ನಿತ್ಯ ಏಪಲ್ ಬಳಸಿ
ನಿತ್ಯ ಏಪಲ್ ಬಳಸಿ
ನಮ್ಮ ಸಂಸದರು ಸದನದ ಕಲಾಪಗಳನ್ನು ನಡೆಸದೆ ಗದ್ದಲ ಎಬ್ಬಿಸುತ್ತಿದ್ದಾರೆ.ಕಲಾಪ ರಹಿತ ಸಂಸತ್ ಕಾಗದರಹಿತ ಸಂಸತ್ ಕೂಡಾ ಆಗಲಿ ಎಂಬ ಉದ್ದೇಶ ಹೊತ್ತು ಅವರುಗಳಿಗೆ ಐಪ್ಯಾಡ್ ಅಥವಾ ಸ್ಯಾಮ್‌ಸಂಗ್ ಗ್ಯಾಲಕ್ಸಿಯನ್ನು ಖರೀದಿಸಲು ಅವಕಾಶ ನೀಡಲಾಗಿದೆ.ಅವುಗಳ ಬಳಕೆಗೆ ತರಬೇತಿ ನೀಡಲೂ ವ್ಯವಸ್ಥೆಯಿದೆ.ಸಂಸದರು ಅವುಗಳನ್ನು ಬಳಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲವೆನ್ನುವುದು ಸಮಾಧಾನದ ವಿಷಯ.ಸಂಸತ್ತಿನ ಕೆಲವು ಭಾಗಗಳಲ್ಲಿ ವೈ-ಫೈ ಲಭ್ಯವಾಗಿಸಿ,ಅವರುಗಳು ಅಂತರ್ಜಾಲ ಸಂಪರ್ಕ ಬಳಸುವಂತೆ ಮಾಡಲಾಗುತ್ತಿದೆ.ಸದನದ ಕಲಾಪ ವಿವರಗಳು,ಪ್ರಶ್ನೋತ್ತರಗಳು,ವರದಿಗಳು ಇತ್ಯಾದಿಗಳ ಮುದ್ರಿತ ಪ್ರತಿ ನೀಡುವ ಕ್ರಮವಿದ್ದು,ನಿಧಾನವಾಗಿ ಆ ಕ್ರಮವನ್ನು ಕೈಬಿಟ್ಟು,ಡಿಜಿಟಲ್ ರೂಪದಲ್ಲಿ ಅವನ್ನು ಸಂಸದರಿಗೆ ಕಳುಹಿಸಲು ಯೋಜಿಸಲಾಗಿದೆ.ಐಪ್ಯಾಡ್ ನೀಡಿಕೆ ಆ ಉದ್ದೇಶದಿಂದಲೇ ಆಗಿದೆ.ರಾಜ್ಯಸಭೆಯ ಕೆಲ ಭಾಗಗಳಲ್ಲಿ ವೈ-ಫೈ ಈಗಾಗಲೇ ಲಭ್ಯವಿವೆ.ಸದನದ ಕಲಾಪವನ್ನೂ (ನಡೆದರೆ!)ಐಪ್ಯಾಡಿನಲ್ಲಿ ವೀಕ್ಷಿಸಬಹುದು.
