ನಿನಗೆ ನೀನು ಪ್ರಾಮಾಣಿಕನಾಗಿರುವುದು ಹೇಗೆ?
`ಬದುಕು' ಎಂಬುದು ಈಗಷ್ಟೇ ಬಿದ್ದ ಹಿಮದ ರಾಶಿ. ಅಲ್ಲಿ ನಾವು ಎಲ್ಲಿ ನಡೆಯಲಿಚ್ಛಿಸುತ್ತೇವೋ ಅಲ್ಲಿ ನಮ್ಮ ಹೆಜ್ಜೆ ಗುರುತು ಮೂಡುತ್ತದೆ. ಇದು ಪಾಶ್ಚಾತ್ಯ ಲೇಖಕ ಡೇನಿಸ್ ವೈಟ್ಲಿಯ ಹಿರಿಯರು ಹಾಕಿಕೊಟ್ಟ ನೀತಿ. ಇದು ಅವರು ನಡೆನುಡಿಯಲ್ಲಿ ಅನುಸರಿಸುತ್ತಿದ್ದರು. ಮಾತ್ರವಲ್ಲ ಈ ಮೂಲಕ ಎಳೆಯರಿಗೆ ಸ್ಪಷ್ಟಪಡಿಸುತ್ತಿದ್ದರು.
ಅವರ ಪ್ರಕಾರ ಪ್ರಾಮಾಣಿಕತೆಯೆಂಬುದು ವೈಯಕ್ತಿಕ ನೈತಿಕತೆ ಹಾಗೂ ನಮ್ಮ ಔಚಿತ್ಯವನ್ನು ನಮ್ಮಿಂದ ಬೇರ್ಪಡಿಸದ ಪ್ರಾಮಾಣಿಕತೆಯೆಂಬುದು ನಮ್ಮ ನಡವಳಿಕೆಯನ್ನು ನಿರ್ಧರಿಸುವ ಒಂದು ಆತ್ಮ ಸಾಂಗತ್ಯ ಅಥವಾ ಸಾಧನ. ದುರದೃಷ್ಟವಶಾತ್ ಅದು ದೈನಂದಿನ ಬದುಕಿನಲ್ಲಿ ಅಪರೂಪವಾಗುತ್ತಿದೆ. ಆದರೆ ಅದು ಒಂದು ಸಮಾಜದ ಬೆನ್ನೆಲುಬು. ಅದನ್ನು ನಾವು ಬಯಸಿ ನಮ್ಮ ಅಂಗೈಯೊಳಗಿಟ್ಟುಕೊಳ್ಳಬೇಕು. ಪ್ರಾಮಾಣಿಕತೆಯ ಒಂದು ಸಣ್ಣ ಪರೀಕ್ಷೆಗಾಗಿ ಈ ಮೂರು ಮುಖ್ಯಾಂಶಗಳನ್ನು ಗಮನಿಸಿ ಪರೀಕ್ಷಿಸಿ.
೧. ವೈಯಕ್ತಿಕ ಒತ್ತಡ, ಸಂಕಷ್ಟದ ಪರಿಸ್ಥಿತಿಯಲ್ಲೂ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿರಿ. ಹೆಸರಾಂತ ಆಸ್ಪತ್ರೆಯಲ್ಲಿ ವೃತ್ತಿಗೆ ಸೇರಿದ ದಾದಿಯ ಕಥೆಯಿದು. ಒಬ್ಬ ರೋಗಿ ತುರ್ತು ಶಸ್ತ್ರಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡುವ ಜವಾಬ್ದಾರಿ ಈ ದಾದಿಗೆ ವಹಿಸಲಾಗಿತ್ತು. ರೋಗಿಗೆ ಹೊಟ್ಟೆಯ ಶಸ್ತ್ರಚಿಕಿತ್ಸೆ ಮುಗಿದು ಇನ್ನೇನು ಕೊನೆಯ ಹಂತ ಮುಟ್ಟಿತ್ತು. ಆಗ ಆ ದಾದಿ 'ಡಾಕ್ಟರರೇ ನೀವು ಹನ್ನೆರಡು ಹತ್ತಿ ಚೂರುಗಳನ್ನು