ನಿನ್ನ ಹೆಸರು

ನಿನ್ನ ಹೆಸರು

ಬರಹ

ರಚನೆ: ಕೆ.ಎಸ್. ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ

ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು |ಪ|

ಗುಡಿಯ ಗೋಪುರಗಳಲ್ಲಿ ಮೆರೆವ ದೀಪಗಳಲ್ಲಿ
ಬೆಳಕಾಗಿ ನಿನ್ನ ಹೆಸರು |೧|

ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ
ಕಣ್ಣಲ್ಲಿ ನಿನ್ನ ಹೆಸರು |೨|

ತಾಯ ಮೊಲೆಯಲ್ಲಿ ಕರು ತುಟಿ ಇಟ್ಟು ಚೆಲ್ಲಿಸಿದ
ಹಾಲಲ್ಲಿ ನಿನ್ನ ಹೆಸರು |೩|

ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು |೪|

ಒಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ
ಉಯ್ಯಾಲೆ ನಿನ್ನ ಹೆಸರು |೫|

ಮರೆತಾಗ ತುಟಿಗೆ ಬಾರದೆ, ಮೊಡ ಮರೆಯೊಳಗೆ
ಬೆಳದಿಂಗಳು ನಿನ್ನ ಹೆಸರು |೬|

ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ
ಹೂಬಾಣ ನಿನ್ನ ಹೆಸರು |೭|