ನಿನ್ನಿಂದಲೇ ಎಲ್ಲ.....

ನಿನ್ನಿಂದಲೇ ಎಲ್ಲ.....

ಕವನ

ಮಲಗಿದಾಗೆಲ್ಲ ಕವಿತೆ ಕನಲುವುದು 

ನನ್ನಿಂದ ದೂರವಾಗಿರಬೇಕೆಂದು, 

ಮಗ್ಗುಲ ಬದಲಿಸಿದಾಗಲೂ

ಎದುರಾಗುವುದು 

ಪ್ರಶ್ನೆಗಳೇ ತುಂಬಿದ ನೋಟ, 

ಒಂಟಿ ಭಾವ ಹೊಮ್ಮಿಸುತ್ತಾ

 

ಬರೇ ನೀ ಎಲ್ಲರಿಗೂ ಸುದ್ದಿಯಾಗಿರುವೆ 

ನನ್ನ ಅರಿತವರಿಲ್ಲ ಬಿಡು 

ಎಂಬ ನಿಟ್ಟುಸಿರು ಕಾಡುವಾಗ 

ತಳಮಳ ಮನದ ತುಂಬಾ

 

ನಿನ್ನಿಂದಲ್ಲವೇ ಜಗವ ಕಂಡಿದ್ದು 

ಎನ್ನುವಾಗಲೂ 

ಸೆಟೆದುಕೊಂಡು ಹುಸಿಕೋಪ 

ತೋರಿದ್ದು ಏನೋ ಭರವಸೆ

 

ಮತ್ತೆ ಒಲಿದು ಬರುವಳೆಂದು 

ನಿದ್ದೆಗೂ ಬಿಡದೆ ಎದುರಾಗುವಾಗೆಲ್ಲ 

ಅವಳ ಸಾಂಗತ್ಯದ ನೆನಪ ಪುಟ 

ಒಂದೊಂದಾಗಿ ತೆರೆವುದು 

ಚಿತ್ರಗುಪ್ತನ ದಪತಾರಿನಂತೆ

 

ಆಗಾಗ ನಿನ್ನ ಕುರಿತು ಮಾತನಾಡುವರಲ್ಲ 

ಎಂದು ಸಂತೈಸಿ, ಸಮಾಧಾನಿಸುವೆ 

ಕವಿತೆಯ ಮುಖದಲೂ ಮಂದಹಾಸ. 

ಮತ್ತೆ ದಿಂಬಿಗೆ ಆನಿಸಿಕೊಂಡು 

ಮಗ್ಗುಲ ಬದಲಿಸಿ ನಾಚುವಳು 

ಎದೆಗೊತ್ತಿಕೊಳ್ಳುವೆನೆಂಬ ನಿರೀಕ್ಷೆ 

ಅವಳಲ್ಲೂ ಮೂಡಿರಬಹುದು

 

ಕವಿತೆಯ ವ್ಯಥೆಯೂ ಎದೆಯ ಸವರಿ 

ತಲ್ಲಣಗೊಳಿಸುವುದು 

ಬರೆಯದೇ ಬೆತ್ತಲಾಗಿದ್ದಕ್ಕಿರಬೇಕು 

ಹಾಗಂತ ಕವಿತೆ ನನ್ನ ವ್ಯಥೆಯಲ್ಲ 

ಅದು ಭಾವದ ಸಂಗಾತಿ 

ತುಸು ಹೆಚ್ಚು ಕಾಡಿ, ಸತಾಯಿಸಿದರೂ 

ಎದುರಾಗಿ ಮನಹಗುರಾಗಿಸುವ

ಜೊತೆಗಾರ್ತಿ

-ಮಂಜುನಾಥ ಹೆಗಡೆ, ಹೊಸೊಪ್ಪ

ಚಿತ್ರಕೃಪೆ: ಇಂಟರ್ನೆಟ್ ತಾಣ 

ಚಿತ್ರ್