ನಿಮಗೆ ತಿಳಿದಿರಲೇ ಬೇಕಾದ ಕೆಲವು ಸಂಗತಿಗಳು

ನಿಮಗೆ ತಿಳಿದಿರಲೇ ಬೇಕಾದ ಕೆಲವು ಸಂಗತಿಗಳು

ಕರಿಬೇವು: ಕರಿಬೇವು ಮತ್ತು ಕಹಿಬೇವು ಎರಡೂ ಬಹು ಉಪಯೋಗಿ ಸಸ್ಯಗಳು. ಇವೆರಡೂ ನಮ್ಮ ಆಹಾರ ಪದ್ಧತಿಯಲ್ಲಿ ಬಹುಮುಖ್ಯವಾದ ವಸ್ತುವಾಗಿವೆ. ಇಂದು ನಾವು ಅಡಿಗೆ ಮಾಡುವಾಗ ಒಗ್ಗರಣೆಗೆ ಬಳಸುವ ಅತ್ಯಂತ ಅವಶ್ಯಕ ವಸ್ತು ಕರಿಬೇವು. ಈ ಸುವಾಸನಾ ಭರಿತ ಎಲೆಗಳು ಅಡುಗೆಯ ಘಮವನ್ನು ಹೆಚ್ಚಿಸುವುದಲ್ಲದೇ ನಿರಂತರ ಸೇವನೆಯಿಂದ ಹಲವಾರು ಆರೋಗ್ಯದಾಯಕ ಲಾಭವನ್ನೂ ಪಡೆದುಕೊಳ್ಳಬಹುದು. 

ಕರಿಬೇವಿನ ಎಲೆಗಳು ಪೋಷಕಾಂಶಗಳ ಆಗರವಾಗಿದೆ. ಇದು ದೇಹವನ್ನು ಒತ್ತಡದಿಂದ ರಕ್ಷಿಸಲು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕರಿಬೇವಿನ ಎಲೆಗಳ ಮುಖ್ಯ ಪ್ರಯೋಜನವೆಂದರೆ ಅದಕ್ಕೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವಂತೆ ಮಾಡುವ ಶಕ್ತಿ ಇದೆ. ಇವುಗಳ ಕಾರ್ಮಿನೇಟಿವ್ ಗುಣಲಕ್ಷಣಗಳು ವಾಯು (ಗ್ಯಾಸ್) ಸಂಬಂಧಿ ಸಮಸ್ಯೆಗಳು, ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ. ಕರಿಬೇವಿನ ಎಲೆಗಳ ಸೇವನೆ ಮಧುಮೇಹವನ್ನು ನಿಯಂತ್ರಿಸುತ್ತದೆ. ಈ ಎಲೆಗಳಲ್ಲಿರುವ ಅಂಶಗಳು ದೇಹದಲ್ಲಿರುವ ಇನ್ಸುಲಿನ್ ಕಾರ್ಯವನ್ನು ಸುಧಾರಿಸುವ ಮೂಲಕ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ನಿಮ್ಮ ದೈನಂದಿನ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಶಿಲೀಂದ್ರ ಮತ್ತು ಬ್ಯಾಕ್ಟ್ರೀರಿಯಾದಿಂದ ಉಂಟಾಗಬಹುದಾದ ಸೋಂಕನ್ನು ತಡೆಗಟ್ಟಬಹುದು. ಈ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳ ಬಹುದು. ಕರಿಬೇವಿನ ಎಲೆಗಳು ಆರೋಗ್ಯಕರ ಕೂದಲ ಬೆಳವಣಿಗೆಗೆ ಮತ್ತು ಚರ್ಮದ ಹೊಳಪನ್ನು ಕಾಪಾಡಲು ಸಹಕಾರಿ. ಕರಿ ಬೇವಿನ ಎಲೆಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮೊದಲಾದ ಅಂಶಗಳನ್ನು ಹೊಂದಿರುವುದರಿಂದ ಇದು ಕೂದಲ ಉದುರುವಿಕೆಯನ್ನು ನಿಯಂತ್ರಿಸುತ್ತದೆ. ಈ ಎಲ್ಲಾ ಕಾರಣಗಳಿಂದ ಕರಿಬೇವನ್ನು ನಿಮ್ಮ ದೈನಂದಿನ ಆಹಾರದಲ್ಲಿ ಬಳಸಿ, ಆರೋಗ್ಯವನ್ನು ಕಾಪಾಡಿ.

