ನಿನಗಾಗಿ ಬರೆದ ಕವಿತೆಗಳು
‘ನಿನಗಾಗಿ ಬರೆದ ಕವಿತೆಗಳು' ಎಚ್.ಎಸ್.ಮುಕ್ತಾಯಕ್ಕ ಅವರ ಹೊಸ ಸಂಕಲನ. ಈ ಕೃತಿಯನ್ನು 'ಸಂಗಾತ ಪುಸ್ತಕ' ಪ್ರಕಟಿಸಿದೆ. ಇದು ಪ್ರೇಮ ಪದ್ಯಗಳ ಸಂಕಲನ. ಈ ಪದ್ಯಗಳು ಓದುತ್ತ ಗಾಢ ಪ್ರೇಮದ ಹೂದೋಟದಲ್ಲಿ ಕಳೆದು ಹೋಗುವಂತೆ ಮಾಡುತ್ತವೆ. ಈ ಸಂಕಲನ ಪ್ರೇಮಿಗಳ ಉಸಿರಾಟದ ಪಲುಕುಗಳಂತಿವೆ. ಪ್ರತಿ ಪುಟದಲ್ಲಿಯೂ ಆವರಿಸಿರುವ ಪ್ರೇಮ ಪದ್ಯಗಳು ನಮ್ಮವೇ ಅನ್ನಿಸುತ್ತವೆ. ಕವಯತ್ರಿ ಎಚ್ ಎಸ್ ಮುಕ್ತಾಯಕ್ಕ ೧೯೮ ಪುಟಗಳ ಈ ಕೃತಿಗೆ ತಮ್ಮ ಮನದಾಳದ ಮಾತುಗಳನ್ನು ಬರೆದಿದ್ದಾರೆ. ಅದರಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ…
“ಹಿಂತಿರುಗಿ ನೋಡಿದಾಗ ನೀನು ಕಂಡದ್ದೇನು 'ಮುಕ್ತಾ' ಅಯ್ಯೋ ನೋವುಗಳೆಲ್ಲ ಕವಿತೆಗಳಾಗಿ ಅರಳಿದ್ದವಲ್ಲಾ” ಈ ಕಾವ್ಯವನ್ನ ನೀವು ಓದುವ ಪೂರ್ವದಲ್ಲಿ ನನ್ನ ಕಾವ್ಯ ಯಾತ್ರೆಯ ಬಗೆಗೆ ಬರೆಯಲು ಇಚ್ಛಿಸಿರುವೆ. ಕವಿತೆಯ ಜೊತೆಗಿನ ಅಷ್ಟೊಂದು ವರ್ಷಗಳ ಒಡನಾಟವನ್ನು ಕೆಲವೇ ಪುಟಗಳಲ್ಲಿ ಹಿಡಿದಿಡುವುದಾಗುವುದಿಲ್ಲ. ಒಂದು ಸಣ್ಣ ಪ್ರಯತ್ನವಿದು.
ನನ್ನ ತಂದೆ ದಿ.ಶಾಂತರಸರಿಂದ ನನಗೆ ಪ್ರೇರಣೆ ಸಿಕ್ಕಿತು. ಮನೆಗೆ ಕವಿಗಳು, ಕಲಾವಿದರು, ಸಂಗೀತಗಾರರು ಇತ್ಯಾದಿ ಜನ ಬರುತ್ತಿದ್ದರು. ಹಾಡು, ಕವಿತೆ, ನಾಟಕ ಇತ್ಯಾದಿಗಳ ಬಗೆಗೆ ಚರ್ಚೆಗಳಾಗುತ್ತಿದ್ದವು. ಮನೆ ಯಾವಾಗಲೂ ಜನರಿಂದ ತುಂಬಿರುತ್ತಿತ್ತು. ಅವರಾಡುವ ಮಾತು, ನಡೆಸುವ ಚರ್ಚೆ, ನಾನು ಚಿಕ್ಕವಳಾಗಿರುವಾಗಿನಿಂದ ಬೇಕೋ ಬೇಡವೋ ಕಿವಿಗೆ ಬೀಳುತ್ತಿದ್ದವು. ದೊಡ್ಡ, ದೊಡ್ಡ ಕವಿಗಳು, ನಾಟಕಕಾರರು, ಸಂಗೀತಗಾರರು, ಕಲಾವಿದರು ನನಗೆ ನೋಡಲು ಸಿಕ್ಕದ್ದಾರೆ. ಅವರ ಮಾತು, ಸಂಗೀತ ಇವೆಲ್ಲದರಿಂದ ನನಗರಿವಾಗದಂತೆ ನನ್ನ ಮನಸ್ಸು ಸಂಸ್ಕಾರಗೊಂಡಿತು. ಅವುಗಳ ಬಗೆಗೆ ಒಲವು ಬೆಳೆಯಿತು.
