ನಿಧಾನವೇ ಪ್ರಧಾನ !
ಬರಹ
ಆ ಹಡಗಿನ ಕಪ್ತಾನ ತುಂಬಾ ಕೋಪಿಷ್ಟ. ಅವನಿಗೆ ಯಾರೂ ಎದಿರು ಮಾತನಾಡುವಂತಿಲ್ಲ. ಕೋಪ ಬಂದಿತೆಂದರೆ ಅವನು ಯಾರ ಮಾತನ್ನೂ ಕೇಳಲಾರ. ವಿವೇಚನೆಯೆಂಬುದು ಹೊರಟೇ ಹೋಗುತ್ತದೆ. ಹೀಗಿರಲು ಒಂದು ದಿನ ಅವನು ರಾತ್ರಿಯ ವೇಳೆ ಹಡಗು ನಡೆಸುತ್ತಿರುವಾಗ ಸ್ವಲ್ಪ ದೂರದಲ್ಲಿ ಈ ಹಡಗಿಗೆ ವಿರುದ್ಧವಾಗಿ ದೀಪದ ಪ್ರಕಾಶ ಕಾಣಿಸಿತು. ಕೂಡಲೇ ಇವನು ಅದು ಬದಿಗೆ ಸರಿಯಲೆಂಬಂತೆ ತನ್ನ ಹಡಗಿನ ಕೆಂಪು ದೀಪವನ್ನು ಹಚ್ಚಿ ಆರಿಸಿ ಸಂಜ್ಞೆ ಮಾಡಿದ. ಎದುರಿನದು ದಾರಿ ಬಿಡಲಿಲ್ಲ. ತನ್ನ ವಾಕಿಟಾಕಿ ತೆಗೆದು ಕ್ಯಾಪ್ಟನ್ ಅಲ್ಲಿದ್ದ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿದವನೇ, ಎದುರಿನವನ ಮಾತನ್ನು ಕಿಂಚಿತ್ತೂ ಕೇಳದೇ ವಾಚಮಗೋಚರ ಬೈಯ್ಯತೊಡಗಿದ. "ಲೇ.... ಬುದ್ಧಿ ಇದೆಯಾ ನಿನಗೆ? ನನ್ನದು ಎಷ್ಟು ದೊಡ್ಡ ಹಡಗು ಗೊತ್ತಾ? ಇದಕ್ಕೆದುರಾಗಿ ನಿನ್ನ ಪುಡಪೋಸಿ ನಾವೆ ಏನಾದರೂ ಸಿಕ್ಕಿದರೆ ಪುಡಿ ಪುಡಿ ಆಗಿ ಹೋಗುತ್ತೆ ಹುಷಾರ್" ಎಂದು ಬೈಯ್ಯಲಾರಂಭಿಸಿದ.
ಎದುರಿನವನು "ಇರಬಹುದು ಆದರೆ .... " ಎನ್ನುತ್ತಿರುವಂತೆಯೇ ಅವನ ಮಾತನ್ನು ಅರ್ಧಕ್ಕೇ ತಡೆದು ಈತ ಮುಂದುವರಿಸಿದ.
"ಏನು ಆದರೆ? ನಿನಗೆ ಅಷ್ಟೊಂದು ಕೊಬ್ಬಾ? ನೋಡಿದರೆ ಚಿಕ್ಕ ನೌಕೆ ಇರಬೇಕು ಅದು. ಚಿಕ್ಕದೊಂದು ಟಾರ್ಚ್ ಹಿಡಿದುಕೊಂಡು ನನಗೇ ಬದಿಗೆ ಸರಿದು ಹೋಗಲು ಹೇಳುತ್ತೀಯಾ? ನನ್ನ ಹಡಗು ಗುದ್ದಿದರೆ ನೀನು ನಿನ್ನ ನೌಕೆ ಸಮೇತ ಮುಳುಗಿ ಹೋಗ್ತೀಯ. ನಾನು ಯಾರು ಗೋತ್ತಾ? ಇಪ್ಪತ್ತು ವರ್ಷ ಅನುಭವವಿರುವ ಕ್ಯಾಷ್ಟನ್." ಎಂದು ಗದರಿದ.