ಮುಖ್ಯಮಂತ್ರಿ ಸದಾನಂದ ಗೌಡರು ತಮ್ಮ ಕಚೇರಿಯನ್ನು ಜನರಿಗೆ ದರ್ಶನ ಮಾಡಿಸುವ ನಿರ್ಧಾರ ಮಾಡಿರುವುದು ನಿಮಗೆ ಗೊತ್ತಿದೆ.http:karnataka.gov.in ಅಂತರ್ಜಾಲ ತಾಣದಲ್ಲಿ ಸಿಎಂಲೈವ್ ಕೊಂಡಿಯ ಮೇಲೆ ಕ್ಲಿಕಿಸಿದರೆ,ಮುಖ್ಯಮಂತ್ರಿಗಳ ಕಚೇರಿಯ ದರ್ಶನ ಭಾಗ್ಯ ಲಭಿಸುತ್ತದೆ.ಮುಖ್ಯಮಂತ್ರಿಗಳ ಮಾತು ಕೇಳಲಿನ್ನೂ ಸಮಯ ಬೇಕು.ಸದ್ಯ ಮುಖ್ಯ(ಮೂಕ?)ಮಂತ್ರಿಗಳ ನಗುಮುಖವನ್ನು ನೋಡುವ ಮಟ್ಟಿಗೆ ಪಾರದರ್ಶಕತೆ ಬಂದಿದ್ದರೂ,ಇದು ಸ್ವಾಗತಾರ್ಹವೆನ್ನುವುದರಲ್ಲಿ ಎರಡು ಮಾತಿಲ್ಲ.
-------------------------------
ಸೌರಶಕ್ತಿಯಿಂದ ಹಾರಬಲ್ಲ ವಿಮಾನ
ಬರ್ಟ್ರಾಂಡ್ ಪಿಕಾರ್ಡ್ ಅವರು ಸೌರಶಕ್ತಿಯನ್ನು ಬಳಸಿ,ಹಾರಬಲ್ಲ ಮಿನಿ ಗ್ಲೈಡರ್ ಅನ್ನು ನಿರ್ಮಿಸಿದ್ದಾರೆ.ಸದ್ಯ ಅದು ಮಧ್ಯಮ ಗಾತ್ರದ ಕಾರಿನ ತೂಕದ್ದಾಗಿದ್ದು,ಇಂಧನ ದಕ್ಷತೆ ರೈಟ್ ಸಹೋದರರ ಮೊದಲ ಹಾರುವ ವಾಹನಕ್ಕೆ ಸಮಾನವಾಗಿದೆ.ಇದು ಓರ್ವನ ಹಾರಾಟಕ್ಕೆ ಮಾತ್ರಾ ಬಳಸಬಹುದು.ಲೀಥಿಯಮ್ ಬ್ಯಾಟರಿಗಳನ್ನು ಬಳಸಿರುವ ಈ ಗ್ಲೈಡರ್,ನಾಲ್ಕು ಮೋಟಾರುಗಳನ್ನು ಬಳಸುತ್ತದೆ.ಜುಲೈನಲ್ಲಿ ಇಡಿ ದಿನ ಹಾರಾಡಿ,ತನ್ನ ಸಾಮರ್ಥ್ಯ ಮೆರೆಯಿತು.ಮುಂದಿನ ದಿನಗಳಲ್ಲಿ ದೊಡ್ಡ ವಿಮಾನಗಳನ್ನೂ ಸೌರಶಕ್ತಿ ಬಳಸಿ ಹಾರಾಟ ನಡೆಸಬಹುದು,ಹೆಚ್ಚು ಪ್ರಯಾಣಿಕರನ್ನೂ ಸಾಗಿಸಬಹುದು ಎನ್ನುವುದು ಪಿಕಾರ್ಡ್ ಅವರ ನಂಬಿಕೆಯಾಗಿದೆ.ಅಂದಹಾಗೆ,ಇದರಲ್ಲಿ ಕಂಪ್ಯೂಟರ್ ವ್ಯವಸ್ಥೆಯು,ಹಾರಾಟವನ್ನು ನಿರ್ವಹಿಸುತ್ತದೆ.
