ನಿಮಗೆ ಗೊತ್ತೇ? ವಿಚಿತ್ರ ಸಾಕು ಪ್ರಾಣಿಗಳು (ಭಾಗ 2)

ನಿಮಗೆ ಗೊತ್ತೇ? ವಿಚಿತ್ರ ಸಾಕು ಪ್ರಾಣಿಗಳು (ಭಾಗ 2)

ಪಿಗ್ಮಿ ಆಡು

ಆಡುಗಳು ನಮ್ಮಲ್ಲಿ ಬಹಳ ಕಾಲದಿಂದಲೂ ಸಾಕು ಪ್ರಾಣಿಗಳಾಗಿವೆ ಬಿಡಿ. ಆದರೆ ಇದು ಕುಳ್ಳ ಆಡು. ಇದನ್ನು ಸಾಕಲು ಖರ್ಚೇನೂ ಬರುವುದಿಲ್ಲ. ಇದು ಸಸ್ಯಹಾರಿಯೇ. ಇದನ್ನು ಸಾಕಲು 8 ಅಡಿ ಉದ್ದ 10 ಅಡಿ ಅಗಲ ಮತ್ತು ಸುಮಾರು ನಾಲ್ಕು ಅಡಿ ಎತ್ತರದ ಬೇಲಿಯನ್ನು ನಿರ್ಮಿಸಬೇಕಾಗುತ್ತದೆ. ಇದು ತನ್ನ ವಿಶಿಷ್ಟ ಕಂಠದಿಂದ ಪ್ರತಿಕ್ರಿಯಿಸಬಲ್ಲದು.

ಡೊಳ್ಳುಹೊಟ್ಟೆಯ ಹಂದಿ

ಇವು ನೀವು ದಿನನಿತ್ಯ ನೋಡುವಂತಹ ದೈತ್ಯ ಹಂದಿಗಳಲ್ಲಿ. ಇವು ವಾಸನೆಯಿಲ್ಲದ. ಸುಂದರವಾಗಿ ಕಾಣುವ, ಅತ್ಯಂತ ಸ್ನೇಹಪರ ಸಣ್ಣ ಜೀವಿ. ಇವುಗಳನ್ನು ಪಳಗಿಸುವುದು ತುಂಬಾ ಸುಲಭ. ಆದರೆ ಒಂದು  ಎಚ್ಚರಿಕೆ ಇದೆ. ಅದೇನೆಂದರೆ, ನೀವು ಹೆಚ್ಚು ಆಹಾರ ನೀಡಿದರೆ ಇದು ಡೊಳ್ಳುಹೊಟ್ಟೆಯ ಹಂದಿಯೇ ಆಗಿಬಿಡುತ್ತದೆ. ಹೆಚ್ಚು ಸೂಕ್ಷ್ಮಗ್ರಾಹಿಗಳಾದ ಈ ಹಂದಿಗಳು ಸಣ್ಣ ಮಕ್ಕಳಿರುವ ಮನೆಯಲ್ಲಿ ಮಾತ್ರ ಸಾಕಲು ಯೋಗ್ಯವಲ್ಲ!

ಶುಗರ್ ಗ್ಲೈಡರ್

ಇದೊಂದು ಅಮೆರಿಕದ ಜನಪ್ರಿಯ ಹಾರಾಡುವ ಸಾಕುಪ್ರಾಣಿ. ಆಸ್ಟ್ರೇಲಿಯಾ ಮೂಲದ ಈ ಪ್ರಾಣಿಗೆ ಮುಂಗಾಲಿನಿಂದ  ಹಿಂಗಾಲಿನವರೆಗೆ ತೆಳುವಾದ ಪದರ ಹರಡಿಕೊಂಡಿದೆ. ಇದು ಹಾರುವ ಅಳಿಲಿನಂತೆ ಸುಲಭವಾಗಿ ಮರದಿಂದ ಮರಕ್ಕೆ ಹಾರಾಡಬಲ್ಲದು. ಪೂರ್ಣ ಬೆಳೆದ ಈ ಪ್ರಾಣಿ ಕೇವಲ 85 ಗ್ರಾಂ ಭಾರವಿದ್ದು, ಸುಮಾರು 7 ಇಂಚು ಉದ್ದ ಇರಬಲ್ಲದು. ಇವು ಅತ್ಯಂತ ಸ್ನೇಹಜೀವಿಗಳಾಗಿದ್ದು ಗುಂಪಾಗಿ ಇರಲು ಬಯಸುತ್ತದೆ. ಇವು ಕೀಟಗಳನ್ನು ತಿನ್ನುವ ಪರಿಸರ ಪ್ರೇಮಿಯೂ ಹೌದು. ಇವುಗಳಿಗೆ ಚೂಪಾದ ಹಲ್ಲುಗಳಿರುವುದರಿಂದ ಚಿಕ್ಕ ಮಕ್ಕಳಿರುವ ಮನೆಯಲ್ಲಿ ಸಾಕಲು ಯೋಗ್ಯವಲ್ಲ.