ಈ ನಡುವೆ ಅಪ್ಪ ನನಗೆ ಚಿಕ್ಕ ಚಿಕ್ಕ ಕಥೆ ಪುಸ್ತಕಗಳನ್ನು ಓದಲು ತಂದುಕೊಡುತ್ತಿದ್ದನು. ಓದಿಯಾದ ಮೇಲೆ ಅದರ ಕಥೆಯನ್ನು ಹೇಳೆಂದು ಕೇಳುತ್ತಿದ್ದನು. ನಾನು ಆ ಕಥೆಯನ್ನು ಹೇಳಿದಾಗ ಆತನಿಗೆ ಬಹಳ ಸಂತೋಷವಾಗುತ್ತಿತ್ತು. ಬರಬರುತ್ತ ಹಳೆಗನ್ನಡ ಕಾವ್ಯಗಳನ್ನು ಓದೆಂದು ಹೇಳಿ, ಹರಿಹರನ ರಗಳೆಯನ್ನು ತಂದುಕೊಟ್ಟನು. ನನಗೆ ಹಳೆಗನ್ನಡ ಕಾವ್ಯದ ಓದು ಹಿಡಿಸಲಿಲ್ಲ. ಅಪ್ಪ “ಓದಿದೆಯೇನು" ಎಂದು ಕೇಳಿದಾಗ 'ಇಲ್ಲ'ವೆಂದೆನು. ಅಲ್ಲದೆ ಆತ 'ಯಾಕೆ' ಎಂದು ಕೇಳುವ ಮುಂಚೆಯೇ ಖಡಾಖಂಡಿತವಾಗಿ 'ನನಗೆ ಆಗುವುದಿಲ್ಲ' ಎಂದು ಹೇಳಿಬಿಟ್ಟೆನು. ಆತ ಸ್ವಲ್ಪ ಹೊತ್ತು ಸುಮ್ಮನೆ ನನ್ನನ್ನೇ ನೋಡುತ್ತಿದ್ದನು. ಅನಂತರ ಸಂಕ್ಷಿಪ್ತವಾಗಿ 'ಸರಿ' ಎಂದನು.
ಬರಬರುತ್ತ ನನಗೆ ಪುಸ್ತಕಗಳ ಬಗೆಗೆ ಅದೆಷ್ಟು ವ್ಯಾಮೋಹ ಬೆಳೆಯಿತೆಂದರೆ, ಊರಿನ ಸೆಂಟ್ರಲ್ ಲೈಬ್ರರಿ, ಕಾಲೇಜು, ಲೈಬ್ರರಿ ಮತ್ತು ಎಲ್ಲಿಯಾದರೂ ಊರಿಗೆ ಹೋದರೆ ಅಲ್ಲಿಂದ ಪುಸ್ತಕಗಳನ್ನು ತರುತ್ತಿದ್ದೆ. ಅಪ್ಪನೂ ತರುತ್ತಿದ್ದನು. ಅವನ್ನೆಲ್ಲ ನಾನು, ಅಪ್ಪ ಓದುತ್ತಿದ್ದೆವು. ಅನಂತರ ಚರ್ಚೆ ಮಾಡುತ್ತಿದ್ದೆವು. ಖುಷಿಯನ್ನು ಹಂಚಿಕೊಳ್ಳುತ್ತಿದ್ದೆವು.