"ಇರಬಹುದು....... ಆದರೆ..... "
"ಏನು ಮತ್ತೆ ಆದರೆ... ಹೋದರೆ? ಮರ್ಯಾದೆಯಲ್ಲಿ ಹೇಳಿದರೆ ನೀನು ಕೇಳೊಲ್ಲ ಅನ್ನಿಸುತ್ತೆ, ಇರು ನಿನಗೆ...." ಅಂದವನೇ ಹಡಗಿನ ವೇಗವನ್ನು ತೀವ್ರ ಗೊಳಿಸಿದ. ಹಡಗು ತೀರಾ ಹತ್ತಿರ ಹೋದಾಗ ಸಿಡಿಲೆರಗಿದಂತೆ ಅದುರಿಬಿದ್ದ ಆ ಕಪ್ತಾನ. ಕಾರಣ ಆ ಹಡಗಿನ ಎದುರಿಗಿದ್ದುದು ಪುಟ್ಟದೊಂದು ದ್ವೀಪವಾಗಿತ್ತು! ಅಲ್ಲಿನ ದೀಪಸ್ಥಂಭ ಕೆಟ್ಟು ಹೋದ ಕಾರಣ ಅದರ ಕಾವಲುಗಾರ ತಾನೇ ಕೇಳಗಿಳಿದು ಬಂದು ಟಾರ್ಚ್ ಮುಖಾಂತರ ಹಡಗಿಗೆ ದ್ವೀಪವಿರುವ ಬಗ್ಗೆ ಸೂಚನೆ ನೀಡಲೆತ್ನಿಸಿದ್ದ. ಇದು ಕೊನೆಯಗಳಿಗೆಯಲ್ಲಿ ಕ್ಯಾಪ್ಟನ್‌ಗೆ ಅರ್ಥವಾಯ್ತು. ಆದರೆ ಅಷ್ಟರಲ್ಲೇ ಕಾಲ ಮಿಂಚಿ ಹೋಗಿತ್ತು. ಹಡಗನ್ನು ತಿರುಗಿಸಲು ಆಗಲಿಲ್ಲ. ನಿಲ್ಲಿಸಲೂ ಆಗಲಿಲ್ಲ ಆ ದ್ವೀಪಕ್ಕೆ ಬಡಿದುಕೊಳ್ಳುವುದನ್ನು ತಪ್ಪಿಸಲೂ ಆಗಲಿಲ್ಲ!
ಆ ಕ್ಯಾಪ್ಟನ್‌ನಂತವರು ನಮ್ಮಲ್ಲಿ ಬಹಳಾ ಜನರಿರುತ್ತಾರೆ. ಸದಾ ಮುಂಗೋಪ, ತಾವು ಹೇಳಿದ್ದೇ ನಡೆಯಬೇಕು. ಬೇರೆಯವರ ಮಾತು ಕೇಳುವುದೇ ಇಲ್ಲ. ವಿವೇಚನೆಯನ್ನೇ ಮರೆತಿರುತ್ತಾರೆ. ಇಂಥವರು ಕೊನೆಗೆ ಅಪಾಯವನ್ನು ತಂದೊಡ್ಡಿಕೊಳ್ಳುತ್ತಾರೆ.
ಮುಂಗೋಪದಿಂದ, ಅವಸರದಿಂದ, ಅವಿವೇಕತನದಿಂದ ಅನಾಹುತಗಳು ಹೆಚ್ಚು..... ಪಡೆಯುವುದಕ್ಕಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ನಿಧಾನವಾಗಿ ಯೋಚಿಸಿದರೆ ಎಲ್ಲಾ ತಿಳಿ ತಿಳಿ. ಅದನ್ನೇ ಅವಸರದಿಂದ ಗಮನಿಸಿದರೆ ಕಗ್ಗಂಟು.
ನಮ್ಮ ಮಾತು ಕಡಿಮೆಯಿರಬೇಕು. ಎದುರಿನವರು ಹೇಳುವುದನ್ನು ಹೆಚ್ಚು ಕೇಳಿಸಿಕೊಳ್ಳಬೇಕು. ಕೇಳುವುದಕ್ಕಿಂತಲೂ ಹೇಳುವುದೇ ಹೆಚ್ಚಾದರೆ ಅತಿರೇಕವಾಗುತ್ತದೆ. ಮಾತು ಬೆಳೆಸುವುದಕ್ಕಿಂತಲೂ ಮೌನ ಬೆಳೆಸುವುದೇ ಉತ್ತಮ. ಒಂದು ಮಾತು ನೀಡುವುದಕ್ಕಿಂತಲೂ ಹೆಚ್ಚಿನ ಅರ್ಥವನ್ನು ಮೌನ ನೀಡಬಲ್ಲುದು.