ಉಪಯೋಗಿಸಿದ್ದೀರಿ. ಕೇವಲ ಹನ್ನೊಂದಷ್ಟೇ ಹೊರ ತೆಗೆದಿದ್ದೀರಿ. ಇನ್ನೊಂದನ್ನು ಹುಡುಕಬೇಕಿದೆ' ಎಂದು ಡಾಕ್ಟರರನ್ನು ಎಚ್ಚರಿಸಿದಳು. ಆಗ ಡಾಕ್ಟರರು? ಇಲ್ಲ ಎಲ್ಲಾ ಹೊರಗೆ ತೆಗೆದು ಆಗಿದೆ. ಹೊಲಿಗೆ ಹಾಕುವುದು ಮುಗಿದಿದೆ. ಶಸ್ತ್ರಚಿಕಿತ್ಸೆ ಮುಗಿದಂತೆ. ಎಂದು ಘೋಷಿಸುತ್ತಾರೆ. ಆಗ ದಾದಿ 'ಕೂಡದು ಡಾಕ್ಟರ್ ತಾವು ರೋಗಿಯ ಬಗ್ಗೆ ಯೋಚಿಸಿ' ಎಂದು ಹೇಳುತ್ತಾಳೆ. ಆಗ ಡಾಕ್ಟರ್ ನಕ್ಕು ತಮ್ಮ ಕಾಲಡಿ ಅವಿತಿಟ್ಟಿದ್ದ ಹತ್ತಿ ಚೂರನ್ನು ಆಕೆಗೆ ತೋರಿಸಿ ಆಕೆಯ ವೃತ್ತಿನಿಷ್ಠೆಯ ಬಗ್ಗೆ ಪ್ರಶಂಸಿಸುತ್ತಾರೆ.
೨. ನಿಮ್ಮ ನಿರ್ಧಾರವು ನಿಮಗೆ ಸರಿಯೆನಿಸಿದಲ್ಲಿ ಎಂದಿಗೂ ಮುಂದಿಟ್ಟ ಹೆಜ್ಜೆ ಹಿಂದಿಡಬೇಡಿ. ಇನ್ನೊಬ್ಬರಿಗೆ ನ್ಯಾಯಯುತವಾಗಿ ಸಲ್ಲತಕ್ಕ ಗೌರವವನ್ನು ಅವರಿಗೆ ನೀಡಿ. ನಿಮಗಿಂತಲೂ ಉತ್ತಮ ಯೋಚನೆಗಳಿದ್ದವರು ಅಥವಾ ನಿಮಗಿಂತಲೂ ಉತ್ತಮ ಯೋಚನೆಗಳಿದ್ದವರು ಅಥವಾ ನಿಮಗಿಂತಲೂ ಹೆಚ್ಚು ಸಮರ್ಥರನ್ನು ಕಂಡು ಹಿಂಜರಿಯಬೇಡಿ. ಡೇವಿಡ್ ಚೋಗ್ಲೆ (ಪ್ರತಿಷ್ಠಿತ ಜಾಹೀರಾತು ಕಂಪೆನಿಯ ಸ್ಥಾಪಕ) ಈ ಅಂಶವನ್ನು ತನ್ನಲ್ಲಿ ಹೊಸದಾಗಿ ಸೇರಿಕೊಂಡ ಆಫೀಸರ್‌ಗಳಿಗೆ ಮನದಟ್ಟು ಮಾಡುತ್ತಿದ್ದರು. ನಾವು ಯಾವತ್ತೂ ಈ ನಮಗಿಂತ ಹೆಚ್ಚು ಸಾಮರ್ಥ್ಯ ಉಳ್ಳವರೊಂದಿಗೆ ವ್ಯವಹರಿಸಿದಾಗ ಇನ್ನಷ್ಟು ಮತ್ತಷ್ಟೂ ದೈತ್ಯಾಕಾರವಾಗಿ ವೃದ್ಧಿಸುವುದು ಸಾಧ್ಯವಾಗುತ್ತದೆ. ಹೀಗಾಗಿ ಡೇವಿಡ್ ಚೋಗ್ಲೆ ತನ್ನ ಕಂಪೆನಿಯ ಉದ್ಯೋಗಿಗಳ ಸಾಮರ್ಥ್ಯವನ್ನು ಸಮಂಜಸವಾಗಿ ಬಳಸಿಕೊಂಡದಕ್ಕೋ ಏನೋ ಆತನ ಸಂಸ್ಥೆಯು ಅತ್ಯಂತ ಪ್ರತಿಷ್ಠಿತ ಹಾಗೂ ಸದೃಢ ಜಾಹೀರಾತು ಸಂಸ್ಥೆಯಲ್ಲಿ ಹೆಸರು ಪಡೆಯಲು ಸಾಧ್ಯವಾಗಿದೆ.