ಇಷ್ಟಾದರೂ ಅಪ್ಪ ಎಂದೂ ನನಗೆ ಕವಿತೆ ಬರೆಯಲು ಹೇಳಲಿಲ್ಲ. ನನಗೇ ಒಂದು ಸಲ ನಾನು ಚಿಕ್ಕವಳಿದ್ದಾಗ ಅಪ್ಪನಂತೆ ಕವಿತೆ ಬರೆಯಬೇಕೆನಿಸಿತು. ಹಾಗಾಗಿ ಏನೋ ಒಂದು ಕವಿತೆ ಬರೆದು ಅಪ್ಪನಿಗೆ ತೋರಿಸಿದೆ. ಅಪ್ಪ ಖುಷಿಪಟ್ಟು ಬಾಯಿತುಂಬ ಹೊಗಳಿದನೇ ಹೊರತು, ಇದೇ ರೀತಿ ಬರಿ ಎನ್ನಲಿಲ್ಲ! ಯಾಕೆಂದು ನನಗೆಂದೂ ಆತ ಹೇಳಲಿಲ್ಲ ಮತ್ತು ನಾನೂ ಕೇಳಲಿಲ್ಲ.
ಆ ನಂತರ ೧೯೮೩ರಲ್ಲಿ ನನ್ನ ಮೊದಲ ಕವನ ಸಂಕಲನ 'ನಾನು ಮತ್ತು ಅವನು' ಬಂದಿತು. ಅದಕ್ಕಿಂತ ಪೂರ್ವದಲ್ಲಿ ನನಗೆ ಒಂದೊಂದು ಸಲ 'ನಾನೇಕೆ ಬರೆಯಬಾರದು' ಎನಿಸುತ್ತಿತ್ತು. ಅದನ್ನು ಅಪ್ಪನಿಗೆ ಹೇಳಿದೆನು. ಆತ ಒಪ್ಪಿಕೊಂಡದ್ದಲ್ಲದೆ, 'ನಿನಗೆ ಪ್ರೇಮ ಕವಿತೆ' ಬರೆಯಲು ಸಾಧ್ಯವೆ' ಎಂದು ಕೇಳಿದನು. 'ಯಾಕೆ' ಎಂದು ಕೇಳಿದೆನು. ಆತ ಏನೂ ಹೇಳಲಿಲ್ಲ. ಬದಲಾಗಿ 'ಪ್ರಯತ್ನಿಸು' ಎಂದನು. ಬಹುಶಃ ಆ ಕಾಲದಲ್ಲಿ ಹೆಣ್ಣು ಮಕ್ಕಳು ಅಂದರೆ 70-80ರ ದಶಕದಲ್ಲಿ ಅಷ್ಟೊಂದು ಮುಕ್ತವಾಗಿ ಬರೆಯುತ್ತಿರಲಿಲ್ಲ. ಹಾಗಾಗಿ 'ಬರಿ' ಎಂದು ಹೇಳಿರಬಹುದೆಂದು ನನ್ನಷ್ಟಕ್ಕೆ ನಾನೇ ಅಂದುಕೊಂಡೆನು. ನಾನು ಆಗ ಆ ವಯೋಮಾನಕ್ಕೆ ಅನುಗುಣವಾಗಿ 'ಹಸಿ ಬಿಸಿ' ರೋಮ್ಯಾಂಟಿಕ್ ಕವಿತೆಗಳನ್ನು ಮುಕ್ತವಾಗಿ ಅನಿಸಿದ್ದನ್ನು ಬರೆದನು.
