ್ಯಾಕ್ ಮತ್ತು ಎನ್ ಐ ಟಿ ಕೆ,ಸುರತ್ಕಲ್‌ನ ತಜ್ಞರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.ನಿಟ್ಟೆಯಂತಹ ಗ್ರಾಮೀಣ ಭಾಗದಲ್ಲಿ ಒಂದು ವಾರದ ಅಂತರದಲ್ಲಿ ಎರಡು ಅಂತಾರಾಷ್ಟ್ರೀಯ ಸಮಾವೇಶಗಳು ನಡೆಯುವುದು ಒಂದು ದಾಖಲೆಯೇ ಸರಿ.
--------------------------------------------------------------
ಲೈಬ್ರೇರಿ ಅಂತರ್ಜಾಲ ತಾಣ ವಿಫಲ
Europeana.eu ಎನ್ನುವ ಅಂತರ್ಜಾಲ ತಾಣದಲ್ಲಿ ಪುಸ್ತಕಗಳ,ನಕಾಶೆ,ಚಿತ್ರ,ವಿಡಿಯೋ ಇತ್ಯಾದಿ ಮಾಹಿತಿಗಳ ಬೃಹತ್ ಸಂಗ್ರಹ ಇದ್ದು, ಆರಂಭವಾದ ಹೊಸದರಲ್ಲೇ ಭಾರೀ ಸಂಖ್ಯೆಯಲ್ಲಿ ಬಳಕೆದಾರರನ್ನು ಆಕರ್ಷಿಸುತ್ತಿದ್ದು, ಗಂಟೆಗೆ ಹತ್ತು ದಶಲಕ್ಷಕಿಂತಲೂ ಅಧಿಕ ಜಾಲಿಗರನ್ನು ಸೆಳೆದಿತ್ತು. ಇದು ತಾಣದ ಸಾಮರ್ಥ್ಯದ ದುಪ್ಪಟ್ಟು. ಹೀಗಾಗಿ ಅಂತರ್ಜಾಲ ತಾಣವು ಕುಸಿದು ಬಿಟ್ಟಿದೆ. ಇನ್ನು ಅಗತ್ಯವಾದ ಸುಧಾರಣೆ ಮಾಡಿ, ತಾಣವು ವಿಪರೀತ ಒತ್ತಡವನ್ನು ತಡೆದುಕೊಳ್ಳುವಂತೆ ಸೂಕ್ತ ಮಾರ್ಪಾಡು ಮಾಡಿಕೊಂಡು ಮುಂದಿನ ತಿಂಗಳು ಮತ್ತೆ ತಾಣವನ್ನು ಪುನರಾರಂಭಿಸಲಾಗುತ್ತದೆ.ಯುರೋಪಿನ ಸಾವಿರಕ್ಕೂ ಹೆಚ್ಚು ಗ್ರಂಥಾಲಯಗಳು,ಮ್ಯೂಸಿಯಮ್‌ಗಳ ಸಂಗ್ರಹ ಇಲ್ಲಿ ಲಭ್ಯವಿತ್ತು.ಜರ್ಮನಿ,ಫ್ರಾನ್ಸ್, ಸ್ಪೈನ್‌ಗಳಲ್ಲಿ ತಾಣದ ಬಳಕೆದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ.
-----------------------------------------------------------
ಭಯೋತ್ಪಾದನೆ ವಿರುದ್ಧ ತಂತ್ರಜ್ಞಾನ ಬಳಕೆ
ಭಯೋತ್ಪಾದಕರು ಮನಬಂದಂತೆ ದಾಳಿ ಮಾಡಿ,ನಮ್ಮ ಜನಜೀವನವನ್ನು ಅಸ್ತವ್ಯಸ್ತಗೊಳಿಸಿ,ಜನರನ್ನು ಭಯಗ್ರಸ್ತರಾಗಿ ಮಾಡುತ್ತಿರುವುದು ಪದೇ ಪದೇ ನಡೆಯುತ್ತಿದೆ. ದಿನದ ಇಪ್ಪತ್ತನಾಲ್ಕು ಗಂಟೆಯೂ, ಇಂತಹ ದಾಳಿಗಳ ಮೇಲೆ ಕಣ್ಣಿಟ್ಟು,ಮುನ್ಸೂಚನೆ ನೀಡಲು ಹೈಟೆಕ್ ತಂತ್ರಜ್ಞಾನಕ್ಕೆ ಶರಣು ಹೋಗದೆ ಅನ್ಯಮಾರ್ಗವಿಲ್ಲ.ಭಯೋತ್ಪಾದಕರು ಮುಂಬರುವ ದಿನಗಳಲ್ಲಿ ತಮ್ಮ ಶೈಲಿಯನ್ನು ಬದಲಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳಲು,ಶಾಪಿಂಗ್ ಮಾಲ್‌ಗಳು, ಜನನಿಬಿಡ ಪ್ರದೇಶಗಳು,ಉತ್ಸವಾಚರಣೆಯಂತಹ ಅವಕಾಶಗಳನ್ನು ಬಳಸಿಕೊಳ್ಳುವುದರಲ್ಲಿ ಸಂಶಯವಿಲ್ಲ.