-------------------------------------------------
ನ್ಯಾಪ್‌ಸ್ಟರ್ ಇನ್ನು ಅಲಭ್ಯ
ನ್ಯಾಪ್‌ಸ್ಟರ್ ಅಂತರ್ಜಾಲ ತಾಣವು ಸಂಗೀತ ಕಡತಗಳನ್ನು ಜನರು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುವು ಮಾಡುತ್ತಿತ್ತು.1999ರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ಅಂತರ್ಜಾಲದಲ್ಲಿ ಸಂಗೀತ ಕದತಗಳ ವಿನಿಮಯಕ್ಕಾಗಿ ಒದಗಿಸಿದಾಗ,ಸಂಗೀತ ಕಂಪೆನಿಗಳು ಗದ್ದಲ ಎಬ್ಬಿಸಿದುವು.ಸಂಗೀತ ಕಡತಗಳನ್ನು ಕಾಪಿರೈಟ್ ಕಾಯಿದೆ ಉಲ್ಲಂಘಿಸಿ,ವಿನಿಮಯ ಮಾಡಿಕೊಂಡರೆ,ತಮ್ಮ ಆದಾಯ ಕುಂಠಿತವಾಗುತ್ತದೆ ಎನ್ನುವ ಅವುಗಳ ವಾದ ಸಮರ್ಥನೀಯವೇ ಆಗಿತ್ತು,ನಂತರ ನ್ಯಾಪ್‍ಸ್ಟರ‍್ ಕೋಟಿನಿಂದ ನಿಷೇಧಕ್ಕೆ ಒಳಗಾಯಿತು.ನಂತರ ಬೆಸ್ಟ್ ಬೈ ಎನ್ನುವ ಕಂಪೆನಿಯು ನ್ಯಾಪ್‌ಸ್ಟರನ್ನು ಬಳಸಿಕೊಂಡು ನ್ಯಾಯಬದ್ಧ ಸಂಗೀತ ಕಡತಗಳ ವಿನಿಮಯಕ್ಕೆ ಅನುವು ಮಾಡಿಕೊಟ್ಟಿತು.ಇದೀಗ ರಾಪ್ಸಡಿ ತಾಣವು ಬೆಸ್ಟ್‌ಬೈ ಜತೆ ಒಪ್ಪಂದಕ್ಕೆ ಬಂದು ನ್ಯಾಪ್‌ಸ್ಟರ್ ಅನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ ಅದು ಆನ್‌ಲೈನಿನಿಂದ ಮಾಯವಾಗುವ ದಿನ ಬಂದಿದೆ.
---------------------------------------------------
ಗೂಗಲ್ ಮ್ಯಾಪ್:ಕಟ್ಟಡದ ಒಳಭಾಗದ ದರ್ಶನ
ಕಟ್ಟಡಗಳನ್ನು ಮೇಲಿನಿಂದ ಮತ್ತು ಹೊರಭಾಗದಿಂದ ವೀಕ್ಷಿಸಲು ಗೂಗಲ್ ಮ್ಯಾಪ್ ಅವಕಾಶ ನೀಡಿತ್ತು.ಈಗದು,ದೊಡ್ದ ಕಟ್ಟಡಗಳ ಒಳಗೂ ದರ್ಶನ ಮಾಡಿಸಲು ಆರಂಭಿಸಿದೆ.ಗೂಗಲ್ ಮ್ಯಾಪಿನ ಆರನೇ ಆವೃತ್ತಿಯ ಆಂಡ್ರಾಯಿಡ್ ತಂತ್ರಾಂಶವನ್ನು ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಿಕೊಂಡರೆ ಇದು ಸಾಧ್ಯ.ಆಯ್ದ ವಾಣಿಜ್ಯ ಮತ್ತು ಸಾರ್ವಜನಿಕ ಕಟ್ಟಡಗಳ ಒಳಭಾಗಗಳನ್ನು ಚಿತ್ರೀಕರಿಸಲು ಗೂಗಲ್ ಕಟ್ಟಡಗಳ ಮಾಲಕರ ಜತೆ ಒಪ್ಪಂದ ಮಾಡಿಕೊಂಡಿದೆ.ಅವರುಗಳು ತಾವೇ ಚಿತ್ರೀಕರಿಸಿ,ಅದನ್ನು ಅಪ್ಲೋಡ್ ಮಾಡಲೂ ಅವಕಾಶವಿದೆ.ವಿಮಾನ ನಿಲ್ದಾಣಗಳಂತಹ ಕಟ್ಟಡಗಳು ಇವುಗಳಲ್ಲಿ ಸೇರಿವೆ.ಸ್ಯಾನ್‌ಫ್ರಾನ್ಸಿಸ್ಕೋ ಮತ್ತು ಚಿಕಾಗೋಗಳು ಇದರಲ್ಲಿ ಸೇರಿವೆ.ಸದ್ಯ ಹೆಚ್ಚಿನ ಕಟ್ಟಡಗಳು ಅಮೆರಿಕಾದ್ದೇ ಆದರೂ ಮುಂದೆ ಜಪಾನ್‌ನ ಕಟ್ಟಡಗಳನ್ನು ತೋರಿಸುವ ಯೋಚನೆ ಗೂಗಲ್‌ದ್ದು.