"ನಾನು ಮತ್ತು ಅವನು" ಸಂಕಲನದ ಅರ್ಪಣೆಯಲ್ಲಿ "ಈ ಕವಿತೆಗಳು ಹುಟ್ಟಿ ಬೆಳೆಯಲು ಕಾರಣವಾದವನಿಗೆ" ಎಂದು ಒಂದು ಮಾತು ಸೇರಿಸಿದರೆ ಇಂಥ ಕವಿತೆಗಳಿಗೆ ಪೂರಕವಾಗಿ ಚೆಂದ ಆಗುತ್ತದೆ ಎಂದು ದಿ. ಚಂದ್ರಶೇಖರ ಪಾಟೀಲರು ಹೇಳಿದರು. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. "ಅಂಥ ವ್ಯಕ್ತಿಯೊಬ್ಬ ಇರದೇ ಇದ್ದಾಗ ಯಾಕೆ ಬರೆಯಬೇಕು" ಎಂಬುದೇ ನನ್ನ ವಾದವಾಗಿತ್ತು. ಅದನ್ನು ಅವರೆದುರು ಹೇಳಿದಾಗ, "ಅಂಥ ವ್ಯಕ್ತಿಯೊಬ್ಬ ನಿನ್ನ ಕಲ್ಪನೆಯಲ್ಲಿರಬಹುದಲ್ಲವೆ ? ಆ ಕಾಲ್ಪನಿಕ ವ್ಯಕ್ತಿಗೆ ಅರ್ಪಣೆಯಾದರೆ ತಪ್ಪೇನು" ಎಂಬುದೇ ಅವರ ವಾದವಾಗಿತ್ತು. ಕೊನೆಗೂ ಆ "ಕಾಲ್ಪನಿಕ ವ್ಯಕ್ತಿಗೇ" ಸಂಕಲನವನ್ನು ಅರ್ಪಿಸಿದ್ದಾಯಿತು. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಒಬ್ಬ ಪ್ರೇಮಿ ಇರುತ್ತಾನೆ. ದುರಂತವೆಂದರೆ ನಮಗೆ ಇಚ್ಛೆ ಇಲ್ಲದವರೊಡನೆ ಬದುಕಬೇಕಾಗುತ್ತದೆ. ಇದು ಸಾಧಾರಣ ಎಲ್ಲರ ದುರಂತವಾಗಿದೆ. ಇರಲಿ, ಇದು ಪ್ರಸ್ತುತ ವಿಷಯವಲ್ಲದಿದ್ದರೂ ಸಾಂದರ್ಭಿಕವಾಗಿ ಹೇಳಿದೆ. ನನ್ನ ಮೊದಲ ಸಂಕಲನಕ್ಕೆ ಕಾವ್ಯಜಗತ್ತಿನಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿತು. ಅನೇಕರು ಮೆಚ್ಚಿದರು. ಒಳ್ಳೆಯ ವಿಮರ್ಶೆಗಳು ಕೂಡ ಬಂದವು. ನನಗೆ ಮುಂದೆ ಬರೆಯಲು ಪ್ರೇರಣೆ, ಪ್ರೋತ್ಸಾಹನೆ ಸಿಕ್ಕಿತು.
ಬದುಕು ಒಂದೇ ರೀತಿಯಾಗಿ ಹೇಗೆ ಇರುತ್ತದೆ? ಬದಲಾಗಲೇಬೇಕು ಏರಿಳಿತ, ಸುಖದುಃಖ ಎಲ್ಲ ನನ್ನ ಕಾವ್ಯದ ಮೇಲೆ ಪ್ರಭಾವ ಬೀರಿವೆ. ಯಾವೊಬ್ಬ ಲೇಖಕ ಕೂಡ ಇದಕ್ಕೆ ಹೊರತಾಗಿಲ್ಲ. ಮುಂದೆ ಅನೇಕರು "ನಾನು ಮತ್ತು ಅವನು" ದಂಥ ಕವಿತೆಗಳನ್ನು ಓದಲು ಅಪೇಕ್ಷೆಪಟ್ಟರು. ಆದರೆ ಯಾಕೋ ಮತ್ತೆ ನನಗೆ ಆ ರೀತಿಯ ಕವಿತೆಗಳನ್ನು ಬರೆಯಲಾಗಲಿಲ್ಲ. ಅಲ್ಲದೆ, ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ಕಾವ್ಯದಲ್ಲಿ ಮಾಡುತ್ತ ಬಂದೆ. ಅನಂತರ "ಕಭೀ ಕಭೀ”, “ನೀವು ಕಾಣಿರೆ, ನೀವು ಕಾಣಿರೆ" ಕವನ ಸಂಕಲನ ಬಂದವು.
