ನಿಮಗೆ ಒಂದು ಕಥೆ ಹೇಳ್ಲಾ ಫ್ರೆಂಡ್ಸ್…!

ನಿಮಗೆ ಒಂದು ಕಥೆ ಹೇಳ್ಲಾ ಫ್ರೆಂಡ್ಸ್…!

ಎಣ್ಣೆ ಏಟಿನಲ್ಲಿ… ಭ್ರಷ್ಟರು ಮತ್ತು ದುಷ್ಟರ ನಡುವೆ ಒಂದು ಆಯ್ಕೆ ನಮ್ಮ ಮುಂದಿದೆ. ತಲೆತಲಾಂತರದಿಂದ ಭ್ರಷ್ಟಾಚಾರ ಮಾಡಿಕೊಂಡೇ ಅಧಿಕಾರ ಹಿಡಿಯುತ್ತಿರುವ ಒಂದು ಪಕ್ಷ, ಆ ಭ್ರಷ್ಟಾಚಾರಕ್ಕೆ ನಾವು ಕಡಿವಾಣ ಹಾಕುತ್ತೇವೆ ಎಂದು ದುಷ್ಟಾಚಾರದ ಮೂಲಕ ಅಧಿಕಾರ ಏರುತ್ತಿರುವ ಇನ್ನೊಂದು ಪಕ್ಷ. ಪರ್ಯಾಯ ಒದಗಿಸಲಾಗದೆ ಬರಡಾಗುತ್ತಿರುವ ಚಿಂತಕರ ಚಿಂತನೆಯ ಹೊಸ ಪಕ್ಷಗಳು.

ಅಭ್ಯರ್ಥಿಗಳ ಆಯ್ಕೆಯ ಪಟ್ಟಿ ಸಿದ್ದ ಮಾಡಲು ಹೈಕಮಾಂಡ್ ಗಳು ಪಡುತ್ತಿರುವ ಶ್ರಮ, ಅಭ್ಯರ್ಥಿಗಳಾಗ ಬಯಸುವವರ ಪಡಿಪಾಟಲು, ಟಿಕೆಟ್ ಸಿಗದವರ ಬಂಡಾಯಗಳು, ಮಾಧ್ಯಮಗಳ ಅರಚಾಟ, ಬೇಸಿಗೆಯ ಬೇಗೆಯಲ್ಲಿ ಬೆವರು ಸುರಿಸುತ್ತಿರುವ ಪಕ್ಷಗಳ ಕಾರ್ಯಕರ್ತರು, ಹಣದ ಕಂತೆಗಳನ್ನೇ ದಾಳಿ ಮಾಡಿ ವಶಪಡಿಸಿಕೊಳ್ಳುತ್ತಿರುವ ಪೋಲೀಸರು, ಕುತೂಹಲದಿಂದ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತಿರುವ ಜನರು, ಇದೆಲ್ಲವೂ ಭ್ರಷ್ಟರ ಅಥವಾ ದುಷ್ಟರಲ್ಲಿ ಯಾರ ಆಯ್ಕೆ ಎಂಬುದಕ್ಕೆ ಮಾತ್ರ ಸೀಮಿತ.

ಇದನ್ನು ನೋಡಿ ಬೇಸರ ತಾಳಲಾಗದೆ ನಾನು ಮದ್ಯಪಾನ ಮಾಡಿದಾಗ,

ಸಾರಿ ಫ್ರೆಂಡ್ಸ್, ನಾಲಿಗೆ ಸ್ವಲ್ಪ ತೊ...ತೊ... ತೊ......ತೊದಲುತ್ತಿದೆ..

ಯಾಕೋ ತುಂಬಾ ನೋವಾಗಿ ಸ್ವಲ್ಪ ಜಾ.....ಸ್ತಿ ಎಣ್ಣೆ ತಗೊಂಡಿದ್ದೀನಿ.....ಸಾರಿ ಫ್ರೆಂಡ್ಸ್ ಸಾರಿ ಸಾರಿ....

ನಿಮಗೆ ಒಂದು ಕಥೆ  ಹೇಳ್ಲಾ ಫ್ರೆಂಡ್ಸ್, ತೋಳಗಳು ಮತ್ತು ಕುರಿಗಳ ಕಥೆ ಫ್ರೆಂಡ್ಸ್.... ಇದೊಂದು ವಿಚಿತ್ರ ಫ್ರೆಂಡ್ಸ್,

ನೆನಪಿಸಿಕೊಂಡ್ರೆ ಅಳು ಬರುತ್ತೆ ಅಳು ತುಂಬಾ ಅಳು...

