ನಿನಗೆ ಮಾತ್ರ

ನಿನಗೆ ಮಾತ್ರ

ಕವನ

ಎದೆಯ ನೋವುಗಳನು ಹಾಡಾಗಿಸಿ

ಭಾವನೆಗಳ ಬಿಕರಿ ಮಾಡುವುದು 

ಈಗೀಗ ನನಗೆ ತಿಳಿದಿದೆ ಬಿಡು.

ಇರಲಾರೆ ಹೀಗೆ ಗುರಿ ತಪ್ಪಿದ ಬಾಣದಂತೆ 

ಒಂಟಿ ಸಲಗದಂತೆ, ಹಸಿವೆಗೆ ಚೀರುತಿರುವ ಅಳಿಲಿನಂತೆ

ದೇವರಿಗೆ ಬಿಟ್ಟ ಗೂಳಿಯಂತೆ.

ಎಷ್ಟು ಗೋಳಿಟ್ಟರೂ ಕರಗದ ಹೃದಯದ ಮುಂದೆ 

ಕರ್ಪೂರದಾರತಿ ಬೆಳಗಿದರೇನು ಫಲ? 

ಇರಬಹುದೇ ಪ್ರೀತಿಯೆಂದರೆ ಹೀಗೆ 

ನಮ್ಮದೇ ಚಿಪ್ಪುಗಳನೊಡೆದು ಹೊರಬರದ ಹಾಗೆ? 

ಕಣ್ಣೀರಿನ ಮಜ್ಜನಕೂ ಸವೆಯದು ನೆನಪ ಬಂಡೆಗಲ್ಲು 

ಈಗೀಗ ಸಾವೂ ಕೂಡ ಮುನಿಸಿಕೊಂಡಿದೆ 

ಏನು ಮಾಡೀತು ಬದುಕ ಗಲ್ಲು? 

ಬಂದು ಬಿಡು ಮಳೆ ಮೋಡದ ಹಾಗೆ 

ತೊಡೆದು ಹೋಗಲಿ ಬರಡು ನೆಲದ 

ಪಾಳುಬಿದ್ದ ಈ ನನ್ನ ಬಾಳು.