ಅಪ್ಪ ಅಷ್ಟು ಹೊತ್ತಿಗಾಗಲೇ ಸುಮಾರು ವರ್ಷಗಳ ಹಿಂದಿನಿಂದಲೇ ಉರ್ದು ಪರಂಪರೆಯ ಶ್ರೀಮಂತ ಸಾಹಿತ್ಯವಾದ 'ಗಜಲ್' ಬಗೆಗೆ ಅಧ್ಯಯನ ಮಾಡುತ್ತಿದ್ದನು. ಲಖನೌ, ಡೆಲ್ಲಿ, ಹೈದ್ರಾಬಾದ್ ಮುಂತಾದ ಕಡೆಗಳಿಂದ ಉರ್ದು ಪುಸ್ತಕಗಳನ್ನು ತರಿಸಿ, ಅಧ್ಯಯನ ಮಾಡುತ್ತಿದ್ದನು. ಹಲ ಕೆಲವರು ಪ್ರೇಮಗೀತೆಗಳನ್ನು ಬರೆದು 'ಗಜಲ್' ಎಂದು ಪ್ರಕಟಿಸುತ್ತಿದ್ದರು. ಆ ತಪ್ಪನ್ನು ನಾನೂ ಮಾಡಿದ್ದೆ. ಅಪ್ಪ ಬಂದು ಒಂದು ದಿನ ನನ್ನ ತಪ್ಪನ್ನು ಎತ್ತಿ ತೋರಿಸಿದ್ದಲ್ಲದೆ 'ಗಜಲ್' ಬರೆಯಲು ಕಲಿಸಿದನು. “ನಾನು ಛಂದಸ್ಸನ್ನು ಮಾತ್ರ ಕಲಿಸುವೆ ಭಾವ ನಿನ್ನದೆ, ಅದನ್ನು ಯಾರೂ ಕಲಿಸಲಾರರು" ಎಂದು ಸ್ಪಷ್ಟವಾಗಿಯೇ ಹೇಳಿದನು. ಈ ರೀತಿ ನನ್ನ ಮೊದಲ 'ಗಜಲ್' ಸಂಕಲನ "ನಲವತ್ತು ಗಜಲುಗಳು" 2002ರಲ್ಲಿ ಪ್ರಕಟವಾಯಿತು. ಅವನ್ನು ಬರೆದು, ಪರಿಷ್ಕರಿಸಿ, ಪುಸ್ತಕರೂಪದಲ್ಲಿ ತರಲು ಸುದೀರ್ಘ ಎರಡು ವರ್ಷಗಳೇ ಹಿಡಿದವು !