----------------------------------------
ಜತೆಗಾರನಾಗುವ ರೊಬೋಟ್
ವೃದ್ಧರು ಅಥವಾ ಅಶಕ್ತರ ಜತೆಗಾರನಾಗಿದ್ದು,ಅವರ ದೈನಂದಿನ ಕೆಲಸಗಳಲ್ಲಿ ಅವರಿಗೆ ನೆರವಾಗಬಲ್ಲ ರೊಬೋಟುಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಈಗ ಪ್ರಗತಿಯಲ್ಲಿದೆ.ಅಮ್‌ಸ್ಟರ್ಡ್ಯಾಮ್ ವಿಶ್ವವಿದ್ಯಾಲಯ,ಸಿಯೆನ್ನಾ ವಿಶ್ವವಿದ್ಯಾಲಯಗಳು ಸೇರಿ ಈ ಮೂರು ವರ್ಷದ ಯೋಜನೆ ಹಮ್ಮಿಕೊಂಡಿದ್ದು,ಅಶಕ್ತರ ಅವಶ್ಯಕತೆಗಳು ಏನು ಮತ್ತು ಅವರ ಜತೆಗಾರ ಹೇಗೆ ವರ್ತಿಸಬೇಕು ಮುಂತಾದ ವಿವರಗಳನ್ನು ವಿವಿಯ ಸಂಶೋಧಕರು ಕಲೆ ಹಾಕುತ್ತಿದ್ದಾರೆ.ಈ ಯೋಜನೆಯ ಬಜೆಟ್ ಸುಮಾರು ಐದು ದಶಲಕ್ಷ ಯುರೋಗಳಾಗಿವೆ.
--------------------------------------------
ಫೇಸ್‌ಬುಕ್ ಜೋಳಿಗೆಗೆ ಗೊವಾಲ್ಲಾ
ಗೊವಾಲ್ಲಾ ಎನ್ನುವುದು ಅಂತರ್ಜಾಲ ತಾಣ.ಇದು ಜನರು ಇರುವ ಸ್ಥಳ ಯಾವುದು ಎನ್ನುವುದನ್ನು ತಿಳಿಸಲು ಬಳಸಲಾಗುತ್ತದೆ.ಇದನ್ನೀಗ ಫೇಸ್‌ಬುಕ್ ಸಾಮಾಜಿಕ ಜಾಲತಾಣ ತನ್ನದಾಗಿಸಿಕೊಳ್ಳುವುದರಲ್ಲಿದೆ.ಗೊವಾಲ್ಲಾ ನಡೆಸುವ ಕಂಪೆನಿಗೆ ಫೇಸ್‌ಬುಕ್ ಎಷ್ಟು ಹಣ ಪಾವತಿಸಲಿದೆ ಎನ್ನುವುದು ಸ್ಪಷ್ಟವಿಲ್ಲ.ಆದರೆ ಇನ್ನು ಗೊವಾಲ್ಲಾ ಪೇಸ್‌ಬುಕ್ ಭಾಗವಾಗಲಿದೆ.ಫೋರ್‌ಸ್ಕ್ವೇರ್ ಅನ್ನುವ ತಾಣವೂ ಗೊವಾಲ್ಲಾಗೆ ಪೈಪೋಟಿ ನೀಡುತ್ತಿತ್ತು.
