ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..
ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..
ಸ್ಯಾಮ್‌ಸಂಗ್ S4 ಸ್ಮಾರ್ಟ್‌ಪೋನಿನಲ್ಲಿ ಕಣ್ಣನೋಟದ ಮೂಲಕ ತೆರೆಯನ್ನು ಮೇಲೆ ಕೆಳಗೆ ಸರಿಸಬಹುದು.ನೀವು ತೆರೆಯತ್ತ ದೃಷ್ಟಿ ಬೀರದಿದ್ದರೆ, ನೀವು ನೋಡುತ್ತಿರುವ ವಿಡಿಯೋ ದೃಶ್ಯ ಮುಂದೆ ಹೋಗದು. ನಿಮ್ಮ ನೋಟವನ್ನು ಗ್ರಹಿಸಲಿದರಲ್ಲಿ ಎದುರು ಕ್ಯಾಮರಾವಿದೆ. ಹಿಂಭಾಗದ ಕ್ಯಾಮರಾ
ಹದಿಮೂರು ಮೆಗಾಪಿಕ್ಸೆಲ್‌ನದ್ದು. ಸ್ಪರ್ಶರಹಿತ ತಂತ್ರಜ್ಞಾನದ ಜತೆ,ಸ್ಯಾಮ್‌ಸಂಗ್ ಸ್ಯಾಮ್‌ಸಂಗ್ ಹಬ್ ಎನ್ನುವ ಸ್ಮರಣಕೋಶ ಸೌಲಭವನ್ನೂ ಕಂಪೆನಿ ಒದಗಿಸಿದೆ.ಕಂಪೆನಿಯ ಸಾಧನಗಳು ಇದರಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಹಂಚಿಕೊಳ್ಳಬಹುದು.ಸ್ಮಾರ್ಟ್‌ಫೋನ್ ಬರೇ ನೂರಮೂವತ್ತು ಗ್ರಾಂ ತೂಕದ್ದು.ಜನಸಂದಣಿಇರುವ ಸಾರಿಗೆ ವಾಹನಗಳಲ್ಲಿ ಓಡಾಡುವವರಿಗೆ,ಇದು ಒಂದು ರೀತಿಯಲ್ಲಿ ವರದಾನವಾಗಿದೆ.
ಗೂಗಲ್ ರೀಡರ್ ಹಿನ್ನೆಲೆಗೆ
ಆರೆಸೆಸ್ ಫೀಡ್ ಎನ್ನುವ ಸೇವೆಯನ್ನು ಬಳಸಿಕೊಂಡು,ವಿವಿಧ ತಾಣಗಳಿಗೆ ಭೇಟಿ ನೀಡದೆ,ರೀಡರ್ ತಂತ್ರಾಂಶದಲ್ಲೇ ನಮ್ಮಿಷ್ಟದ ಮಾಹಿತಿಯನ್ನು ಪಡೆದುಕೊಳ್ಳುವ ಸವಲತ್ತನ್ನು ಗೂಗಲ್ ರೀಡರ್ ಒದಗಿಸುತ್ತಿತ್ತು.ಹೆಚ್ಚಿನವರು,ಇದ್ದಬದ್ದ ತಾಣಗಳ ಮಾಹಿತಿಗೆ ಚಂದಾದಾರರಾಗಿ,ಮಾಹಿತಿಯ ಮಹಾಪೂರದಿಂದ ತಲೆಕೆಟ್ಟು,ರೀಡರ್ ಸೇವೆಯನ್ನು ಬಳಸದೇ ಇರುವುದು ಹೆಚ್ಚು.ಆದರೆ,ನೈಜ ಬಳಕೆದಾರರು ಗೂಗಲ್ ನಿರ್ಣಯದಿಂದ ಕಂಗೆಟ್ಟಿದಾರೆ.ಅವರು ಈ ಸೇವೆಗೆ ಪರ್ಯಾಯಕ್ಕಾಗಿ ಹುಡುಕಾಟ ನಡೆಸಿದ್ದಾರೆ.ಅಂತಹ ಸೇವೆ ನೀಡುವ ತಾಣಗಳು ಹೊಸ ಬಳಕೆದಾರರ ವಲಸೆಯ ಒತ್ತಡದಿಂದ ಸೇವೆಯನ್ನು ನೀಡಲು ವಿಫಲರಾಗುತ್ತಿದ್ದಾರೆ.ಜುಲೈಯಲ್ಲಿ ಈ ಸೇವೆ ನಿಲುಗಡೆಯಾಗಲಿದೆ.