ಕೆನಡಾದ ಸಸ್ಕೆಚೇವನ್ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜಿನ ಸಂಶೋಧಕರು ಹೈಟೆಕ್ ಬಳಸಿ,ಭಯೋತ್ಪಾದನೆಯನ್ನು ಸಮರ್ಥವಾಗಿ ಮುನ್ಸೂಚನೆ ನೀಡಿ, ಎದುರಿಸುವ ವ್ಯವಸ್ಥೆ ಇ-ವಾರ್ ಯೋಜನೆಯನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಜನನಿಬಿಡ ಕಟ್ಟಡಗಳ ವಾತಾನುಕೂಲಿ ವ್ಯವಸ್ಥೆಗಳಲ್ಲಿ ವಿಷಯುಕ್ತ ರಾಸಾಯಿನಿಕ ಅನಿಲಗಳನ್ನು ಸೇರಿಸುವುದು,ಕುಡಿಯುವ ನೀರಿನ ಮೂಲಗಳನ್ನು ವಿಷಯುಕ್ತಗೊಳಿಸುವುದು, ಆಹಾರಕ್ಕೆ ವಿಷವೂಡುವುದು ಮುಂತಾದ ಹೊಸ ತಂತ್ರಗಳನ್ನು ಭಯೋತ್ಪಾದಕರು ಬಳಸುವುದು ಸಂಭವನೀಯ. ಇಂತಹ ದಾಳಿಗಳು ನಡೆಯದಂತೆ ತಡೆಯಲು ತಂತ್ರಜ್ಞಾನದ ಬಳಕೆ ಆಗಬೇಕಿದೆ. ಅದಲ್ಲದೆ ಒಂದು ವೇಳೆ ಇಂತಹ ದಾಳಿಗಳು ನಡೆದಾಗ,ಅದನ್ನು ತಕ್ಷಣ ಪತ್ತೆ ಹಚ್ಚಿ, ಅದರ ವಿಶ್ಲೇಷಣೆ ನಡೆಸಿ,ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲೂ ಹೈಟೆಕ್ ತಂತ್ರಜ್ಞಾನ ಲಭ್ಯವಿರಬೇಕು.ಬಾಂಬುಗಳ ಪತ್ತೆಗೆ ಸೆನ್ಸರ್‌ಗಳ ಬಳಕೆ,ಬಸ್ಸು ನಿಲ್ದಾಣ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ವಾರಸುದಾರರಿಲ್ಲದ ಸೂಟ್‌ಕೇಸ್,ಪಾರ್ಸೆಲುಗಳನ್ನು ಪತ್ತೆ ಮಾಡಲು ಸೆನ್ಸರುಗಳ ಬಳಕೆ ಸಾಧ್ಯವೇ ಎನ್ನುವುದನ್ನು ಸಂಶೋಧಿಸಲು ಮತ್ತು ಹೈಟೆಕ್ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಲು ಇ-ವಾರ್ ಯೋಜನೆ ಗಮನಕೊಡಲಿದೆ.ಈ ಕೆಲಸಕ್ಕೆ ಭಾರತದ ತಂತ್ರಜ್ಞರ ಸಹಾಯವನ್ನೂ ಪಡೆದುಕೊಳ್ಳಲು ವಿಶ್ವವಿದ್ಯಾಲಯ ಉದ್ದೇಶಿಸಿದೆ.
------------------------------------------------------
ಉಗ್ರರ ದಾಳಿ ಮತ್ತು ಅಂತರ್ಜಾಲtaj
ಮುಂಬೈಯಲ್ಲಿ ಉಗ್ರರದಾಳಿ ವೇಳೆ ಅಂತರ್ಜಾಲ ಮಾಧ್ಯಮವು ಕ್ರಿಯಾಶೀಲವಾಗಿದ್ದು ಕಂಡು ಬಂತು. ಭಯೋತ್ಪಾದಕ ದಾಳಿ ನಡೆದ ಕ್ಷಣದಿಂದಲೇ ಟ್ವಿಟ್ಟರ್ ಎನ್ನುವ ಜಾಲತಾಣದಲ್ಲಿ ಬಳಕೆದಾರರು, ತಮ್ಮ ಅನುಭವವನ್ನು ಕಿರು ಸಂದೇಶಗಳ ಮೂಲಕ ದಾಖಲಿಸಲಾರಂಭಿಸಿದರು. ಫ್ಲಿಕರ್ ಎನ್ನುವ ಚಿತ್ರವನ್ನು ಇತರರೊಡನೆ ಹಂಚಿಕೊಳ್ಳುವ ಅಂತರ್ಜಾಲ ತಾಣದಲ್ಲಿ ಚಿತ್ರಗಳ ಮಹಾಪೂರವೇ ಬರಲಾರಂಭಿಸಿತು. ಮೊಬೈಲ್ ಫೋನ್, ಕ್ಯಾಮರಾಗಳಲ್ಲಿ ಸೆರೆ ಹಿಡಿದ ದಾಳಿಯ ಕುರಿತಾದ ಚಿತ್ರಗಳು ಇಲ್ಲಿ ಧಾರಾಳವಾಗಿ ಕಂಡುಬಂದುವು. ಯುಟ್ಯೂಬ್ ತಾಣದಲ್ಲಿ ವಿಡಿಯೋ ಕ್ಲಿಪ್ಪಿಂಗ್‌ಗಳಿಗೆ ಬರವಿರಲಿಲ್ಲ. ಬ್ಲಾಗ್‌ಗಳಲಿಯೂ ಜನರು ತಮ್ಮ ಅನಿಸಿಕೆಗಳು,ಹತಾಶೆಗಳನ್ನು ಬರೆದುಕೊಂಡು ನಿರಾಳವಾದರು.

ಅಶೋಕ್ ವರ್ಲ್ಡ್

ಉದಯವಾಣಿ

*ಅಶೋಕ್‌ಕುಮಾರ್ ಎ