---------------------------------
ಲಿಬಿಯಾ:ತಂತ್ರಜ್ಞಾನ (ದು)ರ್ಬಳಕೆ
ಲಿಬಿಯಾದ ಗಡಾಪಿ ಮಹಾಶಯ ತಂತ್ರಜ್ಞಾನದ ಪೂರ್ಣ ಲಾಭ ಪಡೆದುಕೊಳ್ಳುವುದರಲ್ಲಿ ಮುಂದಿದ್ದನಂತೆ.ಆತ ತನ್ನ ವಿರೋಧಿಗಳ ಮಿಂಚಂಚೆ,ಫೋನುಕರೆಗಳ ಮೇಲೆ ಕಣ್ಣಿಡಲು ಫ್ರಾನ್ಸಿನ ಕಂಪೆನಿಯೊಂದು ಒದಗಿಸಿದ ತಂತ್ರಜ್ಞಾನವನ್ನು ಬಳಸುತ್ತಿದ್ದನೆಂದು ವಿಕಿಲೀಕ್ ವರದಿ ಮಾಡಿದೆ.ಕರೆಗಳ ಅನುವಾದ ಮಾಡಿ,ಅವುಗಳ ಲಿಪ್ಯಂತರ ಮಾಡುವ ತಂತ್ರಜ್ಞಾನವೂ ಆತನಿಗೆ ಲಭ್ಯವಿತ್ತು.
----------------------------------
ಸ್ಮಾರ್ಟ್‌ಪೋನ್ ಮೂಲಕ ಗೂಡಚರ್ಯೆ?
ಕ್ಯಾರಿಯರ್ ಐಕ್ಯೂ ಎನ್ನುವ ತಂತ್ರಾಂಶ ಸ್ಮಾರ್ಟ್‌ಫೋನುಗಳಲ್ಲು ಅಳವಡಿಸಿರುವುದು ದೂರದಿಂದಲೇ ಸಹಾಯ ನೀಡಲೋಸುಗ.ಬಳಕೆದಾರನಿಗೆ ಪೋನು ಬಳಕೆಯಲ್ಲಿ ಸಮಸ್ಯೆಯಿದ್ದರೆ,ಆನ್‌ಲೈನ್ ಮೂಲಕ ರಿಪೇರಿ ಮಾಡಲು ಅನುವು ಮಾಡುವುದಾಗಿದೆ.ಇತ್ತೀಚೆಗೆ ಓರ್ವ ಮಹಾಶಯ ಯುಟ್ಯೂಬ್ ವಿಡಿಯೋ ತುಣುಕಿನಲ್ಲಿ,ಈ ತಂತ್ರಾಂಶ ಅದು ಹೇಗೆ ತನ್ನ ಪ್ರತಿ ಕೀಲಿಮಣೆ ಅದುಮಿಕೆಯನ್ನು ನೆನಪಿಟ್ಟು,ತಾನು ಭೇಟಿ ನೀಡುವ ತಾಣಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ ಎನ್ನುವುದನ್ನು ಸೋದಾಹರಣ ವಿಡಿಯೋದ ಮೂಲಕ ವಿವರಿಸಿದ್ದೇ ಹಾಹಾಕಾರ ಎದ್ದಿದೆ.ಈ ತಂತ್ರಾಂಶವನ್ನು ಒಳಗೊಂಡ ಫೋನುಗಳ ತಯಾರಕರ ವಿರುದ್ಧ ಖಾಸಗಿತನದ ಬಗ್ಗೆ ತಲೆಕೆಡಿಸಿಕೊಳ್ಳುವ ಮಂದಿ ಕೋರ್ಟಿನ ಮೆಟ್ಟಲೂ ತುಳಿದಿದ್ದಾರೆ.
Udayavani
ಅಶೋಕ್‌ಕುಮಾರ್ ಎ