ಬಡ ರೈತ್ರು, ಅಂಗನವಾಡಿ ಕಾರ್ಯಕರತ್ರು, ಆಶಾ ಕಾರ್ಯಕರತ್ರು, ದಿನಗೂಲಿ ನೌಕರ್ರು, ಬೀದಿ ಬದಿಯ ಸಣ್ಣ ವ್ಯಾಪಾರಿಗ್ಲು, ಬಾಡಿಗೆ ವಾಹನ ಚಾಲಕ್ರು, ಸಣ್ಣ ಸಣ್ಣ ‌ವೃತ್ತಿ ನಿರತ್ರ ಗೋಳು ಪಾಪ ಕೇಳೋಕಾಗಲ್ಲ ಫ್ರೆಂಡ್ಸ್, ನನ್ಗೆ ದಿನಾ ಅದೇ ಯೋಚ್ನೆ ಫ್ರೆಂಡ್ಸ್… ನಮ್ದೇನೋ ಬಿಡಿ ಫ್ರೆಂಡ್ಸ್ ಕಿತ್ತೋದ್ ಲೈಪು, ಪಾಪ‌ ಆ ಮುಗ್ಧ ಜನರ ಲೈಪ್ ಹೆಂಗೆ ಬಾಸ್.. ಪಾಪ ಹೊಟ್ಟೆ ಪಾಡಿಗಾಗಿ ಎಷ್ಟೊಂದು ಕಷ್ಟ ಪಡ್ತಾರೆ ಗೊತ್ತಾ ಫ್ರೆಂಡ್ಸ್. ಮಕ್ಕಳನ್ನ ಸಾಕಲಿಕ್ಕೆ, ಮನೆ ನಡೆಸಲಿಕ್ಕೆ ತುಂಬಾ ಕಷ್ಟ ಪಡ್ತಾರೆ ಫ್ರೆಂಡ್ಸ್....

ಸರ್ಕಾರ ಏನೇನುಕ್ಕೋ ಎಷ್ಟೊಂದು ದುಡ್ಡು ಖರ್ಚು ಮಾಡುತ್ತೆ. ಪಾಪ ಇವರಿಗೆ ಕೊಡೋಕೆ ಮಾತ್ರ ಆಗಲ್ಲ.

ಆ ನೋವು ನನ್ನನ್ನ ತುಂಬಾ ಕಾಡುತ್ತೆ ಫ್ರೆಂಡ್ಸ್. ಅದನ್ನ ಮರೆಯೋಕೆ ಇವತ್ತು ಸ್ವಲ್ಪ ಜಾ.....ಸ್ತಿ.... ಓ, ಸಾರಿ ಫ್ರೆಂಡ್ಸ್, ಕಥೆ ಹೇಳ್ತೀನಿ ಅಂತ ಏನೇನೋ‌ ಪುರಾಣ ಹೇಳ್ತಾವ್ನೆ ಅಂತ ಅಂದ್ಕೋಬೇಡಿ ಸಾರಿ ಸಾರಿ.....‌

ಜನರು....ಆಡಳಿತ....ತೆರಿಗೆಗಳು...... ಚಳವಳಿಗಳು......ಪ್ರತಿಭಟನೆಗಳು.....

ಇದೇ ಇದೇ ಇದೇ ಜನ ನಮ್ಮ ಪ್ರತಿನಿಧಿಗಳಾಗಿ ಆಡಳಿತ ಮಾಡಲು ಅದೇ ಅದೇ ಅದೇ ಶಾಸಕರನ್ನು ಆಯ್ಕೆ ಮಾಡ್ತಾರೆ. ಇದೇ ಇದೇ ಇದೇ ಜನ ಅದೇ ಅದೇ ಅದೇ ಶಾಸಕರ ಆಡಳಿತದ ವಿರುದ್ಧ ಚಳವಳಿ ಮಾಡ್ತಾರೆ, ಬೈತಾರೆ. ಅದೇ ಅದೇ ಅದೇ ಶಾಸಕರು, ಮಂತ್ರಿಗಳು, ಚುನಾವಣೆ ಸಮಯದಲ್ಲಿ  ಇದೇ ಇದೇ ಇದೇ  ಜನರ ಮನೆಬಾಗಿಲಿಗೆ ಬಂದು ಕೈಕಾಲು ಹಿಡಿದು ಮತ ಭಿಕ್ಷೆ ಕೇಳ್ತಾರೆ. ಅದೇ ಅದೇ ಅದೇ ನಾಯಕರು ಅಧಿಕಾರ ಸಿಕ್ಕ ಮೇಲೆ ಇದೇ ಇದೇ ಇದೇ ಜನರ ಬೆನ್ನು, ಹೃದಯ, ನಂಬಿಕೆಗೆ ಚೂರಿ ಹಾಕ್ತಾರೆ. ಅದೇ ಅದೇ ಅದೇ ನಾಯಕರು ಮತ್ತೆ ಮತ್ತೆ ಮತ್ತೆ ಚುನಾವಣೆಗೆ ಸ್ಪರ್ಧಿಸ್ತಾರೆ. ಇದೇ ಇದೇ ಇದೇ ಜನರಿಗೆ ಮತ್ತೆ ಮತ್ತೆ ಮತ್ತೆ ಅವೇ ಅವೇ ಅವೇ ಭರವಸೆಗಳನ್ನು ಕೊಡ್ತಾರೆ. ಇದೇ ಇದೇ ಇದೇ ಜನ ಅದೇ ಅದೇ ಅದೇ ನಾಯಕರನ್ನು ಮತ್ತೆ ಮತ್ತೆ ಮತ್ತೆ ಚುನಾಯಿಸ್ತಾರೆ.

