ನಿಮಗೆ ಹಿತವಾದ ಕಂಪೆನಿ ಯಾವುದು?

ನಿಮಗೆ ಹಿತವಾದ ಕಂಪೆನಿ ಯಾವುದು?

ಬರಹ


ನೀವು ಹೊಸ ಕೆಲಸ ಹಿಡಿಯಲು ಯತ್ನಿಸುತಿದ್ದೀರಿ ಎನ್ನಿ. ನೀವು ಉದ್ಯೋಗಗಿಟ್ಟಿಸುವಲ್ಲಿ ಸಫಲರಾಗಿದ್ದೀರಿ. ಆದರೆ ಈ ಕಂಪೆನಿಯಲ್ಲಿ ಕೆಲಸದ ವಾತಾವರಣ ನಿಮಗೊಪ್ಪುವುದೇ ಎನ್ನುವುದರ ಬಗ್ಗೆ ನಿಮಗೆ ಮಾಹಿತಿ ಬೇಕಿದೆ. ಸಂಸ್ಥೆಯಲ್ಲಿ ಕೆಲಸ ಮಾಡುವವರಲ್ಲಿಯೇ ಕೇಳಬಹುದು. ಅದರೆ ಅವರ ಪರಿಚಯವಿಲ್ಲ. ಜತೆಗೆ ಅವರುಗಳು ನಿಮಗೆ ಮಾಹಿತಿಯನ್ನು ನೀಡುವ ಧೈರ್ಯ ಮಾಡುವರೇ? ಬೇರೆ ಕಂಪೆನಿಗಳಲ್ಲಿ ಅದೇ ನೌಕರಿ ಮಾಡಿದರೆ ನಿಮಗೆ ಎಷ್ಟು ಸಂಬಳ ಬರಬಹುದು- ಇಂತಹ ವಿವರಗಳು ನಿಮಗೆ ಬೇಕೇ? ಅದಕ್ಕಾಗಿಯೇ ಇರುವ ಅಂತರ್ಜಾಲ ತಾಣವೇ http://www.glassdoor.com ಇಲ್ಲಿ ನೀವು ನಿಮ್ಮ ಕಂಪೆನಿಯ ಬಗ್ಗೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಬಹುದು. ಐದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ನೀವು ಸದ್ಯ ಕೆಲಸ ಮಾಡುತ್ತಿರುವ ಕಂಪೆನಿಯ ಬಗ್ಗೆ ,ಅದರ ಆಡಳಿತ ಬಗ್ಗೆ,ಬಾಸುಗಳ ಬಗೆಗೆ,ಕಂಪೆನಿಯಲ್ಲಿ ಕೆಲಸದ ಸಂಸ್ಕೃತಿ ಬಗೆಗೆ ನಿಮ್ಮಿಂದ ತಿಳಿದುಕೊಳ್ಳಲು ಇಲ್ಲಿ ಪ್ರಶ್ನಾವಳಿಯಿದೆ.ಅಲ್ಲಿನ ವೇತನ ಸವಲತ್ತುಗಳ ಬಗ್ಗೆಯೂ ನಿಮ್ಮಿಂದ ತಿಳಿದುಕೊಳ್ಳಲು ಪ್ರಶ್ನಾವಳಿಯಿದೆ. ನೀವೊಮ್ಮೆ ಇದಕ್ಕೆ ಪ್ರತಿಕ್ರಿಯಿಸಿ, ನೋಂದಣಿ ಮಾಡಿಕೊಂಡರೆ, ನೀವು ಇತರ ಕಂಪೆನಿಯ ಬಗ್ಗೆ ಜನರು ನೌಕರರು ನೀಡಿರುವ ಮಾಹಿತಿಯನ್ನು ಉಚಿತವಾಗಿ ಪಡೆಯ ಬಲ್ಲಿರಿ.ಜತೆಗೆ ನಿಮ್ಮ ಅನಿಸಿಕೆಯನ್ನು ಅನಾಮಧೇಯವಾಗಿಯೇ ತೋರಿಸಲಾಗುವುದು.ಬೇರೆ ಬೇರೆ ಪದವಿಗೆ ಸಿಗಬಹುದಾದ ಸಂಬಳ ಸವಲತ್ತುಗಳ ಬಗ್ಗೆಯೂ ವಿವರ ಸಿಗುತ್ತದೆ.