ಕನ್ನಡ ಸಾಹಿತ್ಯದಲ್ಲಿ ಈ "ನಲವತ್ತು ಗಜಲ್"ಗಳ ಸಂಕಲನವೇ ಶುದ್ಧವಾದ ಪರಿಪೂರ್ಣ ಛಂದಸ್ಸಿರುವ ಮೊಟ್ಟಮೊದಲ ಗಜಲ್ ಸಂಕಲನವಾಗಿದೆ. ಇದರಲ್ಲಿ ಹೊಸಬರಿಗೆ ಬರೆಯಲು ನಿಯಮಗಳನ್ನೂ ಪ್ರಸ್ತಾವನೆಯಲ್ಲಿ ಬರೆದಿದ್ದೇನೆ. ಅಪ್ಪ ಎಂದೂ ನನ್ನ ಕವಿತೆಗಳನ್ನು ತಿದ್ದುತ್ತಿರಲಿಲ್ಲ. ಇಂಥಿಂಥಲ್ಲಿ ಸರಿ ಇಲ್ಲವೆಂದು ಹೇಳುತ್ತಿದ್ದನು ಅಷ್ಟೆ. ಅದನ್ನು ಸರಿ ಮಾಡೆನ್ನುವ ಒತ್ತಾಯವೂ ಆತನಲ್ಲಿ ಇರುತ್ತಿರಲಿಲ್ಲ. ಎಷ್ಟೋ ಸಲ ನಾನು “ಅದೇಕೆ ಸರಿ ಇಲ್ಲ” ಎಂಬ ವಾದಕ್ಕೂ ಇಳಿಯುತ್ತಿದ್ದೆನು. ಆಗಲೂ ಅಪ್ಪ 'ನಿನ್ನ ಇಷ್ಟ' ಎನ್ನುತ್ತಿದ್ದನೆ ಹೊರತು ಏನೂ ಅನ್ನುತ್ತಿರಲಿಲ್ಲ. ನನ್ನ ಇಷ್ಟದಂತೆ ಬರೆದದ್ದೇ ಹೆಚ್ಚು. ಒಂದೊಂದು ಸಲ ಅಪ್ಪ ಇದನ್ನು ಮೆಚ್ಚುತ್ತಿದ್ದನು ಕೂಡಾ.
ಈ ಸಂಕಲನದಲ್ಲಿ 'ನನ್ನ ಮಾತು' ಮೊದಲು ಒಂದು ಪುಟಕ್ಕೆ ಮಾತ್ರ ಸೀಮಿತಗೊಳಿಸಿದ್ದೆ. ಶೇಖರ್, “ನನ್ನ ಕಾವ್ಯಯಾತ್ರೆಯ ಅನುಭವ ಎಲ್ಲಿಯೂ ನಾನು ಬರೆದಿಲ್ಲವೆಂದೂ, ಈಗ ಇಲ್ಲಿ ಬರೆಯಬೇಕೆಂದೂ ಹೇಳಿ, ಅದನ್ನು ಬರೆಯಲು ಹಚ್ಚಿದರು. ಅದೇ ಅರಂಭದಲ್ಲಿ ಇರುವ “ಕಾವ್ಯಕ್ಕೆ ಮುನ್ನ"-ಲೇಖನ. ಇದಕ್ಕೆ 'ನನ್ನ ಮಾತು' ಹಳೆಯ ಪದವೆಂದು ಹೇಳಿ, “ಕಾವ್ಯಕ್ಕೆ ಮುನ್ನ"ವೆಂಬ ಆಕರ್ಷಕ, ಅರ್ಥಪೂರ್ಣ ಹೆಸರನ್ನು ಕೊಟ್ಟರು. ಈ ಎಲ್ಲ ಸಹಕಾರ, ಸಲಹೆ, ಪ್ರೇರಣೆಗಾಗಿ ಗೆಳೆಯ ಶೇಖರಗೆ ನಾನು ಕೃತಜ್ಞಳಾಗಿರುವೆನು.
2008ರಲ್ಲಿ ಅಪ್ಪ ತೀರಿಕೊಂಡನು. ನಾನು ಆತನಿಲ್ಲದೆ ಹತಾಶಳಾಗಿದ್ದೆ. ಹಲವು ವರ್ಷಗಳ ಕಾಲ ಬರೆಯುವುದನ್ನು ನಿಲ್ಲಿಸಿದ್ದೆನು. ಎಲ್ಲರೂ ಹೋದವರು ಹೋದರು, ಬರೆಯಬೇಕು ನೀನು ಎಂದು ಹೇಳತೊಡಗಿದರು. ಹೀಗೆ ಮತ್ತೇ ಬರೆಯಲು ಆರಂಭಿಸಿದೆ."