ಸೆಲ್‌ಫೋನ್ ಸಾಗಿಬಂದ ದಾರಿ
ಸೆಲ್‌ಪೋನ್ ಅನ್ನು ತಯಾರಿಸಿ,ಅದನ್ನು ಮಾರುಕಟ್ಟೆಗಿಳಿಸಿದ ಕಂಪೆನಿಗಳಲ್ಲಿ ಮೊಟೊರಾಲಾವೇ ಮೊದಲಿನದು.1973ರಲ್ಲಿ ಕೂಪರ್ ತಮ್ಮ ಎರಡು ಪೌಂಡು ತೂಗುವ ಹ್ಯಾಂಡ್‌ಸೆಟ್ ಮೂಲಕ ನಿಸ್ತಂತು ಕರೆ ಮಾಡಿ ಜನರ ಗಮನ ಸೆಳೆದರು. ಅದಕ್ಕೂ ಮೊದಲು ಲಭ್ಯವಿದ್ದ ಮೊಬೈಲ್ ಕೆಲಸ ಮಾಡಲು ಮೂವತ್ತು ಪೌಂಡ್ ಬ್ಯಾಟರಿಯ ಅಗತ್ಯವಿತ್ತು.ಅದನ್ನು ಕಾರಿನಲ್ಲಿ ಅಳವಡಿಸಿಕೊಳ್ಳಬೇಕಿತ್ತು.1983 ವೇಳೆಗೆ ಇಲೆಕ್ಟ್ರಾನಿಕ್ಸ್ ಸರ್ಕ್ಯೂಟುಗಳ ತಂತ್ರಜ್ಞಾನದಲ್ಲಾದ ಬೆಳವಣಿಗೆಗಳು ಮೊಬೈಲನ್ನು ಕಡಿಮೆಶಕ್ತಿ ಬಳಸಿ ಕೆಲಸ ಮಾಡಲು ಸಮರ್ಥವಾದುವು.ತೊಂಭತ್ತರ ದಶಕವಂತೂ ಮೊಬೈಲಿನ ಜನಪ್ರಿಯತೆ ಹೆಚ್ಚಿಸಿ,ಅದನ್ನು ಬಳಸುವುದು ಪ್ರತಿಷ್ಟೆಯ ಪ್ರಶ್ನೆಯಾಯಿತು. ಈಗದು ಜನಸಾಮಾನ್ಯರ ಜೀವನದ ಅನಿವಾರ್ಯವಾದ ವಸ್ತುವಾಗಿ ಬಿಟ್ಟಿದೆ.
ಆಂಡ್ರಾಯಿಡ್ ಮತ್ತು ಗೂಗಲ್ ಕ್ರೋಮಿಗೆ ಒಬ್ಬನೇ ಬಾಸ್
ಗೂಗಲ್‌ನ ಸ್ಮಾರ್ಟ್‌ಫೋನಿನ ಉಸ್ತುವಾರಿಯನ್ನಿದುವರೆಗೆ ರೂಬಿನ್ ಎನ್ನುವಾತ ನೋಡಿಕೊಳ್ಳುತ್ತಿದ್ದರು.ಈಗ ರೂಬಿನ್ ಅವರನ್ನು ಆಂಡ್ರಾಯಿಡ್ ಯೋಜನೆಯಿಂದ ಇಳಿಸಿ,ಅದನ್ನು ಇದುವರೆಗೆ ಗೂಗಲ್ ಕ್ರೋಮ್ ಆಪರೇಟಿಂಗ್ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಭಾರತೀಯ ಮೂಲದ ಸುಂದರ್ ಪಿಚೈ ಅವರಿಗೆ ನೀಡಲಾಗಿದೆ.ಕ್ರೋಮ್ ಆಪರೇಟಿಂಗ್ ವ್ಯವಸ್ಥೆಯನ್ನು ಕಂಪ್ಯೂಟರ್‌ಗಳಿಗೆ ಅಂತ ಬ್ರಾಂಡ್ ಮಾಡಲಾಗಿದ್ದರೂ,ಆಂಡ್ರಾಯಿಡ್ ಮತ್ತು ಕ್ರೋಮ್ ನಡುವಣ ವ್ಯತ್ಯಾಸ ಹೆಚ್ಚಿಲ್ಲ.ಆಂಡ್ರಾಯಿಡ್ ಈಗ ಎಪ್ಪತ್ತೈದು ಕೋಟಿ ಪೋನುಗಳಲ್ಲಿ ತಳವೂರಿ,ಆಪಲ್ ಐಓಎಸ್‌ಗೆ ಪ್ರಬಲ ಪೈಪೋಟಿ ನೀಡುತ್ತಿದೆ.ಹಾಗೆಂದು ರೂಬಿನ್ ಅವರನ್ನು ಗೂಗಲ್ ಬಿಟ್ಟುಹಾಕದು ಎನ್ನುವುದು ಸ್ಪಷ್ಟ.
