ನಿನ್ನ ಹೆಸರೇನು?
ಕವನ
ನಿನ್ನ ಹೆಸರೇನು?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ನಿನ್ನ ಹೆಸರೇನು ಚೆಲುವೆ?
ಉತ್ತರಿಸ ಬೇಡ; ನಾನೇ ಹೇಳುವೆ!
ಜಕಣನು ನಿನ್ನನು ಅಮೃತ ಶಿಲೆಯಲ್ಲಿ
ಕಣ್ಣಲ್ಲಿ ಕಣ್ಣಿಟ್ಟು ಕಡೆದಿರಲೇ ಬೇಕು
ನಿಜ ಹೇಳು; ನಿನ್ನ ಹೆಸರು ಶಿಲ್ಪ ಅಲ್ಲವೇ?
ನೀ ನುಡಿದರೆ, ಸರಸತಿಯ ಬೆರಳು ಮಿಡಿದಂತೆ
ಝೇಂಕಾರ ನನ್ನ ಗುಂಡಿಗೆಗೆ ಹಾಡು
ಸರಿಯೇ ನಿನ್ನ ಸವಿ ಹೆಸರು ವೀಣಾ?
ಚಂದಿರೆಯ ನಗೆಗಿಂತ ಸುಂದರವು ತುಟಿ ಬಿರಿದರೆ
ಇಂದಿರನ ಸಖಿಗಿಂತ ಮೊಗ ಚೆಂದ ಅರಳಿದ ಕೆಂದಾವರೆ
ಕೊಮಲೆಯೇ! ನಿನ್ನ ನಾಮವು ಇರಬೇಕಲ್ಲವೇ ಕಮಲ?
ನಿನ್ನ ನೆನೆದಾಗಲೆಲ್ಲ ಅಲೆ ಅಲೆಯಾಗಿ ಬರುವುದು
ಮನಸಿನಾಳದಿಂದ ಹೊರಡುವುದು ಧಾರೆ
ನೀನೆ ಅಲ್ಲವೇನೆ ಭವ್ಯ ಕಾವ್ಯ ಸುಂದರಿ?
ಕೋರೈಸುವ ಕಣ್ಣು; ಬೆಳದಿಂಗಳು ಚೆಲ್ಲುವಳು
ಕತ್ತಲೆಯಿದ್ದರೇನು ಹೊರಗೂ, ಒಳಗೂ
ಶೋಭಿಸುವಳು ನಿನ್ನ ಕರೆಯಲೇ ಜ್ಯೋತಿ?
ದುಂಬಿ ಸೈನ್ಯವೇ ಸೇರಿ, ಎಂಜಲು ಸುರಿದು
ರೂಪಸಿಯ ಸಕ್ಕರೆಯ ಗೊಂಬೆಯನೇ ಮೀರಿಸಿ
ಮೈಯೆಲ್ಲಾ ಸಿಹಿಯ ತುಂಬಿರುವ ನೀನು ಮಧು ಅಲ್ಲವೇ
ಬಡವ ನಾನು, ತಿರುಕ ವೃತ್ತಿಗೆ ನಾಚುವನಲ್ಲ
ಕೈನೀಡಿ ಬೇಡುವೆ ನೀನಿನ್ನದ್ದರೆ ಲಕುಮಿಯೇ ಇದ್ದಂತೆ
ಸುವರ್ಣ ದೇಹಿ ಆದವಳು ನೀನಿರಬೇಕಲ್ಲವೇ ಬಂಗಾರಿ?
ನಡೆದರೂ, ಕುಣಿದರೂ, ಬಳುಕುವಳು ಲತೆಯಂತೆ
ನರ್ತಿಸಿದರೆ ಆಗಸದಲ್ಲಿ ತೇಲುವ ರಂಭೆ, ಅಪ್ಸರೆಯರಂತೆ
ಶಾಂತಲ ಕೂತು ದಿಟ್ಟಿಸಿ ಅಚ್ಚರಿಸೆ ಇರಬೇಕು ನೀ ಮೇನಕಾ!
ನಾನೇಕೆ ತತ್ತರಿಸಿ, ಉತ್ತರವೇ ಅರಿಯದವನಂತೆ
ಅಸಂಬಧ್ಧ ಪ್ರಲಾಪ ಭೂಪನಂತೆ ವಟವಟ ಗುಟ್ಟುತಿಹೆ
ಊಹಿಸು; ಉತ್ತರಿಸು, ಬಿತ್ತರಿಸು ನೀನ್ಯಾರೆಂದು!
ನನ್ನ ಮನದಲ್ಲಿ ಕುಣಿಯುತಿಹರು ಕಣೆ
ಸುಮ್ಮ ಸುಮ್ಮನೆಯೇ ಅಷ್ಟೊತ್ತರವ ಉಚ್ಚರಿಸುವ
ಬೊಮ್ಮ, ತಿಮ್ಮನಂತೂ ನಾನಲ್ಲ ತಿಳಿ ಬೇಗ
ನಿನ್ನೆಯೋ, ಮೊನ್ನೆಯೋ, ಹಳೆಯ ದಿನಗಳ
ಒಲವಿನಾ ಕಲರವವೋ; ಕಳೆದದ್ದು ಅಳಿಸಿಯಾಯ್ತು
ನಿನ್ನ ಮೀರಿಸಿದವರಿಲ್ಲ ನಿನ್ನ ನಾಮ "ಅನಾಮಿಕ" ಅಲ್ಲವೇ?
Comments
ಉ: ನಿನ್ನ ಹೆಸರೇನು?
ಉ: ನಿನ್ನ ಹೆಸರೇನು?
ಉ: ನಿನ್ನ ಹೆಸರೇನು?
ಉ: ನಿನ್ನ ಹೆಸರೇನು?
ಉ: ನಿನ್ನ ಹೆಸರೇನು?