ನಿತ್ಯಾನಂದರ ಸನ್ನಿಧಿಯಲ್ಲಿ ಕಂಡ ಸತ್ಯ

ನಿತ್ಯಾನಂದರ ಸನ್ನಿಧಿಯಲ್ಲಿ ಕಂಡ ಸತ್ಯ

ಬರಹ

  ದಿನಾಂಕ ೨೪ರಂದು ಶನಿವಾರ. ಗುರುಪೂರ್ಣಿಮೆಯ ಮುನ್ನಾದಿನ. ಬಿಡದಿ ಸಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ವಾಮಿ ನಿತ್ಯಾನಂದರ ಮೆರವಣಿಗೆ ಹೊರಟಿತ್ತು. ನಾನು ಅಲ್ಲಿ ಹಾಜರಿದ್ದು ತಮಾಷೆ ನೋಡುತ್ತಿದ್ದೆ. ಭಗವಂತನೇ ಧರೆಗಿಳಿದುಬಂದಂತೆ (ಮೇಣದ) ನಿತ್ಯಾನಂದರು ಉನ್ನತ ಪಲ್ಲಕ್ಕಿ ಆಸನದಲ್ಲಿ ಠೀವಿಯಿಂದ, ಒಂದಿಷ್ಟೂ ಮಿಸುಕಾಡದೆ, ಎಂದಿನ ನಗುಮುಖದಲ್ಲಿ ವಿರಾಜಮಾನರಾಗಿದ್ದರು. ಶಿಷ್ಯನೊಬ್ಬ ಪಕ್ಕದಲ್ಲಿ ನಿಂತು ಸ್ವಾಮಿಸೇವಾಸಕ್ತನಾಗಿದ್ದ. ಮುಂದೆ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಇನ್ನೂರರಷ್ಟು ಜನ ಶ್ವೇತವಸ್ತ್ರಧಾರಿ ಸ್ತ್ರೀ ಮತ್ತು ಪುರುಷ ಶಿಷ್ಯರು ಸ್ವಾಮಿಯವರ ಭಾವಚಿತ್ರದ ಫಲಕಗಳನ್ನು ಹಿಡಿದುಕೊಂಡು ಸಾಗುತ್ತಿದ್ದರು. ಮೆರವಣಿಗೆಯನ್ನು ನೋಡಲೆಂದು ಅಲ್ಲಿ ಬೆರಳೆಣಿಕೆಯಷ್ಟು ಜನರಿದ್ದರು ಅಷ್ಟೆ. ಕಲ್ಲೆಸೆಯುವವರಾಗಲೀ ಪ್ರತಿಭಟಿಸುವವರಾಗಲೀ ಯಾರೂ ಇರಲಿಲ್ಲ.
  ಈ ಹಿಂದೆ ಆಶ್ರಮಕ್ಕೆ ನುಗ್ಗಿ ದಾಂದಲೆ ಮಾಡಿದ್ದ ಸ್ಥಳೀಯರೆಲ್ಲ ಎಲ್ಲಿ ಹೋದರೆಂದು ಅಲ್ಲಿದ್ದ ಪೋಲೀಸಪ್ಪನನ್ನು ಕೇಳಿದೆ. ’ಅವರ ಲೀಡರೇ ಈಗ ಸ್ವಾಮಿಗೆ ಅಡ್ಡಬೀಳ್ತಾರ್ರೀ ಸರ್’, ಎಂದ ಪೋಲೀಸಪ್ಪ! ’ಎಮ್ಮೆಲ್ಲೆಗಳೂ ಮಂತ್ರಿಗಳೂ ಬಂದು ಸ್ವಾಮಿಗೆ ನಮಸ್ಕಾರ ಮಾಡಿ ಹೋಗ್ತಿದಾರೆ ಈಗ’, ಎಂದೂ ಸೇರಿಸಿದ!
  ನಿತ್ಯಾನಂದರ ಸತ್ಯ ಏನೇ ಇರಲಿ, ಅದು ಬೇರೆಯ ವಿಷಯ. ’ಜನರ ರೋಷಾವೇಶ, ನೆನಪು ಎಲ್ಲ ಕ್ಷಣಿಕ; ಅಭಿಪ್ರಾಯ ಚಂಚಲ’ ಎಂಬ ಸತ್ಯದ ಅರಿವು ನನಗಾಗ ಅಲ್ಲಿ ಆಯಿತು.