ಅವರನ್ನು ಪ್ರಾಯಶ: ಗೂಗಲ್ ಎಕ್ಸ್ ಎನ್ನುವ ಗೂಗಲ್ ಲ್ಯಾಬ್‌ನ ಉಸ್ತುವಾರಿ ನೋಡಿಕೊಳ್ಳಲು ನೇಮಿಸಬಹುದು.ಗೂಗಲ್ ಲ್ಯಾಬ್ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮಾಡುವ ಜವಾಬ್ದಾರಿಯಿದೆ.ಗೂಗಲ್ ಗ್ಲಾಸ್,ವಯರ್ಲೆಸ್ ಕಾರ್ ಅಂತಹ್ ತಂತ್ರಜ್ಞಾನದ ಅಭಿವೃದ್ಧಿಗೆ ಗೂಗಲ್ ಲ್ಯಾಬ್ ಹೊಣೆಯಾಗಿದೆ.ಹಾಗಾಗಿ ರೂಬಿನ್ ಸದಾ ಸುದ್ದಿಯಲ್ಲಿರುವುದು ಸಂಭವನೀಯ.
ಔಟ್‌ಲುಕ್ ಔಟ್
ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಮಿಂಚಂಚೆ ಸೇವೆ ಔಟ್‌ಲುಕ್ ಮತ್ತು ಹಿನ್ನೆಲೆಗೆ ಸರಿಯಲಿರುವ ಹಾಟ್‌ಮೈಲ್‌ಗಳು ವಿಫಲವಾಗುವುದು ಘಟಿಸಿದೆ.ಇದಕ್ಕೆ ಕಾರಣ ಅಗತ್ಯ ಸಂಪನ್ಮೂಲಗಳ ಕೊರತೆ.ಆದರೆ ತೊಂದರೆಯನ್ನು ನಿವಾರಿಸಲು ಮೈಕ್ರೋಸಾಫ್ಟ್ ತ್ವರಿತ ಕ್ರಮಗಳನ್ನು ಕೈಗೊಂಡಿದೆ.
ಮಕ್ಕಳಿಗೆ ಹೇಳಿಮಾಡಿಸಿದ ಆಪರೇಟಿಂಗ್ ವ್ಯವಸ್ಥೆಗಳು
ವಿಂಡೋಸ್ ಅಂತಹ ಆಪರೇಟಿಂಗ್ ವ್ಯವಸ್ಥೆಗಳಲ್ಲಿ ಮಕ್ಕಳು ಯಾವೆಲ್ಲಾ ಮಾಹಿತಿಯನ್ನು ಬಳಸಬಹುದು.ಯಾವ ತಾಣಗಳಿಗವರು ಭೇಟಿ ನೀಡಭಹುದು ಎನ್ನುವುದನ್ನು ನಿಗದಿ ಪಡಿಸಲು ಬರುತ್ತದೆ.ಆದರಿದು ಪ್ರಯಾಸದ ಕೆಲಸ.
ಆದರೆ ಉಬುಂಟು ಆಧಾರಿತ ಆಪರೇಟಿಂಗ್ ವ್ಯವಸ್ಥೆಯಲ್ಲಿ,ಎಜುಬುಂಟು ಎನ್ನುವ ಆಪರೇಟಿಂಗ್ ವ್ಯವಸ್ಥೆಯಲ್ಲಿ ಶೈಕ್ಷಣಿಕ ತಂತ್ರಾಂಶಗಳ ಜತೆ ಲಭ್ಯವಿದೆ.ನಕ್ಷತ್ರವೀಕ್ಷಣೆಯಿಂದ ಹಿಡಿದು,ಸಮಾಜ,ವಿಜ್ಞಾನ,ಗಣಿತ ಹೀಗೆ ಬೇರೆ ಬೇರೆ ಕ್ಷೇತ್ರಗಳ ತಂತ್ರಾಂಶ ಇದರಲ್ಲಿದೆ.ಕ್ವಿಮೋ ಎನ್ನುವುದು ಪುಟಾಣಿಗಳಿಗೆ ಸೂಕ್ತವದದ್ದು.ಇದು ಹೆಚ್ಚು ಸಂಪನ್ಮೂಲಗಳನ್ನು ಬೇಡದ ಆಪರೇಟಿಂಗ್ ವ್ಯವಸ್ಥೆ.ಇದರಲ್ಲಿ ಮಕ್ಕಳ ಮನ ಅರಳಿಸಬಲ್ಲ ಗೇಮ್ಸ್‌ಗಳಿವೆ.ಡೌಡೋಲಿನಕ್ಸ್ ಎನ್ನುವುದು ಎರಡರಿಂದ ಹನ್ನೆರಡು ವರ್ಷದ ಪುಟಾಣಿಗಳಿಗೆ ಸೂಕ್ತವಾದದ್ದು.ಇದು ಬಹಳಷ್ಟು ಭಾಷೆಗಳಲ್ಲೂ ಲಭ್ಯವಿದೆ.ಇನ್ನು ಬಳಸಲು ದರ ನೀಡಬೇಕಾದ ಮಕ್ಕಳ ಆಪರೇಟಿಂಗ್ ವ್ಯವಸ್ಥೆಯಲ್ಲಿ ಕಿಡ್ಸೂ ಎನ್ನುವ ಆಪರೇಟಿಂಗ್ ವ್ಯವಸ್ಥೆಯಿದೆ.ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವುದಾದರೆ,ಇದು ಉಚಿತವಾಗಿ ಲಭ್ಯ.