ಸಂಬಳ ಕಂಪೆನಿಯ ಸಿಇಓಗೆ ರೇಂಕಿಂಗ್ ನೀಡಲೂ ಸಾಧ್ಯ. ಗೂಗಲ್ ಕಂಪೆನಿಗೆ 4.1 ಅಂಕಗಳಿದೆ,ಇದರ ಸಿಇಓಗೆ ಎಂಭತ್ತಾರು ಅಂಕಗಳಿವೆ. ಅದೇ ಇನ್ಫೋಸಿಸ್‍ಗೆ 3.1. ಮತ್ತು 25 ಅಂಕಗಳು ಬಂದಿವೆ. ವಿಪ್ರೋಕ್ಕೆ 4.1 ಮತ್ತು ಪ್ರೇಮ್‌ಜಿಯವರಿಗೆ 100 ಅಂಕಗಳಿದ್ದರೂ, ವಿಪ್ರೋದ ಬಗ್ಗೆ ಎರಡೇ ಪ್ರತಿಕ್ರಿಯೆಗಳಿರುವುದರಿಂದ ಅದು ವಸ್ತುಸ್ಥಿತಿ ಎನ್ನುವಂತಿಲ್ಲ.ಗೂಗಲ್ ಬಗ್ಗೆ ಪ್ರತಿಕ್ರಿಯಿಸಿರುವವರಲ್ಲಿ ಅಲ್ಲಿ ಒದಗಿಸುವ ಆಹಾರದ ಗುಣಮಟ್ಟ ಮತ್ತು ರುಚಿಯ ಬಗ್ಗೆಯೇ ಹೆಚ್ಚು ಮಂದಿ ಹೇಳಿಕೊಂಡಿರುವುದು ವಿಚಿತ್ರವಾದರೂ ನಿಜ!
ಕರೆ ಬಂದಾಗ ಎಚ್ಚೆತ್ತುಕೊಳ್ಳುವ ಕಂಪ್ಯೂಟರ್
    ಅಂತರ್ಜಾಲದ ಮೂಲಕ ದೂರವಾಣಿ ಕರೆಗಳನ್ನು ಮಾಡುವುದು ತುಂಬಾ ಅಗ್ಗವಾಗುತ್ತದೆ. ಈಗ ಹಲವಾರು ಕಂಪೆನಿಗಳು ಇಂತಹ ಸೇವೆ ನೀಡುವ ತಂತ್ರಾಂಶ ಮತ್ತು ಯಂತ್ರಾಂಶಗಳನ್ನು ಹೊಂದಿದ್ದಾರೆ.ಸ್ಕೈಪ್,ಗೂಗಲ್ ಟಾಕ್ ಕಂಪ್ಯೂಟರ್ ಮೂಲಕ ಕಂಪ್ಯೂಟರ್, ಸ್ಥಿರ ದೂರವಾಣಿ ಮತ್ತು ಸಂಚಾರಿ ದೂರವಾಣಿಗಳಿಗೆ ಕರೆ ಮಾಡಲು ಅವಕಾಶ ಕಲ್ಪಿಸುತ್ತದೆ.ಆದರೆ ಇಂತಹ ದೂರವಾಣಿ ಕರೆಗಳನ್ನು ಸ್ವೀಕರಿಸಲು ಕಂಪ್ಯೂಟರನ್ನು ಸದಾ ಚಾಲೂ ಇಡಬೇಕಾದ ಅವಶ್ಯಕತೆಯಿದೆ.ಆದರೀಗ ಇಂಟೆಲ್ ಕಂಪೆನಿಯು ಹೊರ ತಂದಿರುವ ಚಿಪ್ ಸೆಟ್ ಒಂದು ಈ ಸಮಸ್ಯೆಗೆ ಉತ್ತರವಾಗಬಲ್ಲುದು.ಈ ಚಿಪ್ ಸೆಟ್ ಬಳಸಿದಾಗ, ಕಂಪ್ಯೂಟರಿಗೆ ದೂರವಾಣಿ ಕರೆ ಬಂದೊಡನೆ, "ಎಬ್ಬಿಸಲು" ಸಾಧ್ಯವಿದೆ. ಕರೆಯಿಲ್ಲದಾಗ ನಿದ್ರಾವಸ್ಥೆಗೆ ಜಾರುವ ಕಂಪ್ಯೂಟರ್ ಬೇಕೆಂದಾಗ ಎಚ್ಚೆತ್ತುಕೊಳ್ಳುವ ವ್ಯವಸ್ಥೆ ಇಲ್ಲಿದೆ. ಇಲ್ಲಿ ನಿದ್ರಾವಸ್ಥೆಯೆಂದರೆ ಅತ್ಯಂತ ಕಡಿಮೆ ವಿದ್ಯುಚ್ಛಕ್ತಿ ಬಳಸುವ ಸ್ಥಿತಿ. ಹೆಚ್ಚಿನ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶಗಳಲ್ಲಿ ಈ ಚಿಪ್‌ಸೆಟ್ ಕೆಲಸ ಮಾಡುತ್ತದೆ.