೩. ನಿನಗೆ ನೀನು ಪ್ರಾಮಾಣಿಕವಾಗಿರು, ಅಂತೆಯೇ ವ್ಯವಹರಿಸು. ಯಾರಿಗೆ ನೈಜ ಆಂತರಿಕ ಮೌಲ್ಯಗಳ ಕೊರತೆಯಿರುತ್ತದೆಯೋ ಅವರು ಇತರರ ಚರ್ಯೆಯನ್ನು ಗಮನಿಸಿ ಅವರಂತೆ ನಡೆಯಲು ಯತ್ನಿಸುತ್ತಾರೆ. ಮುಖವಾಡಗಳ ಮೊರೆ ಹೊಕ್ಕು ಅನಿವಾರ್ಯವಾಗಿ ತಮ್ಮ ಪ್ರತಿಷ್ಠೆ ಅಂತಸ್ತು ಕಾಯ್ದುಕೊಳ್ಳಲು ತಮ್ಮ ಅನಿಸಿಕೆಗಳಿಗೆ ವಿರುದ್ಧವಾಗಿ ವ್ಯವಹರಿಸುತ್ತಾರೆ. ಇದು ಅವರ ವೈಯಕ್ತಿಕ ಬೆಳವಣಿಗೆ ಮಾರಕವಾಗಿ ಪರಿಣಮಿಸಿ ಜೀವನದಲ್ಲಿ ಯಾವುದೇ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳುವುದಕ್ಕೆ ತಡೆಯೊಡ್ಡುತ್ತದೆ. ಆದುದರಿಂದ ನೀವು ನೀವಾಗಿಯೇ ಇರಿ. ನಿಮಗೆ ಯಾವುದು ಹಿತವೆಂದು ಅನಿಸುವುದಿಲ್ಲವೋ ಅಂತಹ ಕಾರ್ಯದಲಿ ನಿರತರಾಗಬೇಡಿ. ನೀವು ನೀವಾಗಿ ವ್ಯವಹರಿಸಿ. ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ಪ್ರೌಢತೆಯಿರಲಿ. ಆತ್ಮ ಗೌರವ ಮತ್ತು ಸ್ಪಷ್ಟ ಪ್ರಜ್ಞೆಯಿರಲಿ. ಪ್ರಾಮಾಣಿಕತೆಯ ಸತ್ವಶಾಲಿಯಾಗುವುದರ ಹೆಗ್ಗುರುತು. ಅಷ್ಟೇ ಅಲ್ಲದೆ ಇದು ಪರಸ್ಪರ ಸಂಬಂಧಗಳನ್ನು ಬಲಪಡಿಸುವ ಶಕ್ತಿ ಕೂಡಾ. ಋಜತ್ವವೆಂಬುದು ನಿಮ್ಮ ಆಲೋಚನೆಗಳಿಗೆ ಬದ್ಧವಾದ ನಡವಳಿಕೆಯಾಗಿರ ಬೇಕೇ ವಿನಃ ಅದು ಒಂದು ತೋರಿಕೆಯಾಗಲೀ ಅಥವಾ ರಾಜಕೀಯವಾಗಲೀ ಸರಿಯಾಗಿರ ಬೇಕಾಗಿಲ್ಲ. ಬದುಕಿನ ಮೌಲ್ಯಗಳೆಂದರೆ ಸುಲಭ ಸೂತ್ರಗಳಿಗೆ ವರವಾಗದೇ ಭ್ರಷ್ಟತೆಗೆ ಬಲಿಯಾಗದೆ ಆತ್ಮ ಗೌರವದೊಂದಿಗೆ ಬದುಕುತ್ತಾ ಪ್ರತಿ ದಿನವನ್ನು ಗೆಲ್ಲುವ ಕ್ರಿಯೆ. ಹೀಗಾದಾಗ ಮಾತ್ರ ನಾವು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡದೆ ಮುಂದುವರಿಯಲು ಸಾಧ್ಯವಾಗುತ್ತದೆ.
(ಆಧಾರ) -ಮನು ಶಕ್ತಿನಗರ
ಚಿತ್ರ ಕೃಪೆ: ಇಂಟರ್ನೆಟ್ ತಾಣ