ವಲ್ಲಾಬೈ (Wallaby)

ನೋಡಲು ಕಾಂಗರುವಿನಂತೆ ಕಾಡುವ ಈ ಪ್ರಾಣಿ ಆಸ್ಟ್ರೇಲಿಯಾ ಮೂಲದ್ದು. ನೋಡಲು ತುಂಬಾ ಮುದ್ದಾಗಿ ಕಾಣುವ ಈ ಪ್ರಾಣಿ ಉತ್ತಮ ಸಾಕುಪ್ರಾಣಿಯಾಗಬಲ್ಲದು. ಇವು ಸುಮಾರು ಮೂರು ಅಡಿ ಉದ್ದವಿದ್ದು, 24 ಕೆಜಿ ವರೆಗೂ ತೂಗಬಲ್ಲವು. ಇದು ಕುಣಿಯುತ್ತಾ ಹಾರುವ ನೋಟವೇ ಚಂದ! ಹಾಗೆಯೇ ಬಿಟ್ಟರೆ ತಪ್ಪಿಸಿಕೊಂಡು ಬಿಡುವ ಈ ಸಾಕುಪ್ರಾಣಿಗೆ ಬೇಲಿಯ ಬಂಧನವೇ ಹೆಚ್ಚು ಸೂಕ್ತ.

ಸ್ಕಂಕ್ (Skunk)

ಇಂಗ್ಲಿಷ್ ನಲ್ಲಿ ‘ಸ್ಕಂಕ್’ ಎಂದರೆ ಚಾಂಡಾಲ ಅಥವಾ ಪಾಪಿ ಎಂದು ಅರ್ಥ. ಆದರೆ ಖಂಡಿತ ಇದು ದುಷ್ಟ ಪ್ರಾಣಿಯಲ್ಲ ಬಿಡಿ. ಈ ಪ್ರಾಣಿಗಳನ್ನು 20ನೇ ಶತಮಾನದ ಪ್ರಾರಂಭದಿಂದಲೂ ಸಾಕುಪ್ರಾಣಿಗಳನ್ನಾಗಿ ಬಳಸುತ್ತಿದ್ದಾರೆ. ಇವುಗಳ ವಿಶೇಷವೆಂದರೆ ಇವು ವಾಸನೆಯನ್ನು ಹೊರಸೂಸುವ ಗ್ರಂಥಿಗಳನ್ನು ಹೊಂದಿದ್ದು, ಸಾಕುಪ್ರಾಣಿ ಎಂದು ಮಾಡಿಕೊಳ್ಳುವ ಮುನ್ನ ಈ ವಾಸನಾ ಗ್ರಂಥಿಗಳನ್ನು ತೆಗೆದು ಹಾಕಿಬಿಡಲಾಗುತ್ತದೆ. ನೆನಪಿಡಿ, ‘ಸ್ಕಂಕ್’ ಅತ್ಯಂತ ಬುದ್ಧಿವಂತ ಪ್ರಾಣಿ ಆಗಬಲ್ಲದು. ಆದರೆ ಇವುಗಳನ್ನು ಪಳಗಿಸಲು ಹೆಚ್ಚು ತಾಳ್ಮೆ ಬೇಕಾಗುತ್ತದೆ. ಆದರೆ ಅಮೆರಿಕ ಇದನ್ನು ಸಾಕು ಪ್ರಾಣಿಯನ್ನಾಗಿ ಬಹಿಷ್ಕರಿಸಿದೆ.

ಮಡಗಾಸ್ಕರ್ ನ ಜಿರಲೆ

ಜಿರಲೆ ಎಂದಾಕ್ಷಣ ಅಸಹ್ಯ ಪಟ್ಟುಕೊಂಡು ಮೂಗು ಮುರಿಯುವವರೇ ಬಹಳಷ್ಟು ಮಂದಿ. ಆದರೆ ಇದು ಒಂದು ಸಾಕುಪ್ರಾಣಿಯಾಗಬಲ್ಲದು ಎಂದರೆ ನೀವು ನಂಬುವಿರಾ? ಇದೊಂದು ‘ಹಿಸ್ಸ್' ಎಂದು ಸುಮಧುರ ಶಬ್ದಮಾಡುವ ಆದರೆ ಕಚ್ಚದಿರುವ ಪ್ರಾಣಿ. ಸಾಕಲು ಕತ್ತಲಿರುವ ಸಣ್ಣ ಪೆಟ್ಟಿಗೆಯಂತಹ ವ್ಯವಸ್ಥೆ ಸಾಕು. ಕಚ್ಚದಿರುವ ಈ ಜಿರಳೆಗಳು ಮಕ್ಕಳಿಗೆ ಮುದ್ದಿನ ಸಾಕುಪ್ರಾಣಿಯಾಗಬಲ್ಲದು. ಆದರೆ ನೆನಪಿಡಿ, ಕೆಲವು ರಾಷ್ಟ್ರಗಳು ಇದನ್ನು ಸಾಕಲು ಅನುಮತಿ ನೀಡಿಲ್ಲ

ಚಿತ್ರ ವಿವರ: ೧. ಪಿಗ್ಮಿ ಆಡು ೨. ಡೊಳ್ಳು ಹೊಟ್ಟೆಯ ಹಂದಿ ೩. ಶುಗರ್ ಗ್ರೈಡರ್ ೪. ವಲ್ಲಾಬೈ ೫. ಸ್ಕಂಕ್ ೬ ಮಡಗಾಸ್ಕರ್ ಜಿರಲೆ

-ಕೆ.ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಅಂತರ್ಜಾಲ ತಾಣಗಳು