ಅದೇ ಅದೇ ಅದೇ ಆಡಳಿತ,

ಇದೇ ಇದೇ ಇದೇ ಪ್ರತಿಭಟನೆ.

ಅದೇ ಅದೇ ಅದೇ ಶಾಸಕರು

ಇದೇ ಇದೇ ಇದೇ ಜನರು.

ತಲೆ ಕೆಟ್ಟೋಗುತ್ತೆ ಫ್ರೆಂಡ್ಸ್.

ಕುರಿಗಳು ಸಾರ್, ಅಲ್ಲ ಅಲ್ಲ ಅಲ್ಲ,

ಕೋತಿಗಳು ಸಾರ್, ಅಲ್ಲ ಅಲ್ಲ,ಅಲ್ಲ,

ನರಿಗಳು ಸಾರ್, ಅಲ್ಲ ಅಲ್ಲ ಅಲ್ಲ

ಸಾರಿ ಸಾರಿ ಸಾರಿ ಅನಿಮಲ್ಸ್,

ನಾವು ಮನುಷ್ಯರು ಸಾರ್ ನಾವು ಮನುಷ್ಯರು ಸಾರ್ ನಾವು ಅನಾಗರಿಕ ಮನುಷ್ಯರು ಸಾರ್ ಪ್ರಾಣಿಗಳಷ್ಟು ನಾಗರಿಕರಲ್ಲ ಸಾರ್..

ತೋಳ ಯಾರು ಕುರಿ ಯಾರು ಗೆಸ್ ಮಾಡಿ ಫ್ರೆಂಡ್ಸ್..

ಒಂದು ಮನೆ,

ಒಂದು ಊರು,

ಒಂದು ರಾಜ್ಯ,

ಒಂದು ದೇಶ,

ಹಾಳಾಗೋದಕ್ಕೆ ಇಷ್ಟು ಸಾಕಲ್ವ ಬಾಸ್....

ಇನ್ನೊಂದು ವಿಚಿತ್ರ ಗೊತ್ತಾ ಫ್ರೆಂಡ್ಸ್ ನಿಮಗೆ.......

ಸರ್ಕಾರ ಅದೇ ಅದೇ ಅದೇ ಮಾಡೋದಾದ್ರೆ,

ವಿರೋಧ ಪಕ್ಷಗಳು ಇದೇ ಇದೇ ಇದೇ ಮಾಡೋದಾದ್ರೆ  ವಿಧಾನಮಂಡಲದ ಚರ್ಚೆ ಯಾವ್ ನನ್ಮಗನಿಗೆ ಬೇಕು ಫ್ರೆಂಡ್ಸ್. ಅದಕ್ಕೆ ಅರ್ಥ ಇದೆಯಾ? ಅದಕ್ಕಾಗಿ ಖರ್ಚು ಮಾಡೋ ಸಾಲ ಮಾಡಿ ಬಡ್ಡಿಗೆ ತಂದಿರುವ ಕೋಟ್ಯಾಂತರ ಹಣ ವೇಸ್ಟ್ ಅಲ್ವಾ ? ಅಷ್ಟು‌ ಗೊತ್ತಾಗಲ್ವ ಆ ಮಂಕರಿಗೆ..! ಸಾರಿ ಫ್ರೆಂಡ್ಸ್, ಸಾರಿ, ಸ್ವಲ್ಪ ಜಾಸ್ತಿ ತಗೊಂಡಿದ್ದೀನಿ… ನಾಲಿಗೆ ತೊ.....ತೊ.....ತೊ....ತೊದಲುತ್ತಿದೆ… ಕುರಿಗಳು ಅಲ್ಲ ಅಲ್ಲ ಅಲ್ಲ ಸಾರಿ ಸಾರಿ ಸಾರಿ ಮತದಾರರು ಯೋಚಿಸ್ಬೇಕು..... ಇನ್ನೊಂದು ವಿಷ್ಯಾ ಗೊತ್ತಾ ಫ್ರೆಂಡ್ಸ್,

