ನಿನ್ನ ಮನಸ್ಸೇ ನಿನಗೆ ಶತ್ರು

ನಿನ್ನ ಮನಸ್ಸೇ ನಿನಗೆ ಶತ್ರು

ಒಬ್ಬ ಭಕ್ತನು ದೇವರನ್ನು ಕುರಿತು ಬಹಳ ಕಾಲ ತಪಸ್ಸು ಮಾಡುತ್ತಿದ್ದ. ಕಡೆಗೊಂದು ದಿನ ಭಗವಂತನು ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ. ಭಗವಂತನ ಕೈಯಲ್ಲಿ ಗದೆ ಕೂಡಾ ಇತ್ತು. ನಿನಗೇನು ವರ ಬೇಕು? ಎಂದು ಭಗವಂತನು ಕೇಳಿದ ಕೂಡಲೇ ಆ ಭಕ್ತನು, "ಭಗವಂತಾ! ನನ್ನ ಅಭಿವೃದ್ಧಿಗೆ ಅಡ್ಡವಾಗಿರುವ ಶಕ್ತಿಗಳನ್ನೆಲ್ಲಾ ನಿನ್ನ ಗದೆಯ ಮೂಲಕ ನೀನು ಚಚ್ಚಿ ಹಾಕಬೇಕು. ಇದೇ ನನ್ನ ಅಭಿಲಾಷೆ!" ಎಂದು ಬೇಡಿಕೊಂಡ.

ಭಗವಂತನು ಕಿರುನಗೆ ನಕ್ಕು ಹಾಗೇ ಆಗಲಿ ಎಂದು ಹೇಳಿ ಕೂಡಲೇ ಮಾಯವಾದನು. ಸ್ವಲ್ಪ ಸಮಯದ ನಂತರ ಭಗವಂತನ ಗದೆ ವೇಗವಾಗಿ ತೂರಿ ಬಂತು. ಅದು ವರವನ್ನು ಕೋರಿಕೊಂಡ ಭಕ್ತನ ಮೇಲೆ ದಾಳಿ ಮಾಡಿ ಅವನನ್ನು ಸಿಕ್ಕ ಸಿಕ್ಕಲ್ಲಿ ಚಚ್ಚತೊಡಗಿತು.

ಭಕ್ತನು ನೋವಿನ ಬಾಧೆಯಿಂದ ಹಾಗೇ ನೆಲಕ್ಕೆ ಉರುಳಿ ಬಿದ್ದ. ಇದೇನಿದು ನಾನು ವರವನ್ನು ಬೇಡಿಕೊಂಡದ್ದೇ ತಪ್ಪಾಗಿ ಹೋಯಿತಲ್ಲ ಎಂದು ಗಟ್ಟಿಯಾಗಿ ಅಳತೊಡಗಿದನು. "ನಾನು ನನ್ನ ಅಭಿವೃದ್ಧಿಗೆ ಅಡ್ಡವಾಗಿರುವ ನನ್ನ ಶತ್ರುಗಳನ್ನು ಚಚ್ಚಿ ಹಾಕು ಎಂದು ಬೇಡಿಕೊಂಡರೆ, ನೀನು ಮರೆಗುಳಿತನದಿಂದ ನಿನ್ನ ಗದೆಯನ್ನು ನನ್ನ ಮೇಲೆಯೇ ಪ್ರಯೋಗಿಸುತ್ತೀಯಾ?" ಎಂದು ಭಗವಂತನನ್ನು ಶಪಿಸತೊಡಗಿದ . 

ಭಗವಂತನು ಪುನಃ ಪ್ರತ್ಯಕ್ಷನಾದನು. ಭಕ್ತನನ್ನು ನೋಡಿ ಹೀಗೆ ಹೇಳಿದ, "ಭಕ್ತಾ! ನೀನು ಕೋರಿಕೊಂಡಂತೆಯೇ ನಾನು ನನ್ನ ಗದೆಯನ್ನು ಪ್ರಯೋಗಿಸಿದೆ. ನಾನು ಮರೆಗುಳಿತನದಿಂದಾಗಲಿ ಅಥವಾ ಗುರಿತಪ್ಪಿ ಹಾಗೆ ಮಾಡಲಿಲ್ಲ. ಬೇರೆಯವರನ್ನು ಹಾಳು ಮಾಡಬೇಕು. ಅವರನ್ನು ನೆಲಕ್ಕುರುಳಿಸಬೇಕು. ಅವರನ್ನು ನಾಶಮಾಡಬೇಕು ಎಂದು ಆಲೋಚಿಸುವ ನಿನ್ನ ಮನಸ್ಸೇ ನಿನಗೆ ಶತ್ರು....! ನಿನ್ನ ಅಭಿವೃದ್ಧಿಗೆ ಅಡ್ಡವಾಗಿರುವುದು ನೀನೇ! ಅದಕ್ಕೇ ನನ್ನ ಆಯುಧವು ನಿನ್ನ ಮೇಲೆಯೇ ದಾಳಿಗಿಳಿಯಿತು!" ಎಂದು ವಿವರಿಸಿದ.

ಎಲ್ಲರೂ ತಿಳಿದುಕೊಳ್ಳಬೇಕಾದ ಹಿತನುಡಿ ಇದು. ನಮ್ಮ ಮನಸ್ಸನ್ನು ನಾವು ಹಿಡಿತದಲ್ಲಿ ಇಟ್ಟುಕೊಂಡರೆ ಖಂಡಿತಕ್ಕೂ ನಮ್ಮ ಏಳಿಗೆ ಸಾಧ್ಯ. ಬೇರೆಯವರನ್ನು ತುಳಿಯ ಬೇಕೆಂಬ ಚಪಲ ಬೇಡ. ಇದರಿಂದ ನಮ್ಮ ಸಮಯ, ನೆಮ್ಮದಿ, ಹಣದ ನಾಶವೇ ಹೊರತು ನಮಗೆ ಸಿಗುವುದೇನಿಲ್ಲ. ಆದುದರಿಂದ ಉಳಿದವರ ಬಗ್ಗೆ ಕೆಟ್ಟ ಯೋಚನೆ ಬೇಡ. ಒಂದು ಪಕ್ಷ ನಮಗೆ ಅವರಿಂದ ಅಪಕಾರವೇ ಆಗಿದ್ದರೂ, ನಾನು ಶತ್ರುತ್ವ ಸಾಧಿಸುವುದು ಬೇಕಾಗಿಲ್ಲ. ಅವರ ಕೆಟ್ಟ ಕೆಲಸಗಳಿಗೆ ಅವರು ಪರಿತಪಿಸುವ ಕಾಲ ಬಂದೇ ಬರುತ್ತದೆ. ಆದುದರಿಂದ ನಾವು ಉಳಿದವರ ಹಿತವನ್ನೇ ಆಶಿಸೋಣ, ಹಾಗೆಯೇ ಬದುಕೋಣ.

(ತೆಲುಗು ಮೂಲ: ಪುಟ್ಟ ಹಣತೆಗಳು ಎನ್ನುವ ಕಥಾಸಂಗ್ರಹಗಳ ಪುಸ್ತಕದಿಂದ ಆಯ್ದ ಕಥೆ)