ಇಂಟೆಲ್ ಕಂಪೆನಿಯು ತನ್ನ ಮೂರ್ನಾಲ್ಕು ಅಂತರ್ಜಾಲ ದೂರವಾಣಿ ಸೇವೆ ಒದಗಿಸುತ್ತಿರುವ ಸಹವರ್ತಿ ಕಂಪೆನಿಗಳಿಗೆ ಈ ಚಿಪ್‌ಸೆಟ್‌ನ ಲಾಭ ಪಡೆದುಕೊಳ್ಳಲು ಸೂಚಿಸಿದೆ. ಆದರೀ ತಂತ್ರಜ್ಞಾನ ಹಲವರ ಕಲ್ಪನಾಶಕ್ತಿಯ ಪರೀಕ್ಷೆ ಮಾಡಹತ್ತಿದೆ. ಇದನ್ನು ಬಳಸಿಕೊಂಡು ಕಚೇರಿಯ ಕಂಪ್ಯೂಟರನ್ನು ಮನೆಯಿಂದಲೇ "ಎಚ್ಚರಿಸಿ", ಅದರಲ್ಲಿರುವ ಕಡತವನ್ನು ಪಡೆದುಕೊಂಡು ನಂತರ ಮತ್ತೆ ಕಚೇರಿ ಕಂಪ್ಯೂಟರನ್ನು ನಿದ್ರಾವಸ್ಥೆಗೆ ಕಳಿಸುವಂತಹ ಸಾಧ್ಯತೆ ಬಗ್ಗೆ ಜನರು ಯೋಚಿಸಹತ್ತಿದ್ದಾರೆ.
ಮುಕ್ತ ತಂತ್ರಾಂಶಕ್ಕೆ ಹಕ್ಕುಸ್ವಾಮ್ಯ ಇದೆಯೇ?
    ಮುಕ್ತ ತಂತ್ರಾಂಶದ ವಿಶೇಷತೆ ಎಂದರೆ ತಂತ್ರಾಂಶದ ಸಾಲುಗಳು ಬಳಕೆದಾರನಿಗೆ ಲಭ್ಯವಾಗುತ್ತದೆ. ಹಾಗಾಗಿ ಅದನ್ನು ಬದಲಿಸಲು ಸಾಧ್ಯ. ಆದರೆ ಮುಕ್ತ ತಂತ್ರಾಂಶ ಎಂದ ಮಾತ್ರಕ್ಕೆ ಅದನ್ನು ಅಭಿವೃದ್ಧಿ ಪಡಿಸಿದವರ ಹಕ್ಕುಸ್ವಾಮ್ಯ ಇಲ್ಲವಾಗದು. ಈ ತೀರ್ಪನ್ನು ಅಮೆರಿಕಾದ ಮೇಲ್ಮನವಿ ನ್ಯಾಯಾಲಯ ನೀಡಿದೆ. ಮುಕ್ತ ತಂತ್ರಾಂಶದ ಸಾಲುಗಳನ್ನು ಮುಂದುವರಿಸಿ ಅಥವ ಬದಲಿಸಿ,ಹೊಸ ತಂತ್ರಾಂಶ ರಚಿಸಿದರೆ,ಅದನ್ನು ಮುಕ್ತ ತಂತ್ರಾಂಶವಾಗಿ ಒದಗಿಸಲು,ಅದನ್ನು ಬದಲಿಸಿದವರು ಬದ್ಧರು. ಅದನ್ನು ಬಳಸಿ ಲಾಭ ಗಳಿಸಿದರೆ, ಮೂಲ ತಂತ್ರಾಂಶ ಅಭಿವೃದ್ಧಿ ಪಡಿಸಿದವನಿಗೆ ತಕ್ಕ ಪಾಲು ಕೊಡಬೇಕು ಎನ್ನುವ ವಾದವನ್ನು ನ್ಯಾಯಾಲಯ ಒಪ್ಪಿದೆ.ರೋಬರ್ಟ್ ಜಾಕೋಬ್ಸನ್ ಎನ್ನುವವರು ತಮ್ಮ ಮುಕ್ತ ತಂತ್ರಾಂಶ ತಂಡ ಅಭಿವೃದ್ಧಿ ಪಡಿಸಿದ ತಂತ್ರಾಂಶವನ್ನು ಮಾದರಿ ರೈಲು ತಯಾರಿಕೆದಾರನೋರ್ವ ರೈಲನ್ನು ಚಲಾಯಿಸುವ ತಂತ್ರಾಂಶವಾಗಿ ಬಳಸಿಕೊಂಡು ಲಾಭ ಮಾಡಿಕೊಂಡ ಪ್ರಕರಣದಲ್ಲಿ ಕೋರ್ಟಿನ ಮೆಟ್ಟಲೇರಿದ್ದರು.