ನೀವ್ ಎಷ್ಟೇ ಎಷ್ಟೇ ಎಷ್ಟೇ ಗಲಾಟೆ, ಬಂದ್ ಮಾಡಿದ್ರು ಸರ್ಕಾರ ನಿಮ್ ಮಾತು ಕೇಳಲ್ಲ ಫ್ರೆಂಡ್ಸ್. ಅದ್ಕೆ ಅಧಿಕಾರ ಮುಖ್ಯ. ಎಲೆಕ್ಷನ್ ನಲ್ಲಿ ಹೆಂಗೆ ಗೆಲ್ಬೇಕು ಅಂತ ಗೊತ್ತು ಬಾಸ್....

ನಮ್ ಜನ ಮಬ್ ನನ್ಮಕ್ಳು ಬಾಸ್,

ಸಾರಿ ಸಾರಿ ಸಾರಿ ಮುಗ್ದರು ಬಾಸ್,

ಅವರಿಗೆ ಏನೂ ಗೊತ್ತಾಗಲ್ಲ,

ಯೋಚನೇನೂ ಮಾಡಲ್ಲ,

ಪಾಪ ಜಾತಿ ಧರ್ಮ ದುಡ್ಡು ಹೆಂಡ 

ಅ..ಹ...ಹ...ಹಾ.. ಸೀರೆ ಪಂಚೆ ಕೊಟ್ರೆ ಸಾಕು,

ಓಟ್ ಹಾಕ್ಬುಡ್ತಾರೆ ಫ್ರೆಂಡ್ಸ್.......

ಈಗ್ ನೋಡಿದ್ರೇ ಇದೇ ಇದೇ ಇದೇ ಜನ ಅದೇ ಅದೇ ಅದೇ ಆಡಳಿತದ ವಿರುದ್ಧ ಬಂದ್ ಮಾಡ್ತಾರೆ ಬಾಸ್… ಹೊಟ್ಟೆ ಉರಿಯುತ್ತೆ ಬಾಸ್, ಜನ ಎಷ್ಟೊಂದು ಕಷ್ಟ ಪಡ್ತಾರೆ ಬಾಸ್, ಈ ಶಾಸಕರು ಮಾತ್ರ ಕೋಟಿಗಟ್ಟಲೆ ಹಣ ಮಾಡ್ತಾರೆ ಬಾಸ್.....

ತುಂಬಾ ನೋವಾಗುತ್ತೆ ಫ್ರೆಂಡ್ಸ್,

ಇದೆಲ್ಲಾ ಜ್ಞಾಪಿಸಿಕೊಂಡ್ರೆ,

ಬೇಗ ಸ್ವಲ್ಪ ಬುದ್ದಿ ಕಲೀರಿ ಫ್ರೆಂಡ್ಸ್,

ಒಳೊಳ್ಳೆ ಜನ ರಾಜಕೀಯಕ್ಕೆ ಬನ್ನಿ ಫ್ರೆಂಡ್ಸ್, ಏನಾದ್ರು ಸ್ವಲ್ಪ ಒಳ್ಳೇದು ಮಾಡೋಣ. ಸಾರಿ ಫ್ರೆಂಡ್ಸ್, ತುಂಬಾ ತಲೆ ತಿಂದ್ಬುಟ್ಟೆ, ನಂಗೂ ಅಳು ಬರ್ತಾ ಇದೆ. ಇನ್ನೊಂದು ಪೆಗ್ ಹಾಕ್ ಬಿಡ್ತೀನಿ, ಎಲ್ಲಾ ಮರೆತು ಹೋಗುತ್ತೆ. ನಮ್ಮ  ಹಿರಿಯರು ಹೇಳವ್ರೆ," ಸರ್ವ ರೋಗಕ್ಕೂ ಸಾರಾಯಿ ಮದ್ದು " ಮತ್ತೆ ನಾಳೆ ಸಿಕ್ತೀನಿ.

ಐ ಯಾಮ್ ವೆರಿ ಸಾರಿ ಫ್ರೆಂಡ್ಸ್. ನೀವು ತಲೆ ಕೆಡಿಸ್ಕೋ ಬೇಡಿ. ಐಪಿಎಲ್ ಮ್ಯಾಚ್ ನೋಡ್ಕಂಡು ಆರಾಮಾಗಿರಿ. ಜನ, ಸಮಾಜ, ದೇಶ ಹಾಳಾಗೋದ್ರು ನಮಗೇನು.... ನೀವು ಆರಾಮಾಗಿರಿ..!

-ವಿವೇಕಾನಂದ ಎಚ್ ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