ಸೋಂಪು ಕಾಳುಗಳು: ನಾವು ಯಾವುದೇ ಹೋಟೇಲಿಗೆ ಊಟಕ್ಕೆ ಅಥವಾ ಉಪಹಾರಕ್ಕೆ ಹೋದರೆ ಅಲ್ಲಿ ಕೊನೆಯಲ್ಲಿ ಬಿಲ್ ತರುವಾಗ ವೈಟರ್ ಸೋಂಪು ಕಾಳುಗಳನ್ನು ತಂದು ಕೊಡುತ್ತಾನೆ. ಕೆಲವೆಡೆ ಇದನ್ನು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಹುರಿದಿಡುತ್ತಾರೆ. ಇದು ನಾವು ತಿಂದ ಆಹಾರ ಜೀರ್ಣವಾಗಲು ಸಹಕಾರಿ ಹಾಗೂ ನಾವು ತಿಂದ ಆಹಾರದ ವಾಸನೆ ನಮ್ಮ ಬಾಯಿ ಮೂಲಕ ಇತರರಿಗೆ ತಲುಪದಂತೆ ಮಾಡುತ್ತದೆ. 

ನೀರಿನೊಂದಿಗೆ ಸೋಂಪು ಕಾಳನ್ನು ಮಿಶ್ರ ಮಾಡಿ ಕುಡಿಯುವುದರಿಂದ ಹೊಟ್ಟೆ ಸೆಳೆತ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ. ಒಂದು ಮುಷ್ಟಿ ಸೋಂಪು ಕಾಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ಕುಡಿದರೆ ಇವು ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಕರಿಸುತ್ತದೆ. ಬೊಜ್ಜು ದೇಹವನ್ನು ಹೊಂದಿರುವವರು ಈ ಕಾಳನ್ನು ಬಳಸಿ ತಮ್ಮ ತೂಕವನ್ನು ನಿಯಂತ್ರಿಸಬಹುದಾಗಿದೆ. ಪ್ರತಿ ದಿನ ಬೆಳಿಗ್ಗೆ ಒಂದು ಲೋಟ ಮತ್ತು ಸಂಜೆ ಒಂದು ಲೋಟ ಸೋಂಪು ಕಾಳನ್ನು ನೆನೆಹಾಕಿದ ನೀರನ್ನು ಕುಡಿದರೆ ತೂಕ ಕಡಿಮೆಯಾಗುತ್ತದೆ.

ಸೋಂಪು ಕಾಳನ್ನು ಬಳಸಿ ಚಹಾ ತಯಾರಿಸಿದರೆ ಅದು ಜೀವಕ್ಕೆ ಅತ್ಯುತ್ತಮ. ನೀರನ್ನು ಕುದಿಸಿ ಅದಕ್ಕೆ ಒಂದು ಚಮಚ ಸೋಂಪು ಕಾಳನ್ನು ಹಾಕಿ, ಅದಕ್ಕೆ ಅರ್ಧ ತುಂಡು ಬೆಲ್ಲವನ್ನು ಸೇರಿಸಿ ಚಹಾದಂತಹ ಪಾನೀಯ ತಯಾರಿಸಬಹುದು. ಸಾಯಂಕಾಲ ಇದನ್ನು ಕುಡಿಯುತ್ತಾ ಬಂದರೆ ನಿಮ್ಮ ಹೊಟ್ಟೆಯ ಸಮಸ್ಯೆ, ಬಾಯಿಗೆ ರುಚಿ ಬರಲು ಮತ್ತು ದೇಹವನ್ನು ತಂಪಾಗಿಸಲು ಸಹಕಾರಿ.

ಪ್ರತೀ ರಾತ್ರಿ ಊಟದ ಬಳಿಕ ಒಂದು ಚಮಚ ಸೋಂಪು ಕಾಳನ್ನು ಬಾಯಿಗೆ ಹಾಕಿ ಜಗಿದು ರಸ ಹೀರುವುದರಿಂದ ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಸೋಂಪು ಕಾಳನ್ನು ಚೆನ್ನಾಗಿ ಪುಡಿ ಮಾಡಿ ಇಟ್ಟುಕೊಂಡರೆ ಬೇಕಾದಾಗ ಅದರಿಂದ ಚಹಾ ರೀತಿಯ ಪಾನೀಯ ಮಾಡಿ ಕುಡಿಯಬಹುದು. ಸಕ್ಕರೆಯನ್ನು ಬಳಸದೇ ಬೆಲ್ಲವನ್ನು ಬಳಸುವುದು ಉತ್ತಮ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