ಯೋಜನಾ ಆಯೋಗದಿಂದ ಗೂಗಲ್ ಹ್ಯಾಂಗೌಟ್ ಬಳಕೆ
ಯೋಜನಾ ಆಯೋಗವು ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಗೂಗಲ್ ಹ್ಯಾಂಗೌಟ್ ಮೂಲಕ ಒಂದು ಚರ್ಚೆಯನ್ನು ಏರ್ಪಡಿಸಿತು.ಬಿಕ್ರಮ್‌ಚಂದ್ ಕಾರ್ಯಕ್ರಮ ನಿರ್ವಹಿಸ್ದರು.ಮಾಂಟೆಕ್ ಸಿಂಗ್ ಅಹ್ಲೂವಾಲಿಯಾ,ಯೋಜನಾ ಆಯೋಗದ ಅಧ್ಯಕ್ಷರ ನೆಲೆಯಲ್ಲಿ ಉತ್ತರಿಸಿದರು.ಸ್ಯಾಮ್‌ಪಿತ್ರೋಡಾ ಕೂಡಾ ಭಾಗವಹಿಸಿದರು.ಬಯೋಕಾನ್ ಮುಖ್ಯಸ್ಥೆಯಾದ ಕಿರಣ ಮಜುಂದಾರ್ ಕೂಡಾ ಭಗವಹಿಸಿದರು.
ಹೈಸ್ಕೂಲ್ ಹ್ಯಾಕಿಂಗೆ ಹ್ಯಾಕಿಂಗ್ ಸ್ಪರ್ಧೆ
ಅಮೆರಿಕಾದ ಎನ್ ಎಸ್ ಎ ಭದ್ರತಾ ಸಂಸ್ಥೆ.ಇದು ಕಾರ್ನೆಜಿ ವಿಶ್ವವಿದ್ಯಾಲಯದ ಹೈಸ್ಕೂಲ್ ಮಕ್ಕಳಿಗೆ ಹ್ಯಾಕಿಂಗ್ ಸ್ಪರ್ಧೆಯನ್ನು ಏರ್ಪಡಿಸಿದೆ.ಸ್ಪರ್ಧೆಯ ಮುಖ್ಯ ಉದ್ದೇಶ ಕಂಪ್ಯೂಟರ್ ಭದ್ರತಾ ವ್ಯವಸ್ಥೆಯ ಹ್ಯಾಕಿಂಗ್ ಕ್ಷೇತ್ರವು,ಮುಂದಿನ ದಿನಗಳಲ್ಲಿ ಎಷ್ಟು ಉದ್ಯೋಗಾವಕಾಶಗಳನ್ನು ಒದಗಿಸಲಿದೆ,ಅದು ಎಷ್ಟು ಸವಾಲಿನ ಕೆಲಸ ಮತ್ತು ಅದರ ಅಪಾರ ಸಾಧ್ಯತೆಗಳ ಕಡೆಗೆ ಮಕ್ಕಳ ಗಮನ ಸೆಳೆಯುವುದಾಗಿದೆ.ಈಗಲೇ ಕಂಪ್ಯೂಟರ್ ಜಾಲಗಳು ದಾಳಿಕೋರರ ದಾಳಿಯಿಂದ ಕಂಗೆಟ್ಟು ಹೋಗುವುದಿದೆ.ದಿನಗಳದೆಂತೆಲ್ಲಾ ಇದು ವಿಪರೀತಕ್ಕೆ ಮುಟ್ಟಲಿದೆ.ಈಗಿನಿಂದಲೇ ಇದನ್ನೆಲ್ಲಾ ಎದುರಿಸುವ ಸಾಮರ್ಥ್ಯವಿರುವ ಪಡೆಗಳನ್ನು ರೂಪಿಸಲು ನಡೆಯುತ್ತಿರುವ ತಯಾರಿಯ ಭಾಗವಿದಾಗಿದೆ.
ಇಂಟರ್ನೆಟ್‌ನಲ್ಲಿ ಅಂಕಣ ಬರಹಗಳು: http://ashok567.blogspot.comನಲ್ಲಿ ಲಭ್ಯ.
UDAYAVANI
*ಅಶೋಕ್‌ಕುಮಾರ್ ಎ