ಅಭಿನವ್‌ಗೆ ಚಿನ್ನ:ಶಾಂತ ಸ್ವಭಾವದ ಪಾಲಿದೆಯೇ? padmanabha/kannadaprabha
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವವರಲ್ಲಿ ಹೆಚ್ಚಿನವರು ಬಹಳ ವರ್ಷಗಳ ಕಾಲ ತರಬೇತಿ ಪಡೆಯುತ್ತಾರೆ.ಆದರೆ ಫೇವರಿಟ್ ಅಂದುಕೊಂಡ ಕ್ರೀಡಾಳುಗಳೂ ಸೋತು ಬಿಡುವುದಿದೆ. ಈ ಸಲ ನಮ್ಮ ಶೂಟರ್ ಅಭಿನವ್ ಭಿಂದ್ರಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಅದೇ ನಮ್ಮ ತಂಡವನ್ನು ಉದ್ಘಾಟನೆಯ ವೇಳೆ ಮುನ್ನಡೆಸಿದ ರಾಜವರ್ಧನ್ ರಾಥೋಡ್ ನೋಡಿ ಹೇಗೆ ಸುದ್ದಿಯಲ್ಲದೆ ಸ್ಪರ್ಧೆಯಿಂದ ಹೊರಬಿದ್ದರು. ಅತಿಯಾದ ನಿರೀಕ್ಷೆ ಕ್ರೀಡಾಳುವಿನ ಮನಸ್ಸನ್ನು ಕಾಡಿದರೆ ಹೀಗಾಗುತ್ತದೆಯೇ?ಮಿಚಿಗನ್ ವಿಶ್ವವಿದ್ಯಾಲಯದ ಥಾಮಸ್ ಕಾರ್ ಪ್ರಕಾರ ಹೌದು. ದೊಡ್ದ ಮೊತ್ತದ ಬಹುಮಾನ, ಅತಿಯಾದ ನಿರೀಕ್ಷೆ ಇಂತಹ ಕಾರಣಗಳಿಂದ ಕ್ರೀಡಾಳು ಅತಿ ಜಾಗ್ರತೆ ವಹಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದರೆ,ಆತ ತಪ್ಪೆಸಗುವ ಸಾಧ್ಯತೆ ಹೆಚ್ಚುಎಂದವರ ಅಭಿಪ್ರಾಯ. ಈ ಒಲಿಂಪಿಕ್ಸ್‍ನಲ್ಲಿಯೇ ಅಮೆರಿಕಾದ ಜಿಮ್ನಾಸ್ಟಿಕ್ಸ್ ಪಟು ಅಲಿಸಿಯಾ ಜಿಮ್ನಾಸ್ಟಿಕ್ ಕಂಬದಿಂದ ಜಾರಿ, ಖಚಿತವಾಗಿದ್ದ ಪದಕವನ್ನು ಪಡೆದುಕೊಂಡದ್ದಕ್ಕೆ ಇದುವೇ ಕಾರಣ ಎಂದವರು ಉದಾಹರಿಸುತ್ತಾರೆ.ತಾವು ಸಾವಿರಾರು ಸಲ ಯಾವುದೇ ತಪ್ಪಿಲ್ಲದೆ ಮಾಡಿದ ಪ್ರದರ್ಶನವನ್ನು ಒಲಿಂಪಿಕ್ಸ್‍ನಂತ ಸಂದರ್ಭದಲ್ಲಿ ಮಾಡಲು ಎಡವುದು ಇಂತಹ ಅತಿ ಜಾಗೃತ ಮನಸ್ಸಿನ ಕಾರಣ ಎಂದವರು ವಿಶ್ಲೇಷಿಸುತ್ತಾರೆ.ಕರ್ಣ ಕೊನೆಗಾಲದಲ್ಲಿ ತಾನು ಕಲಿತ ಬಿಲ್ಲುವಿದ್ಯೆಯನ್ನು ಮರೆಯಲು ಗುರುಗಳ ಶಾಪವಿತ್ತು. ಆದರೆ ಈ ಕ್ರೀಡಾಳುಗಳಿಗೆ ಅಂತಹ ಶಾಪವಿದ್ದಿರಲಿಕ್ಕಿಲ್ಲವಲ್ಲ!

ashokworld

udayavani
(ಇ-ಲೋಕ-88)(18/8/2008) 

*ಅಶೋಕ್‌ಕುಮಾರ್ ಎ